ʻಬಿಗ್ ಬಾಸ್ʼ ಮನೆಯಿಂದ ನಟಿ ಸಂಗೀತಾ ಭಟ್ ಆಸ್ಪತ್ರೆಗೆ ಶಿಫ್ಟ್; ಟಾಸ್ಕ್ ವೇಳೆ ತೀವ್ರ ಉಸಿರಾಟದ ಸಮಸ್ಯೆ, ವಿಡಿಯೋ ವೈರಲ್!
Sangeetha Bhatt Health Issue: ಅನಾರೋಗ್ಯದ ಕಾರಣದಿಂದ ಬಿಗ್ ಬಾಸ್ ಕನ್ನಡ 13 ರಿಯಾಲಿಟಿ ಶೋನಿಂದ ನಟಿ ಸಂಗೀತಾ ಭಟ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 'ಗಂಧರ್ವರು ವರ್ಸಸ್ ರಾಕ್ಷಸರು' ಎಂಬ ಕಠಿಣ ಟಾಸ್ಕ್ ಆಡುವ ಸಂದರ್ಭದಲ್ಲಿ ಅವರಿಗೆ ತೀವ್ರವಾದ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಸಹಸ್ಪರ್ಧಿಗಳು ಕನ್‌ಫೆಶನ್ ಕೋಣೆಗೆ ಕರೆದೊಯ್ದು ವೈದ್ಯರ ಬಳಿಗೆ ಕಳುಹಿಸಿದ್ದಾರೆ.
-
ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 13’ರಲ್ಲಿ ಸ್ಪರ್ಧಿಗಳ ಆರೋಗ್ಯ ಸಮಸ್ಯೆ ಮುಂದುವರಿದಿದೆ. ಎರಡನೇ ವಾರದಲ್ಲಿ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿ, ಬಳಿಕ ಶೋನಿಂದಲೇ ಸ್ವಯಂಪ್ರೇರಿತರಾಗಿ ಹೊರನಡೆದಿದ್ದರು. "ಅಲ್ಲಿನ ಊಟ ನನಗೆ ಸರಿಹೊಂದಲಿಲ್ಲ" ಎಂದು ಗುಡ್‌ಬೈ ಹೇಳಿದರು. ಇದೀಗ ಮನೆಯ ಮತ್ತೋರ್ವ ಪ್ರಮುಖ ಸ್ಪರ್ಧಿ, ನಟಿ ಸಂಗೀತಾ ಭಟ್ ಅವರ ಆರೋಗ್ಯದಲ್ಲೂ ಏಕಾಏಕಿ ಏರುಪೇರಾಗಿದ್ದು, ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಬರಿಯಾದ ಸ್ಪರ್ಧಿಗಳು
ದೊಡ್ಮನೆಯಲ್ಲಿ ಪ್ರಸ್ತುತ ‘ಗಂಧರ್ವರು ವರ್ಸಸ್ ರಾಕ್ಷಸರು’ ಎಂಬ ಭರ್ಜರಿ ಟಾಸ್ಕ್ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಸಂಗೀತಾ ಭಟ್ ಅವರು ‘ರಾಕ್ಷಸರ’ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಟಾಸ್ಕ್ ಚಟುವಟಿಕೆಗಳು ರಭಸದಿಂದ ಸಾಗುತ್ತಿದ್ದ ವೇಳೆಯಲ್ಲೇ ಸಂಗೀತಾ ಅವರಿಗೆ ತೀವ್ರ ರೀತಿಯ ವೀಝಿಂಗ್ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸಹಸ್ಪರ್ಧಿಗಳು ತಕ್ಷಣ ಅವರನ್ನು ಎತ್ತಿಕೊಂಡು ಕನ್‌ಫೆಶನ್ ರೂಮ್‌ಗೆ ಕರೆದೊಯ್ದಿದ್ದಾರೆ.
