Pahalgam Terror Attack: ಗುಂಡು ಹಾರಿಸುವ ಮುನ್ನ ಮೋದಿಯನ್ನು ನಿಂದಿಸಿ, ಕುರಾನ್ ಶ್ಲೋಕ ಪಠಿಸಲು ಹೇಳಿದ ಉಗ್ರರು, ಸಾವಿನ ಸಂಖ್ಯೆ 28ಕ್ಕೆ
ಮೊದಲು ಪಾತಕಿಗಳು ಅವರನ್ನು ಟೆಂಟ್‌ನಿಂದ ಆಚೆ ಕರೆದರು. ನಂತರ, ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಕ್ಕಾಗಿ ಅವರನ್ನು ದೂಷಿಸಿದರು. ಮೋದಿಯವರನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ನಂತರ, ʼಕಾಶ್ಮೀರಿ ಉಗ್ರಗಾಮಿಗಳು ಮುಗ್ಧ ಜನರು, ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುತ್ತಾರೆ ಎಂಬುದನ್ನು ತಾವು ನಿರಾಕರಿಸುತ್ತೇವೆʼ ಎಂದು ಹೇಳಿದರು.


ಶ್ರೀನಗರ: ಮಿನಿ ಸ್ವಿಜರ್‌ಲ್ಯಾಂಡ್ ಎಂದೇ ಕರೆಯಲ್ಪಡುವ ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ನಿನ್ನೆ ಇಸ್ಲಾಮಿಕ್ ಉಗ್ರರಿಂದ ನಡೆದ ಭೀಕರ ನರಮೇಧದಲ್ಲಿ (Pahalgam terror attack) ಬಲಿಯಾದವರ ಸಂಖ್ಯೆ 28ಕ್ಕೇರಿದೆ. ಕೊಲ್ಲುವ ಮುನ್ನ ಭಯೋತ್ಪಾದಕರು (Terrorists) ಬಲಿಪಶುಗಳ ಹೆಸರನ್ನು ಕೇಳಿದರು, ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra modi) ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದರು, ಕುರಾನ್ (Quran) ಶ್ಲೋಕಗಳನ್ನು ಹೇಳುವಂತೆ ಪೀಡಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪುಣೆ ಮೂಲದ ಉದ್ಯಮಿಯೊಬ್ಬರ ಪುತ್ರಿ 26 ವರ್ಷದ ಅಸವರಿ ಜಗದಾಳೆಯ ತಂದೆ, 54 ವರ್ಷದ ಸಂತೋಷ್ ಜಗದಾಳೆಯನ್ನು ಉಗ್ರರು ಗುಂಡಿಕ್ಕಿ ಕೊಂದರು. ಮೊದಲು ಪಾತಕಿಗಳು ಅವರನ್ನು ಟೆಂಟ್‌ನಿಂದ ಆಚೆ ಕರೆದರು. ನಂತರ, ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಕ್ಕಾಗಿ ಅವರನ್ನು ದೂಷಿಸಿದರು. ಮೋದಿಯವರನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ನಂತರ, ʼಕಾಶ್ಮೀರಿ ಉಗ್ರಗಾಮಿಗಳು ಮುಗ್ಧ ಜನರು, ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುತ್ತಾರೆ ಎಂಬುದನ್ನು ತಾವು ನಿರಾಕರಿಸುತ್ತೇವೆʼ ಎಂದು ಹೇಳಿದರು.
ಬಳಿಕ ಕುರಾನ್‌ನ ಶ್ಲೋಕವನ್ನು ಪಠಿಸಲು ಜಗದಾಳೆಗೆ ಕೇಳಿದರು. ಅದು ಅವರಿಂದ ಸಾಧ್ಯವಾಗದಿದ್ದಾಗ, ಮೂರು ಬಾರಿ ಅವರ ಮೇಲೆ ಗುಂಡು ಹಾರಿಸಿದರು. ಇದಾದ ಬಳಿಕ ಅವರ ಕುಟುಂಬದ ಇತರ ಗಂಡಸರ ಮೇಲೂ ಗುಂಡು ಹಾರಿಸಿ ಕೊಂದರು. ಮಹಿಳೆಯರು ಹಾಗೂ ಮಕ್ಕಳು ಈ ಭೀಕರ ಕೃತ್ಯಗಳಿಗೆ ಸಾಕ್ಷಿಯಾಗಿದ್ದರು. ಉಗ್ರರು ಅಲ್ಲಿಂದ ತೆರಳಿದ ಎಷ್ಟೋ ಹೊತ್ತಿನ ಬಳಿಕ, ಈ ಕುಟುಂಬಗಳನ್ನು ಪೋನಿಯ ಮೇಲೆ ಅಲ್ಲಿಗೆ ಕರೆದೊಯ್ದ ವ್ಯಕ್ತಿಗಳು ಬಂದು ಇವರನ್ನು ಮರಳಿ ಕರೆತಂದರು. ಗುಂಡಿನ ದಾಳಿಗೀಡಾದವರು ಬದುಕಿದ್ದಾರೆಯೇ ಸತ್ತಿದ್ದಾರೆಯೇ ಎಂಬುದು ಕೂಡ ಇನ್ನೂ ಹಲವು ಕುಟುಂಬದವರಿಗೆ ಗೊತ್ತಿಲ್ಲ.
ಈ ಭೀಕರ ಕೃತ್ಯಗಳೆಲ್ಲ ಮಿನಿ ಸ್ವಿಜರ್‌ಲ್ಯಾಂಡ್ ಎಂದು ಕರೆಯಲಾಗುವ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದಿವೆ. ಹಲವು ಕುಟುಂಬಗಳು ಅಲ್ಲಿ ರಜೆಯ ಆನಂದ ಅನುಭವಿಸುತ್ತಿದ್ದವು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಅಮಾಯಕ ನಾಗರಿಕರ ಮೇಲೆ ಗುಂಡು ಹಾರಿಸಿದ ನಂತರ ಕನಿಷ್ಠ 28 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿ ಗುಂಡಿನ ದಾಳಿಯ ಸುದ್ದಿ ತಿಳಿದಾಗ ಭದ್ರತಾ ಪಡೆಗಳು ಅಲ್ಲಿಗೆ ಧಾವಿಸಿದವು.
ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರ ತಲುಪಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಎಲ್‌ಜಿ ಮನೋಜ್ ಸಿನ್ಹಾ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಗಲ್ಫ್ ಪ್ರವಾಸ ಅರ್ಧಕ್ಕೇ ಮೊಟಕುಗೊಳಿಸಿ ಹಿಂದಿರುಗುತ್ತಿದ್ದಾರೆ.
ಇದನ್ನೂ ಓದಿ: Pahalgam Terror Attack: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ದಾಳಿ ಹೊಣೆ ಹೊತ್ತ TRF ಸಂಘಟನೆಯ ಹಿನ್ನೆಲೆಯೇನು?