Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ನೇರವಾಗಿ ದೊಡ್ಮನೆಗೆ ಬಂದ ಗಿನ್ನೆಸ್ ದಾಖಲೆ ವೀರ ಧನುಷ್!
Bigg Boss Kannada 13: ಬಿಗ್ ಬಾಸ್ ಅಂಗಳಕ್ಕೆ ಅಗ್ನಿಪರೀಕ್ಷೆಯ ಕಠಿಣ ಸವಾಲುಗಳನ್ನು ಗೆದ್ದು ಗಿನ್ನೆಸ್ ದಾಖಲೆ ವೀರ ಧನುಷ್ ಮಂಜುನಾಥ್ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಸಮಾಜದಿಂದ ಎದುರಿಸಿದ ಅವಮಾನ, ಬಡತನ ಮತ್ತು ತಿರಸ್ಕಾರಗಳ ನಡುವೆಯೂ ಛಲ ಬಿಡದೆ ಹೋರಾಡಿದ ಧನುಷ್, ಈ ಬಾರಿ ಗೆಲ್ಲುವ ಹಠ ತೊಟ್ಟಿದ್ದಾರೆ.
-
ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13'ರ ಆರಂಭಕ್ಕೂ ಮುನ್ನ ನಡೆದ ಮಿನಿ ಶೋ 'ಬಿಗ್ ಬಾಸ್ ಅಗ್ನಿಪರೀಕ್ಷೆ'ಯಲ್ಲಿ ಗಿನ್ನೆಸ್ ದಾಖಲೆ ಸಾಧಕ ಧನುಷ್ ಮಂಜುನಾಥ್ ಭರ್ಜರಿ ಜಯಗಳಿಸಿದ್ದಾರೆ. ಕಠಿಣ ಸವಾಲುಗಳನ್ನು ಎದುರಿಸಿ ಗೆದ್ದಿರುವ ಅವರು, 'ಬಿಗ್ ಬಾಸ್ ಕನ್ನಡ 13' ಮನೆಗೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದ್ದಾರೆ.
ಛಲ ಬಿಡದೆ ಹೋರಾಡಿದ ಧನುಷ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಬಿಗ್ ಬಾಸ್ ಅಗ್ನಿಪರೀಕ್ಷೆ'ಯಲ್ಲಿ ಧನುಷ್ ಹಲವು ಕಠಿಣ ದೈಹಿಕ ಹಾಗೂ ಮಾನಸಿಕ ಟಾಸ್ಕ್‌ಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿದ್ದಾರೆ. ಸ್ಪರ್ಧೆಯುದ್ದಕ್ಕೂ ತಮ್ಮ ಛಲ ಬಿಡದೆ ಹೋರಾಡಿದ ಇವರು ತೀರ್ಪುಗಾರರ ಮೆಚ್ಚುಗೆಯ ಜೊತೆಗೆ ವೀಕ್ಷಕರ ಮನಗೆದ್ದು ಅತಿ ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಎಂಟರ್‌ಟೇನ್‌ಮೆಂಟ್ ವಿಚಾರದಲ್ಲಿ ಕೊಂಚ ಹಿಂದೆ ಬಿದ್ದಂತೆ ಕಂಡರೂ, ಕಠಿಣ ಟಾಸ್ಕ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಧನುಷ್ ಅಂತಿಮವಾಗಿ ಈಗ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ.
ಸತ್ತರೂ ಪರವಾಗಿಲ್ಲ, ಆದರೆ ಸೋಲಬಾರದು
ಬಿಗ್ ಬಾಸ್‌ಗೆ ಪ್ರವೇಶ ಪಡೆದುಕೊಂಡ ಬಳಿಕ ಭಾವುಕರಾಗಿ ಮಾತನಾಡಿದ ಧನುಷ್, "ನಾನು ನಿಮ್ಮ (ಕಿಚ್ಚ ಸುದೀಪ್) ಅಭಿಮಾನಿ ಆಗಿರುವುದಕ್ಕೆ ನಿಜಕ್ಕೂ ಖುಷಿಯಾಗುತ್ತಿದೆ. ನನ್ನ ಜೀವನಕ್ಕೆ ಬಿಗ್ ಬಾಸ್ ವೇದಿಕೆಯ ಅಗತ್ಯತೆ ತುಂಬಾ ಇತ್ತು. ಇಲ್ಲಿಯವರೆಗೆ ನಾನು ಹೋದ ಕಡೆಯಲ್ಲೆಲ್ಲ ಕೇವಲ ತಿರಸ್ಕಾರವೇ ಸಿಕ್ಕಿದೆ. ಗಿನ್ನೆಸ್ ರೆಕಾರ್ಡ್ ಪಡೆದಿದ್ದರೂ ಅದರಿಂದ ನನ್ನ ಬದುಕಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಸತ್ತರೂ ಪರವಾಗಿಲ್ಲ, ಆದರೆ ಸೋಲಬಾರದು ಎಂಬ ಹಠ ನನ್ನದು. ಅದೇ ಛಲದೊಂದಿಗೆ ನಾನು ಈ ಶೋ ಗೆಲ್ಲುವುದಕ್ಕಾಗಿಯೇ ಬಂದಿದ್ದೇನೆ" ಎಂದು ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
ಗಿನ್ನೆಸ್ ರೆಕಾರ್ಡ್ ಪ್ರಮಾಣಪತ್ರವನ್ನೇ ಹರಿದುಹಾಕಿದ್ದ ಧನುಷ್
ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದ ಧನುಷ್, ಕಷ್ಟದ ಬದುಕಿನ ನಡುವೆಯೂ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬ್ರೇಕ್ ಮಾಡಿದ ಅಪರೂಪದ ಸಾಧಕ. ಈ ಹಿಂದೆ ಶೋ ಪ್ರವೇಶದ ಹಂತದಲ್ಲಿ ತಮ್ಮ ಗಿನ್ನೆಸ್ ರೆಕಾರ್ಡ್ ಪ್ರಮಾಣಪತ್ರವನ್ನೇ ಹರಿದುಹಾಕಿ ಬದ್ಧತೆ ಪ್ರದರ್ಶಿಸಿದ್ದ ಅವರ ನಡೆ ವೀಕ್ಷಕರಲ್ಲಿ ತೀವ್ರ ಭಾವುಕತೆ ಮೂಡಿಸಿತ್ತು. ಇದೀಗ ದೊಡ್ಮನೆಯೊಳಗೆ ಹೆಜ್ಜೆಯಿಟ್ಟಿರುವ ಈ ಹಠವಾದಿ ಸ್ಪರ್ಧಿ ಮುಂದೆ ಯಾವ ರೀತಿ ಆಟವಾಡಿ ಕನ್ನಡಿಗರ ಮನಗೆಲ್ಲಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.