ನಾಮಧಾರಿ ಒಕ್ಕಲಿಗರ ಬೆನ್ನಿಗೆ ನಿಂತ ಎಚ್.ಡಿ. ಕುಮಾರಸ್ವಾಮಿ; 2ಎ ಪ್ರವರ್ಗಕ್ಕೆ ಸೇರಿಸಲು ಪ್ರಯತ್ನಿಸುವುದಾಗಿ ಭರವಸೆ
H.D. Kumaraswamy: ಮೈಸೂರಿನ ಕೆ.ಆರ್. ನಗರದಲ್ಲಿ ಭಾನುವಾರ (ಜನವರಿ 11) ನಾಮಧಾರಿ ಸಮುದಾಯ ಭವನದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಚ್.ಡಿ. ಕುಮಾರಸ್ವಾಮಿ, ʼʼಈ ಬಗ್ಗೆ ನೀವು ಸಂಪೂರ್ಣ ಮಾಹಿತಿ ತೆಗೆದುಕೊಂಡು ಬನ್ನಿ. ಹಿಂದುಳಿದ ವರ್ಗಗಳ ಆಯೋಗಕ್ಕೆ, ರಾಜ್ಯ ಸರಕಾರಕ್ಕೆ ನೀಡಿರುವ ಅರ್ಜಿ, ಇನ್ನಿತರ ಬೇಡಿಕೆಗಳ ಮಾಹಿತಿ ಜತೆ ನನ್ನ ಬಳಿಗೆ ಬನ್ನಿ. ನಾನು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆʼʼ ಎಂದರು.
ನಾಮಧಾರಿ ಸಮುದಾಯ ಭವನದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿ ಪಾಲ್ಗೊಂಡರು. -
ಕೆ.ಆರ್. ನಗರ, ಜ. 11: ʼʼಅತ್ಯಂತ ಸಣ್ಣ ಪ್ರಮಾಣದಲ್ಲಿರುವ ನಾಮಧಾರಿ ಒಕ್ಕಲಿಗ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸುವ ಪ್ರಯತ್ನಕ್ಕೆ ನಾನು ಪ್ರಾಮಾಣಿಕವಾಗಿ ಬೆಂಬಲ ನೀಡುತ್ತೇನೆ. ನಿಮ್ಮೊಂದಿಗೆ ನಾನು ಪ್ರಯತ್ನ ಮಾಡುತ್ತೇನೆʼʼ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಭರವಸೆ ನೀಡಿದರು.
ಮೈಸೂರಿನ ಕೆ.ಆರ್. ನಗರದಲ್ಲಿ ಭಾನುವಾರ (ಜನವರಿ 11) ನಾಮಧಾರಿ ಸಮುದಾಯ ಭವನದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಅವರು, ʼʼಈ ಬಗ್ಗೆ ನೀವು ಸಂಪೂರ್ಣ ಮಾಹಿತಿ ತೆಗೆದುಕೊಂಡು ಬನ್ನಿ. ಹಿಂದುಳಿದ ವರ್ಗಗಳ ಆಯೋಗಕ್ಕೆ, ರಾಜ್ಯ ಸರಕಾರಕ್ಕೆ ನೀಡಿರುವ ಅರ್ಜಿ, ಇನ್ನಿತರ ಬೇಡಿಕೆಗಳ ಮಾಹಿತಿ ಜತೆ ನನ್ನ ಬಳಿಗೆ ಬನ್ನಿ. ನಾನು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆʼʼ ಎಂದರು.
ಅಲ್ಲದೆ, ʼʼಸಣ್ಣ ಪ್ರಮಾಣದ ಜನಸಂಖ್ಯೆ ಹೊಂದಿರುವ ನಾಮಧಾರಿ ಸಮುದಾಯವು ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕಿದೆ. ನಮ್ಮನ್ನು ಗುರುತಿಸಬೇಕು ಎಂದು ಸಮುದಾಯದ ಜನರು ಕೇಳುತ್ತಲೇ ಇದ್ದಾರೆ. ಮೊದಲು ನಿಮಗೆ ಈ ನೋವು ಬಿಡಿ. ಅಂತಹ ಆತಂಕ ಬಿಡಿ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲು ಪ್ರಾಣಿಕವಾಗಿ ಪ್ರಯತ್ನ ಮಾಡುತ್ತೇವೆʼʼ ಎಂದು ಹೇಳಿದರು.
