ನಟ ಪವನ್ ಕಲ್ಯಾಣ್ ನಿಜವಾದ ಹೆಸರು ಏನ್ ಗೊತ್ತಾ? ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ಆಂಧ್ರ ಪ್ರದೇಶ ಡಿಸಿಎಂ
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ತಮ್ಮ ಅಸಲಿ ಹೆಸರು 'ಪವನ್ ಕಲ್ಯಾಣ್' ಅಲ್ಲ, ಪೋಷಕರು ತಮಗೆ 'ಶ್ರೀ ಕಲ್ಯಾಣ್ ಕುಮಾರ್' ಎಂದು ನಾಮಕರಣ ಮಾಡಿದ್ದರು ಎಂಬ ರೋಚಕ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.
-
ತೆಲುಗು ಚಿತ್ರರಂಗದ ಜನಪ್ರಿಯ ನಟ ಪವನ್ ಕಲ್ಯಾಣ್ ಅವರು ಸದ್ಯ ಆಂಧ್ರಪ್ರದೇಶ ಡಿಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ʻಮೆಗಾಸ್ಟಾರ್ʼ ಚಿರಂಜೀವಿ ಅವರ ಸಹೋದರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ಮ್ಯಾನರಿಸಂ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಟಾಲಿವುಡ್‌ನ 'ಪವರ್ ಸ್ಟಾರ್' ಆಗಿ ಮಿಂಚುತ್ತಿರುವ ಪವನ್ ಕಲ್ಯಾಣ್, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಹೆಸರಿನ ಹಿಂದಿನ ಅಸಲಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಹೌದು, ಎಲ್ಲರಿಗೂ ಗೊತ್ತಿರುವಂತೆ ಪವನ್ ಕಲ್ಯಾಣ್ ಅವರ ಪೂರ್ಣ ಹೆಸರು 'ಕೊನಿಡೇಲಾ ಪವನ್ ಕಲ್ಯಾಣ್'. ಸಿನಿಮಾಗಳಿಗೆ ಬಂದ ನಂತರ ಅಭಿಮಾನಿಗಳು ಅವರಿಗೆ ಪ್ರೀತಿಯಿಂದ 'ಪವರ್ ಸ್ಟಾರ್' ಎಂಬ ಬಿರುದು ನೀಡಿದರು. ಆದರೆ 'ಪವನ್ ಕಲ್ಯಾಣ್' ಎಂಬುದು ತಮ್ಮ ಅಸಲಿ ಹೆಸರೇ ಅಲ್ಲ ಎಂದು ಇತ್ತೀಚಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಹಾಗಾದರೆ, ಅವರ ನಿಜವಾದ ಹೆಸರು ಏನು?
ಶ್ರೀ ಕಲ್ಯಾಣ್ ಕುಮಾರ್ ಅಂತ ಹೆಸರಿಟ್ಟಿದ್ದ ಪೋಷಕರು
"ನನ್ನ ನಿಜವಾದ ಹೆಸರು ಪವನ್ ಕಲ್ಯಾಣ್ ಅಲ್ಲ. ನನಗೆ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನಾಮಕರಣ ಮಾಡಲಾಗಿತ್ತು. ಆಗ ನನಗೆ ಇಟ್ಟಿದ್ದ ಹೆಸರು 'ಶ್ರೀ ಕಲ್ಯಾಣ್ ಕುಮಾರ್'. ಆದರೆ ಶಾಲೆಯ ದಾಖಲಾತಿಗಳಲ್ಲಿ 'ಶ್ರೀ' ಎಂಬ ಪದ ಮಿಸ್ ಆಗಿ, 'ಕೆ. ಕಲ್ಯಾಣ್ ಕುಮಾರ್' ಎಂದು ನೋಂದಾಯಿಸಲಾಯಿತು" ಎಂದು ಪವನ್ ಹೇಳಿದ್ದಾರೆ.
