ಸಂಕಷ್ಟದ ವೇಳೆ ಯುಎಇ ಪ್ರವಾಸಿಗರಿಗೆ ಆಪತ್ಬಾಂಧವನಾದ 'ಕನ್ನಡಿಗಾಸ್ ಹೆಲ್ಪ್ ಲೈನ್’
ಅಮೆರಿಕ- ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಮಧ್ಯೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಯುಎಇಯಲ್ಲಿ ಸಂಕಷ್ಟಕ್ಕೀಡಾಗಿದ್ದ ಪ್ರವಾಸಿ ಕನ್ನಡಿಗರನ್ನು ರಕ್ಷಿಸಲು ಆಪತ್ಬಾಂಧವನಾಗಿ ಹಗಲಿರುಳು ಕಾರ್ಯನಿರ್ವಹಿಸಿದ 'ಕನ್ನಡಿಗಾಸ್ ಹೆಲ್ಪ್ ಲೈನ್’ ಗೆ ಅನಿವಾಸಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರ -ಹಿದಾಯತ್ ಅಡ್ಡೂರು -
ದುಬೈ: ಯುಎಸ್ (US), ಇಸ್ರೇಲ್ (Israel) ಹಾಗೂ ಇರಾನ್ (Iran war) ನಡುವೆ ನಡೆಯುತ್ತಿರುವ ಯುದ್ಧದಿಂದ ಯುಎಇಯಲ್ಲಿ (UAE) ಸಂಕಷ್ಟಕ್ಕೀಡಾಗಿದ್ದ ಪ್ರವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸುವ ಜೊತೆಗೆ ವಿಸಿಟ್ ವೀಸಾ ಮೂಲಕ ಉದ್ಯೋಗವನ್ನು ಅರಸಿ ಬಂದಿದ್ದ ಜನರಿಗೆ ವಸತಿ, ಊಟದ ವ್ಯವಸ್ಥೆ ಮಾಡುವ ಮೂಲಕ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಕೋವಿಡ್ ಸಾಂಕ್ರಾಮಿಕ, ಪ್ರವಾಹದ ವೇಳೆ ಸಂಕಷ್ಟದಕ್ಕಿದ್ದ ಕನ್ನಡಿಗರಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ‘ಕನ್ನಡಿಗಾಸ್ ಹೆಲ್ಪ್ ಲೈನ್’ (Kannadigas helpline) ಈ ಬಾರಿಯ ಯುದ್ಧದಿಂದ ಸಂಕಷ್ಟಕ್ಕೀಡಾದ ಕನ್ನಡಿಗರನ್ನು ರಕ್ಷಿಸುವ ಜೊತೆಗೆ ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಲು ಮತ್ತೆ ತನ್ನ ಕಾರ್ಯಚಟುವಟಿಕೆಯನ್ನು ಪುನರಾರಂಭಿಸಿತ್ತು.
