ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬರಪೀಡಿತ ಪಟ್ಟಿಯಲ್ಲಿ ಕಲಬುರಗಿ ಕೈಬಿಟ್ಟಿರುವ ವಿಚಾರ: ವಾಸ್ತವಾಂಶ ಆಧರಿಸಿ ಶೀಘ್ರ ನಿರ್ಧಾರ, ರೈತರ ಹಿತವೇ ಸರ್ಕಾರದ ಆದ್ಯತೆ: ಸಚಿವ ಡಾ. ಅಜಯ್ ಸಿಂಗ್

ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳಲ್ಲಿ ಶನಿವಾರ ಸಂಚರಿಸಿದ ಸಚಿವರು, ವಿವಿಧ ಗ್ರಾಮ ಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದ ಹಾನಿಗೊಳಗಾಗಿರುವ ಹತ್ತಿ, ಹೆಸರು ಸೇರಿದಂತೆ ವಿವಿಧ ಬೆಳೆಗಳನ್ನು ಸ್ಥಳದಲ್ಲೇ ಪರಿಶೀಲಿಸಿದರು. ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಬೆಳೆ ನಷ್ಟ, ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು

ಜೇವರ್ಗಿ–ಯಡ್ರಾಮಿಯಲ್ಲಿ ಬೆಳೆಹಾನಿ ಪರಿಶೀಲಿಸಿದ ಸಚಿವ ಡಾ. ಅಜಯ್ ಸಿಂಗ್

-

Profile
Ashok Nayak Aug 29, 2026 8:15 PM

ಕಲಬುರಗಿ: ಬರಪೀಡಿತ ಜಿಲ್ಲೆಗಳ ಪಟ್ಟಿಗೆ ಕಲಬುರಗಿ ಜಿಲ್ಲೆಯನ್ನು ಸೇರ್ಪಡೆಗೊಳಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಗಮನಕ್ಕೆ ಈಗಾಗಲೇ ತಂದಿದ್ದು, ಮಳೆ ಕೊರತೆ, ಬೆಳೆಹಾನಿ ಹಾಗೂ ಒಣಹವೆಯಂತಹ ವಾಸ್ತವಾಂಶ ಗಳನ್ನು ಆಧರಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ–ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್(Dr Ajay Singh) ಹೇಳಿದರು.

ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳಲ್ಲಿ ಶನಿವಾರ ಸಂಚರಿಸಿದ ಸಚಿವರು, ವಿವಿಧ ಗ್ರಾಮ ಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದ ಹಾನಿಗೊಳಗಾಗಿರುವ ಹತ್ತಿ, ಹೆಸರು ಸೇರಿದಂತೆ ವಿವಿಧ ಬೆಳೆಗಳನ್ನು ಸ್ಥಳದಲ್ಲೇ ಪರಿಶೀಲಿಸಿದರು. ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಬೆಳೆ ನಷ್ಟ, ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಇದನ್ನೂ ಓದಿ: Kalaburagi Breaking: ಕಪನೂರ ಕೈಗಾರಿಕಾ ಪ್ರದೇಶದಲ್ಲಿ ದಾಲ್‌ಮಿಲ್‌ನಲ್ಲಿ ಪರವಾನಗಿ ಇಲ್ಲದೆ ಸಂಗ್ರಹ: ಅಕ್ರಮ ಯೂರಿಯಾ ದಂಧೆ ಪತ್ತೆ; 1,250 ಚೀಲ ವಶ

ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸುವುದು ಕೇವಲ ಮಳೆ ಕೊರತೆಯೊಂದನ್ನೇ ಆಧರಿಸಿ ಕೈಗೊಳ್ಳುವ ನಿರ್ಧಾರವಲ್ಲ. ಲಭ್ಯವಿರುವ ಅಧಿಕೃತ ಅಂಕಿ–ಅಂಶಗಳು ಹಾಗೂ ಕ್ಷೇತ್ರಮಟ್ಟದ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಿರುವ 101 ತಾಲ್ಲೂಕುಗಳ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಯಾವುದೇ ತಾಲ್ಲೂಕು ಸ್ಥಾನ ಪಡೆಯದಿರುವು ದರಿಂದ ಜಿಲ್ಲೆಯ ರೈತ ಸಮುದಾಯದಲ್ಲಿ ಉಂಟಾಗಿರುವ ಅಸಮಾಧಾನ ತಮ್ಮ ಗಮನಕ್ಕೂ ಬಂದಿದೆ. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದು ಸರ್ಕಾರದ ಬದ್ಧತೆಯಾಗಿದೆ ಎಂದರು.

Dr Ajay Singh at kalaburagi

ಜೇವರ್ಗಿ–ಯಡ್ರಾಮಿಯಲ್ಲಿ ಮಳೆ ಕೊರತೆಯ ಬರೆ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳಲ್ಲಿ ಮಳೆ ಕೊರತೆ ಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಗಸ್ಟ್ 27ರ ಮಳೆ ವರದಿ ಪ್ರಕಾರ, ಜೂನ್ 1ರಿಂದ ಆಗಸ್ಟ್ 29ರವರೆಗೆ ಜೇವರ್ಗಿ ತಾಲ್ಲೂಕಿ ನಲ್ಲಿ 393.7 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು, 184.9 ಮಿ.ಮೀ. ಮಾತ್ರ ಮಳೆಯಾಗಿದೆ. ಇದರಿಂದ ಶೇ.53ರಷ್ಟು ಮಳೆ ಕೊರತೆ ದಾಖಲಾಗಿದೆ.

ಯಡ್ರಾಮಿ ತಾಲ್ಲೂಕಿನಲ್ಲಿ ಇದೇ ಅವಧಿಯಲ್ಲಿ 327 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 201 ಮಿ.ಮೀ. ಮಳೆಯಾಗಿದ್ದು, ಶೇ.39ರಷ್ಟು ಕೊರತೆ ಉಂಟಾಗಿದೆ.

ಆಗಸ್ಟ್ 1ರಿಂದ 29ರವರೆಗೆ ಜೇವರ್ಗಿ ತಾಲ್ಲೂಕಿನಲ್ಲಿ 144.3 ಮಿ.ಮೀ. ವಾಡಿಕೆ ಮಳೆಯಾಗಬೇಕಾ ಗಿದ್ದರೂ ಕೇವಲ 35.2 ಮಿ.ಮೀ. ಮಳೆಯಾಗಿದೆ. ಪರಿಣಾಮ ಶೇ.76ರಷ್ಟು ಮಳೆ ಕೊರತೆ ದಾಖಲಾ ಗಿದೆ. ಯಡ್ರಾಮಿಯಲ್ಲಿ 117.2 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 36.6 ಮಿ.ಮೀ. ಮಳೆಯಾಗಿದ್ದು, ಶೇ.69ರಷ್ಟು ಕೊರತೆ ಕಂಡುಬಂದಿದೆ.

Dr Ajay Singh at kalaburagi_2

ಹೋಬಳಿವಾರು ಅಂಕಿ–ಅಂಶಗಳ ಪ್ರಕಾರ ಜೇವರ್ಗಿ ಹೋಬಳಿಯಲ್ಲಿ ಶೇ.52, ಅಂದೋಲಾ ಹೋಬಳಿಯಲ್ಲಿ ಶೇ.58 ಹಾಗೂ ನೆಲೋಗಿ ಹೋಬಳಿಯಲ್ಲಿ ಶೇ.45ರಷ್ಟು ಮಳೆ ಕೊರತೆ ದಾಖಲಾ ಗಿದೆ. ಯಡ್ರಾಮಿ ಹೋಬಳಿಯಲ್ಲಿ ಶೇ.44 ಹಾಗೂ ಇಜೇರಿ ಹೋಬಳಿಯಲ್ಲಿ ಶೇ.37ರಷ್ಟು ಕೊರತೆ ಕಂಡುಬಂದಿದೆ.

