ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಸಾಹಿತಿ ಬರಗೂರು ರಾಮಚಂದ್ರಪ್ಪ

Tumkur News: ತುಮಕೂರಿನ ಕನ್ನಡ ಭವನದಲ್ಲಿ ಕನ್ನಡಪರ ಚಿಂತನ ವೇದಿಕೆ ವತಿಯಿಂದ ಆಯೋಜಿಸಿದ್ದ 'ಕನ್ನಡ ಮಾಧ್ಯಮ ಮೀಸಲಾತಿ 25 ವರ್ಷ' ಚಿಂತನ ಸಮಾವೇಶದಲ್ಲಿ ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಆಶಯ ನುಡಿಗಳನ್ನಾಡಿದ್ದಾರೆ.

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಸಾಹಿತಿ ಬರಗೂರು

-

Prabhakara R
Prabhakara R Aug 9, 2026 6:17 PM

​ತುಮಕೂರು: ರಾಜ್ಯದಲ್ಲಿ ಕನ್ನಡ ಉಳಿಸುವ ಪ್ರಶ್ನೆ ಸವಾಲಾಗಿರುವ ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಆದ್ಯತೆ ಕನ್ನಡದ ಉಳಿವಿಗೆ ಅತ್ಯಂತ ಮುಖ್ಯವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಇಲಾಖೆಯ ನೌಕರಶಾಹಿ ಆಡಳಿತದಿಂದ ಕನ್ನಡ ಸಂಕಷ್ಟದಲ್ಲಿದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

​ನಗರದ ಕನ್ನಡ ಭವನದಲ್ಲಿ ಕನ್ನಡಪರ ಚಿಂತನ ವೇದಿಕೆ ವತಿಯಿಂದ ಆಯೋಜಿಸಿದ್ದ 'ಕನ್ನಡ ಮಾಧ್ಯಮ ಮೀಸಲಾತಿ 25 ವರ್ಷ' ಚಿಂತನ ಸಮಾವೇಶದಲ್ಲಿ ಅವರು ಆಶಯನುಡಿ ಆಡಿದರು.​

​ರಾಷ್ಟ್ರೀಯ ಶಿಕ್ಷಣ ನೀತಿ ಹಿಂಬಾಗಿಲು ಪ್ರವೇಶ:

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ, ಶಿಕ್ಷಣ ಇಲಾಖೆಯ ನೌಕರಶಾಹಿ ಅದನ್ನು ಹಿಂಬಾಗಿಲಿನಿಂದ ಜಾರಿಗೊಳಿಸಲು ಹೊರಟಿದೆ. ರಾಜ್ಯ ಶಿಕ್ಷಣ ನೀತಿಯನ್ನು ಬಹಿರಂಗಪಡಿಸಿ ಚರ್ಚೆಗೆ ಅವಕಾಶ ಮಾಡಿಕೊಡದೆ ಈ ರೀತಿ ಉಪಾಯವಾಗಿ ಎನ್‌ಇಪಿ ಜಾರಿ ಮಾಡುತ್ತಿರುವುದು ಮಹಾನ್ ವಂಚನೆ ಎಂದು ಅವರು ಕಿಡಿಕಾರಿದರು.

​ಶೇಕಡ 5ರಷ್ಟು ಮೀಸಲಾತಿಯ ಮಹತ್ವ

ತಾವು ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ವೃತ್ತಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇಕಡ 5ರಷ್ಟು ಮೀಸಲಾತಿ ಜಾರಿಗೆ ತರಲಾಗಿದ್ದು, ಇದರಿಂದ ಲಕ್ಷಾಂತರ ಮಂದಿ ಸೌಲಭ್ಯ ಪಡೆದಿದ್ದಾರೆ ಎಂದರು.

​ಕೆಪಿಎಸ್ ಶಾಲೆಗಳ ನೀತಿಗೆ ವಿರೋಧ

ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಕೆಪಿಎಸ್ ಶಾಲೆಗಳ ನೀತಿ ಆಕರ್ಷಕವಾಗಿ ಕಂಡರೂ, ಹಳ್ಳಿಗಳ ಕಿರಿಯ ಪ್ರಾಥಮಿಕ ಶಾಲೆಗಳು ಕೇವಲ ಶಿಕ್ಷಣ ಕೇಂದ್ರಗಳಲ್ಲ, ಅವು ಸಾಂಸ್ಕೃತಿಕ ಮತ್ತು ನಾಡಹಬ್ಬಗಳನ್ನು ಆಚರಿಸುವ ಕೇಂದ್ರಗಳು ಎಂದು ತಿಳಿಸಿದರು.

