‘ರಾಮಾಯಣ’ ಸಿನಿಮಾದ ತಾರಾಗಣದ ಬಗ್ಗೆ ನಟ ಅನ್ನು ಕಪೂರ್ ಅಸಮಾಧಾನ: ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಪ್ರಶ್ನೆ ಮಾಡಿದ್ದೇಕೆ?
ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಬಜೆಟ್‌ನ ‘ರಾಮಾಯಣ’ ಸಿನಿಮಾದ ತಾರಾಗಣದ ಆಯ್ಕೆ ಕುರಿತು ಹಿರಿಯ ನಟ ಅನ್ನು ಕಪೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೀತಾ ದೇವಿಯ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿರುವ ಅವರು, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಚಿತ್ರತಂಡ ಮರೆತಿದೆ ಎಂದಿದ್ದಾರೆ.
-
ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಸದ್ಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರ ನಡುವೆಯೇ, ಚಿತ್ರದ ತಾರಾಗಣದ ಬಗ್ಗೆ ಹಿರಿಯ ನಟ ಅನ್ನು ಕಪೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಸೀತಾ ದೇವಿಯ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದನ್ನು ಅವರು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ಕಾಸ್ಟಿಂಗ್ ಬಗ್ಗೆ ಅನ್ನು ಕಪೂರ್ ತೀವ್ರ ಆಕ್ಷೇಪ
ಸಿನಿಮಾದ ಒಟ್ಟಾರೆ ಧೋರಣೆಯ ಬಗ್ಗೆ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿರುವ ಅನ್ನು ಕಪೂರ್, ಐತಿಹಾಸಿಕ ಮತ್ತು ಪೂಜನೀಯ ಪಾತ್ರಗಳನ್ನು ಆಯ್ಕೆ ಮಾಡುವಾಗ ಚಿತ್ರತಂಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
"ಸೀತಾ ಪಾತ್ರಕ್ಕೆ ನೀವು ಯಾರನ್ನು ಆಯ್ಕೆ ಮಾಡಿದ್ದೀರಿ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ ಸೀತಾ ದೇವಿಯನ್ನು ತಾಯಿಯ ರೂಪದಲ್ಲಿ ಪೂಜಿಸಲಾಗುತ್ತದೆ ಮತ್ತು ಶ್ರೀರಾಮನನ್ನು ನಾರಾಯಣನ ಅವತಾರವೆಂದು ಆರಾಧಿಸಲಾಗುತ್ತದೆ. ಹೀಗಿರುವಾಗ ಈ ಕಾಸ್ಟಿಂಗ್ ಸಾಕಷ್ಟು ಪ್ರಶ್ನಾರ್ಹವಾಗಿದೆ. ಸಿನಿಮಾ ರಿಲೀಸ್ ಆಗಲಿ, ಜನರು ಈ ಪಾತ್ರವನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ನೋಡೋಣ" ಎನ್ನುವ ಮೂಲಕ ನಟಿ ಸಾಯಿ ಪಲ್ಲವಿ ಆಯ್ಕೆಗೆ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ.