ಸಂಗೀತಾ ಭಟ್ ಆಸ್ಪತ್ರೆಗೆ ದಾಖಲು
ಪ್ರಾಥಮಿಕ ಚಿಕಿತ್ಸೆಯ ನಂತರ ವೈದ್ಯರ ಸಲಹೆಯಂತೆ ಅವರನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಹಸ್ಪರ್ಧಿಗಳು ಅವರನ್ನು ಹೊತ್ತುಕೊಂಡು ಕನ್‌ಫೆಶನ್ ರೂಮ್‌ಗೆ ಕರೆದೊಯ್ಯುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಪ್ರಸ್ತುತ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಲೈವ್ ಫೀಡ್‌ನಲ್ಲಿ ಸಂಗೀತಾ ಭಟ್ ಕಾಣಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿದ್ದು, "ಸಂಗೀತಾ ಭಟ್ ಆರೋಗ್ಯ ಹೇಗಿದೆ? ಅವರಿಗೆ ಏನಾಗಿದೆ? ಚಿಕಿತ್ಸೆ ಮುಗಿಸಿ ಮತ್ತೆ ದೊಡ್ಮನೆಗೆ ಮರಳುತ್ತಾರಾ?" ಎಂಬ ಪ್ರಶ್ನೆಗಳು ವೀಕ್ಷಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಎಲಿಮಿನೇಟ್ ಆಗುವ ಬಯಕೆ ಹೊರಹಾಕಿದ್ದ ಸಂಗೀತಾ
ಕಳೆದ ವಾರ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸಂಗೀತಾ ಬಾಟಮ್ 3 ಹಂತ ತಲುಪಿದ್ದರು. ಕಮಾಂಡೋಗಳ ಮೂಲಕ ವಿಮಾನದೊಳಗೆ ಕರೆದೊಯ್ಯುವ ವಿಭಿನ್ನ ಎಲಿಮಿನೇಷನ್ ತಂತ್ರದಲ್ಲಿ ಕೊನೆ ಕ್ಷಣದಲ್ಲಿ ಅವರು ಪಾರಾಗಿ, ಲಿಖಿತ್ ಗೊಂದಿ ಮನೆಯಿಂದ ಹೊರಬಿದ್ದಿದ್ದರು. "ನನ್ನನ್ನು ಹಾಗೆಯೇ ಕಳುಹಿಸಿಬಿಟ್ಟಿದ್ದರೆ ಸಾಕಾಗಿತ್ತು, ಇಲ್ಲಿದ್ದು ನೋವು ಅನುಭವಿಸಲು ಸಾಧ್ಯವಾಗುತ್ತಿಲ್ಲ" ಎಂದು ಸಂಗೀತಾ ಭಟ್ ಭಾವುಕರಾಗಿ ನುಡಿದಿದ್ದರು.
ಓಂ ಪ್ರಕಾಶ್ ಹಾದಿ ಹಿಡಿಯುತ್ತಾರಾ?
‘ಬಿಗ್ ಬಾಸ್ ಕನ್ನಡ 13’ರ ಆರಂಭದ ದಿನಗಳಲ್ಲೇ ಮೊದಲ ‘ಪೈಲಟ್’ ಹಾಗೂ ಮೊದಲ ‘ಕ್ಯಾಪ್ಟನ್’ ಆಗಿ ಮಿಂಚಿದ್ದ ಸಂಗೀತಾ, ಇತ್ತೀಚಿನ ಸಂಚಿಕೆಗಳಲ್ಲಿ ಅಷ್ಟಾಗಿ ಸಕ್ರಿಯವಾಗಿರದೆ ಮೌನಕ್ಕೆ ಶರಣಾಗಿದ್ದರು. ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಆಗದೆ ಎಲಿಮಿನೇಷನ್‌ನಿಂದ ಸಂಪೂರ್ಣ ಸೇಫ್ ಆಗಿದ್ದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಅವರು ಶೀಘ್ರವಾಗಿ ಚೇತರಿಸಿಕೊಂಡು ಆಟಕ್ಕೆ ಮರಳಲಿದ್ದಾರೆಯೇ ಅಥವಾ ಓಂ ಪ್ರಕಾಶ್ ರಾವ್ ಅವರಂತೆಯೇ ಶೋಗೆ ವಿದಾಯ ಹೇಳಲಿದ್ದಾರೆಯೇ ಎಂಬುದು ಮುಂಬರುವ ಸಂಚಿಕೆಗಳಲ್ಲಿ ಗೊತ್ತಾಲಿದೆ.