​ಕನ್ನಡ ಭಾಷೆಯ ಕಡೆಗಣನೆ

ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕನ್ನಡ ವಿಷಯ ಬೋಧಿಸಲು ಪ್ರತ್ಯೇಕ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದ್ದರೆ, ನಮ್ಮಲ್ಲಿ ಸಮಾಜ ವಿಜ್ಞಾನ ಶಿಕ್ಷಕರು ಕನ್ನಡ ಬೋಧಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

​ಡಾ. ಪುರುಷೋತ್ತಮ ಬಿಳಿಮನೆ ಮಾತನಾಡಿ, ಶಿಕ್ಷಣದ ಮೂಲ ಆಶಯವೇ ಬದಲಾಗಿದ್ದು, ಬಂಡವಾಳಶಾಹಿಗಳು ಮಕ್ಕಳನ್ನು ವಿನಿಮಯದ ಸರಕುಗಳನ್ನಾಗಿ ಮಾಡಿಕೊಂಡಿದ್ದಾರೆ. ಕನ್ನಡ ಮಾಧ್ಯಮ ಮೀಸಲಾತಿಯನ್ನು ಶೇಕಡ 5 ರಿಂದ 20ಕ್ಕೆ ಏರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ದೇವಸ್ಥಾನ, ಕೋಟೆಗಳಂತೆ ನೂರು ವರ್ಷ ಪೂರೈಸಿದ ಶಾಲೆಗಳನ್ನು ಪರಂಪರೆಯ ಶಾಲೆಗಳೆಂದು ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂದರು.

ಸಂವಾದವನ್ನು ಡಾ. ರಾಜಪ್ಪ ದಳವಾಯಿ ಸಮನ್ವಯಗೊಳಿಸಿದರು. ಸಮಾವೇಶದಲ್ಲಿ ಎಚ್. ಗೋವಿಂದಯ್ಯ, ಎ. ರಾಮಚಂದ್ರಪ್ಪ, ಅಶ್ವತ್ಥನಾರಾಯಣ ಗುಟ್ಟೆ, ಡಾ. ಶೈಲಾ ನಾಗರಾಜ್, ಡಾ. ಓ. ನಾಗರಾಜು ಸೇರಿದಂತೆ ವಿವಿಧ ಸಾಹಿತಿಗಳು, ಚಿಂತಕರು ಹಾಗೂ ಮೀಸಲಾತಿ ಫಲಾನುಭವಿಗಳು ಉಪಸ್ಥಿತರಿದ್ದರು.

​ಕಾರ್ಯಕ್ರಮದಲ್ಲಿ ‘ಕನ್ನಡ ಮೀಸಲಾತಿ ಕಲಿಕೆ-ಬಳಕೆ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಮುಂದುವರಿದು ನಡೆದ ಸಂವಾದ ಗೋಷ್ಠಿಯಲ್ಲಿ ಕನ್ನಡ ಮಾಧ್ಯಮ ಮೀಸಲಾತಿಯ ವಿವಿಧ ಫಲಾನುಭವಿಗಳು ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.

image

​ಕನ್ನಡ ಉಳಿವಿಗೆ ಸರ್ಕಾರದ ಮಟ್ಟದಲ್ಲಿ ಕಟ್ಟುನಿಟ್ಟಿನ ನೀತಿನಿಯಮ ರೂಪಿಸಬೇಕಿದೆ. ಶಿಕ್ಷಣ ಸಚಿವರು ಮತ್ತು ಇಲಾಖೆಯ ಮುಖ್ಯಸ್ಥರೊಂದಿಗೆ ಕನ್ನಡ ಕಾಳಜಿಯ ಚಿಂತಕರ ಸಮಿತಿ ರಚಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು.

ಕೆ. ಎನ್. ರಾಜಣ್ಣ, ಮಾಜಿ ಸಚಿವ