‘ಕ್ವಾಟ್ಲೆ ಕಿಚನ್ ಸೀಸನ್ 2’ ವಿನ್ನರ್ ಆಗಿ ಹೊರಹೊಮ್ಮಿದ ಸೂರಜ್ ಸಿಂಗ್; ರನ್ನರ್ ಅಪ್ ಪಟ್ಟ ಪಡೆದ ನಟ ಭವಿಶ್, ಗೆದ್ದವರಿಗೆ ಸಿಕ್ಕ ಬಹುಮಾನವೇನು?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕುಕ್ಕಿಂಗ್ ರಿಯಾಲಿಟಿ ಶೋ 'ಕ್ವಾಟ್ಲೆ ಕಿಚನ್ ಸೀಸನ್ 2' ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನಟ ಭವಿಶ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ.
-
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಹಾಗೂ ವಿಶಿಷ್ಟ ಕುಕ್ಕಿಂಗ್ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಅದ್ದೂರಿ ಗ್ರ್ಯಾಂಡ್ ಫಿನಾಲೆಯೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅಡುಗೆ ಮನೆಯಲ್ಲಿ ಎದುರಾದ ಕಠಿಣ ಸವಾಲುಗಳು ಹಾಗೂ ಹಾಸ್ಯಭರಿತ ತುಂಟಾಟದ ಆಟಗಳನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸಿದ ʻಬಿಗ್ ಬಾಸ್ʼ ಖ್ಯಾತಿಯ ಸೂರಜ್ ಸಿಂಗ್, ಪ್ರೇಕ್ಷಕರು ಮತ್ತು ತೀರ್ಪುಗಾರರ ಮನಗೆದ್ದು ಈ ಸೀಸನ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸೂರಜ್ ಸಿಂಗ್‌ಗೆ ವಿನ್ನರ್ ಪಟ್ಟ
ಸೆಮಿಫೈನಲ್ ಮತ್ತು ಫೇಸ್-ಆಫ್ ಹಂತಗಳನ್ನು ದಾಟಿ ಅಂತಿಮ ಸುತ್ತಿಗೆ ಲಗ್ಗೆಯಿಟ್ಟಿದ್ದ ಸೂರಜ್ ಸಿಂಗ್, ನಿರ್ದೇಶಕ ಓಂ ಪ್ರಕಾಶ್ ರಾವ್, ‘ನಂದಗೋಕುಲ’ ಖ್ಯಾತಿಯ ನಟಿ ಮೇಘಾ, ‘ಬಿಗ್ ಬಾಸ್’ ಖ್ಯಾತಿಯ ರಕ್ಷಿತಾ ಶೆಟ್ಟಿ ಹಾಗೂ ನಟ ಭವಿಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮ ಹಂತದ ಅತ್ಯಂತ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೂರಜ್ ಸಿಂಗ್ ವಿನ್ನರ್ ಪಟ್ಟ ಅಲಂಕರಿಸಿದರೆ, ನಟ ಭವಿಶ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.
3 ಲಕ್ಷ ರೂಪಾಯಿ ನಗದು ಬಹುಮಾನ
ವಿಜೇತರಾದ ಸೂರಜ್ ಸಿಂಗ್ ಅವರಿಗೆ ಆಕರ್ಷಕ ‘ಕ್ವಾಟ್ಲೆ ಕಿಚನ್ ಸೀಸನ್ 2’ ಟ್ರೋಫಿಯ ಜೊತೆಗೆ 3 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಆಕರ್ಷಕ ಗಿಫ್ಟ್ ಹ್ಯಾಂಪರ್‌ಗಳನ್ನು ನೀಡಿ ಗೌರವಿಸಲಾಯಿತು. ಇನ್ನು ರನ್ನರ್ ಅಪ್ ಆದ ನಟ ಭವಿಶ್ ಅವರಿಗೆ 1 ಲಕ್ಷ ರೂಪಾಯಿ ನಗದು ಪುರಸ್ಕಾರ ಲಭಿಸಿತು.
Kwatle Kitchen: ನೂರಕ್ಕೆ ನೂರು ಕಾಮಿಡಿ ಕುಕ್ಕಿಂಗ್ ಶೋ 'ಕ್ವಾಟ್ಲೆ ಕಿಚನ್' ಇಂದಿನಿಂದ ಆರಂಭ
ಕಲರ್ಸ್ ಕನ್ನಡ ತಂಡಕ್ಕೆ ಧನ್ಯವಾದ
ಗೆಲುವಿನ ಸಂಭ್ರಮ ಹಂಚಿಕೊಂಡ ಸೂರಜ್, ಈ ಕ್ಷಣದಲ್ಲಿ ಸಂತಸದಿಂದ ಮಾತೇ ಬರುತ್ತಿಲ್ಲ ಎಂದು ಭಾವುಕರಾದರು. "ಅಡುಗೆ ಮಾಡುವುದು ಕೇವಲ ಹವ್ಯಾಸವಾಗಿದ್ದ ತಮಗೆ ಇಂತಹ ದೊಡ್ಡ ವೇದಿಕೆಯಲ್ಲಿ ಗೆಲುವು ಸಿಕ್ಕಿರುವುದು ಕನಸಿನಂತೆ ಭಾಸವಾಗುತ್ತಿದ್ದು, ಈ ಗೆಲುವು ಶೋನ ಎಲ್ಲಾ ಸ್ಪರ್ಧಿಗಳು ಮತ್ತು ಕುಕ್‌ಗಳ ಪರಿಶ್ರಮದ ಫಲ" ಎಂದು ಕಲರ್ಸ್ ಕನ್ನಡ ತಂಡಕ್ಕೆ ಧನ್ಯವಾದ ಅರ್ಪಿಸಿದರು.
ಈ ಬಾರಿಯ ಸೀಸನ್‌ನಲ್ಲಿ ನಟಿ ಮೇಘನಾ ರಾಜ್ ಹಾಗೂ ಖ್ಯಾತ ಶೆಫ್ ಕೌಶಿಕ್ ಶಂಕರ್ ತೀರ್ಪುಗಾರರಾಗಿ ಮಾರ್ಗದರ್ಶನ ನೀಡಿದ್ದು, ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಖ್ಯಾತಿಯ ನಟಿ ಸುಷ್ಮಾ ಕೆ. ರಾವ್ ತಮ್ಮ ಚುರುಕಾದ ನಿರೂಪಣೆಯ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದರು.