Ons Jabeur: ದೈಹಿಕ ಯೋಗಕ್ಷೇಮದತ್ತ ಗಮನಹರಿಸಲು ಟೆನಿಸ್‌ನಿಂದ ಬ್ರೇಕ್ ಪಡೆದ ಒನ್ಸ್ ಜಬೇರ್
ಅರೇಬಿಕ್, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಜಬೇರ್ ಸದ್ಯ ಟೆನಿಸ್‌ನಿಂದ ವಿರಾಮ ಪಡೆದಿದ್ದರೂ ಕೂಡ ಟ್ಯುನೀಷಿಯಾದ ಹಲವು ಮೊದಲುಗಳ ಒಡತಿಯಾದ ಜಬೇರ್‌ಗೆ ಆ ದೇಶದ ‘ಟೆನಿಸ್ ರಾಣಿ’ ಎನ್ನುವ ಗರಿಮೆಯಂತೂ ಇದ್ದೇ ಇದೆ.


ನವದೆಹಲಿ: ಟ್ಯುನೀಷಿಯಾದ ಟೆನಿಸ್ ತಾರೆ, ಮೂರು ಬಾರಿ ಗ್ರ್ಯಾಂಡ್ ಸ್ಲಾಮ್ ಫೈನಲಿಸ್ಟ್ ಆಗಿರುವ ಒನ್ಸ್ ಜಬೇರ್(Ons Jabeur) ಅವರು ತಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸಲುವಾಗಿ ವೃತ್ತಿಪರ ಟೆನಿಸ್‌ನಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ಅವರು ಈ ನಿರ್ಧಾರ ಪ್ರಕಟಿಸಿದರು. "ಕಳೆದ ಎರಡು ವರ್ಷಗಳಿಂದ, ನಾನು ತುಂಬಾ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ಗಾಯಗಳ ವಿರುದ್ಧ ಹೋರಾಡುತ್ತಿದ್ದೇನೆ ಮತ್ತು ಇತರ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇನೆ" ಎಂದು ಜಬೀರ್ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ಬರೆದಿದ್ದಾರೆ.
"ಸ್ವಲ್ಪ ಸಮಯದಿಂದ ಟೆನಿಸ್ ಅಂಗಣದಲ್ಲಿ ನಿಜವಾಗಿಯೂ ಸಂತೋಷವಾಗಿರಲಿಲ್ಲ. ಟೆನಿಸ್ ತುಂಬಾ ಸುಂದರವಾದ ಕ್ರೀಡೆಯಾಗಿದೆ. ಆದರೆ ಇದೀಗ, ಒಂದು ಹೆಜ್ಜೆ ಹಿಂದಕ್ಕೆ ಇಡಲು ಮತ್ತು ಅಂತಿಮವಾಗಿ ನಾನು ಮೊದಲಿನಂತಾಗಲು ಮತ್ತು ಸರಳವಾಗಿ ಬದುಕುವ ಸಂತೋಷವನ್ನು ಮರುಶೋಧಿಸಲು ಬಯಸುತ್ತೇನೆ" ಎಂದು 30 ವರ್ಷದ ಒನ್ಸ್ ಜಬೇರ್ ಬರೆದುಕೊಂಡಿದ್ದಾರೆ.
"ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಬೆಂಬಲ ಮತ್ತು ಪ್ರೀತಿ ನನಗೆ ಸ್ಫೂರ್ತಿ. ನಾನು ಅದನ್ನು ಯಾವಾಗಲೂ ನನ್ನೊಂದಿಗೆ ಕೊಂಡೊಯ್ಯುತ್ತೇನೆ. ಟೆನಿಸ್‌ನಿಂದ ದೂರವಿದ್ದರೂ ಸಹ, ನಾನು ವಿಭಿನ್ನ ರೀತಿಯಲ್ಲಿ ನಿಕಟವಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತೇನೆ ಮತ್ತು ಈ ಪ್ರಯಾಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
ಒಂದು ಬಾರಿ ವಿಶ್ವ ಮಟ್ಟದ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದ ಅವರು ಈಗ WTA ಶ್ರೇಯಾಂಕದಲ್ಲಿ 71 ನೇ ಸ್ಥಾನಕ್ಕೆ ಕುಸಿದಿದ್ದಾರೆ. 2024 ರ ಟೆನಿಸ್ ಋತುವು ಭುಜದ ಗಾಯದಿಂದ ಅಡ್ಡಿಪಡಿಸಲ್ಪಟ್ಟಿತು. ಮತ್ತು ವಿಂಬಲ್ಡನ್ ನಂತರ ಅವರು ಒಮ್ಮೆ ಮಾತ್ರ ಆಡಿದರು. ಇತ್ತೀಚೆಗೆ, ಅವರು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಈ ವರ್ಷದ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿಯೇ ಗಾಯಕ್ಕೀಡಾಗಿ ಟೂರ್ನಿಯಿಂದ ಹೊರಬಿದ್ದಿದ್ದರು.
ಇದನ್ನೂ ಓದಿ Genie Bouchard: ಟೆನಿಸ್‌ಗೆ ನಿವೃತ್ತಿ ಪ್ರಕಟಿಸಿದ ಮಾಜಿ ವಿಂಬಲ್ಡನ್ ರನ್ನರ್-ಅಪ್ ಬೌಚರ್ಡ್
ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ಅರಬ್ ರಾಷ್ಟ್ರದ ಮೊದಲ ಆಟಗಾರ್ತಿ ಎನ್ನುವ ಗರಿಮೆಗೆ ಅವರದ್ದಾಗಿದೆ. ಜಬೇರ್ ತಮ್ಮ 14ನೇ ವಯಸ್ಸಿನಲ್ಲಿ ಐಟಿಎಫ್ ಮಹಿಳಾ ಸರ್ಕಿಟ್ ಟೂರ್ನಿಯಲ್ಲಿ ಆಡಿದರು. 16ನೇ ವಯಸ್ಸಿನಲ್ಲಿ ಫ್ರೆಂಚ್ ಓಪನ್‌ನ ಎರಡು ಜೂನಿಯರ್ ಟೂರ್ನಿಗಳ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿ ಒಂದು ಬಾರಿ ಚಾಂಪಿಯನ್ ಆದರು. ಈ ಮೂಲಕ ಅವರು 1964ರ ಬಳಿಕ ಜೂನಿಯರ್ ವಿಭಾಗದ ಪ್ರಮುಖ ಟೂರ್ನಿಯಲ್ಲಿ ಗೆದ್ದ ಟ್ಯುನೀಷಿಯಾದ ಮೊದಲ ಆಟಗಾರ್ತಿ ಎನಿಸಿದರು. ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.
ಅರೇಬಿಕ್, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಜಬೇರ್ ಸದ್ಯ ಟೆನಿಸ್‌ನಿಂದ ವಿರಾಮ ಪಡೆದಿದ್ದರೂ ಕೂಡ ಟ್ಯುನೀಷಿಯಾದ ಹಲವು ಮೊದಲುಗಳ ಒಡತಿಯಾದ ಜಬೇರ್‌ಗೆ ಆ ದೇಶದ ‘ಟೆನಿಸ್ ರಾಣಿ’ ಎನ್ನುವ ಗರಿಮೆಯಂತೂ ಇದ್ದೇ ಇದೆ.