ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: ರಿಷಬ್‌ ಶೆಟ್ಟಿಯ 'ಕಾಂತಾರ: ಚಾಪ್ಟರ್‌ 1' ರಿಲೀಸ್‌ ಡೇಟ್‌ ಮುಂದೂಡಿಕೆ ಆಯ್ತಾ? ಇಲ್ಲಿದೆ ಚಿತ್ರತಂಡದ ಸ್ಪಷ್ಟನೆ

Rishab Shetty: ಹೊಂಬಾಳೆ ಫಿಲ್ಮ್ಸ್‌ -ರಿಷಬ್‌ ಶೆಟ್ಟಿ ಕಾಂಬಿನೇಷನ್‌ನ ಬಹು ನಿರೀಕ್ಷಿತ ʼಕಾಂತಾರ: ಚಾಪ್ಟರ್‌ 1ʼ ಚಿತ್ರದ ರಿಲೀಸ್‌ ಡೇಟ್‌ ಈಗಾಗಲೇ ಅನೌನ್ಸ್‌ ಮಾಡಲಾಗಿದೆ. ಈ ವರ್ಷದ ಅ. 2ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಘೋಷಿಸಲಾಗಿದೆ. ಆದರೆ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ ಎನ್ನುವ ವದಂತಿ ಹಬ್ಬಿದ್ದು, ಅದಕ್ಕೆ ಚಿತ್ರತಂಡ ಸ್ಪಷ್ಟನೆ ನೀಡಿದೆ.

'ಕಾಂತಾರ: ಚಾಪ್ಟರ್‌ 1' ರಿಲೀಸ್‌ ಡೇಟ್‌ ಮುಂದೂಡಿಕೆ ಆಯ್ತಾ?

ʼಕಾಂತಾರ: ಚಾಪ್ಟರ್‌ 1ʼ ಪೋಸ್ಟರ್‌.

Ramesh B Ramesh B Apr 2, 2025 5:58 PM

ಬೆಂಗಳೂರು: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್‌ ಮಾಡಿ, ರಾಷ್ಟ್ರ ಪ್ರಶಸ್ತಿಯ ಗರಿಯನ್ನೂ ಮುಡಿಗೇರಿಸಿಕೊಂಡು ಸ್ಯಾಂಡಲ್‌ವುಡ್‌ ಹೆಮ್ಮೆಯ ಚಿತ್ರ ಎನಿಸಿಕೊಂಡಿದ್ದ ಹೊಂಬಾಳೆ ಫಿಲ್ಮ್ಸ್‌ (Hombale Films)-ರಿಷಬ್‌ ಶೆಟ್ಟಿ (Rishab Shetty) ಕಾಂಬಿನೇಷನ್‌ನ ʼಕಾಂತಾರʼ (Kantara) ಚಿತ್ರದ ಮತ್ತೊಂದು ಭಾಗ ಬರುತ್ತದೆ ಎಂದಾಗ ಇಡೀ ದೇಶದ ಸಿನಿಪ್ರಿಯರು ರೋಮಾಂಚನಗೊಂಡಿದ್ದರು. ಕಳೆದ ವರ್ಷಾರಂಭದಲ್ಲಿ ʼಕಾಂತಾರʼದ ಪ್ರೀಕ್ವೆಲ್‌ ʼಕಾಂತಾರ: ಚಾಪ್ಟರ್‌ 1ʼ (Kantara Chapter 1) ಅನ್ನು ರಿಷಬ್‌ ಶೆಟ್ಟಿ ಘೋಷಿಸಿದಾಗಲೇ ನಿರೀಕ್ಷೆ ಗರಿಗೆದರಿತ್ತು. ಅದಕ್ಕೆ ತಕ್ಕಂತೆ ಕುಂದಾಪುರದಲ್ಲಿ ಬೃಹತ್‌ ಸೆಟ್‌ ಹಾಕಿ ಚಿತ್ರೀಕರಣ ಆರಂಭಿಸಲಾಗಿತ್ತು. ಅದಾದ ಬಳಿಕ ವರ್ಷಾಂತ್ಯದಲ್ಲಿ ಹೊಂಬಾಳೆ ಫಿಲ್ಮ್ಸ್‌ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿತ್ತು. 2025ರ ಅ. 2ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿತ್ತು. ಆದರೆ ಕೆಲವು ದಿನಗಳಿಂದ ಅಂದುಕೊಂಡ ದಿನಕ್ಕೆ ಸಿನಿಮಾ ರಿಲೀಸ್‌ ಆಗುವುದಿಲ್ಲ ಎನ್ನುವ ವದಂತಿ ಹಬ್ಬಿದೆ. ಇದೀಗ ಚಿತ್ರತಂಡ ಈ ವದಂತಿಗಳ ಬಗ್ಗೆ ಕೊನೆಗೂ ಮೌನ ಮುರಿದಿದೆ.

