ʻನಾನಿಲ್ಲಿ ಹೋಸ್ಟ್, ನೀವು ಕಂಟೆಸ್ಟೆಂಟ್. ಮರ್ಯಾದೆಯಿಂದ ಮಾತನಾಡಬೇಕುʼ; ಸುಖಾಸುಮ್ಮನೆ ನಾಲಿಗೆ ಹರಿಬಿಟ್ಟ ಗಗನ್ ಚಿನ್ನಪ್ಪಗೆ ಬಿಸಿ ಮುಟ್ಟಿಸಿದ ʻಕಿಚ್ಚʼ ಸುದೀಪ್
Bigg Boss Kannada 13: ಸ್ಪರ್ಧಿ ಗಗನ್ ಚಿನ್ನಪ್ಪನ ಅಸಂಬದ್ಧ ಮಾತಿಗೆ ʻಕಿಚ್ಚʼ ಸುದೀಪ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆಟದ ಶ್ಲಾಘನೆ ವೇಳೆ ಸುದೀಪ್‌ಗೆ ವ್ಯಂಗ್ಯವಾಗಿ ಮಾತನಾಡಲು ಹೋದ ಗಗನ್‌ಗೆ ಗಂಭೀರ ಎಚ್ಚರಿಕೆ ನೀಡಲಾಯಿತು. 'ನಾನಿಲ್ಲಿ ನಿರೂಪಕ, ನೀವೊಬ್ಬ ಸ್ಪರ್ಧಿ, ಮರ್ಯಾದೆ ಇರಲಿ' ಎಂದು ಕಿಚ್ಚ ಖಾರವಾಗಿ ಗುಡುಗಿದಾಗ, ಗಗನ್ ಹೆದರಿ 3 ಬಾರಿ ಕ್ಷಮೆಯಾಚಿಸಿದರು.
-
‘ಬಿಗ್ ಬಾಸ್’ ಮನೆಯಲ್ಲಿ ಆರಂಭದಿಂದಲೂ ತಮ್ಮ ನಡವಳಿಕೆ ಹಾಗೂ ಮಾತುಗಳಿಂದ ಇತರ ಸ್ಪರ್ಧಿಗಳ ಅಸಮಾಧಾನಕ್ಕೆ ಗುರಿಯಾಗಿದ್ದ ಸ್ಪರ್ಧಿ ಗಗನ್ ಚಿನ್ನಪ್ಪ, ಇದೀಗ ವಾರಾಂತ್ಯದ ಪಂಚಾಯಿತಿಯಲ್ಲಿ ‘ಕಿಚ್ಚ’ ಸುದೀಪ್ ಅವರ ಮುಂದೆಯೇ ಅತಿಯಾಗಿ ಮಾತನಾಡಿದ್ದಾರೆ. ಅದಕ್ಕೆ ಸುದೀಪ್ ತಮ್ಮದೇ ಸ್ಟೈಲ್‌ನಲ್ಲಿ ಬಿಸಿ ಮುಟ್ಟಿಸಿದ್ದಾರೆ. ಸುದೀಪ್ ಅವರ ಪ್ರಶ್ನೆಗೆ ತಮಾಷೆಯ ಧಾಟಿಯಲ್ಲಿ ಉತ್ತರಿಸಲು ಹೋಗಿ ಎಡವಟ್ಟು ಮಾಡಿಕೊಂಡ ಗಗನ್, ವೇದಿಕೆಯಲ್ಲೇ ಸತತ ಮೂರು ಬಾರಿ ಸುದೀಪ್ ಅವರ ಕ್ಷಮೆ ಯಾಚಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಗಗನ್ ಚಿನ್ನಪ್ಪ ಅಸಂಬದ್ಧ ಮಾತು
‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಅವರು ಗಗನ್ ಅವರ ಆಟವನ್ನು ಶ್ಲಾಘಿಸುತ್ತಾ, "ಡೈಮಂಡ್ ಟಾಸ್ಕ್ ಅನ್ನು ಅದ್ಭುತವಾಗಿ ಆಡಿದಿರಿ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಗಗನ್, "ಟಾಸ್ಕ್ ತುಂಬಾ ಕಷ್ಟವಿತ್ತು, ಆದರೆ ಪುಲ್ ಮಾಡುವುದಕ್ಕೆ ನನಗೆ ಸುಲಭವಾಯಿತು" ಎಂದರು. ಗಗನ್ ನೀಡಿದ ಉತ್ತರವನ್ನು ಇಟ್ಟುಕೊಂಡು ಸುದೀಪ್ ಮನೆಯ ಇತರ ಸದಸ್ಯರ ಕಡೆಗೆ ತಿರುಗಿ, "ಪುಲ್ ಮಾಡಲು ಸುಲಭವಿತ್ತು ಎಂದು ಗಗನ್ ಹೇಳಿದ್ದಾರೆ, ಇದು ನಿಮ್ಮೆಲ್ಲರಿಗೂ ಕಾಂಪ್ಲಿಮೆಂಟಾ?" ಎಂದು ತಮಾಷೆಯಾಗಿಯೇ ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಗಗನ್, "ಸರ್.. ಹೊಗಳಿಬಿಟ್ಟು.. ಫುಲ್ ಹಾಕಿಕೊಡುತ್ತಿದ್ದೀರಲ್ಲ ಸರ್.." ಎಂದು ನಗುನಗುತ್ತಲೇ ಅಸಂಬದ್ಧವಾಗಿ ಮಾತನಾಡಿದರು.
