‘'ಮದುವೆ ಎಂದರೆ ಪತ್ನಿಯ ಮೇಲಿನ ಅಧಿಕಾರವಲ್ಲʼ’: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
Karnataka High Court: ದಾಂಪತ್ಯ ಜೀವನದಲ್ಲಿ ಮಹಿಳೆಯ ಸ್ವಾತಂತ್ರ್ಯ, ಹಕ್ಕುಗಳು ಹಾಗೂ ಘನತೆಯನ್ನು ಎತ್ತಿಹಿಡಿಯುವ ಅತ್ಯಂತ ಪ್ರಮುಖ ತೀರ್ಪೊಂದನ್ನು ಕರ್ನಾಟಕ ಹೈಕೋರ್ಟ್ ನೀಡಿದೆ. ಮದುವೆಯ ನಂತರವೂ ಪತ್ನಿಯು ತನ್ನ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ‍್ಯವನ್ನು ಹೊಂದಿರುತ್ತಾಳೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಆ. 25: ಮದುವೆಯಾಗಿದೆ ಎಂಬ ಕಾರಣಕ್ಕೆ ಪತಿಯು ಪತ್ನಿಯ ಸ್ವಾತಂತ್ರ್ಯ, ಆಸೆ ಹಾಗೂ ವೈಯಕ್ತಿಕ ನಿರ್ಧಾರಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಪತ್ನಿ ಎಲ್ಲಿಗೆ ಹೋಗಬೇಕು, ಹೇಗೆ ಜೀವನ ನಡೆಸಬೇಕು ಎಂಬುದನ್ನು ಆಕೆಯೇ ನಿರ್ಧರಿಸಬೇಕೆ ಹೊರತು ಪತಿ ಅದನ್ನು ನಿರ್ಧರಿಸುವಂತಿಲ್ಲ. ಹಾಗೆಯೇ ಬಲವಂತವಾಗಿ ಮನೆ ಕೆಲಸ ಮಾಡಿಸುವುದು ಅಥವಾ ತನ್ನ ಪೋಷಕರನ್ನು ನೋಡಿಕೊಳ್ಳಲೇಬೇಕು ಎಂದು ಒತ್ತಾಯಿಸುವ ಹಕ್ಕು ಪತಿಗೆ ಇರುವುದಿಲ್ಲ. ಮಹಿಳೆಯ ಸ್ವಾಯತ್ತತೆಯನ್ನು ನಿರ್ಬಂಧಿಸುವ ಯಾವುದೇ ಪ್ರಯತ್ನವು ಸಮಾನತೆ, ಮಾನವ ಘನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಐತಿಹಾಸಿಕ ತೀರ್ಪುನ್ನು ನೀಡಿದೆ.
ನ್ಯಾಯಮೂರ್ತಿ ಡಾ. ಲಕೊರ್ ಸುಮಲತಾ ಅವರಿದ್ದ ಪೀಠವು ಪತಿಯೊಬ್ಬ ತನ್ನ ಪತ್ನಿ ಹಾಗೂ ಅಪ್ರಾಪ್ತ ಮಗಳಿಗೆ ಮಾಸಿಕ 9 ಸಾವಿರ ರುಪಾಯಿ ಜೀವನಾಂಶ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ವೇಳೆ ಈ ಮಹತ್ವದ ಆದೇಶ ಹೊರ ಬಿದ್ದಿದೆ.
ಕರ್ನಾಟಕ ಹೈಕೋರ್ಟ್ ಮೊರೆ ಹೋದ ಶ್ರೀಲಂಕಾ ಸುಪ್ರೀಂ ಕೋರ್ಟ್ ಜಡ್ಜ್!