ʼʼಯಾವುದೇ ಕಾರಣಕ್ಕೂ ʼಕಾಂತಾರ: ಚಾಪ್ಟರ್‌ 1ʼ ಚಿತ್ರದ ರಿಲೀಸ್‌ ಡೇಟ್‌ ಮುಂದೂಡಿಕೆಯಾಗುವುದಿಲ್ಲ. ಅಂದುಕೊಂಡಂತೆ ಸಿನಿಮಾ ಅ. 2ರಂದು ತೆರೆಗೆ ಬರಲಿದೆʼʼ ಎಂದು ಚಿತ್ರತಂಡ ತಿಳಿಸಿದ್ದಾಗಿ ವರದಿಯೊಂದು ಹೇಳಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ರೀಲ್ಸ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮೊದಲಿಗೆ ʼಕಾಂತಾರ: ಚಾಪ್ಟರ್‌ 1' ಚಿತ್ರ ಮುಂದೂಡಲಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದೆ. ಇದು ನಿಜವೇ? ಎನ್ನುವ ಮಿಲಿಯನ್‌ ಡಾಲರ್‌ ಪ್ರಶ್ನೆ ಮೂಡಿ ಬಂದಿದೆ. ಇದಕ್ಕೆ ಚಿತ್ರತಂಡ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ʼʼಇಲ್ಲʼʼ ಎಂದು ಸ್ಪಷ್ಟವಾಗಿ ಉತ್ತರಿಸುವ ಮೂಲಕ ವದಂತಿಗಳನ್ನು ನಿರಾಕರಿಸಿದೆ. ಇದರಿಂದ ಚಿತ್ರಕ್ಕಾಗಿ ಕಾದು ಕುಳಿತವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ:

ಈ ಸುದ್ದಿಯನ್ನೂ ಓದಿ: Kantara Chapter 1: 'ಕಾಂತಾರ: ಚಾಪ್ಟರ್‌ 1' ಚಿತ್ರತಂಡದಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಯುದ್ಧದ ದೃಶ್ಯಕ್ಕಾಗಿ 500 ಫೈಟರ್‌ಗಳ ನೇಮಕ

ʼಕಾಂತಾರʼ ಚಿತ್ರದ ಕಥೆ ನಡೆಯುವ ಮುನ್ನ ಏನಾಗಿತ್ತು ಎನ್ನುವುದನ್ನು ಪ್ರೀಕ್ವೆಲ್‌ನಲ್ಲಿ ರಿಷಬ್‌ ಶೆಟ್ಟಿ ಹೇಳಲಿದ್ದಾರೆ. ಚಿತ್ರದಲ್ಲಿ ನಟಿಸುವ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ರಿಷಬ್‌ ಶೆಟ್ಟಿ ಹೊತ್ತುಕೊಂಡಿದ್ದಾರೆ. ಇವರ ಜತೆಗೆ ಇನ್ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ವಿವರ ಇನ್ನೂ ಬಹಿರಂಗವಾಗಿಲ್ಲ. ಶತಮಾನಗಳಷ್ಟು ಹಿಂದಿನ ಕಥೆಯನ್ನು ತೆರೆಗೆ ಬರಲು ಚಿತ್ರತಂಡ ಮುಂದಾಗಿದ್ದು, ರಿಷಬ್‌ ಶೆಟ್ಟಿ ಕುದುರೆ ಸವಾರಿ, ಪ್ರಾಚೀನ ಯುದ್ಧಕಲೆ ಕಳರಿಪಯಟ್ಟು ಕರಗತ ಮಾಡಿಕೊಂಡಿದ್ದಾರೆ. ಸುಮಾರು 120 ಕೋಟಿ ರೂ. ವೆಚ್ಚದಲ್ಲಿ ಚಿತ್ರ ತಯಾರಾಗಲಿದೆ.

