ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

20 ವರ್ಷಗಳ ನಂತರ ರಂಗಭೂಮಿಗೆ ಮರಳಿದ ʻಅಮೃತಧಾರೆʼ ಖ್ಯಾತಿಯ ರಾಜೇಶ್ ನಟರಂಗ; ಯಾವುದು ಆ ನಾಟಕ?

ನಟ ರಾಜೇಶ್‌ ನಟರಂಗ ಭರ್ತಿ ಎರಡು ದಶಕಗಳ ಬಳಿಕ ರಂಗಭೂಮಿಗೆ ಮರಳಿದ್ದು, ಕಲಾದ್ಯುತಿ ಪ್ರೊಡಕ್ಷನ್ಸ್ ಅರ್ಪಿಸುವ ‘ಮಳೆ ನಿಲ್ಲುವವರೆಗೆ’ ನಾಟಕದಲ್ಲಿ ನಟಿಸುತ್ತಿದ್ದಾರೆ. ದಿವಂಗತ ಕೆಎಎಸ್ ಅಧಿಕಾರಿ ಎಲ್.ಎಸ್. ಸುಧೀಂದ್ರ ರೂಪಾಂತರಿಸಿದ ಈ ಜರ್ಮನ್ ಥ್ರಿಲ್ಲರ್ ಕಥೆಯನ್ನು ಶರತ್ ಪರ್ವತವಾಣಿ ನಿರ್ದೇಶಿಸಿದ್ದಾರೆ.

20 ವರ್ಷಗಳ ನಂತರ ರಂಗಭೂಮಿಗೆ ಮರಳಿದ ರಾಜೇಶ್ ನಟರಂಗ; ಯಾವುದು ಆ ನಾಟಕ?

-

Avinash GR
Avinash GR Aug 20, 2026 3:35 PM

ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳ ಅನ್ವೇಷಣೆಯ ತುಡಿತದೊಂದಿಗೆ ಜೀವ ಪಡೆದಿರುವ ತಂಡ 'ಕಲಾದ್ಯುತಿ ಪ್ರೊಡಕ್ಷನ್ಸ್'. ಒಂದು ಕಾಲದಲ್ಲಿ ಪ್ರೇಕ್ಷಕರು ನೋಡಿ ರೋಮಾಂಚಿತರಾಗಿದ್ದ ನಾಟಕಗಳನ್ನು ಮತ್ತೆ ಪ್ರಸ್ತುತಪಡಿಸುತ್ತಲೇ, ಒಂದಷ್ಟು ಪ್ರಯೋಗಾತ್ಮಕ ಪ್ರಯತ್ನಗಳನ್ನು ಮಾಡುವ ಉದ್ದೇಶ ಹೊಂದಿರುವ ಕಲಾದ್ಯುತಿ ಪ್ರೊಡಕ್ಷನ್ಸ್ ವತಿಯಿಂದ ಪ್ರದರ್ಶನಗೊಂಡಿದ್ದ 'ಉಂಡಾಡಿ ಗುಂಡ' ನಾಟಕ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಎರಡನೇ ಹೆಜ್ಜೆಯಾಗಿ 'ಮಳೆ ನಿಲ್ಲುವವರೆಗೆ' ಎಂಬ ನಾಟಕವು ಇದೇ ಸೆಪ್ಟೆಂಬರ್ 17ರಂದು ಸಂಜೆ 7.30ಕ್ಕೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

20 ವರ್ಷಗಳ ನಂತರ ರಂಗಕ್ಕೆ ಮರಳಿದ ರಾಜೇಶ್

ವಿಶೇಷವೆಂದರೆ, ಜನಪ್ರಿಯ ನಟ ಹಾಗೂ ಲೇಖಕ ಎಲ್.ಎಸ್. ಸುಧೀಂದ್ರ ಅವರು ಜರ್ಮನ್ ಕಥೆಯೊಂದನ್ನು ಆಧರಿಸಿ ಕನ್ನಡಕ್ಕೆ ರೂಪಾಂತರಿಸಿರುವ 'ಮಳೆ ನಿಲ್ಲುವವರೆಗೆ' ನಾಟಕದ ಮೂಲಕ ನಟ ರಾಜೇಶ್ ನಟರಂಗ ರಂಗಭೂಮಿಗೆ ಮರಳಿದ್ದಾರೆ. ನಟನಾಗಿ ತಮ್ಮದೇ ಛಾಪು ಮೂಡಿಸಿರುವ ರಾಜೇಶ್ ನಟರಂಗ, ರಂಗಭೂಮಿಯೊಂದಿಗೆ ಆಪ್ತವಾದ ನಂಟು ಹೊಂದಿರುವವರು.

