ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸದ್ಗುರು ಶ್ರೀ ಮಧುಸೂದನ ಸಾಯಿ ಭರವಸೆ
Sadguru Sri Madhusudan Sai: ಎಲ್ಲಿ ನಿಸ್ವಾರ್ಥ ಪ್ರೀತಿ ಇರುತ್ತದೆಯೋ ಅಂಥ ಸಂಬಂಧಗಳು ಮಾತ್ರವೇ ಸುದೀರ್ಘ ಅವಧಿಗೆ ಉಳಿಯುತ್ತವೆ. ನಾವು ಬೇರೆಯವರಿಗೆ ಪ್ರೀತಿ ಕೊಡಲೆಂದೇ ಹುಟ್ಟಿದ್ದೇವೆ. ಉಳಿದದ್ದೆಲ್ಲ ನಂತರದ್ದು ಎಂದು ಭಗವಾನ್ ಸತ್ಯ ಸಾಯಿ ಬಾಬಾ ಹೇಳಿದ್ದರು. ಬಾಬಾ ಅವರ ಈ ಮಾತನ್ನು ನಾವು ಚಾಲ್ತಿಗೆ ತಂದಿದ್ದೇವೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.
ಸದ್ಗುರು ಶ್ರೀ ಮಧುಸೂದನ ಸಾಯಿ. -
ಕಾರವಾರ, ಆ.19: ನಮ್ಮ ಸಂಸ್ಥೆಗಳಲ್ಲಿ ಓದಿದವರು, ಒಂದಲ್ಲ ಒಂದು ರೀತಿಯಲ್ಲಿ ಸುದೀರ್ಘ ಒಡನಾಟ ಇಟ್ಟುಕೊಂಡಿರುತ್ತಾರೆ. ಒಂದು ಕೋರ್ಸ್ ಅಥವಾ ಚಿಕಿತ್ಸೆ ಮುಗಿದ ತಕ್ಷಣ ಒಡನಾಟ ಕಳೆದುಕೊಳ್ಳುವುದಿಲ್ಲ. ಇದಕ್ಕೆ ಕಾರಣ ನಿಸ್ವಾರ್ಥ ಪ್ರೇಮ ಮತ್ತು ನಿಸ್ವಾರ್ಥ ಸೇವೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು.
ನಗರದಲ್ಲಿ ಬುಧವಾರ ನಡೆದ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎಲ್ಲಿ ನಿಸ್ವಾರ್ಥ ಪ್ರೀತಿ ಇರುತ್ತದೆಯೋ ಅಂಥ ಸಂಬಂಧಗಳು ಮಾತ್ರವೇ ಸುದೀರ್ಘ ಅವಧಿಗೆ ಉಳಿಯುತ್ತವೆ. ನಾವು ಬೇರೆಯವರಿಗೆ ಪ್ರೀತಿ ಕೊಡಲೆಂದೇ ಹುಟ್ಟಿದ್ದೇವೆ. ಉಳಿದದ್ದೆಲ್ಲ ನಂತರದ್ದು ಎಂದು ಭಗವಾನ್ ಸತ್ಯ ಸಾಯಿ ಬಾಬಾ ಹೇಳಿದ್ದರು. ಬಾಬಾ ಅವರ ಈ ಮಾತನ್ನು ನಾವು ಚಾಲ್ತಿಗೆ ತಂದಿದ್ದೇವೆ ಎಂದು ನುಡಿದರು.
ನಮ್ಮಲ್ಲಿ ಓದುವ ಮಕ್ಕಳು ಈ ನಿಸ್ವಾರ್ಥ ಪ್ರೀತಿ ಅನುಭವಿಸಿ ನಮ್ಮವರೇ ಆಗುತ್ತಾರೆ. ಪ್ರವಾಸಿಗರಾಗಿ, ಸಂದರ್ಶಕರಾಗಿ ಬಂದವರೂ ದೀರ್ಘಾವಧಿಗೆ ಉಳಿಯುತ್ತಾರೆ. ಇದು ನಿಸ್ವಾರ್ಥ ಪ್ರೇಮಕ್ಕೆ ಇರುವ ಶಕ್ತಿ ಎಂದು ವಿವರಿಸಿದರು.