ಕದಂಬರ ಕಾಲಘಟ್ಟದಲ್ಲಿ ʼಕಾಂತಾರ: ಚಾಪ್ಟರ್‌ 1ʼರ ಕಥೆ ನಡೆಯಲಿದೆಯಂತೆ. ಕದಂಬರು ಕರ್ನಾಟಕವನ್ನು ಆಳಿದ ಪ್ರಸಿದ್ಧ ರಾಜ ಮನೆತನವಾಗಿದ್ದು, ಇವರ ಆಳ್ವಿಕೆಯನ್ನು ಭಾರತದ ಇತಿಹಾಸದಲ್ಲಿ ಸುವರ್ಣ ಯುಗ ಎಂದೇ ಕರೆಯಲಾಗುತ್ತದೆ. ಚಿತ್ರವನ್ನು ಸಾಕಷ್ಟು ರೋಚಕವಾಗಿ ಕಟ್ಟಿಕೊಡಲು ಮುಂದಾಗಿರುವ ರಿಷಬ್‌ ಶೆಟ್ಟಿ & ಟೀಂ ಯುದ್ಧದ ದೃಶ್ಯವನ್ನು ಸೆರೆ ಹಿಡಿಯಲು ಸಾಕಷ್ಟು ತಯಾರಿ ನಡೆಸಿದೆ.

ʼಕಾಂತಾರʼ ಚಿತ್ರದಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ನಡೆಯುವ ಸಂಘರ್ಷದ ದೃಶ್ಯ ಹೈಲೈಟ್‌ ಆಗಿತ್ತು. ಅದರಲ್ಲಿಯೂ ರಿಷಬ್‌ ಶೆಟ್ಟಿ ಅಭಿನಯ ನೋಡಿ ಪ್ರೇಕ್ಷಕರು ರೋಮಾಂಚನಗೊಂಡಿದ್ದರು. ಅದೇ ರೀತಿ ʼಕಾಂತಾರ: ಚಾಪ್ಟರ್‌ 1ʼ ಚಿತ್ರದಲ್ಲಿಯೂ ಯುದ್ಧದ ದೃಶ್ಯಕ್ಕೆ ಬಹಳ ಪ್ರಾಮುಖ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಅದ್ಧೂರಿಯಾಗಿ ಇದನ್ನು ತೆರೆಮೇಲೆ ಅನಾವರಣಗೊಳಿಸಲು ಚಿತ್ರತಂಡ ಮುಂದಾಗಿದ್ದು, ಅದಕ್ಕಾಗಿ ಇತ್ತೀಚೆಗೆ ಸುಮಾರು 500ಕ್ಕೂ ಹೆಚ್ಚು ನುರಿತ ಫೈಟರ್ಸ್‌ ನೇಮಕ ಮಾಡಿಕೊಂಡಿತ್ತು. ಬರೋಬ್ಬರಿ 25 ಎಕ್ರೆಯಲ್ಲಿ ಸೆಟ್‌ ಹಾಕಿ 45-50 ದಿನಗಳ ಕಾಲ ಶೂಟಿಂಗ್‌ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಎಲ್ಲ ಕಾರಣಗಳಿಂದ ʼಕಾಂತಾರ: ಚಾಪ್ಟರ್‌ 1ʼ ಈಗಾಗಲೇ ಕುತೂಹಲದ ಕೇಂದ್ರಬಿಂದು ಎನಿಸಿಕೊಂಡಿದೆ. ಅಲ್ಲದೆ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.