ಶಿಕ್ಷಕರು ಇಟ್ಟ ಹೆಸರು ಪವನ್
"ನಾನು ನಟನಾಗಿ ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ನಮ್ಮ ಮಾರ್ಷಲ್ ಆರ್ಟ್ಸ್ ಶಿಕ್ಷಕರು ನನ್ನ ಹೆಸರಿನ ಮುಂದೆ 'ಪವನ್' ಎಂಬ ಪದವನ್ನು ಸೇರಿಸಿದರು. ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾಗ ನಾನು ಪವರ್ ಡೆಮಾನ್‌ಸ್ಟ್ರೇಷನ್ ಸಾಧನೆಗಳನ್ನು ಹೆಚ್ಚಾಗಿ ಮಾಡುತ್ತಿದ್ದೆ. ಎದೆಯ ಮೇಲೆ ಸುಮಾರು ಭಾರಿ ತೂಕದ ಕಲ್ಲುಗಳನ್ನು ಇಟ್ಟುಕೊಂಡು ಒಡೆಸಿಕೊಳ್ಳುತ್ತಿದ್ದೆ. ಹಾಗಾಗಿ ಪವನಪುತ್ರ ಹನುಮಂತ ಎಂಬ ಅರ್ಥ ಬರುವಂತೆ ನಮ್ಮ ಮಾರ್ಷಲ್ ಆರ್ಟ್ಸ್ ಗುರುಗಳು 'ಪವನ್' ಎಂಬ ಪದವನ್ನು ನನ್ನ ಹೆಸರಿಗೆ ಜೋಡಿಸಿದರು" ಎಂದು ಪವನ್ ಕಲ್ಯಾಣ್ ವಿವರಿಸಿದ್ದಾರೆ.
Pawan Kalyan : ಶಸ್ತ್ರಚಿಕಿತ್ಸೆ ಬಳಿಕ ಪವನ್ ಕಲ್ಯಾಣ್ ಆರೋಗ್ಯದ ಬಗ್ಗೆ ಪತ್ನಿ ಹೇಳಿದ್ದೇನು?
ಈ ಹಿಂದೆ ಪವನ್ ಕಲ್ಯಾಣ್ ಅವರ ತಾಯಿ ಅಂಜನಾದೇವಿ ಅವರು ಕೂಡ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಪವನ್ ಕಲ್ಯಾಣ್ ಎಂಬುದು ಮಗನ ಅಸಲಿ ಹೆಸರಲ್ಲ ಎಂದು ಹೇಳಿದ್ದರು. "ನಾವು ಅವನಿಗೆ 'ಕಲ್ಯಾಣ್ ಕುಮಾರ್' ಎಂದು ಹೆಸರಿಟ್ಟಿದ್ದೆವು, ಆದರೆ ಅವನೇ ಅದನ್ನು 'ಪವನ್ ಕಲ್ಯಾಣ್' ಎಂದು ಬದಲಾಯಿಸಿಕೊಂಡ" ಎಂದು ಅಂಜನಾದೇವಿ ಹೇಳಿದ್ದರು. ಇದೀಗ ಪವನ್ ಕಲ್ಯಾಣ್ ಅವರೇ ಆ ವಿಚಾರವನ್ನು ಹಂಚಿಕೊಂಡಿದ್ದಾರೆ.
ನಕ್ಸಲೈಟ್ ಆಗಬೇಕೆಂದಿದ್ದ ಪವನ್
ಇದೇ ಸಂದರ್ಶನದಲ್ಲಿ ಮತ್ತೊಂದು ಅಚ್ಚರಿಯ ವಿಚಾರವನ್ನು ಹಂಚಿಕೊಂಡಿರುವ ಪವನ್ ಕಲ್ಯಾಣ್, "ನನ್ನ ಹದಿಹರೆಯದ ದಿನಗಳಲ್ಲಿ ಸಮಾಜದಲ್ಲಿನ ಅಸಮಾನತೆಗಳನ್ನು ನೋಡಿ ನನಗೆ ತುಂಬಾ ಬೇಜಾರು ಆಗುತ್ತಿತ್ತು. ಒಂದು ಹಂತದಲ್ಲಂತೂ ಕೈಯಲ್ಲಿ ಗನ್ ಹಿಡಿದು ನಂಗೆ ನಕ್ಸಲೈಟ್ ಆಗಿಬಿಡಬೇಕು ಎಂದು ಬಲವಾಗಿ ಅನಿಸಿತ್ತು" ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.