ಪ್ರವಚನವನ್ನು ಯಾರು ಬೇಕಾದರೂ ಕೊಡಬಲ್ಲರು. ಇತ್ತೀಚಿನ ದಿನಗಳಲ್ಲಿ ಚಾಟ್‌ಜಿಪಿಟಿ ಥರದ ಕೃತಕ ಬುದ್ಧಿಮತ್ತೆ ಸಾಧನಗಳು ಸಹ ಪ್ರವಚನ ಕೊಡುತ್ತಿವೆ. ಆದರೆ ಮಾತಿನಂತೆ ನಡೆದುಕೊಂಡರೆ ಮಾತ್ರ ಅದಕ್ಕೆ ಬೆಲೆ. ಸೇವೆಯ ಮೂಲಕ ಇಡೀ ಜಗತ್ತನ್ನು ಒಂದು ಮಾಡಬಹುದು. ಅಪನಂಬಿಕೆಯನ್ನು ನೀಗಿಸಬಹುದು. ಫಿಜಿ, ಇರಾನ್, ಟರ್ಕಿ ಮತ್ತು ಆಫ್ರಿಕಾ ಖಂಡದ ದೇಶಗಳಲ್ಲಿ ನಾವು ಪ್ರವಚನದ ಮೂಲಕ ಅಲ್ಲ ಸೇವೆಯ ಮೂಲಕ ಜನರ ಮನಸು ಗೆಲ್ಲುತ್ತಿದ್ದೇವೆ ಎಂದು ಸದ್ಗುರು ವಿವರಿಸಿದರು.
ಕೋವಿಡ್ ಕಾಲದಲ್ಲಿ ಜನರಿಗೆ ಸಾಕಷ್ಟು ಸಮಯ ಸಿಕ್ಕಿತ್ತು. ಕೆಲವರು ಅಧ್ಯಾತ್ಮದತ್ತ ಹೊರಳಿದರು. ಕೆಲವರು ಒಟಿಟಿ ನೋಡಿಕೊಂಡು ಕಾಲ ಕಳೆದರು. ಅಧ್ಯಾತ್ಮದತ್ತ ಹೊರಳಿದವರು ನಿಜಕ್ಕೂ ಒಳಿತಿನ ರೀತಿಯಲ್ಲಿ ಬದಲಾದರು. ನಮ್ಮ ದೇಶದ ಅಧ್ಯಾತ್ಮ ಪರಂಪರೆ ಅರಿತವರು ದೇಹವೇ ಸರ್ವಸ್ವವಲ್ಲ ಎಂಬುದನ್ನು ಕಂಡುಕೊಂಡರು ಎಂದು ನೆನಪಿಸಿಕೊಂಡರು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾತು:
ಉತ್ತರ ಕನ್ನಡ ಜಿಲ್ಲೆಯ ಶ್ರೀ ಸತ್ಯ ಸಾಯಿ ಸತ್ತ್ವ ನಿಕೇತನಂ ವಸತಿ ಶಾಲೆಯ ವಿದ್ಯಾರ್ಥಿ ಸೃಜನ್ ಜಯಪ್ರಕಾಶ್ ಮಾತನಾಡಿ, ಇಲ್ಲಿ ಎನ್‌ಐಒಎಸ್ ಶಿಕ್ಷಣ ಪದ್ಧತಿ ಇರುವುದರಿಂದ ನಮಗೆ ಇಷ್ಟವಾದ ವಿಷಯಗಳನ್ನು ಹೆಚ್ಚು ಆಳವಾಗಿ ಓದಲು ಅವಕಾಶ ಸಿಗುತ್ತದೆ. ಪಠ್ಯಕ್ರಮದ ಅಧ್ಯಯನದ ಜತೆಗೆ ಯೋಗ, ಕೊಳಲು ವಾದನ ಮತ್ತು ಫುಟ್‌ಬಾಲ್ ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಅವಕಾಶ ಸಿಕ್ಕಿತು ಎಂದು ಹೆಮ್ಮೆಯಿಂದ ಹೇಳಿದರು.
ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಮಾರ್ಗದರ್ಶಕ ಡಾ. ಬಿ.ಎನ್. ನರಸಿಂಹ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾತ್ಮರು ವಸಂತ ಋತುವಿನಂತೆ ಲೋಕಕ್ಕೆ ಆಗಮಿಸಿ, ಎಲ್ಲರಿಗೂ ಅನುಗ್ರಹ ನೀಡಿ ಲೋಕಹಿತವನ್ನು ಸಾಧಿಸುತ್ತಾರೆ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಭವಸಾಗರವನ್ನು ದಾಟಿದ ಸಿದ್ಧಪುರುಷರು, ಇತರರನ್ನೂ ಅದರಾಚೆಗೆ ಕರೆದೊಯ್ಯಲು ನೆರವಾಗುತ್ತಾರೆ ಎಂದು ವಿವರಿಸಿದರು.