ನಿರಂತರ ಮಳೆ ಕೊರತೆಯಿಂದ ಹತ್ತಿ, ಹೆಸರು ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆಗೆ ತೀವ್ರ ಹೊಡೆತ ಬೀಳುವ ಸಾಧ್ಯತೆ ಇದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.

580 ಕೋಟಿಗೂ ಅಧಿಕ ಬೆಳೆ ವಿಮೆ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳ ರೈತರು ಉತ್ತಮ ಪ್ರಮಾಣದಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. 2026–27ನೇ ಸಾಲಿನ ಖಾರಿಫ್ ಬೆಳೆ ವಿಮೆ ನೋಂದಣಿ ಮಾಹಿತಿಯಂತೆ ಜೇವರ್ಗಿಯಲ್ಲಿ 42,769 ಅರ್ಜಿಗಳು ಸಲ್ಲಿಕೆಯಾಗಿದ್ದು, 58,642.82 ಹೆಕ್ಟೇರ್ ಪ್ರದೇಶ ವಿಮಾ ವ್ಯಾಪ್ತಿಗೆ ಒಳಪಟ್ಟಿದೆ. ಈ ಪ್ರದೇಶಕ್ಕೆ ₹347.44 ಕೋಟಿ ವಿಮಾ ಮೊತ್ತ ನಿಗದಿಯಾಗಿದೆ.

ಯಡ್ರಾಮಿಯಲ್ಲಿ 28,572 ಅರ್ಜಿಗಳು ಸಲ್ಲಿಕೆಯಾಗಿದ್ದು, 38,943.12 ಹೆಕ್ಟೇರ್ ಪ್ರದೇಶ ವಿಮಾ ವ್ಯಾಪ್ತಿಗೆ ಒಳಪಟ್ಟಿದೆ. ಒಟ್ಟು ₹232.76 ಕೋಟಿ ವಿಮಾ ಮೊತ್ತ ನಿಗದಿಯಾಗಿದ್ದು, ರೈತರ ಪಾಲು ₹5.92 ಕೋಟಿಯಾಗಿದೆ. ಬರ ಘೋಷಣೆ ಕುರಿತು ಶಾಸಕರು ಈಗಾಗಲೇ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದ್ದಾರೆ. ಮಳೆ, ಬಿತ್ತನೆ ಹಾಗೂ ಬೆಳೆ ಪರಿಸ್ಥಿತಿ ಯನ್ನು ನಿರಂತರವಾಗಿ ಗಮನಿಸಲಾಗು ತ್ತಿದ್ದು, ರೈತರ ಹಿತಾಸಕ್ತಿಗೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ. ಅಜಯ್ ಸಿಂಗ್ ಹೇಳಿದರು.

image

ಜೇವರ್ಗಿ ಮತ್ತು ಯಡ್ರಾಮಿ ರೈತರು ಆತಂಕಪಡುವ ಅಗತ್ಯವಿಲ್ಲ. ಮಳೆ ಪರಿಸ್ಥಿತಿ ಹಾಗೂ ಬೆಳೆ ಸ್ಥಿತಿಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ರೈತರಿಗೆ ಅಗತ್ಯವಿರುವ ನೆರವು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ಸರ್ಕಾರದ ಮುಂದೆ ರೈತರ ಹಿತವೇ ಮೊದಲ ಆದ್ಯತೆಯಾಗಿದೆ.

- ಡಾ. ಅಜಯ್ ಧರ್ಮಸಿಂಗ್, ಸಣ್ಣ ನೀರಾವರಿ ಹಾಗೂ ವಿಜ್ಞಾನ–ತಂತ್ರಜ್ಞಾನ ಸಚಿವ