ಖ್ಯಾತ ಅನಿವಾಸಿ ಉದ್ಯಮಿ ಡಾ. ರೊನಾಲ್ಡ್ ಕೊಲಾಸೋ ಅವರ ನೇತೃತ್ವದಲ್ಲಿ ಹಿದಾಯತ್ ಅಡ್ಡೂರು ಅವರ ಸಂಯೋಜನೆಯಲ್ಲಿ ಯುಎಇಯಲ್ಲಿರುವ ಕನ್ನಡಿಗರ 30ಕ್ಕೂ ಹೆಚ್ಚಿನ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ‘ಕನ್ನಡಿಗಾಸ್ ಹೆಲ್ಪ್ ಲೈನ್’ ತಂಡವು ಸಂಕಷ್ಟಕ್ಕೆ ಸಿಲುಕಿರುವ ಪ್ರವಾಸಿ ಕನ್ನಡಿಗರನ್ನು, ಅನಾರೋಗ್ಯಕ್ಕೀಡಾದವರನ್ನು, ಊಟ, ವಸತಿ ಇಲ್ಲದವರನ್ನು ಭೇಟಿ ಮಾಡಿ, ನೆರವಿನ ಹಸ್ತವನ್ನು ನೀಡುವ ಮೂಲಕ ಇಲ್ಲಿನ ಅನಿವಾಸಿ ಭಾರತೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಜನಸಂಖ್ಯೆ ಹೆಚ್ಚಿಸಲು ಚೀನಾ ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ; ಲವ್ ಮಾಡುವಂತೆ ಕರೆ
ಈ ಬಗ್ಗೆ ಮಾಧ್ಯಮದ ಜೊತೆ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಸಂಯೋಜಕ ಹಿದಾಯತ್ ಅಡ್ಡೂರು, ಯುಎಇಯಲ್ಲಿ ತಾಯ್ನಾಡಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದ 630ಕ್ಕೂ ಹೆಚ್ಚು ಜನರಿಗೆ ವಿಮಾನ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿ, ಸುರಕ್ಷಿತವಾಗಿ ತಾಯ್ನಾಡು ಸೇರುವಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಂಕಷ್ಟದ ವೇಳೆ ತುರ್ತು ಅವಶ್ಯಕತೆವಿರುವ ವೃದ್ಧರು, ಗರ್ಭಿಣಿಯರು, ಅನಾರೋಗ್ಯದಿಂದಿರುವವರು, ಇಂತಹ ಇಲ್ಲಿರುವ ಜನರನ್ನು ತಾಯ್ನಾಡಿಗೆ ಕಳುಹಿಸಲು 180 ಆಸನಗಳಿರುವ ಚಾರ್ಟರ್ ಫ್ಲೈಟ್ ವ್ಯವಸ್ಥೆಯನ್ನು ಮಾಡಲು ಸಂಪೂರ್ಣ ಮೊತ್ತದ ಹಣವನ್ನು ನೀಡುವುದಾಗಿ ಜೊತೆಗೆ ಇಲ್ಲಿ ಸಿಲುಕಿದ್ದ ಪ್ರವಾಸಿ ಕನ್ನಡಿಗರೊಬ್ಬರಿಗೆ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಹಾಗೂ ಅಗತ್ಯವಿರುವವರಿಗೆ ಊಟ ಉಪಚಾರಕ್ಕೆ ಬೇಕಾದ ಹಣದ ಸಹಾಯವನ್ನು ನೀಡುವುದಾಗಿ ಡಾ. ರೊನಾಲ್ಡ್ ಕೊಲಾಸೋ ಅವರು ‘ಕನ್ನಡಿಗಾಸ್ ಹೆಲ್ಪ್ ಲೈನ್’ಗೆ ಭರವಸೆಯನ್ನು ನೀಡಿದ್ದರು.
ಇಂಡಿಯನ್ ಕೌನ್ಸಿಲೇಟ್ ನಿಂದ ನಮ್ಮ ಬಳಿ ಬಂದಂತ 22 ಮಂದಿ ಅನಾರೋಗ್ಯಪೀಡಿತರಿಗೆ ಔಷಧವನ್ನು ಕೊಲಾಸೋ ಅವರು ನೀಡಿದ ಹಣದಿಂದಲೇ ನೀಡಲಾಗಿದೆ. ಕೊಲಾಸೋ ಅವರು ನಮಗೆ ಬೇಕಾದ ಎಲ್ಲಾ ರೀತಿಯ ಹಣಕಾಸಿನ ನೆರವನ್ನು ನೀಡಿ ನಮಗೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಇದೇ ವೇಳೆ ದುಬೈನಲ್ಲಿ ಪ್ರವೀಣ್ ಶೆಟ್ಟಿ, ಹಾಗೂ ಇಸಾಕ್ ಹಾಜಿ, ಅವರ ಹೊಟೇಲ್ ಗಳಲ್ಲಿ, ಅಜ್ಮಾನ್ ನಲ್ಲಿ ಧೀರಜ್ ಜೈನ್ ರವರ ಫಾರ್ಮ್ ಹೌಸ್ ನಲ್ಲಿ 235ಕ್ಕಿಂತಲೂ ಹೆಚ್ಚು ಜನರಿಗೆ ಉಚಿತವಾಗಿ ವಸತಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ 71 ಜನರಿಗೆ ದುಬೈಯ ರಾಶಿದ್ ಆಸ್ಪತ್ರೆಯ ನುರಿತ ವೈದ್ಯರಿಂದ ವೈದ್ಯಕೀಯ ತಪಾಸಣೆ, 32 ಮಂದಿಗೆ ಔಷಧಿ ಒದಗಿಸುವ ಮೂಲಕ ವೈದ್ಯಕೀಯ ಸಹಾಯ ಮಾಡಲಾಗಿದೆ.