ʻಲವ್‌ ಸೀಸನ್ಸ್‌ʼ ಸಿನಿಮಾದ ಹೀರೋ ಆದ ರಂಗಭೂಮಿ ನಟ ಮುಕುಂದ ರಾಮಸ್ವಾಮಿ; ಜೂನ್‌ನಲ್ಲಿ ತೆರೆಗೆ ಬರುವುದು ಫಿಕ್ಸ್

ಭರ್ತಿ ಇಪ್ಪತ್ತು ವರ್ಷಗಳ ನಂತರ ಈ ನಾಟಕದ ಮೂಲಕ ರಾಜೇಶ್ ಅವರು ರಂಗಭೂಮಿಯಲ್ಲಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅಭಿಮಾನಿಗಳಿಗೆಲ್ಲ ತಮ್ಮಿಷ್ಟದ ಕಲಾವಿದನ ನಟನಾ ಕೌಶಲವನ್ನು ನೇರವಾಗಿ ಕಣ್ತುಂಬಿಕೊಳ್ಳುವ ಸುಸಂದರ್ಭ ಈ ಮೂಲಕ ಒದಗಿ ಬಂದಿದೆ. ಈಚೆಗೆ ʻಅಮೃತಧಾರೆʼ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿರುವ ರಾಜೇಶ್‌, ಸ್ಯಾಂಡಲ್‌ವುಡ್‌ನಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ.

ಥ್ರಿಲ್ಲರ್ ಶೈಲಿಯ 'ಮಳೆ ನಿಲ್ಲುವವರೆಗೆ' ನಾಟಕ

ಈ ನಾಟಕವನ್ನು ಶರತ್ ಪರ್ವತವಾಣಿ ನಿರ್ದೇಶಿಸುತ್ತಿದ್ದಾರೆ. ರೋಚಕ ಥ್ರಿಲ್ಲರ್ ಶೈಲಿಯ 'ಮಳೆ ನಿಲ್ಲುವವರೆಗೆ' ನಾಟಕವು ಒಂದು ಆಟದಂತೆ ಪ್ರಾರಂಭವಾಗಿ, ಬೆರಗು ಮೂಡಿಸುವ ತಿರುವುಗಳನ್ನು ಪಡೆಯುತ್ತಾ ವಿಶಿಷ್ಟ ಪಾತ್ರಗಳ ನಡುವೆ ಸಾಗುವ ಸಸ್ಪೆನ್ಸ್ ಕಥಾಹಂದರವನ್ನು ಒಳಗೊಂಡಿದೆ. ಪ್ರತಿ ಕ್ಷಣವೂ ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವಂತೆ ಮಾಡುವ ಗುಣ ಹೊಂದಿರುವ ಈ ನಾಟಕ, ಹೊಸ ತಲೆಮಾರಿಗೂ ಅದ್ಭುತ ಅನುಭವವನ್ನು ನೀಡಲಿದೆ. ಹೊಸ ತಲೆಮಾರಿನ ಯುವ ಸಮುದಾಯ ಇದನ್ನು ನೋಡಿ ಆನಂದಿಸಿದರೆ ಕಲಾದ್ಯುತಿ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲ ಆಶಯ ಈಡೇರಿದಂತಾಗುತ್ತದೆ.

ಕೆಎಎಸ್ ಅಧಿಕಾರಿಯಾಗಿದ್ದ ಎಲ್.ಎಸ್. ಸುಧೀಂದ್ರ

ಈ ನಾಟಕವನ್ನು ರಚಿಸಿರುವ ಎಲ್.ಎಸ್. ಸುಧೀಂದ್ರ ಅವರು ಗ್ರೂಪ್-1 (ಕ್ಲಾಸ್ 1) ಕೆಎಎಸ್ ಅಧಿಕಾರಿಯಾಗಿದ್ದವರು. ಸರ್ಕಾರಿ ಅಧಿಕಾರಿಯಾಗಿದ್ದರೂ ಅತೀವ ಕಲಾಪ್ರೇಮ ಹೊಂದಿದ್ದ ಸುಧೀಂದ್ರ ಅವರು ರಂಗಭೂಮಿಗೆ ಪೂರಕವಾಗುವಂತಹ ಅನೇಕ ಮಹತ್ವದ ಕಾರ್ಯಗಳನ್ನು ತಮ್ಮ ಸೇವಾವಧಿಯಲ್ಲಿ ಮಾಡಿದ್ದರು.

ಇಂದು ನಮ್ಮೊಂದಿಗಿರದ ಸುಧೀಂದ್ರ ಅವರ ಕುಟುಂಬವನ್ನು ಕಲಾದ್ಯುತಿ ತಂಡವು ರಿಚರ್ಡ್ ಲೂಯಿಸ್ ಅವರ ಸಹಕಾರದಿಂದ ಸಂಪರ್ಕಿಸಿದೆ. ಸಾಕಷ್ಟು ಪರಿಶ್ರಮವಹಿಸಿ ಈ ನಾಟಕದ ಹಸ್ತಪ್ರತಿಯನ್ನು ಕಲೆಹಾಕಿ, ಅದಕ್ಕೊಂದು ಹೊಸ ಸ್ಪರ್ಶ ನೀಡಿ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಜಾಹೀರಾತು ನಿರ್ಮಾಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರದೀಪ್ ಬೆಳವಾಡಿ ಅವರು ಈ ನಾಟಕದ ರಂಗವಿನ್ಯಾಸ ಮಾಡುತ್ತಿದ್ದಾರೆ.