ʼʼಚಿಕ್ಕಮಗಳೂರು ಭಾಗದಲ್ಲಿ ಸರ್ಪ ಒಕ್ಕಲಿಗರು ಇದ್ದಾರೆ. ಸಣ್ಣ ಪ್ರಮಾಣದ ಸಮುದಾಯ. ಆ ಸಮುದಾಯಕ್ಕೆ ಸೇರಿದ ಎಸ್.ಆರ್. ಲಕ್ಷ್ಮಯ್ಯ ಎಂಬ ನಾಯಕರಿದ್ದರು. ಆ ಕ್ಷೇತ್ರದಲ್ಲಿ ಅವರ ಸಮುದಾಯದ ಸಾವಿರ ಮತಗಳು ಇರಲಿಲ್ಲ. ಅವರನ್ನು ದೇವೇಗೌಡರು ಎರಡು ಬಾರಿ ಶಾಸಕರನ್ನಾಗಿ ಮಾಡಿದರು. ನಂತರ ಅವರ ಪುತ್ರ ಧರ್ಮೆಗೌಡರು ಎರಡು ಬಾರಿ ಪರಿಷತ್ ಸದಸ್ಯರಾಗಿ ಒಮ್ಮೆ ಉಪ ಸಭಾಪತಿ ಆದರು. ಅವರ ಇನ್ನೊಬ್ಬ ಪುತ್ರ ಎಸ್.ಎಲ್. ಭೋಜೇಗೌಡರು ನಮ್ಮ ಪಕ್ಷದ ಎಂಎಲ್‌ಸಿ ಆಗಿದ್ದಾರೆʼʼ ಎಂದು ತಿಳಿಸಿದರು.
ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ರೀ ಎಂಟ್ರಿ?; ಟಾಕ್ಸಿಕ್ ಸ್ಟೈಲ್‌ನಲ್ಲಿ ಎಚ್‌ಡಿಕೆ ವಿಡಿಯೋ ರಿಲೀಸ್!
ʼʼಇನ್ನೊಂದು ಅತಿ ಸಣ್ಣ ಸಮುದಾಯ ಉಪ್ಪಾರ ಸಮುದಾಯಕ್ಕೂ ನಮ್ಮ ಪಕ್ಷ ಅವಕಾಶ ನೀಡಿದೆ. ಎಚ್.ಸಿ. ನೀರಾವರಿ ಅವರನ್ನು ಗುರುತಿಸಿ ನಾವು ರಾಜಕೀಯಕ್ಕೆ ತಂದೆವು. ಈ ರೀತಿ ಅನೇಕ ಸಮುದಾಯಗಳಿಗೆ ಜೆಡಿಎಸ್ ಅವಕಾಶದ ಬಾಗಿಲು ತೆರೆದಿದೆ. ಕೆಲವರು ನಾವು ಹಿಂದುಳಿದ ನಾಯಕರು ಅಂತ ಬೋರ್ಡ್ ಹಾಕಿಕೊಂಡು ಓಡಾಡ್ತಾರೆ. ಆದರೆ ಆ ಸಮುದಾಯವನ್ನು ಬೆಳೆಸಿದವರು ದೇವೇಗೌಡರುʼʼ ಎಂದು ಕುಮಾರಸ್ವಾಮಿ ಹೇಳಿದರು.

ಆತಂಕ ಬೇಡ
ʼʼನಾಮಧಾರಿ ಸಮುದಾಯಕ್ಕೆ ಆತಂಕ ಬೇಡ. ಈ ಸಮುದಾಯದ ಒಬ್ಬರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು. ನಿಮ್ಮ ಸಮುದಾಯಕ್ಕೆ ಶಕ್ತಿ ತುಂಬಲಾಗುವುದು. ನಿಮ್ಮಲ್ಲಿ ಹೆಚ್ಚೆಚ್ಚು ಯುವಕರು ರಾಜಕಾರಣಕ್ಕೆ ಬರಬೇಕು. ನನ್ನ ರಾಜಕೀಯ ಶಕ್ತಿ ತುಂಬಿಸಿಕೊಳ್ಳಲಿಕ್ಕೆ ನಾನು ಭರವಸೆ ನೀಡಲ್ಲ, ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆʼʼ ಎಂದು ಕೇಂದ್ರ ಸಚಿವರು ಹೇಳಿದರು.
ʼʼದೇವಸ್ಥಾನ ಕಟ್ಟಲು ಸಿಎ ನಿವೇಶನ ಕೇಳಿದ್ದೀರಿ. ನಾನು ನಿವೇಶನ ಕೊಡಲು ಬರಲ್ಲ. ಅದನ್ನು ರಾಜ್ಯ ಸರ್ಕಾರದಿಂದ ಕೊಡಿಸುವ ಕೆಲಸ ಮಾಡುತ್ತೇನೆ. ಸಮುದಾಯ ಭವನದ ಅಭಿವೃದ್ಧಿಗೆ ನಾನು ಅನುದಾನ ಕೊಡುತ್ತೇನೆ. ಅದಕ್ಕೆ ಅಗತ್ಯವಾದ ಅನುದಾನ ನೀಡಲಾಗುವುದುʼʼ ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ಮಾಜಿ ಸಚಿವರಾದ ಸಾ.ರಾ. ಮಹೇಶ್, ಎಚ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎನ್. ಮಂಜೇಗೌಡ, ವಿವೇಕಾನಂದ, ಮಾಜಿ ಶಾಸಕ ಅಶ್ವಿನ್ ಕುಮಾರ್, ಕ್ಷೇತ್ರದ ಶಾಸಕ ರವಿಶಂಕರ್, ಸಮುದಾಯದ ಮುಖಂಡರಾದ ಅಶೋಕ್ ಕುಮಾರ್ ಉಪಸ್ಥಿತರಿದ್ದರು.