ತುಮಕೂರಿನ ಕುಟುಂಬ ನ್ಯಾಯಾಲಯವು ಪತ್ನಿ ಮತ್ತು ಅಪ್ರಾಪ್ತ ಮಗಳಿಗೆ ಮಾಸಿಕ ಒಟ್ಟು 9 ಸಾವಿರ ರುಪಾಯಿ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪತಿ, ‘ʼನಾನು ಕೂಲಿ ಕೆಲಸ ಮಾಡುತ್ತಿದ್ದು, ಪೋಷಕರನ್ನು ನೋಡಿಕೊಳ್ಳಬೇಕಿದೆ. ನನ್ನ ಅನುಮತಿ ಹಾಗೂ ಅತ್ತೆ ಮಾವನವರ ಒಪ್ಪಿಗೆಯಿಲ್ಲದೆ ಆಕೆ ಹೆತ್ತವರ ಮನೆಗೆ ಹೋಗಿದ್ದಾಳೆ ಮತ್ತು ಮನೆಯ ಕೆಲಸಗಳನ್ನು ಮಾಡಲು ನಿರಾಕರಿಸಿದ್ದಾಳೆ’ʼ ಎಂದು ವಾದಿಸಿದ್ದಾನೆ. ಇದರ ಕುರಿತು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ‘ʼಮಹಿಳೆಯೊಬ್ಬಳು ತನ್ನ ಹೆತ್ತವರನ್ನು ನೋಡಲು ತವರಿಗೆ ತೆರಳಲು ಪತಿಯ ಅಥವಾ ಅತ್ತೆ-ಮಾವನ ಅನುಮತಿ ಪಡೆಯಬೇಕು ಎಂದು ಅಪೇಕ್ಷಿಸುವುದು ಆತನ ಸ್ವಾರ್ಥಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಹೆತ್ತವರ ಮನೆಗೆ ಹೋಗಲು ಯಾರ ಒಪ್ಪಿಗೆ ಅಗತ್ಯವೂ ಇಲ್ಲʼ’ ಎಂದು ಪೀಠ ಕಟುವಾಗಿ ಹೇಳಿದೆ.
‘ʼಪತಿ ತನ್ನ ಪತ್ನಿಯನ್ನು ಮನೆ ಕೆಲಸ ಮಾಡಲು ಅಥವಾ ತನ್ನ ತಮದೆ ತಾಯಿಯನ್ನು ನೋಡಿಕೊಳ್ಳಲು ಬಲವಂತಪಡಿಸುವಂತಿಲ್ಲ. ಮನೆಯ ಕೆಲಸಗಳನ್ನು ಪತಿ-ಪತ್ನಿ ಇಬ್ಬರೂ ಸಮಾನವಾಗಿ ಹಂಚಿಕೊಳ್ಳಬೇಕು. ಮದುವೆ ಎಂದರೆ ಇಬ್ಬರ ನಡುವಿನ ಸಮಾನತೆಯ ಬಾಂಧವ್ಯವೇ ಹೊರತು ಒಬ್ಬರು ಇನ್ನೊಬ್ಬರ ಮೇಲೆ ಅಧಿಕಾರ ಚಲಾಯಿಸುವ ಹಕ್ಕಲʼ’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ʼ‘ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದು ಅವರ ಸ್ವಂತ ಮಗ ಅಥವಾ ಮಗಳ ಜವಾಬ್ದಾರಿಯೇ ಹೊರತು ಅಳಿಯ ಅಥವಾ ಸೊಸೆಯದ್ದಲ್ಲ. ಸೊಸೆ ಅತ್ತೆ-ಮಾವಂದಿರನ್ನು ನೋಡಿಕೊಳ್ಳುವುದು ಆಕೆಯ ಸ್ವಇಚ್ಛೆಯಾಗಿರಬೇಕೇ ವಿನಃ ಆಕೆಯ ಮೇಲೆ ಒತ್ತಾಯ ಹೇರುವಂತಿಲ್ಲʼʼ ಎಂದು ಕೋರ್ಟ್ ಹೇಳಿದೆ.
ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ವಿರುದ್ಧದ ಪ್ರಕರಣ ರದ್ದು: ಕರ್ನಾಟಕ ಹೈಕೋರ್ಟ್‌ನಿಂದ ಮಹತ್ವದ ತೀರ್ಪು
ಪತಿ ತನ್ನ ಪತ್ನಿ ಹಾಗೂ ಮಗಳಿಗೆ ನೀಡುವ ಜೀವನಾಂಶದ ಪ್ರಮಾಣವನ್ನು ಕಡಿಮೆ ಮಾಡುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್, ‘ʼಸದ್ಯದ ದುಬಾರಿ ಜೀವನದ ವೆಚ್ಚದಲ್ಲಿ ಒಬ್ಬ ವ್ಯಕ್ತಿಗೆ ದಿನಕ್ಕೆ 150 ರುಪಾಯಿಯಂತೆ ನೀಡುವ ಜೀವನಾಂಶ ಯಾವುದೇ ಕಾರಣಕ್ಕೂ ಹೆಚ್ಚಲ್ಲʼʼ ಎಂದು ಹೇಳಿ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.