ಯುದ್ಧದ ಆರಂಭದ ವೇಳೆ ಒಟ್ಟು 1180 ಊಟಗಳನ್ನು ಸಂಕಷ್ಟದಲ್ಲಿದ್ದ ಜನರಿಗೆ ವಿತರಿಸಲಾಗಿದೆ. ಜೊತೆಗೆ 70 ಆಹಾರೋತ್ಪನ್ನಗಳ ಕಿಟ್‌ಗಳನ್ನು ನೀಡಲಾಗಿದೆ. ತೊಂದರೆಗೀಡಾದ ಜನರನ್ನು ದುಬೈ, ಶಾರ್ಜಾ, ರಾಸ್ ಅಲ್ ಖೈಮಾ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳಿಗೆ ತೆರಳಲು ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
‘ಕನ್ನಡಿಗಾಸ್ ಹೆಲ್ಪ್ ಲೈನ್’ ಜೊತೆ ಕೆಎನ್ಆರೈ ಫೋರಂ ಯುಎಇ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(BCCI) ಯುಎಇ, ಕರ್ನಾಟಕ ಸಂಘ ದುಬೈ, ಕನ್ನಡಿಗರ ಕೂಟ ದುಬೈ, ಅಬುಧಾಬಿ ಕರ್ನಾಟಕ ಸಂಘ, ದುಬೈ ಅನಿವಾಸಿ ಕನ್ನಡಿಗರು, ಹೆಮ್ಮೆಯ ದುಬೈ ಕನ್ನಡ ಸಂಘ, ಒಕ್ಕಲಿಗರ ಸಂಘ ದುಬೈ, ಕನ್ನಡ ಪಾಠ ಶಾಲೆ ದುಬೈ, ಶಾರ್ಜಾ ಕರ್ನಾಟಕ ಸಂಘ, ದುಬೈ ಕೊಂಕಣ್ಸ್, ಬಿಸಿಎಫ್, ಕೆಸಿಎಫ್, ಮಂಕಿ ಕಮ್ಯೂನಿಟಿ, SKSSF ವಿಖಾಯ ಯುಎಇ, ನೂರುಲ್ ಹುದಾ ಯುಎಇ ಕಮಿಟಿ, ದುಬೈ ಬ್ಯಾರೀಸ್, ಬದ್ರಿಯಾ ಫ್ರೆಂಡ್ಸ್, ಹಿದಾಯ ಫೌಂಡೇಶನ್, ಸಂಶುಲ್ ಉಲಮಾ ತೋಡಾರ್, ರಾಸ್ ಅಲ್ ಖೈಮಃ & ಫುಜೈರಾಹ್ ಕರ್ನಾಟಕ ಸಂಘ, ಏಮ್ ಇಂಡಿಯಾ ಫೌಂಡೇಶನ್, ದಾರುಲ್ ನೂರ್, ಗಲ್ಫ್ ಕರ್ನಾಟಕ ಕುಟುಂಬ & ಗಲ್ಫ್ ಗೆಳತಿಯರು, ಮ್ಯಾಂಗಲೋರ್ ಕೊಂಕಣ್ಸ್ ದುಬೈ, ಅಲ್ ಖಮರ್ ಟ್ರಸ್ಟ್ ಮೂಳೂರು, ಒಕ್ಕಲಿಗರ ಸಂಘ ಯುಎಇ, ರಾಕ್ ಕರ್ನಾಟಕ ಸಂಘ ಯುಎಇ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಗಳು ಕೈಜೋಡಿಸಿವೆ ಎಂದು ಹೇಳಿದ್ದಾರೆ.
