ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

20% commission scam: ಔಷಧಿ ಖರೀದಿಯಲ್ಲಿ ಶೇ. 20 ರಷ್ಟು ಕಮಿಷನ್ ದಂಧೆ: ಎಸ್‌ಸಿ/ಎಸ್‌ಟಿ ಸಭೆಯಲ್ಲಿ ಆಕ್ರೋಶ!

ಬಡ ರೋಗಿಗಳಿಗೆ ಅನುಕೂಲವಾಗಲು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಸಜ್ಜಿತ ಸ್ಕ್ಯಾನಿಂಗ್ ಯಂತ್ರ ಅಳವಡಿಸಬೇಕು," ಎಂದು ಅವರು ಆಡಳಿತ ಮಂಡಳಿಯನ್ನು ಬಲವಾಗಿ ಒತ್ತಾಯಿಸಿದರು. ವೈದ್ಯಾಧಿಕಾರಿ ಡಾ. ಸುನೀಲ್ ಪ್ರತಿಕ್ರಿಯಿಸಿ, "ಆಸ್ಪತ್ರೆಯಲ್ಲಿ ಕೇವಲ 6 ವೈದ್ಯರಿದ್ದು, 33 ಇರಬೇಕಾದ 'ಡಿ' ಗ್ರೂಪ್ ಸಿಬ್ಬಂದಿಯಲ್ಲಿ ಕೇವಲ 13 ಜನರಿದ್ದಾರೆ," ಎಂದು ಸಿಬ್ಬಂದಿ ಕೊರತೆಯ ನೆಪವೊಡ್ಡಿ ಕೈಚೆಲ್ಲಿದರು

ಔಷಧಿ ಖರೀದಿಯಲ್ಲಿ ಶೇ. 20 ರಷ್ಟು ಕಮಿಷನ್ ದಂಧೆ: ಆಕ್ರೋಶ

-

Profile
Ashok Nayak Jun 25, 2026 11:18 AM

​ಚಿಕ್ಕನಾಯಕನಹಳ್ಳಿ: ಫಾರ್ಮಾ ಕಂಪನಿಗಳು ಹಾಗೂ ವೈದ್ಯರ ಒಳ ಒಪ್ಪಂದದಿಂದಾಗಿ 1 ಲಕ್ಷ ರೂ. ಔಷಧಿಗೆ 20 ಸಾವಿರ ರೂ. ಕಮಿಷನ್(20% commission) ದಂಧೆ ನಡೆಯುತ್ತಿದೆ ಎಂದು ದಲಿತ ಮುಖಂಡ ಮಲ್ಲಿಕಾರ್ಜುನ ಗಂಭೀರ ಆರೋಪ ಮಾಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈರಲ್ ಫೀವರ್‌ಗೆ ಮಾತ್ರೆಗಳಿಲ್ಲ, ಉಚಿತವಾಗಿ ಆಗಬೇಕಾದ ಅಪೆಂಡಿಕ್ಸ್ ಸೇರಿದಂತೆ ಇತರ ಶಸ್ತ್ರಚಿಕಿತ್ಸೆಗಳಿಗೆ ಲಂಚ ವಸೂಲಿ ಮಾಡಲಾಗುತ್ತಿದೆ ಹಾಗೂ ರಕ್ತ ಪರೀಕ್ಷೆ ಕೇಂದ್ರದಲ್ಲಿ ತಪ್ಪು ರೋಗನಿರ್ಣಯ ನೀಡಲಾಗಿದೆ ಎಂದು ಸಭೆಯಲ್ಲಿ ತೀವ್ರ ಆಕ್ರೋಶ ಹೊರಹಾಕಲಾಯಿತು.

​ಪಟ್ಟಣದ ತೀನಂಶ್ರೀ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಸಿ/ಎಸ್‌ಟಿ ಪ್ರಗತಿ ಪರಿಶೀಲನಾ ಹಾಗೂ ಕುಂದುಕೊರತೆ ಸಭೆಯಲ್ಲಿ ಈ ವಿಷಯಗಳ ಕುರಿತು ತೀವ್ರ ಚರ್ಚೆ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, "ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಯಿ ಕಚ್ಚಿದ ರೋಗಿಗೂ ಹೊರಗಿನ ಔಷಧಿ ಬರೆದಿರುವುದನ್ನು ನಾನೇ ಗಮನಿಸಿದ್ದೇನೆ," ಎಂದು ಆಸ್ಪತ್ರೆಯ ಅವ್ಯವಸ್ಥೆ ಯನ್ನು ಒಪ್ಪಿಕೊಂಡರು.

