ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

35 ಸಾವಿರ ಅಡಿ ಎತ್ತರದಲ್ಲಿ ಕರ್ವಾ ಚೌತ್ ಆಚರಿಸಿದ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ದಂಪತಿ; ಎಲ್ಲರಿಗೂ ನೆನಪಾದ ಪ್ರಿಯಾಂಕಾ ಚೋಪ್ರಾ!

ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ದಂಪತಿ ಬರೋಬ್ಬರಿ 35 ಸಾವಿರ ಅಡಿ ಎತ್ತರದ ವಿಮಾನದಲ್ಲೇ ಕರ್ವಾ ಚೌತ್ ವ್ರತವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ವಿಮಾನದ ಕಿಟಕಿಯ ಮೂಲಕ ಚಂದ್ರದರ್ಶನ ಪಡೆದ ಬಳಿಕ ನೀರು ಮತ್ತು ಆಹಾರ ಸೇವಿಸುವ ಮೂಲಕ ಉಪವಾಸ ಮುಗಿಸಿದ್ದಾರೆ ಪರಿಣಿತಿ ಚೋಪ್ರಾ.

35 ಸಾವಿರ ಅಡಿ ಎತ್ತರದಲ್ಲಿ ಕರ್ವಾ ಚೌತ್ ಆಚರಿಸಿದ ರಾಘವ್ - ಪರಿಣಿತಿ ದಂಪತಿ

-

Avinash GR
Avinash GR Oct 30, 2026 3:52 PM

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ದಂಪತಿ ಈ ಬಾರಿಯ ಕರ್ವಾ ಚೌತ್ ಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ, ರೋಮ್ಯಾಂಟಿಕ್ ಆಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮನೆಯಿಂದ ದೂರವಿದ್ದರೂ ಹಬ್ಬದ ಸಂಪ್ರದಾಯವನ್ನು ಮರೆಯದ ಈ ಜೋಡಿ, ಬರೋಬ್ಬರಿ 35 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದಲ್ಲೇ ವ್ರತವನ್ನು ಪೂರ್ಣಗೊಳಿಸಿದ್ದು, ಈ ಸುಂದರ ಕ್ಷಣಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗಿದೆ.

ವಿಮಾನದಲ್ಲೇ ವ್ರತ ಆಚರಣೆ

ಗುರುವಾರ (ಅಕ್ಟೋಬರ್ 30) ಪರಿಣಿತಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಶೇಷ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಮಾನದ ಕಿಟಕಿಯಿಂದ ಚಂದ್ರನನ್ನು ವೀಕ್ಷಿಸಿದ ಬಳಿಕ, ರಾಘವ್ ಚಡ್ಡಾ ಅವರು ಪತ್ನಿಗೆ ನೀರು ಮತ್ತು ಆಹಾರವನ್ನು ತಿನ್ನಿಸುವ ಮೂಲಕ ಉಪವಾಸ ಮುಗಿಸಲು ಸಾಥ್ ನೀಡಿದರು. ಈ ಆಚರಣೆಗಾಗಿ ಪರಿಣಿತಿ ಸುಂದರ ಸಾಂಪ್ರದಾಯಿಕ ಸೂಟ್ ಧರಿಸಿ, ಸಿಂಧೂರವಿಟ್ಟು ಕಂಗೊಳಿಸುತ್ತಿದ್ದರು.

ಪರಿಣೀತಿ ಚೋಪ್ರಾ ಹಂಚಿಕೊಂಡ ವಿಡಿಯೋ

"ನಾವು ಎಲ್ಲಿದ್ದರೂ ಕರ್ವಾ ಚೌತ್ ಆಚರಿಸಬಹುದು, ಅದು 35,000 ಅಡಿ ಎತ್ತರದಲ್ಲಿದ್ದರೂ ಸರಿ! ನೀವು ನನ್ನೆಲ್ಲಾ ಕನಸುಗಳನ್ನು ನನಸು ಮಾಡುತ್ತೀರಿ ರಾಘವ್‌ಜೀ. ನೀವೇ ಬೆಸ್ಟ್ ವ್ಯಕ್ತಿ, ಬೆಸ್ಟ್ ಹುಡುಗ..." ಎಂದು ಪತಿ ಮೇಲಿನ ಅಪಾರ ಪ್ರೀತಿಯನ್ನು ಪರಿಣಿತಿ ಅವರು ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ನೆನಪಿಸಿದ ಪರಿಣಿತಿ ನಡೆ

ವಿಮಾನದಲ್ಲಿ ಪರಿಣಿತಿ ಆಚರಿಸಿದ ಈ ವಿಶಿಷ್ಟ ಹಬ್ಬವು ಅವರ ಸಹೋದರಿ, ನಟಿ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿದ್ದ ಹಳೆಯ ನೆನಪೊಂದನ್ನು ಅಭಿಮಾನಿಗಳಿಗೆ ನೆನಪಿಸಿದೆ. 2025ರಲ್ಲಿ 'ದಿ ಕಪಿಲ್ ಶರ್ಮಾ ಶೋ'ದಲ್ಲಿ ಮಾತನಾಡಿದ್ದ ಪ್ರಿಯಾಂಕಾ, ಒಮ್ಮೆ ಮೋಡ ಕವಿದ ವಾತಾವರಣ ಮತ್ತು ಮಳೆಯ ಆತಂಕದಿಂದಾಗಿ ತಡರಾತ್ರಿಯಾದರೂ ಚಂದ್ರ ಕಾಣಿಸದಿದ್ದಾಗ, ಪತಿ ನಿಕ್ ಜೋನಾಸ್ ತಮ್ಮನ್ನು ಮೋಡಗಳ ಮೇಲಕ್ಕೆ ವಿಮಾನದಲ್ಲಿ ಕರೆದೊಯ್ದು ಚಂದ್ರನನ್ನು ತೋರಿಸಿ ಉಪವಾಸ ಮುರಿಯಲು ನೆರವಾಗಿದ್ದನ್ನು ನೆನಪಿಸಿಕೊಂಡಿದ್ದರು. ಇದೀಗ ಪರಿಣಿತಿ-ರಾಘವ್ ಜೋಡಿಯೂ ಅದೇ ಮಾದರಿಯಲ್ಲಿ ಆಗಸದಲ್ಲೇ ಹಬ್ಬ ಆಚರಿಸಿರುವುದು ವಿಶೇಷ.

2023ರ ಮೇ 13ರಂದು ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪರಿಣಿತಿ ಮತ್ತು ರಾಘವ್, ಅದೇ ವರ್ಷದ ಸೆಪ್ಟೆಂಬರ್ 24ರಂದು ಉದಯಪುರದ 'ದಿ ಲೀಲಾ ಪ್ಯಾಲೇಸ್'ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2025ರ ಅಕ್ಟೋಬರ್ 19ರಂದು ಈ ದಂಪತಿಗೆ 'ನೀರ್' ಎಂಬ ಗಂಡು ಮಗು ಜನಿಸಿದ್ದಾನೆ. ಇದೀಗ ವಿಮಾನದಲ್ಲೇ ಹಬ್ಬ ಆಚರಿಸುವ ಮೂಲಕ ತಮ್ಮ ಸುಖೀ ದಾಂಪತ್ಯದ ಮತ್ತೊಂದು ಅಪರೂಪದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.