ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Pratham: ಪೊಲೀಸರ ಸಮ್ಮುಖದಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಯತ್ನ; ದೊಡ್ಡಬಳ್ಳಾಪುರ ಹೈಡ್ರಾಮಾ

Doddaballapura News: ದೊಡ್ಡಬಳ್ಳಾಪುರದಲ್ಲಿ ದಲಿತ ಸಂಘನೆಯ ಕಾರ್ಯಕರ್ತರು ನಟ ಪ್ರಥಮ್‌ ಅವರ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ (ಜು. 31) ಈ ಹೈಡ್ರಾಮಾ ನಡೆದಿದೆ. ಸದ್ಯ ಘಟನೆ ವಿಡಿಯೊ ವೈರಲ್‌ ಆಗಿದೆ.

ಪೊಲೀಸರ ಸಮ್ಮುಖದಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಯತ್ನ

Ramesh B Ramesh B Jul 31, 2025 10:24 PM

ದೊಡ್ಡಬಳ್ಳಾಪುರ: ಸ್ಯಾಂಡಲ್‌ವುಡ್‌ ನಟ, ಬಿಗ್‌ ಬಾಸ್‌ ಖ್ಯಾತಿಯ ಪ್ರಥಮ್‌ (Actor Pratham) ಮತ್ತೆ ಸುದ್ದಿಯಲ್ಲಿದ್ದಾರೆ. ದಲಿತ ಸಂಘನೆಯ ಕಾರ್ಯಕರ್ತರು ಅವರ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ಎಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ್ದಾಗ ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದರ್ಶನ್‌ ಫ್ಯಾನ್ಸ್‌ ಎನ್ನಲಾಗಿದ್ದ ಕೆಲವರ ವಿರುದ್ಧ ಪ್ರಥಮ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಮಹಜರಿಗೆ ದೊಡ್ಡಬಳ್ಳಾಪುರಕ್ಕೆ ತೆರಳಿದ್ದ ಅವರ ಮುಖಕ್ಕೆ ಪೊಲೀಸರ ಸಮ್ಮುಖದಲ್ಲೇ ಮಸಿ ಬಳಿಯಲು ಯತ್ನಿಸಲಾಗಿದೆ (Doddaballapura News). ಡಾ. ಬಿ.ಆರ್‌. ಅಂಬೇಡ್ಕರ್‌ ಅವರನ್ನು ಪ್ರಥಮ್‌ ಅವಮಾನಿಸಿದ್ದಾರೆ ಎಂದು ಆರೋಪಿಸಿ ಮುಖಕ್ಕೆ ಮಸಿ ಬಳಿಯಲು ದಲಿತ ಸಂಘಟನೆ ಕಾರ್ಯಕರ್ತರು ಪ್ರಯತ್ನಿಸಿದ್ದು, ಘಟನೆಯ ವಿಡಿಯೊ ವೈರಲ್‌ (Viral News) ಆಗಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಈ ಹೈಡ್ರಾಮಾ ನಡೆದಿದೆ. ಗುರುವಾರ (ಜು. 31) ಪ್ರಥಮ್ ಠಾಣೆಗೆ ಹಾಜರಾಗಿದ್ದರು. ವಿಚಾರಣೆ ಸಲುವಾಗಿ ಸ್ಥಳ ಮಹಜರಿಗೆ ಅವರನ್ನು ಕರೆದುಕೊಂಡು ಹೋಗಲಾಯಿತು. ಮಹಜರು ಮುಗಿಸಿ ಮತ್ತೆ ಠಾಣೆಗೆ ಕರೆತರಲಾಯಿತು. ಈ ವೇಳೆ ಅವರನ್ನು ದಲಿತ ಸಂಘಟನೆ ಕಾರ್ಯಕರ್ತರು ಪ್ರಶ್ನಿಸಿದರು. ಅಲ್ಲದೆ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದರು. ಕೂಡಲೇ ಪ್ರಥಮ್ ಅವರನ್ನು ರಕ್ಷಿಸಿದ ಪೊಲೀಸರು ಠಾಣೆಯೊಳಗೆ ಕರೆದೊಯ್ದರು.

ಈ ಸುದ್ದಿಯನ್ನೂ ಓದಿ: Actor Pratham: ಆಮರಣಾಂತ ಉಪವಾಸಕ್ಕೆ ಪ್ರಥಮ್ ನಿರ್ಧಾರ; ಹಲ್ಲೆ ಯತ್ನದ ಬಗ್ಗೆ ಸ್ಪಷ್ಟನೆ ನೀಡಲು ನಟ ದರ್ಶನ್‌ಗೆ ಆಗ್ರಹ

ಪ್ರಥಮ್‌ ದೂರಿನಲ್ಲಿ ಏನಿದೆ?

