"ನನ್ನ ಮಗಳು ನಾಗಿಣಿ ಆಗಿದ್ದಾಳೆ"; ಯುವತಿಯ ಕಣ್ಮರೆ ಬಗ್ಗೆ ಪೊಲೀಸರಲ್ಲಿ ದೂರು, ಕೊನೆಗೆ ಆಗಿದ್ದೇನು?
Young woman turned into a Nagin: ತಮ್ಮ ಮಗಳು ನಾಗಿಣಿಯಾಗಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದ ಕುಟುಂಬಸ್ಥರು ಯುವತಿಯೊಬ್ಬಳ ಕಣ್ಮರೆ ಪ್ರಕರಣವನ್ನು ಪೊಲೀಸರಿಗೆ ದೂರು ನೀಡಿದ್ದಾರೆ. ಶೇಷನಾಗ ದೇವಾಲಯಕ್ಕೆ ಭೇಟಿ ನೀಡಿದ ನಂತರ ಅವಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು ಎಂದು ಕುಟುಂಬದವರು ಹೇಳಿದ್ದಾರೆ. ಆಕೆಯ ನಾಪತ್ತೆ ಪ್ರಕರಣವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ನನ್ನ ಮಗಳು ನಾಗಿಣಿ ಆಗಿದ್ದಾಳೆ ಎಂದ ತಂದೆ -
ಲಖನೌ, ಫೆ.11: ನನ್ನ ಮಗಳು ನಾಗಿಣಿ (Nagin) ಆಗಿ ಬದಲಾಗಿದ್ದಾಳೆ. ಅವಳ ಕೋಣೆಯಿಂದ ನಮಗೆ ಹಾವಿನ ಪೊರೆ ಸಿಕ್ಕಿದೆ. ದಯವಿಟ್ಟು ಅವಳನ್ನು ಹುಡುಕಲು ನಮಗೆ ಸಹಾಯ ಮಾಡಿ ಎಂದು ಯುವತಿಯ ತಂದೆ ಬೇಡಿಕೊಂಡಿದ್ದಾರೆ. ಉತ್ತರ ಪ್ರದೇಶದ (Uttar Pradesh) ಔರೈಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 19 ವರ್ಷದ ಯುವತಿಯ ತಂದೆ ಪೊಲೀಸರಲ್ಲಿ ದೂರು ನೀಡಿದ್ದಾರೆ. ದೂರು ಕೇಳಿ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ.
ಸೋಮವಾರ ಫಾಫಂಡ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಮನೆಗೆ ಅಧಿಕಾರಿಗಳು ತಲುಪಿದಾಗ, ಅವರಿಗೆ ಒಂದು ಅಸಾಮಾನ್ಯ ದೃಶ್ಯ ಕಂಡುಬಂದಿತು. ಹಾಸಿಗೆಯ ಮೇಲೆ ಹಾವಿನ ಪೊರೆಯನ್ನು ಇರಿಸಲಾಗಿತ್ತು. ಕೋಣೆಯಲ್ಲಿ ಯಾವುದೇ ಅನುಮಾನಸ್ಪದ ವಸ್ತು ಕಂಡುಬಂದಿಲ್ಲ. ಯುವತಿ ಎಲ್ಲಿಯೂ ಕಂಡುಬರಲಿಲ್ಲ.
ಮೂಢನಂಬಿಕೆಯಾಗಿ ಭಯಾನಕ ಕಥೆಯಾಗಿ ಆರಂಭವಾದ ಘಟನೆ, ನಾಟಕವೆಂದು ಬಹಿರಂಗವಾಗಿದೆ. ಕುಟುಂಬವು ಯುವತಿಗೆ ಮದುವೆ ಸಿದ್ಧತೆ ನಡೆಸಿತ್ತು. ಇದಕ್ಕೊಪ್ಪದ ಯುವತಿ ಈ ನಾಟಕ ಮಾಡಿದ್ದಾಳೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಆಕೆಯ ಕುಟುಂಬದವರ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ ಆ ಮಹಿಳೆ ತನ್ನ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುವ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಳು. ತಾನು ಮಲಗಿದ್ದಾಗ ಒಂದು ಸರ್ಪ ಬಂದು ತನ್ನ ಪಕ್ಕದಲ್ಲಿ ಮಲಗುತ್ತದೆ ಎಂದು ಆಕೆ ಹೇಳಿಕೊಂಡಿದ್ದಳು.
ಸುಮಾರು ಮೂರು ತಿಂಗಳ ಹಿಂದೆ, ಆಕೆ ಮೈನ್‌ಪುರಿ ಜಿಲ್ಲೆಯ ಕುಂಹೇಲ್‌ನ ಶೇಷನಾಗ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿಂದ ಶೇಷನಾಗ ಮೂರ್ತಿಯನ್ನು ಮನೆಗೆ ತಂದಿದ್ದಳು. ಕುಟುಂಬದವರ ಹೇಳಿಕೆಯಂತೆ, ಆ ಭೇಟಿ ಬಳಿಕ ಅವಳ ಮಾತುಗಳಲ್ಲಿ ಹಾವುಗಳ ಕುರಿತು ಉಲ್ಲೇಖಗಳು ಹೆಚ್ಚಾಗಿ ಮತ್ತು ಸ್ಪಷ್ಟವಾಗಿ ಕಾಣಿಸತೊಡಗಿದವು.