ಇದನ್ನೂ ಓದಿ: Tumkur News: ಜಿಲ್ಲೆಯಲ್ಲಿ ಉಪಶಮನ ಆರೈಕೆ ಬೆಂಬಲಿಸಲು ತುಮಕೂರು ಜಿಲ್ಲಾಡಳಿತ ಮತ್ತು NIRAM ಸಹಯೋಗ

ಇದೇ ವೇಳೆ ಮುಖಂಡ ತರಬೇನಹಳ್ಳಿ ಚಿದಾನಂದ್ ಅವರು ಆಸ್ಪತ್ರೆಯಲ್ಲಿ ಖಾಸಗಿ ಲ್ಯಾಬ್‌ಗಳ ದಲ್ಲಾಳಿಗಳ ಕಾಟ ಮತ್ತು ಶೌಚಾಲಯಗಳ ದುಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು. "ಬಡ ರೋಗಿಗಳಿಗೆ ಅನುಕೂಲವಾಗಲು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಸಜ್ಜಿತ ಸ್ಕ್ಯಾನಿಂಗ್ ಯಂತ್ರ ಅಳವಡಿಸಬೇಕು," ಎಂದು ಅವರು ಆಡಳಿತ ಮಂಡಳಿಯನ್ನು ಬಲವಾಗಿ ಒತ್ತಾಯಿಸಿದರು. ವೈದ್ಯಾಧಿಕಾರಿ ಡಾ. ಸುನೀಲ್ ಪ್ರತಿಕ್ರಿಯಿಸಿ, "ಆಸ್ಪತ್ರೆಯಲ್ಲಿ ಕೇವಲ 6 ವೈದ್ಯರಿದ್ದು, 33 ಇರಬೇಕಾದ 'ಡಿ' ಗ್ರೂಪ್ ಸಿಬ್ಬಂದಿಯಲ್ಲಿ ಕೇವಲ 13 ಜನರಿದ್ದಾರೆ," ಎಂದು ಸಿಬ್ಬಂದಿ ಕೊರತೆಯ ನೆಪವೊಡ್ಡಿ ಕೈಚೆಲ್ಲಿದರು.

​ಸಭೆಯಲ್ಲಿದ್ದ ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು( Legislative Council Member Ramesh Babu) ಮಾತನಾಡಿ, "ಪುರಸಭೆಯ ಮುಖ್ಯಾಧಿಕಾರಿಯು ದಲಿತ ಮುಖಂಡರು ಕೇಳಿರುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿಲ್ಲ. ಈ ಬೇಜವಾಬ್ದಾರಿತನದ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಿ," ಎಂದು ತಹಶೀಲ್ದಾರ್‌ಗೆ ಸೂಚಿಸಿದರು. ಮುಖಂಡ ತೀರ್ಥಪುರ ಕುಮಾರ್ ಮಾತನಾಡಿ, ಎಸ್‌ಬಿಐ ಬ್ಯಾಂಕಿನವರು ಪಿಎಂ ವಿಶ್ವಕರ್ಮ ಯೋಜನೆಯಡಿ ದಲಿತರಿಗೆ ಸಾಲ ನೀಡದೆ ಸತಾಯಿಸುತ್ತಿದ್ದು, ಲೀಡ್ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಅಟ್ರಾಸಿಟಿ ದೂರು ದಾಖಲಿಸಲು ಒತ್ತಾಯಿಸಿದರು. ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ, ಮತಾಂತರ ಹೊಂದುವವರಿಗೆ ಮೀಸಲಾತಿ ಸೌಲಭ್ಯ ರದ್ದುಗೊಳಿಸಬೇಕು ಎಂದರು.