ರಾಮಾನಂದ್ ಸಾಗರ್ ರಾಮಾಯಣದ ಅಪ್‌ಗ್ರೇಡ್ ಆವೃತ್ತಿಯಷ್ಟೇ
ಈ ರಾಮಾಯಣ ಸಿನಿಮಾ ಕಥೆಯ ದೃಷ್ಟಿಯಿಂದ ಹೊಸದೇನನ್ನೂ ನೀಡುವುದಿಲ್ಲ ಎಂದು ವಾದಿಸಿರುವ ಅನ್ನು ಕಪೂರ್, "ಅವರು ಏನೇ ಮಾಡಿದರೂ, ರಾಮಾನಂದ್ ಸಾಗರ್ ಅವರ ಪ್ರೀತಿಯ ಟೆಲಿವಿಷನ್ ಧಾರಾವಾಹಿಯನ್ನು ತಾಂತ್ರಿಕವಾಗಿ ಅಪ್‌ಗ್ರೇಡ್ ಮಾಡಬಹುದು ಮತ್ತು ಅದರ ಬಜೆಟ್ ಅಥವಾ ವ್ಯಾಪ್ತಿಯನ್ನು ಹೆಚ್ಚಿಸಬಹುದಷ್ಟೇ. ಅದನ್ನು ಬಿಟ್ಟು ಹೊಸದಾಗಿ ಇನ್ನೇನು ಮಾಡಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
Ramayana Movie: 15 ವರ್ಷದ ಒಳಗಿನ ಮಕ್ಕಳು ‘ರಾಮಾಯಣ’ ಸಿನಿಮಾ ನೋಡದಂತೆ ಶಿಫಾರಸ್ಸು! ಕಾರಣ ಇದು
ದೊಡ್ಡ ತಾರಾಗಣದ ಸಿನಿಮಾ
ನಿತೇಶ್ ತಿವಾರಿ ಅವರ 'ರಾಮಾಯಣ' ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ತಾರಾಗಣವನ್ನು ಹೊಂದಿರುವ ಸಿನಿಮಾಗಳಲ್ಲೊಂದಾಗಿದೆ. ರಣಬೀರ್ ಕಪೂರ್ ಶ್ರೀರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತಾ ದೇವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಹಾಗೂ ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಉಳಿದಂತೆ ಲಕ್ಷ್ಮಣನಾಗಿ ರವಿ ದುಬೆ, ಕೈಕೇಯಿಯಾಗಿ ಲಾರಾ ದತ್ತಾ, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್, ಮಂದೋದರಿಯಾಗಿ ಕಾಜಲ್ ಅಗರ್ವಾಲ್ ಮತ್ತು ದಶರಥ ಮಹಾರಾಜನಾಗಿ ಅರುಣ್ ಗೋವಿಲ್ ನಟಿಸುತ್ತಿದ್ದಾರೆ. ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ ಮತ್ತು ಮೋಹಿತ್ ರೈನಾ ಕೂಡ ಚಿತ್ರದ ಭಾಗವಾಗಿದ್ದಾರೆ.
Ramayana Movie: 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಚಿತ್ರದ ಪ್ರಚಾರ; ಏನಿದರ ವಿಶೇಷತೆ?
ಜಾಗತಿಕ ವೇದಿಕೆಯಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜು
'ಕಲ್ಕಿ 2898 ಎಡಿ' ನಂತರ ಪ್ರತಿಷ್ಠಿತ 'ಸ್ಯಾನ್ ಡಿಯಾಗೋ ಕಾಮಿಕ್-ಕಾನ್' (San Diego Comic-Con) ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಗೊಳ್ಳುತ್ತಿರುವ ಎರಡನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ‘ರಾಮಾಯಣ’ ಪಾತ್ರವಾಗಿದೆ. ಜುಲೈ 23 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಟರಾದ ರಣಬೀರ್ ಕಪೂರ್, ಯಶ್ ಮತ್ತು ನಿರ್ಮಾಪಕ ನಮಿತ್ ಭಾಗವಹಿಸುವ ನಿರೀಕ್ಷೆಯಿದೆ.
ಬರೋಬ್ಬರಿ 4,000 ಕೋಟಿ ಬಜೆಟ್!
ಮೂಲಗಳ ಪ್ರಕಾರ, ಈ ಸಿನಿಮಾ ಭಾರತದಲ್ಲೇ ಇದುವರೆಗೆ ತಯಾರಾದ ಅತ್ಯಂತ ದುಬಾರಿ ಸಿನಿಮಾಗಳಲ್ಲೊಂದಾಗಿದ್ದು, ಸುಮಾರು ₹4,000 ಕೋಟಿ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ವಿಶೇಷವೆಂದರೆ, ಆಸ್ಕರ್ ವಿಜೇತ ಜಾಗತಿಕ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಹಾಗೂ ಭಾರತದ ಹೆಮ್ಮೆ ಎ.ಆರ್. ರೆಹಮಾನ್ ಮೊದಲ ಬಾರಿಗೆ ಜೊತೆಯಾಗಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ವೇಳೆಗೆ ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗುತ್ತಿದ್ದು, ಎರಡನೇ ಭಾಗವು 2027ರಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.