ಅಯ್ಯೋ.. ಆ ತರಹ ಏನೂ ಇಲ್ಲ ಸರ್!
ಗಗನ್ ಅವರ ಈ ಹಗುರವಾದ ಪದಬಳಕೆ ಸುದೀಪ್ ಅವರನ್ನು ತೀವ್ರವಾಗಿ ಕೆರಳಿಸಿತು. ತಕ್ಷಣವೇ ಗಂಭೀರವಾದ ಸುದೀಪ್, "ಹಾಕಿಕೊಡಲು ನನಗೆ ಬರುವುದಿಲ್ಲ, ಡೈರೆಕ್ಟ್ ಆಗಿಯೇ ಹಾಕುತ್ತೇನೆ. ನಾನೇನು ಮಾತನಾಡಲು ಹೊರಟಿದ್ದೇನೆ ಎಂದು ತಿಳಿಯದೆ ಮುಂಚಿತವಾಗಿಯೇ ಊಹಿಸಿ ಮಾತನಾಡಿದರೆ, ನೀವು ನನ್ನನ್ನೇ ಎದುರು ಹಾಕಿಕೊಳ್ಳುತ್ತೀರಿ ಗಗನ್" ಎಂದು ಖಾರವಾಗಿಯೇ ಎಚ್ಚರಿಕೆ ನೀಡಿದರು. ಇದರಿಂದ ಗಾಬರಿಗೊಂಡ ಗಗನ್, "ಅಯ್ಯೋ.. ಆ ತರಹ ಏನೂ ಇಲ್ಲ ಸರ್, ಕ್ಯಾಶುವಲ್ ಆಗಿ ಹೇಳಿದೆ ಅಷ್ಟೇ" ಎಂದು ಸಮರ್ಥಿಸಿಕೊಳ್ಳಲು ಮುಂದಾದಾಗ ಸುದೀಪ್ ಮತ್ತಷ್ಟು ಗರಂ ಆದರು.
ನಾನಿಲ್ಲಿ ಹೋಸ್ಟ್, ನೀವು ಕಂಟೆಸ್ಟೆಂಟ್
"ನನಗೂ ನಿಮಗೂ ಫ್ರೆಂಡ್‌ಶಿಪ್ ಇಲ್ಲ, ಇಲ್ಲಿ ಕ್ಯಾಶುವಾಲಿಟಿ ಎಲ್ಲಿಂದ ಬರುತ್ತದೆ? ನಾನಿಲ್ಲಿ ಹೋಸ್ಟ್, ನೀವು ಕಂಟೆಸ್ಟೆಂಟ್. ಮರ್ಯಾದೆಯಿಂದ ಮಾತನಾಡಬೇಕು. ನಿಮ್ಮನ್ನು ಹೊಗಳಿದ ಮಾತ್ರಕ್ಕೆ ಮಿಕ್ಕವರನ್ನು ಮಾತನಾಡಿಸಬಾರದು ಅಂತೇನಿಲ್ಲವಲ್ಲ. ಹಾಕಿಕೊಡುತ್ತಿದ್ದೀರಾ ಎಂದರೆ ಅದ್ಯಾವ ರೀತಿಯ ಭಾಷೆ ಅದು? ನಿಮ್ಮನ್ನು ಹೇಗೆ ಹೊಗಳುತ್ತೇನೋ, ಹಾಗೇ ಮಿಕ್ಕವರನ್ನು ತಿದ್ದುವ ಅಧಿಕಾರವೂ ನನಗಿದೆ. ಇದನ್ನು ಹಾಕಿಕೊಡುವುದು ಎನ್ನಲ್ಲ, ತಿದ್ದುವುದಕ್ಕೆ ಪ್ರಯತ್ನಿಸುವುದು ಎನ್ನುತ್ತಾರೆ. ಇದು ಪದಬಳಕೆಯ ವ್ಯತ್ಯಾಸ ಅಷ್ಟೇ" ಎಂದು ಸುದೀಪ್ ಸ್ಪಷ್ಟ ಹಾಗೂ ಖಡಕ್ ಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡರು.
Bigg Boss Kannada 13: ಬಿಗ್ ಬಾಸ್ ಅಗ್ನಿ ಪರೀಕ್ಷೆಯ ತೀರ್ಪುಗಾರರು ಇವರೇ!
ನಾನು ಕ್ಷಮೆ ಕೇಳುತ್ತೇನೆ ಸರ್
ಸುದೀಪ್ ಅವರ ಕಟ್ಟುನಿಟ್ಟಿನ ಮಾತಿಗೆ ನಡುಗಿಹೋದ ಗಗನ್ ಚಿನ್ನಪ್ಪ, "ನಾನು ಕ್ಷಮೆ ಕೇಳುತ್ತೇನೆ ಸರ್.. ಸಾರಿ ಸರ್.. ಅಪಾಲಜೀಸ್ ಸರ್" ಎಂದು ಮೂರು ಬಾರಿ ಕೈಮುಗಿದು ಕ್ಷಮೆ ಕೋರಿದರು. ಅದಕ್ಕೆ "ಮೊದಲ ಬಾರಿಗೇ ನನಗೆ ಕೇಳಿಸಿತು" ಎಂದು ತಣ್ಣಗೆ ಉತ್ತರಿಸಿದ ಸುದೀಪ್, ಅತಿಯಾದ ವರ್ತನೆಗೆ ಆರಂಭದಲ್ಲೇ ಬ್ರೇಕ್ ಹಾಕಿ ಸರಿಯಾದ ಪಾಠ ಕಲಿಸಿದರು.