ಗಂಡು ಮಗುವಿಗೆ ತಂದೆಯಾದ ನಟ ಮಂಜು ಪಾವಗಡ; ಪತ್ನಿ ನಂದಿನಿ ಬಗ್ಗೆ ʻಬಿಗ್ ಬಾಸ್ʼ ವಿನ್ನರ್ ಹೇಳಿದ್ದೇನು?
'ಬಿಗ್ ಬಾಸ್' ಖ್ಯಾತಿಯ ಮಂಜು ಪಾವಗಡ ಅವರು ಗಂಡು ಮಗುವಿನ ತಂದೆಯಾಗಿದ್ದಾರೆ. 2025ರ ಕೊನೆಯಲ್ಲಿ ಜನಿಸಿದ ಮಗುವಿಗೆ ಈಗ 7 ತಿಂಗಳು ತುಂಬಿದ್ದು, ಶೀಘ್ರದಲ್ಲೇ ನಾಮಕರಣ ಮಾಡುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಪತ್ನಿ ನಂದಿನಿ ಮತ್ತು ಕುಟುಂಬದ ಬಗ್ಗೆ ಮಾತನಾಡಿರುವ ಮಂಜು, ವೃತ್ತಿಜೀವನದಲ್ಲೂ ಯಶಸ್ಸಿನತ್ತ ಹೆಜ್ಜೆ ಇಡುತ್ತಿದ್ದಾರೆ.
-
'ಮಜಾ ಭಾರತ', 'ಗಿಚ್ಚಿ ಗಿಲಿ ಗಿಲಿ' ಶೋಗಳ ಮೂಲಕ ಜನಪ್ರಿಯರಾಗಿ, ಆನಂತರ 'ಬಿಗ್ ಬಾಸ್' ಕನ್ನಡ ಸೀಸನ್ 8 ವಿನ್ನರ್ ಆದವರು ನಟ ಮಂಜು ಪಾವಗಡ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬ್ಯುಸಿ ಆಗುತ್ತಿರುವ ಮಂಜು ಪಾವಗಡ ಕಡೆಯಿಂದ ಈಗೊಂಡು ಗುಡ್ ನ್ಯೂಸ್ ಸಿಕ್ಕಿದೆ. ಅದೇನಪ್ಪ ಅಂದರೆ, ಅವರೀಗ ಮುದ್ದಾದ ಗಂಡು ಮಗುವಿಗೆ ಅಪ್ಪ ಆಗಿದ್ದಾರೆ. 2025ರ ಕೊನೆಯಲ್ಲಿ ಗಂಡು ಮಗು ಜನಿಸಿದೆ.
ನನ್ನ ಜೀವನ ಸೂಪರ್ ಆಗಿದೆ
ಈಗಾಗಲೇ ಮಂಜು ಪಾವಗಡ ಅವರ ಮಗನಿಗೆ 7 ತಿಂಗಳು ತುಂಬಿದ್ದು, 9 ತಿಂಗಳು ತುಂಬಿದ ಬಳಿಕ ನಾಮಕರಣ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ʻವಿಶ್ವವಾಣಿ ಟಿವಿʼ ಜೊತೆಗೆ ಮಾಹಿತಿ ಹಂಚಿಕೊಂಡಿರುವ ಮಂಜು ಪಾವಗಡ, "ಗಂಡು ಮಗುವಿಗೆ ಅಪ್ಪ ಆಗಿದ್ದೇನೆ, ಈಗ ಮಗುವಿಗೆ 7 ತಿಂಗಳು. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಇನ್ನೆರಡು ತಿಂಗಳಲ್ಲಿ ನಾಮಕರಣ ಮಾಡಲಿದ್ದೇನೆ. ಸದ್ಯ ನನ್ನ ಜೀವನ ಸೂಪರ್ ಆಗಿದೆ" ಎಂದು ಮಂಜು ಪಾವಗಡ ಹೇಳಿಕೊಂಡಿದ್ದಾರೆ.
