CID Raid: ಕೆಪಿಎಸ್‌ಸಿ ಪಶುವೈದ್ಯಕೀಯ ನೇಮಕಾತಿ ಅಕ್ರಮ: ಕಲಬುರಗಿಯಲ್ಲಿ ಅಭ್ಯರ್ಥಿ ಮನೆ ಮೇಲೆ ಸಿಐಡಿ ದಾಳಿ
ಮಮಿತಾ ಅವರು ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಮೂಲಕ ಡೀಲ್ ಮಾಡಿ ಕೊಂಡು ನೇಮಕಾತಿ ಪಡೆದಿದ್ದಾರೆ ಎಂಬ ಆರೋಪ ಪ್ರಕರಣದ ತನಿಖೆಯಲ್ಲಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಮಮಿತಾ ಅವರ ಮನೆ ಸೇರಿದಂತೆ ಸಂಬಂಧಿತ ದಾಖಲೆಗಳು ಹಾಗೂ ಇತರ ಮಾಹಿತಿಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
-
ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಕೀಯ ನೇಮಕಾತಿ ಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕಲಬುರಗಿ ಯಲ್ಲಿ ಬುಧವಾರ ದಾಳಿ ನಡೆಸಿದ್ದಾರೆ.
ನಗರದ ನ್ಯೂ ಓಜಾ ಲೇಔಟ್‌ನಲ್ಲಿರುವ ಪಶುವೈದ್ಯಕೀಯ ನೇಮಕಾತಿ ಅಭ್ಯರ್ಥಿ ಮಮಿತಾ ಅವರ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಮಮಿತಾ ಅವರು ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಮೂಲಕ ಡೀಲ್ ಮಾಡಿ ಕೊಂಡು ನೇಮಕಾತಿ ಪಡೆದಿದ್ದಾರೆ ಎಂಬ ಆರೋಪ ಪ್ರಕರಣದ ತನಿಖೆಯಲ್ಲಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಮಮಿತಾ ಅವರ ಮನೆ ಸೇರಿದಂತೆ ಸಂಬಂಧಿತ ದಾಖಲೆಗಳು ಹಾಗೂ ಇತರ ಮಾಹಿತಿಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಸಿಐಡಿ ಡಿವೈಎಸ್‌ಪಿ ಹಾಗೂ ಕಲಬುರಗಿ ಡಿವೈಎಸ್‌ಪಿ ಅಸ್ಲಾಂ ಪಾಷಾ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸುಮಾರು 20ಕ್ಕೂ ಅಧಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪಶುವೈದ್ಯಕೀಯ ನೇಮಕಾತಿಯಲ್ಲಿ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮುಂದುವರಿದಿದ್ದು, ದಾಳಿಯ ವೇಳೆ ಯಾವ ದಾಖಲೆಗಳು ಅಥವಾ ವಸ್ತುಗಳು ಪತ್ತೆಯಾಗಿವೆ ಎಂಬುದರ ಕುರಿತು ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಸಿಐಡಿ ತನಿಖೆ ತೀವ್ರಗೊಂಡಿರುವ ಹಿನ್ನೆಲೆ ಪ್ರಕರಣದಲ್ಲಿ ಇನ್ನಷ್ಟು ಹೆಸರುಗಳು ಹಾಗೂ ನೇಮಕಾತಿ ಅಕ್ರಮದ ವಿವರಗಳು ಹೊರಬರುವ ಸಾಧ್ಯತೆ ಇದೆ.