ಸೋಶಿಯಲ್ ಮೀಡಿಯಾ ಸ್ಟಾರ್ ಕಾರ್ತಿಕ್ ರುವಾರಿ ಈಗ ಹೀರೋ; ಭರವಸೆ ಮೂಡಿಸಿದ 'ಗೋಲ್‌ಮಾಲ್ ಗ್ಯಾಂಗ್' ಟೀಸರ್!
ಸೋಶಿಯಲ್ ಮೀಡಿಯಾ ತಾರೆ ಕಾರ್ತಿಕ್ ರುವಾರಿ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ‘ಗೋಲ್‌ಮಾಲ್ ಗ್ಯಾಂಗ್’ ಚಿತ್ರದ ಕಾಮಿಡಿ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾಗೆ ಆರಾಧನಾ ಭಟ್ ನಾಯಕಿಯಾಗಿದ್ದು, ಈ ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲಿದೆ.
-
ಕಿರುಚಿತ್ರಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದ ನಟ ಕಾರ್ತಿಕ್ ರುವಾರಿ ಈಗ ನಾಯಕ ನಟನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಔಟ್ ಅಂಡ್ ಔಟ್ ಕಾಮಿಡಿ ಎಂಟರ್‌ಟೈನರ್ ‘ಗೋಲ್‌ಮಾಲ್ ಗ್ಯಾಂಗ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಭರವಸೆ ಮೂಡಿಸಿದೆ. ಶಾಂತ್ವು ಯೂನಿವರ್ಸಲ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕೆ. ಸತೀಶ್ ಚಂದ್ರ ಎಲೆಕೆರೆ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ನಿರ್ಮಾಪಕರ ಬೆಂಬಲಕ್ಕೆ ಭಾವುಕರಾದ ಕಾರ್ತಿಕ್
‘ಗೋಲ್‌ಮಾಲ್ ಗ್ಯಾಂಗ್’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ ಕಾರ್ತಿಕ್ ರುವಾರಿ, "ನಿರ್ದೇಶಕ ಶಿವು ಸರ್ ಮೂಲಕ ನನಗೆ ನಿರ್ಮಾಪಕರ ಪರಿಚಯವಾಯಿತು. ನಾನು ಶಾರ್ಟ್ ಫಿಲ್ಮ್ ಹಿನ್ನೆಲೆಯಿಂದ ಬಂದವನು ಎಂಬ ಕಾರಣಕ್ಕೆ ಮೊದಮೊದಲು ಕೆಲವು ನಾಯಕಿಯರು ನನ್ನ ಜೊತೆ ನಟಿಸಲು ಒಪ್ಪಲಿಲ್ಲ. ಆದರೆ, ನನ್ನ ನಿರ್ಮಾಪಕರು ಮಾತ್ರ ‘ನಾಯಕಿಯೇ ಇಲ್ಲದಿದ್ದರೂ ಪರವಾಗಿಲ್ಲ, ಕಾರ್ತಿಕ್ ಅವರನ್ನೇ ಹೀರೋ ಆಗಿ ಮುಂದುವರಿಸೋಣ’ ಎಂದು ಬೆಂಬಲವಾಗಿ ನಿಂತರು. ಅವರ ಆ ಮಾತು ನನ್ನನ್ನು ತುಂಬಾ ಭಾವುಕನನ್ನಾಗಿಸಿತು. ನಿರ್ದೇಶಕರು ನನ್ನ ಮೇಲೆ ಇಟ್ಟಿರುವ ನಂಬಿಕೆ ಪ್ರೇಕ್ಷಕರ ಮುಂದೆ ಬಂದಾಗ ಖಂಡಿತಾ ವರ್ಕ್ ಆಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
Short Movie: ಕುಣಿ ಕಿರುಚಿತ್ರದಲ್ಲೊಂದು ಕರುಳು ಹಿಂಡುವ ಕಥೆ; ಕಲಾವಿದರ ಹಾರೈಕೆ
ನಾಯಕಿಯಾಗಿ ಆರಾಧನಾ ಭಟ್ ನಟನೆ
ಚಿತ್ರದ ನಾಯಕಿ ಆರಾಧನಾ ಭಟ್ ಮಾತನಾಡಿ, "ಹೀರೋಯಿನ್ ಆಗಬೇಕು ಎಂಬ ನನ್ನ ಕನಸು ಈ ಚಿತ್ರದ ಮೂಲಕ ಈಡೇರಿದೆ. ಇದಕ್ಕೆ ನಿರ್ಮಾಪಕರು ಹಾಗೂ ನಿರ್ದೇಶಕ ಶಿವು ಸರ್ ಅವರೇ ಕಾರಣ. ಚಿತ್ರದಲ್ಲಿ ಹಲವು ಗ್ಯಾಂಗ್‌ಗಳಿದ್ದು, ನಾನು ಯಾವ ಗ್ಯಾಂಗ್‌ಗೆ ಸೇರುತ್ತೇನೆ ಎಂಬುದೇ ಕಥೆಯ ಮುಖ್ಯ ಟ್ವಿಸ್ಟ್. ಸಿನಿಮಾದಲ್ಲಿ ಹಿರಿಯ ನಟ ಮಂಡ್ಯ ರಮೇಶ್ ಅವರು ನನ್ನ ತಂದೆಯ ಪಾತ್ರ ಮಾಡಿದ್ದಾರೆ. ಆರಂಭದಲ್ಲಿ ಅವರ ಜೊತೆ ನಟಿಸಲು ಭಯವಿತ್ತಾದರೂ, ಅವರು ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ಹೇಳಿಕೊಟ್ಟು ಧೈರ್ಯ ತುಂಬಿದರು" ಎಂದರು.