ತಂಡದ ಶ್ಲಾಘನೀಯ ಸೇವಾ ಕಾರ್ಯದಿಂದ ಸಂತಸಪಟ್ಟು ರೊನಾಲ್ಡ್ ಕೊಲಸೋ ಅವರು ತಮ್ಮ ನಿವಾಸದಲ್ಲಿ 'ಇಫ್ತಾರ್ ಸೌಹಾರ್ದ ಕೂಟ'ವನ್ನು ಏರ್ಪಡಿಸಿದ್ದರು. ಈ ವೇಳೆ ಕೆಲವರು ಕುಟುಂಬ ಸಮೇತರಾಗಿ ಬಂದ ಎಲ್ಲಾ ಹೆಲ್ಪ್ ಲೈನ್ ತಂಡದ ಸದಸ್ಯರಿಗೆ ಅವರ ನಿಸ್ವಾರ್ಥ ಸೇವೆಗೆ ಶುಭ ಹಾರೈಸಿ, ನಿಮ್ಮ, ನಮ್ಮ ಈ ಒಗ್ಗಟ್ಟು ಹಾಗೂ ಐಕ್ಯತೆಯ ಮನೋಭಾವನೆ ಕೇವಲ ಸಂಕಷ್ಟದ ಸಮಯಕ್ಕೆ ಮಾತ್ರ ಸೀಮಿತವಾಗಿರದೆ ಹೀಗೆಯೇ ನಿರಂತರವಾಗಿ ಹಾಗೂ ಉತ್ತಮ ಮಾದರಿಯಾಗಿ ಮುಂದುವರೆಯಬೇಕು ಎಂದು ಹೇಳಿದರು.
"ಇದು ಹೇಡಿಗಳ ಕೃತ್ಯ"; ಕಾಬೂಲ್ ಆಸ್ಪತ್ರೆಯ ಮೇಲಿನ ದಾಳಿಗೆ ಪಾಕ್ ವಿರುದ್ಧ ಭಾರತ ವಾಗ್ದಾಳಿ
ರಾಷ್ಟ್ರೀಯ ಹಾಗೂ ರಾಜ್ಯೋತ್ಸವ ಸಂಭ್ರಮವನ್ನೂ ಈ ನಾಡಿನಲ್ಲಿ ಒಂದಾಗಿಯೇ ಆಚರಿಸೋಣ ಎಂದ ಕೊಲಾಸೋ, ಪ್ರಾಂತ್ಯ, ಜಿಲ್ಲೆ, ಭಾಷೆ, ವರ್ಗ, ಹುದ್ದೆ, ಜಾತಿ, ಧರ್ಮವನ್ನೆಲ್ಲಾ ಮೀರಿ ನಮ್ಮ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ಒಗ್ಗೂಡಿ ಸಲ್ಲಿಸಿದ ಸೇವೆಯಿಂದ ಉತ್ತಮ ಕೋಮು ಸೌಹಾರ್ದತೆಯ ಸಂದೇಶ ತಾಯ್ನಾಡಿಗೂ ತಲುಪಲಿ. ಅಲ್ಲಿಯೂ ಸಾಮರಸ್ಯ, ಸಮಾನತೆಯ ಪರಿಸರದಿಂದಾಗಿ, ಶೀಘ್ರತೆಯ ಆರ್ಥಿಕತೆ ಹಾಗೂ ಸರ್ವತೋಮುಖ ಅಭಿವೃದ್ಧಿಗೂ ಇದು ಪೂರಕವಾಗಲಿ ಎಂದರು.
ಈ ಸಂದರ್ಭದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ನ ಸೇವಾ ಕಾರ್ಯಕ್ರಮಗಳಲ್ಲಿ ಆಧಾರ ಸ್ತಂಭಗಳಾಗಿ ಜೊತೆ ನಿಂತ ರೊನಾಲ್ಡ್ ಕೊಲಾಸೊ, ಪ್ರವೀಣ್ ಶೆಟ್ಟಿ, ಇಸಾಕ್ ಹಾಜಿ, ಧೀರಜ್ ಜೈನ್, ಮಾಧವ್ ಕಿರಣ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.