ಕಾರವಾರ ರಾಮಕೃಷ್ಣಾಶ್ರಮದ ಅಧ್ಯಕ್ಷ ಶ್ರೀ ಭಾವೇಶಾನಂದ ಸ್ವಾಮೀಜಿ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ, ಮಾಜಿ ಸಚಿವ ಆನಂದ್ ಆಸ್ನೋಟಿಕರ್, ಮಾಜಿ ಶಾಸಕ ಗಂಗಾಧರ ಭಟ್, ಕೆನರಾ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಸ್.ಪಿ. ಕಾಮತ್ ಉಪಸ್ಥಿತರಿದ್ದರು. ಸತ್ಯ ಸಾಯಿ ನಾದ ಗುರುಕುಲಂ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ: ಸದ್ಗುರು ಉತ್ತರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗಬೇಕು ಎನ್ನುವ ಹತ್ತಾರು ವರ್ಷಗಳ ಬೇಡಿಕೆ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿಯೂ ಪ್ರತಿಧ್ವನಿಸಿತು. ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಭಿಕರೊಬ್ಬರು, ಮುದ್ದೇನಹಳ್ಳಿಯಲ್ಲಿ ಇರುವ ಆಸ್ಪತ್ರೆಯ ಮಾದರಿಯಲ್ಲಿ ಇಲ್ಲಿಯೂ ಆಸ್ಪತ್ರೆ ಸ್ಥಾಪಿಸಿ ಎಂದು ಕೋರಿದರು.
ಈ ಕೋರಿಕೆಗೆ ಪ್ರತಿಕ್ರಿಯಿಸಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಯಾವುದೇ ಸಂಸ್ಥೆ ಆರಂಭವಾಗಲು ಜನ ಮತ್ತು ಧನ ಎರಡೂ ಬೇಕು. ಮುದ್ದೇನಹಳ್ಳಿಗೆ ಬೆಂಗಳೂರಿನಿಂದ ವೈದ್ಯರು ಬರುತ್ತಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಷ್ಟು ವೈದ್ಯರು ಸಿಗುವುದಿಲ್ಲ. ಈಗ ನಮ್ಮ ವೈದ್ಯಕೀಯ ಕಾಲೇಜಿನ ಮಕ್ಕಳು ಸಿದ್ಧರಾಗುತ್ತಿದ್ದಾರೆ. ಅವರ ವಿದ್ಯಾಭ್ಯಾಸ ಮುಗಿಯುವ ಹೊತ್ತಿಗೆ ಕಟ್ಟಡ, ಉಪಕರಣಗಳ ಸಿದ್ಧತೆ ಮಾಡಿಕೊಂಡರೆ, ದಾನಿಗಳು ಕೈಜೋಡಿಸಿದರೆ ಇಲ್ಲಿಯೂ ಇನ್ನೂ 5 ವರ್ಷಗಳಲ್ಲಿ ಉತ್ತಮ ಆಸ್ಪತ್ರೆ ಸ್ಥಾಪಿಸಬಹುದು ಎಂದು ಭರವಸೆ ನೀಡಿದರು.
ನೈಜಿರಿಯಾದ ಕತ್ತಲಲ್ಲಿ ಕಾರಿನ ಬಾಗಿಲು ಬಡಿದ ಮಕ್ಕಳು ಇಂದು ವೈದ್ಯರು: ಸದ್ಗುರು ಶ್ರೀ ಮಧುಸೂದನ ಸಾಯಿ
ಪ್ರಸ್ತುತ ಜಿಲ್ಲೆಯಲ್ಲಿ ಎರಡು ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುತ್ತದೆ. ನಮ್ಮಿಂದ ಏನೆಲ್ಲ ಮಾಡಲು ಸಾಧ್ಯವಿದೆಯೋ ಅವೆಲ್ಲವನ್ನೂ ಖಂಡಿತ ಮಾಡುತ್ತೇವೆ ಎಂದು ಪುನರುಚ್ಚರಿಸಿದರು.