ʼʼದೊಡ್ಡಬಳ್ಳಾಪುರ ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ್ದಾಗ ನನ್ನನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆʼʼ ಎಂದು ಆರೋಪಿಸಿ ಪ್ರಥಮ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಯಶಸ್ವಿನಿ ಮತ್ತು ಬೇಕರಿ ರಘು ಎಂಬವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ʼʼಮಹೇಶ್ ಎಂಬವರ ಆಹ್ವಾನದ ಮೇರೆಗೆ ಜು. 22ರಂದು ನಾನು ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯದ ಯಲ್ಲಮ್ಮ ದೇವಸ್ಥಾನದ ಪೂಜೆಗೆ ಹೋಗಿದ್ದೆ. ಅಪರಾಹ್ನ 3:50ರ ಸುಮಾರಿಗೆ ಕಾರನ್ನು ಸುತ್ತುವರಿದ ಯಶಸ್ವಿನಿ, ಬೇಕರಿ ರಘು ಸೇರಿದಂತೆ ಅಪರಿಚಿತರು ನನ್ನನ್ನು ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು. ದರ್ಶನ್ ಬಗ್ಗೆ ಮಾತಾಡ್ತಿಯಾ ಅಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಡ್ರ್ಯಾಗರ್ ಮತ್ತು ಚಾಕು ತೋರಿಸಿ ಜೀವ ಬೆದರಿಕೆ ಸಹ ಹಾಕಿದ್ದರುʼʼ ಎಂದು ದೂರಿನಲ್ಲಿ ವಿವರಿಸಿದ್ದರು.

ದರ್ಶನ್‌ ಸ್ಪಷ್ಟನೆ ನೀಡಬೇಕು

ʼʼನನ್ನ ಮೇಲೆ ನಡೆದಿರುವ ಹಲ್ಲೆಗೆ ನಟ ದರ್ಶನ್‌ ಸ್ಪಷ್ಟನೆ ನೀಡಬೇಕು. ನನಗೆ ಹೆಚ್ಚು ಕಡಿಮೆಯಾದರೆ ನೀವೇ ಹೊಣೆ. ದರ್ಶನ್‌ ಫ್ಯಾನ್ಸ್‌ ಬಾಯಿ ಮುಚ್ಚಿಸಬೇಕು. ಯಾವುದೇ ನಟರ ಬಗ್ಗೆ ಟ್ರೋಲ್‌ ಮಾಡಬಾರದು. ನಿಮ್ಮ ಫ್ಯಾನ್ಸ್‌ಗೆ ಹೇಳಿ, ಇಲ್ಲವೆಂದರೆ ನೀವೇ ಜವಾಬ್ದಾರಿ. ಕನ್ನಡ ಚಿತ್ರರಂಗದಲ್ಲಿನ ಮಾಫಿಯಾ ನಿಲ್ಲಬೇಕು. ನೀವು ಸುಮ್ಮನೆ ಕೂತು ಮಜಾ ತೆಗೆದುಕೊಳ್ಳಬಾರದುʼʼ ಎಂದು ಪ್ರಥಮ್‌ ಮಂಗಳವಾರ ಕಿಡಿಕಾರಿದ್ದರು.

ಪ್ರಥಮ್‌ ವಿರುದ್ಧ ಧ್ರುವ ಸರ್ಜಾ ಕಿಡಿ

ಈ ಮಧ್ಯೆ ಅಚ್ಚರಿಯ ಬೆಳವಣಿಗೆಯಲ್ಲಿ ದರ್ಶನ್‌ ನೆರವಿಗೆ ಧ್ರವ ಸರ್ಜಾ ಧಾವಿಸಿದ್ದಾರೆ. ದರ್ಶನ್‌ ವಿರುದ್ಧ ಟೀಕಿಸುವಾಗ ಪ್ರಥಮ್‌ ವೈಯಕ್ತಿಕ ವಿಚಾರ ಕೆಣಕಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ʼʼಪ್ರಥಮ್ ಅವರ ವರ್ತನೆಯಿಂದ ನನಗೆ ಬೇಸರ ಆಗಿದೆ. ಈ ವಿಚಾರದಲ್ಲಿ ದರ್ಶನ್ ಪರ ನಿಲ್ಲುವುದು ನಮ್ಮ ಕರ್ತವ್ಯ. ಲಾಯರ್ ಜಗದೀಶ್ ಮಾತನ್ನು ಪ್ರಥಮ್ ಕೇಳಬೇಕಿತ್ತು. ಗೌರವ ಇಲ್ಲದ ರೀತಿಯಲ್ಲಿ, ನಿಂದಿಸುವ ಹಾಗೆ ಚಿಟಿಕೆಯೆಲ್ಲ ಹೊಡೆದು ಮಾತನಾಡುವ ಅವಶ್ಯಕತೆ ಇರಲಿಲ್ಲ ಎನಿಸುತ್ತದೆ’ʼ ಎಂದಿದ್ದಾರೆ.