ಮಂಜು ಪಾವಗಡ- ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8 ರ ವಿನ್ನರ್
ಹೊಸ ಮನೆಗೆ ಪ್ರವೇಶ
ಕಳೆದ ಎರಡು ವರ್ಷಗಳಲ್ಲಿ ಮಂಜು ಪಾವಗಡ ಅವರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅವೆಲ್ಲವೂ ಉತ್ತಮವಾದ ಬದಲಾವಣೆ ಎಂಬುದು ಖುಷಿಯ ವಿಚಾರ. 2024ರ ಅಂತ್ಯದಲ್ಲಿ ಮದುವೆಯಾದ ಮಂಜು ಪಾವಗಡ, ಈಚೆಗೆ ಹೊಸ ಮನೆಗೆ ಕಾಲಿಟ್ಟರು. ಅಪಾರ್ಟ್‌ಮೆಂಟ್‌ವೊಂದಲ್ಲಿ ಫ್ಲಾಟ್ ಖರೀದಿ ಮಾಡಿರುವ ಅವರು, ಅಲ್ಲಿಗೆ ತಮ್ಮ ವಾಸವನ್ನು ಬದಲಿಸಿದ್ದಾರೆ. ಈಗ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಸದ್ಯ ಮಂಜುಗೆ ಎಲ್ಲವೂ ಒಳ್ಳೆಯದಾಗುತ್ತಿದೆ. "ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ" ಎಂದು ತಮಾಷೆ ಮಾಡುತ್ತಾರೆ ಮಂಜು.
ಪತ್ನಿ ಬಗ್ಗೆ ಮಂಜು ಹೇಳಿದ್ದೇನು?
ಮಂಜು ಪಾವಗಡ ಅವರ ಪತ್ನಿ ಬಗ್ಗೆ ಜಾಸ್ತಿ ಸಿಕ್ಕಿರಲಿಲ್ಲ. ಈ ಬಗ್ಗೆಯೂ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿರುವ ಮಂಜು, "ನನ್ನ ಪತ್ನಿ ಹೆಸರು ನಂದಿನಿ. ನಮ್ಮ ಪಾವಗಡ ಸಮೀಪವೇ ಅವರ ಊರು. ನನ್ನದು ಪಕ್ಕಾ ಅರೆಂಜ್ ಮ್ಯಾರೇಜ್. ಕುಟುಂಬದವರೇ ಮುಂದೆ ನಿಂತು ಮಾಡಿದ ಮದುವೆ. ನನ್ನ ಪತ್ನಿ ಎಂ.ಕಾಮ್, ಎಂಬಿಎ ಅಂತ ತುಂಬಾ ಓದಿಕೊಂಡಿದ್ದಾಳೆ. ನಾನೇ ಎಸ್‌ಎಸ್‌ಎಲ್‌ಸಿ ಫೇಲ್. ಅವಳು ಐಟಿ ಕಂಪನಿಯಲ್ಲಿ ಕೆಲಸ ಕೂಡ ಮಾಡುತ್ತಾಳೆ. ನನ್ನದು ತುಂಬಾ ಸುಂದರವಾದ ಕುಟುಂಬ" ಎಂದು ಸಂತೋಷಪಡುತ್ತಾರೆ ಮಂಜು ಪಾವಗಡ.
ಮಂಜು ಪಾವಗಡ ಸಂದರ್ಶನ
ಜೆರಾಕ್ಸ್ ವೆಬ್ ಸರಣಿಯಲ್ಲಿ ನಟನೆ
ಡಾಲಿ ಧನಂಜಯ್ ನಿರ್ಮಾಣದ ʻಜೆರಾಕ್ಸ್ʼ ವೆಬ್ ಸರಣಿಯಲ್ಲಿ ಮಂಜು ಪಾವಗಡ ನಟಿಸಿದ್ದಾರೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ವೆಬ್ ಸರಣಿಯು ಕನ್ನಡ ಜೀ5ರಲ್ಲಿ ಇದೇ ಏಪ್ರಿಲ್ 24ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.