ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜ್ಯಾದ್ಯಂತ ವರುಣನ ಆರ್ಭಟ; ಭಾರೀ ಮಳೆಗೆ 2 ಸಾವು, ಅಪಾರ ಹಾನಿ

Rain Alert: ಭಾನುವಾರ ರಾಜ್ಯದಲ್ಲಿ ವರುಣ ಆರ್ಭಟಿಸಿದ್ದಾನೆ. ಮಳೆಯಿಂದಾಗಿ ಹಲವು ಕಡೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಜ್ಯಾದ್ಯಂತ ವರುಣನ ಆರ್ಭಟ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 18, 2026 8:18 AM

ಭಾನುವಾರ ರಾಜ್ಯದಲ್ಲಿ ವರುಣ ( Rain) ಆರ್ಭಟಿಸಿದ್ದಾನೆ. ಮಳೆಯಿಂದಾಗಿ ಹಲವು ಕಡೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ರಾಯಚೂರು ಜಿಲ್ಲೆಯ (Weather) ಲಿಂಗಸುಗೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರೀ ಸಿಡಿಲು ಸಹಿತ ಮಳೆಗೆ ಓರ್ವ ಮಹಿಳೆ ಬಲಿಯಾಗಿದ್ದಾರೆ. ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.

ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುಡುಗು, ಬಿರುಗಾಳಿ ಸಹಿತ ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಲವೆಡೆ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ದ್ವಿಚಕ್ರ ವಾಹನ, ಕಾರು ಸೇರಿ ಮನೆಯ ಗೋಡೆಗಳು ಜಖಂಗೊಂಡಿವೆ. ಅನೇಕ ಕಡೆ ಮರದ ರೆಂಬೆಗಳು ಮುರಿದು ರಸ್ತೆಗೆ ಬಿದ್ದಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಸಣ್ಣ ಪ್ರಮಾಣದಲ್ಲಿ ಹಾನಿ ಸಂಭವಿಸಿದ ಘಟನೆಗಳು ವರದಿಯಾಗಿವೆ.

ಹಾವೇರಿ ಜಿಲ್ಲೆಯ ಬಿರುಗಾಳಿ ಮಳೆಗೆ ರೈತರು ನಷ್ಟ ಅನುಭವಿಸುವಂತಾಗಿದೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಮತ್ತು ಬಡಸಂಗಾಪುರ ಗ್ರಾಮದಲ್ಲಿ ನಡೆದಿದೆ. 20ಕ್ಕೂ ಅಧಿಕ ತೆಂಗಿನಮರ ಮತ್ತು 50ಕ್ಕೂ ಅಧಿಕ ಅಡಿಕೆ ಮರಗಳು ನೆಲಸಮಗೊಂಡಿವೆ. ಇನ್ನು ಬಿರುಗಾಳಿ ಮಳೆಗೆ ಕೋಳಿ ಫಾರ್ಮ್ನ ಮೇಲ್ಛಾವಣಿ ಕಿತ್ತುಹೋದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಂದೀಶ ಗಸ್ತೇರ್ ಮತ್ತು ದಿಳ್ಳೆಪ್ಪ ಇಟಲಿ ಎಂಬುವರಿಗೆ ಸೇರಿದ ಕೋಳಿ ಫಾರ್ಮ್ ಸಂಪೂರ್ಣ ಹಾನಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಅಬ್ಬರದ ಮಳೆ ಸುರಿದಿದೆ. ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸುರಿದ ಭಾರೀ ಗಾಳಿ ಮಳೆ ಮತ್ತು ಸಿಡಿಲಿನ ಅಬ್ಬರಕ್ಕೆ ಹಾನಿ ಸಂಭವಿಸಿದೆ. ಭಾನುವಾರ ಸಂಜೆ ಸುಮಾರು ನಾಲ್ಕು ಗಂಟೆ ವೇಳೆಗೆ ಸಂಭವಿಸಿದ ಅವಘಡದಲ್ಲಿ ಸಿಡಿಲು ಬಡಿದು ರೋಮನ್ ಬಾವಟಿಸ್ ದಾಲ್ಮೆತ್ ಅವರಿಗೆ ಸೇರಿದ ಎರಡು ಎತ್ತುಗಳು ಹಾಗೂ ಒಂದು ಹಸು ಮೃತಪಟ್ಟಿವೆ.

Sirsi News: ಮಳೆ ಮಾಪನ ಕೇಂದ್ರಗಳ ವೈಫಲ್ಯ: ಹವಾಮಾನ ಆಧಾರಿತ ಬೆಳೆ ವಿಮೆ ವಂಚನೆ ಖಂಡಿಸಿ ಶಿರಸಿಯಲ್ಲಿ ರಾಜ್ಯಪಾಲರಿಗೆ ಮನವಿ

ಕರಾವಳಿ ಭಾಗದಲ್ಲಿ ಹೆಚ್ಚಿನ ಗಾಳಿ ಹಾಗೂ ಮಳೆಯಾಗುವ ಸೂಚನೆ ನೀಡಿದೆ. ಕರಾವಳಿ ಭಾಗದ ಅರಬ್ಬಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಇನ್ನು ಎರಡು ದಿನ ಕರಾವಳಿ ಭಾಗದಲ್ಲಿ ಗಾಳಿ ಸಹಿತ ಮಳೆಯಾಗುವ ಸೂಚನೆ ನೀಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹಗುರ ಹಾಗೂ ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.