16 ಪ್ರಮುಖ ಪಾತ್ರಗಳು
"ಈ ಸಿನಿಮಾದಲ್ಲಿ ಬರುವ ಸುಮಾರು 16 ಕಲಾವಿದರ ಪಾತ್ರಗಳಿಗೂ ತನ್ನದೇ ಆದ ಜೀವವಿದೆ. ಸಿನಿಮಾದಲ್ಲಿ ಗೋಲ್‌ಮಾಲ್ ಮಾಡುವಂತಹ ಪಾತ್ರಗಳೇ ಹೆಚ್ಚಾಗಿರುವುದರಿಂದ ಚಿತ್ರಕ್ಕೆ ಈ ಟೈಟಲ್ ಇಡಲಾಗಿದೆ. ತಪ್ಪು ಮಾಡಿದಾಗ ತಿದ್ದಿ, ಪ್ರತಿಯೊಂದು ಹಂತದಲ್ಲೂ ಬೆನ್ನೆಲುಬಾಗಿ ನಿಂತ ನಿರ್ಮಾಪಕರಿಗೆ ಹಾಗೂ ನನ್ನನ್ನು ಸಹೋದರನಂತೆ ನಡೆಸಿಕೊಂಡ ಕಾರ್ತಿಕ್ ಅವರಿಗೆ ಧನ್ಯವಾದಗಳು" ಎಂದು ಚಿತ್ರದ ನಿರ್ದೇಶಕ ಶಿವಕುಮಾರ್ ತಿಳಿಸಿದರು.
ನಿರುದ್ಯೋಗಿಗಳಿಗೆ ನೆರವಾಗಲು ಈ ಸಿನಿಮಾ ನಿರ್ಮಾಣ
ʻಗೋಲ್‌ಮಾಲ್ ಗ್ಯಾಂಗ್ʼ ಚಿತ್ರದ ನಿರ್ಮಾಪಕ ಕೆ. ಸತೀಶ್ ಚಂದ್ರ ಎಲೆಕೆರೆ, "ನಾವು ಕಳೆದ 26-27 ವರ್ಷಗಳಿಂದ ಚಿತ್ರರಂಗಕ್ಕೆ ಲೇಬರ್ ಸಪ್ಲೈ ಮಾಡುತ್ತಿದ್ದೇವೆ. ಕೇವಲ ಹಣ ಗಳಿಸುವ ಉದ್ದೇಶದಿಂದ ನಾವು ಚಿತ್ರರಂಗಕ್ಕೆ ಬರಲಿಲ್ಲ. ಸಮಾಜದಲ್ಲಿರುವ ನಿರುದ್ಯೋಗದ ಸಮಸ್ಯೆಯನ್ನು ಕಂಡು, ಇಲಾಖೆಯೊಂದನ್ನು ಆರಂಭಿಸಿ ಜನರಿಗೆ ಕೆಲಸ ಕೊಡಬೇಕು ಎಂಬ ಹೆಜ್ಜೆಯಾಗಿ ಈ ಪ್ರೊಡಕ್ಷನ್ ಬ್ಯಾನರ್ ಆರಂಭಿಸಿದೆವು. ಇಡೀ ತಂಡ ಶೂಟಿಂಗ್ ಸೆಟ್‌ನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಈ ಸಿನಿಮಾವನ್ನು ನಾವು ಗೆದ್ದೇ ಗೆಲ್ಲುತ್ತೇವೆ" ಎಂದು ಆಶಯ ವ್ಯಕ್ತಪಡಿಸಿದರು.