ಅತ್ತ ಡಿವೋರ್ಸ್ ವದಂತಿ, ಇತ್ತ ನಟಿ ಡಿಂಪಲ್ ಜೊತೆ ಡೇಟಿಂಗ್? ತೆಲುಗು ನಟ ಶರ್ವಾನಂದ್ ಲೈಫ್ನಲ್ಲಿ ಏನಾಗ್ತಿದೆ?
ತೆಲುಗು ನಟ ಶರ್ವಾನಂದ್ ಅವರ ವೈಯಕ್ತಿಕ ಜೀವನದ ಕುರಿತು ಟಾಲಿವುಡ್ನಲ್ಲಿ ಭಾರಿ ಚರ್ಚೆ ಶುರುವಾಗಿದೆ. ಪತ್ನಿ ರಕ್ಷಿತಾ ರೆಡ್ಡಿಯಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ, ‘ಭೋಗಿ’ ಚಿತ್ರದ ಪ್ರಚಾರದ ವೇಳೆ ನಟಿ ಡಿಂಪಲ್ ಹಯಾತಿ ಜೊತೆ ಶರ್ವಾನಂದ್ ಸಲುಗೆಯಿಂದ ಕಾಣಿಸಿಕೊಂಡಿದ್ದಾರೆ.
-
ತೆಲುಗು ನಟ ಶರ್ವಾನಂದ್ ಸದ್ಯ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ವಿಚಾರಕ್ಕೆ ಭಾರಿ ಸುದ್ದಿಯಲ್ಲಿದ್ದಾರೆ. ಶರ್ವಾನಂದ್ ಮತ್ತು ನಟಿ ಡಿಂಪಲ್ ಹಯಾತಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಸಂಪತ್ ನಂದಿ ನಿರ್ದೇಶನದ 'ಭೋಗಿ' ಸಿನಿಮಾ ಇದೇ ನವೆಂಬರ್ 27 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಹೈದರಾಬಾದ್ನಲ್ಲಿ ಚಿತ್ರದ ಟ್ರೇಲರ್ ಲಾಂಚ್ ಹಾಗೂ ಪ್ರೀ-ರಿಲೀಸ್ ಸಮಾರಂಭವನ್ನು ಆಯೋಜಿಸಲಾಗಿತ್ತು.
ಆದರೆ, ಈ ಕಾರ್ಯಕ್ರಮದಲ್ಲಿ ಶರ್ವಾನಂದ್ ಮತ್ತು ನಟಿ ಡಿಂಪಲ್ ಹಯಾತಿ ಪರಸ್ಪರ ನಡೆದುಕೊಂಡ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ವೇದಿಕೆಯ ಮೇಲೆ ಶರ್ವಾನಂದ್ ಅವರನ್ನು ಕಂಡ ತಕ್ಷಣ ಡಿಂಪಲ್ ಬಹಳ ಸಲುಗೆಯಿಂದ ಅಪ್ಪಿಕೊಂಡು, ಅವರ ಭುಜದ ಮೇಲೆ ತಲೆಯಿಟ್ಟು ನಗುತ್ತಾ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಶರ್ವಾ & ಡಿಂಪಲ್ ಡೇಟಿಂಗ್?
ಸಾಮಾನ್ಯವಾಗಿ ಸಿನಿಮಾ ಪ್ರಚಾರದ ಸಮಾರಂಭಗಳಲ್ಲಿ ನಾಯಕ ಮತ್ತು ನಾಯಕಿಯರು ತಮಾಷೆಯಾಗಿ, ಆತ್ಮೀಯವಾಗಿ ಮಾತನಾಡಿಕೊಳ್ಳುವುದು ಸಹಜ. ಆದರೆ, ಶರ್ವಾನಂದ್ ಅವರ ವೈಯಕ್ತಿಕ ಜೀವನದ ಕುರಿತು ಕಳೆದ ಕೆಲವು ತಿಂಗಳುಗಳಿಂದ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿರುವ ವದಂತಿಗಳ ಕಾರಣದಿಂದಾಗಿ ಈ ವಿಡಿಯೋಗೆ ಬೇರೆಯದೇ ಬಣ್ಣ ಕಟ್ಟಲಾಗುತ್ತಿದೆ. ಇಬ್ಬರ ನಡುವಿನ ಆತ್ಮೀಯತೆಯನ್ನು ಕಂಡು ಕೆಲ ನೆಟ್ಟಿಗರು ಶರ್ವಾನಂದ್ ಮತ್ತು ಡಿಂಪಲ್ ಹಯಾತಿ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಹೊಸ ಗಾಳಿಸುದ್ದಿಯನ್ನು ಹಬ್ಬಿಸಲು ಶುರುಮಾಡಿದ್ದಾರೆ.