ದೇವಾಲಯದಿಂದ ಮರಳಿ ಬಂದ ನಂತರ, ಒಂದು ಹಾವು ಕನಸಿನಲ್ಲಿ ಬಂದು ತನ್ನ ಬಳಿಯಲ್ಲಿ ಮಲಗುತ್ತದೆ ಎಂದು ಅವಳು ಹೇಳುತ್ತಿದ್ದಳು. ನಾವು ಆತಂಕಗೊಂಡಿದ್ದರೂ, ಇಂತಹ ಘಟನೆ ನಡೆಯಬಹುದು ಎಂದು ಭಾವಿಸಿರಲಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಅವಳು ಕಾಣೆಯಾದ ದಿನ, ಶೇಷನಾಗ ಮೂರ್ತಿಯನ್ನು ಮಾತ್ರ ತನ್ನೊಂದಿಗೆ ತೆಗೆದುಕೊಂಡು ಹೋದಳು ಎಂದು ತಿಳಿದುಬಂದಿದೆ. ಅವಳ ಹಾಸಿಗೆಯ ಮೇಲೆ ಇಡಲಾಗಿದ್ದ ಹಾವಿನ ಚರ್ಮ ಬಿಟ್ಟ ತುಂಡು ಅವಳು ಕಾಲಕ್ರಮೇಣ ಕಟ್ಟಿಕೊಂಡಿದ್ದ ಕಥೆಗೆ ಮತ್ತಷ್ಟು ಪುಷ್ಟಿ ನೀಡಿತು. ಮನೆಯವರಲ್ಲಿ ಏನೋ ಅತೀಂದ್ರಿಯ ಘಟನೆ ನಡೆದಿದೆ ಎಂಬ ಭಯವನ್ನು ಗಟ್ಟಿಗೊಳಿಸಿತು.
ಪೊಲೀಸರು ಅಂತಹ ಯಾವುದೇ ಕಥೆಯನ್ನು ದೃಢವಾಗಿ ತಳ್ಳಿಹಾಕಿದ್ದಾರೆ. ವೃತ್ತ ಅಧಿಕಾರಿ (CO) ಮನೋಜ್ ಗಂಗ್ವಾರ್ ಅವರು ಈ ನಾಗಿನಿ ಕಥೆಯನ್ನು ವದಂತಿ ಎಂದು ಕರೆದರು. ಅವಳು ನಾಗಿನಿ ಆಗಿದ್ದಾಳೆ ಎಂಬ ಕಥೆಯಲ್ಲಿ ಯಾವುದೇ ಸತ್ಯವಿಲ್ಲ. ನಾವು ಇದನ್ನು ಕಾಣೆಯಾದ ಯುವತಿಯ ಪ್ರಕರಣವಾಗಿ ತನಿಖೆ ಮಾಡುತ್ತಿದ್ದೇವೆ ಎಂದು ಗಂಗ್ವಾರ್ ಹೇಳಿದರು. ತಪ್ಪು ಮಾಹಿತಿಯನ್ನು ಹರಡದಂತೆ ಜನರಲ್ಲಿ ಪೊಲೀಸರು ಮನವಿ ಮಾಡಿದರು.
ಬುರ್ಖಾ ಧರಿಸಿ ಮಹಿಳಾ ಬೋಗಿ ಪ್ರವೇಶ ಮಾಡಿದ ವ್ಯಕ್ತಿ: ಅನುಮಾನಾಸ್ಪದ ನಡವಳಿಕೆ ಕಂಡು ಬೆಚ್ಚಿಬಿದ್ದ ಮಹಿಳೆಯರು!
ಯುವತಿಯ ಮನೆಯವರು ಮದುವೆಗೆ ಒತ್ತಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಅವಳಿಗೆ ಮದುವೆಯಾಗಲು ಇಷ್ಟವಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದೇವಾಲಯಕ್ಕೆ ಹೋಗುವುದು, ಹಾವುಗಳು ಕನಸಿನಲ್ಲಿ ಬರುತ್ತವೆ ಎಂದು ಹೇಳುವುದು ಇವೆಲ್ಲಾ ಕಟ್ಟುಕತೆಯನ್ನು ಬಿಂಬಿಸಲು ಹೊರಟಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಯುವತಿಯು ಹತ್ತಿರದ ಹೊಲಗಳಲ್ಲಿ ಒಂಟಿಯಾಗಿ ಅಲೆದಾಡುತ್ತಿದ್ದಳು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. ಅವಳು ಹೊಲಗಳ ಕಡೆಗೆ ಹೋಗಿ ನಿರ್ಜನ ಸ್ಥಳಗಳಲ್ಲಿ ಸುತ್ತಲೂ ನೋಡುತ್ತಿದ್ದಳು. ಆ ಸಮಯದಲ್ಲಿ ನಮಗೆ ಏಕೆ ಎಂದು ಅರ್ಥವಾಗಲಿಲ್ಲ. ಹಾವಿನ ಚರ್ಮವನ್ನು ಹುಡುಕುತ್ತಿದ್ದಿರಬಹುದು ಎಂದು ಗ್ರಾಮಸ್ಥರು ಹೇಳಿದರು.
ಇನ್ನು ಮೊಬೈಲ್ ಕರೆಯನ್ನು ಪರಿಶೀಲಿಸಿದಾಗ ಯುವಕನೊಬ್ಬನ್ನಲ್ಲಿ ಮಾತನಾಡುತ್ತಿದ್ದುದು ತಿಳಿದುಬಂದಿದೆ. ಹೀಗಾಗಿ ಆತನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ತನ್ನ ಮಗಳನ್ನು ಆಮಿಷವೊಡ್ಡಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿ ವಿರುದ್ಧ ಯುವತಿಯ ತಂದೆ ಎಫ್‌ಐಆರ್ ದಾಖಲಿಸಿದ್ದಾರೆ. ಅವರು ತಮ್ಮ ದೂರಿನಲ್ಲಿ ಗ್ರಾಮದ ಯುವಕನ ಹೆಸರನ್ನೂ ಉಲ್ಲೇಖಿಸಿದ್ದಾರೆ.