ಸಭೆಯಲ್ಲಿ ಟಿಸಿ ವಿಚಾರ ಪ್ರಸ್ತಾಪಿಸಿದ ಶಾಸಕರು: ಶಾಲಾ ದಾಖಲಾತಿ ಮತ್ತು ವರ್ಗಾವಣೆ ಪ್ರಮಾಣಪತ್ರ ನೀಡಲು ಖಾಸಗಿ ಶಾಲೆಗಳು ಸಾರ್ವಜನಿಕರನ್ನು ಸತಾಯಿಸುವ ವಿಷಯವನ್ನು ಶಾಸಕರೇ ಖುದ್ದಾಗಿ ಸಭೆಯ ಮುಂದೆ ಪ್ರಸ್ತಾಪಿಸಿ ಮಾತನಾಡಿದರು. ಹಂದನಕೆರೆ ಹೋಬಳಿಯ ವಿದ್ಯಾರ್ಥಿಯೊಬ್ಬ ಪ್ರಥಮ ಪಿಯುಸಿ ಓದಲು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ಖಾಸಗಿ ಕಾಲೇಜಿಗೆ ಸೇರಿದ್ದು, ಅಲ್ಲಿ ವಾತಾವರಣ ಸರಿಬರದೆ ವಾಪಸ್ ಬಂದು ಹಂದನಕೆರೆ ಸರ್ಕಾರಿ ಕಾಲೇಜಿಗೆ ಸೇರಲು ಬಯಸಿದಾಗ ಖಾಸಗಿ ಸಂಸ್ಥೆಯು ಟಸಿ ನೀಡಲು ನಿರಾಕರಿಸಿತ್ತು. "ಈ ಗಂಭೀರ ವಿಷಯ ನನ್ನ ಗಮನಕ್ಕೆ ಬಂದಾಗ, ತಕ್ಷಣವೇ ನಾನು ಅಂದಿನ ವಿಧಾನಸಭಾ ಸ್ಪೀಕರ್ ಆಗಿದ್ದ ಯು.ಟಿ. ಖಾದರ್ ಅವರ ಮೂಲಕ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಿಸಿ, ವಾಪಸ್ ಟಿಸಿ ಪಡೆಯುವಂತೆ ಕ್ರಮ ವಹಿಸಿ ವಿದ್ಯಾರ್ಥಿಗೆ ನ್ಯಾಯ ಕೊಡಿಸಲಾಯಿತು," ಎಂದು ತಮಗಾದ ಹಳೆಯ ಪ್ರಸಂಗದ ವಿವರಣೆಯನ್ನು ಶಾಸಕರು ಸಭೆಗೆ ನೀಡಿದರು.

*

​ಇದೇ ವೇಳೆ ತಾಲೂಕಿನ ಮದ್ಯದ ಅಂಗಡಿಗಳಲ್ಲಿ ಎಂಆರ್‌ಪಿಗಿಂತ 15 ರೂ. ಹೆಚ್ಚುವರಿ ಹಣ ವಸೂಲಿ ಹಾಗೂ ಹಳ್ಳಿಗಳಲ್ಲಿನ ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯ ಚಾಲಕರೇ ಮಾಹಿತಿ ಲೀಕ್ ಮಾಡುತ್ತಿದ್ದಾರೆ ಎಂದು ದೂರಲಾಯಿತು. ಅಬಕಾರಿ ಅಧಿಕಾರಿ ಜ್ಯೋತಿ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಮತ್ತೊಂದೆಡೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳ ಉತ್ತಮ ಕೆಲಸವನ್ನು ಮಾಜಿ ಜಿ.ಪಂ ಅಧ್ಯಕ್ಷ ರಘುನಾಥ್ ಶ್ಲಾಘಿಸಿದರು

​ಸಭೆಯಲ್ಲಿ ದಲಿತ ಸಂಘಟನೆಯ ಲಿಂಗದೇವರು, ಮುಖಂಡರುಗಳಾದ ಗೋ.ನಿ.ವಸಂತ್‌ಕುಮಾರ್, ಗಿರಿಯಪ್ಪ, ಶ್ರೀಧರ್, ಪ್ರವೀಣ್, ಯರೇಕಟ್ಟೆ ರಮೇಶ್, ರಾಜು ಬೆಳಗಿಹಳ್ಳಿ, ಚಿದಾನಂದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್‌ನಾಯ್ಕ, ತಹಶೀಲ್ದಾರ್ ಮಮತಾ ಹಾಗೂ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.