ಶರ್ವಾ ದಾಂಪತ್ಯ ಜೀವನದಲ್ಲಿ ಬಿರುಕು
ಇಷ್ಟೆಲ್ಲಾ ಊಹಾಪೋಹಗಳಿಗೆ ಮೂಲ ಕಾರಣ ಶರ್ವಾನಂದ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು. 2023ರ ಜೂನ್ 3ರಂದು ರಾಜಸ್ಥಾನದ ಜೈಪುರದಲ್ಲಿರುವ 'ದಿ ಲೀಲಾ ಪ್ಯಾಲೇಸ್'ನಲ್ಲಿ ರಕ್ಷಿತಾ ರೆಡ್ಡಿ ಅವರೊಂದಿಗೆ ಶರ್ವಾನಂದ್ ಅದ್ಧೂರಿಯಾಗಿ ವಿವಾಹವಾಗಿದ್ದರು. ಈ ದಂಪತಿಗೆ 2024ರಲ್ಲಿ ಮುದ್ದಾದ ಹೆಣ್ಣು ಮಗು ಕೂಡ ಜನಿಸಿತ್ತು. ಆದರೆ, ಕಳೆದ ವರ್ಷದ ಸೆಪ್ಟೆಂಬರ್ನಿಂದಲೇ ಶರ್ವಾನಂದ್ ಮತ್ತು ರಕ್ಷಿತಾ ನಡುವೆ ಮನಸ್ತಾಪ ಉಂಟಾಗಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಗುಸುಗುಸು ಚಿತ್ರರಂಗದಲ್ಲಿ ಹರಿದಾಡುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ, ಈ ವರ್ಷದ ಏಪ್ರಿಲ್ನಲ್ಲಿ ಶರ್ವಾನಂದ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಶರ್ವಾ ತಮ್ಮ ಪತ್ನಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿಗಳಿಗೆ ಮತ್ತಷ್ಟು ಬಲ ಬಂದಿತ್ತು. ಸದ್ಯ ಇವರ ಪುಟ್ಟ ಮಗು ಕೆಲವು ದಿನ ತಂದೆಯ ಬಳಿ ಮತ್ತು ಇನ್ನು ಕೆಲವು ದಿನ ತಾಯಿಯ ಬಳಿ ಇರುತ್ತಿದೆ ಎನ್ನಲಾಗುತ್ತಿದೆ. ಹೀಗಿರುವಾಗ ಡಿಂಪಲ್ ಜೊತೆಗಿನ ವಿಡಿಯೋ ವೈರಲ್ ಆಗಿರುವುದು ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಡೇಟಿಂಗ್ ವದಂತಿಯಲ್ಲಿ ಸತ್ಯವಿಲ್ಲ!
ಮತ್ತೊಂದೆಡೆ, ಶರ್ವಾನಂದ್ ಮತ್ತು ಡಿಂಪಲ್ ಹಯಾತಿ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಿನಿಮಾ ಮೂಲಗಳು ಸ್ಪಷ್ಟಪಡಿಸಿವೆ. 'ಭೋಗಿ' ಚಿತ್ರದಲ್ಲಿ ಮಂದಾರಂ ಎಂಬ ಪಾತ್ರಕ್ಕೆ ಡಿಂಪಲ್ ಹಯಾತಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಹಕಲಾವಿದರಾದ ಶರ್ವಾನಂದ್ ಮತ್ತು ಡಿಂಪಲ್ ನಡುವೆ ಉತ್ತಮ ಸ್ನೇಹ ಬೆಳೆದಿದೆ.
ಪ್ರೀ-ರಿಲೀಸ್ ಸಮಾರಂಭದ ಸಂಭ್ರಮದಲ್ಲಿ ಆ ಸ್ನೇಹಪೂರ್ವಕ ಸಲುಗೆಯಿಂದಲೇ ಅವರು ಆತ್ಮೀಯವಾಗಿ ಮಾತನಾಡಿಕೊಂಡಿದ್ದಾರೆಯೇ ಹೊರತು, ಇದರಲ್ಲಿ ಬೇರೆ ಯಾವುದೇ ವಿಶೇಷ ಅರ್ಥವಿಲ್ಲ ಎಂದು ತಿಳಿದುಬಂದಿದೆ. ಕೇವಲ ಸಿನಿಮಾ ಪ್ರಚಾರದ ವೇಳೆ ಕಂಡುಬಂದ ಖುಷಿಯ ಕ್ಷಣಗಳನ್ನು ಕೆಲವರು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ಶರ್ವಾ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.