KD ಟ್ರೇಲರ್‌ನಲ್ಲಿ ಧ್ರುವ ಸರ್ಜಾ ಅಬ್ಬರ: ಈ ಬಾರಿ ರಕ್ತಸಿಕ್ತ ರೌಡಿಸಂ ಲೋಕದ ಕಥೆ ಹೇಳ್ತಾರೆ ʻಜೋಗಿʼ ಪ್ರೇಮ್
ʻಜೋಗಿʼ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ 'ಕೆಡಿ' ಚಿತ್ರದ ಅದ್ದೂರಿ ಟ್ರೇಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. 1970-80ರ ದಶಕದ ರೆಟ್ರೋ ಹಿನ್ನೆಲೆಯಲ್ಲಿ ಅಂದಿನ ರೌಡಿಸಂ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಅಂತಹ ಘಟಾನುಘಟಿ ತಾರೆಯರು ಈ ಚಿತ್ರದಲ್ಲಿದ್ದು, ಟ್ರೇಲರ್‌ನ ಕೊನೆಯಲ್ಲಿ ಕಿಚ್ಚ ಸುದೀಪ್ ಅವರ ಶಾಡೋ ಲುಕ್ ಕುತೂಹಲ ಮೂಡಿಸಿದೆ.
-
ನಟ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ ಅಭಿನಯದ ʻಕೆಡಿʼ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ರಿಲೀಸ್ ಆಗಿದೆ. ʻಜೋಗಿʼ ಪ್ರೇಮ್ ನಿರ್ದೇಶನದ ಈ ಸಿನಿಮಾವು ಏಪ್ರಿಲ್ 30ರಂದು ತೆರೆಗೆ ಬರುತ್ತಿದ್ದು, ಅದಕ್ಕೂ ಮುನ್ನ ಟ್ರೇಲರ್ ಬಿಡುಗಡೆ ಮಾಡಿ, ʻಕೆಡಿʼ ಹೇಗಿರಬಹುದು ಎಂಬ ಝಲಕ್ ನೀಡಲಾಗಿದೆ. ಟ್ರೇಲರ್ ರಿಲೀಸ್‌ಗೆಂದೇ ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು ಚಿತ್ರತಂಡ.
ಹೇಗಿದೆ ಟ್ರೇಲರ್?
ʻಕೆಡಿʼ ಸಿನಿಮಾವು ಭರಪೂರ ಆಕ್ಷನ್ ದೃಶ್ಯಗಳನ್ನು ಒಳಗೊಂಡಿದೆ ಎಂಬುದಕ್ಕೆ ಟ್ರೇಲರ್‌ನಲ್ಲಿ ಭರ್ಜರಿ ಸಾಕ್ಷಿಗಳಿವೆ. ಆದರೆ, ಎಲ್ಲಿಯೂ ಕಥೆಯನ್ನು ಎಳೆಯನ್ನು ಪ್ರೇಮ್ ಬಿಟ್ಟುಕೊಟ್ಟಿಲ್ಲ. ಆದರೆ ಭಾರಿ ಪ್ರಮಾಣದಲ್ಲೇ ರಕ್ತವನ್ನು ಹರಿಸಿರುವುದು ಕಾಣಿಸಿದೆ. ಕ್ರೌರ್ಯ ಜಾಸ್ತಿ ಇರುವ ಈ ಸಿನಿಮಾವು ಮಾಸ್ ಆಡಿಯೆನ್ಸ್‌ಗೆ, ಅದರಲ್ಲೂ ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟವಾಗುವಂತಿದೆ. ಕಮರ್ಷಿಯಲ್ ಅಂಶಗಳು ಸಿನಿಮಾದಲ್ಲಿ ಜಾಸ್ತಿ ಇವೆ. ರೌಡಿಸಂ, ಹೊಡೆದಾಟದ ಜೊತೆಗೆ ಎಮೋಷನ್ಸ್‌ಗೂ ಇಲ್ಲಿ ಜಾಗವಿದೆ. ರೆಟ್ರೋ ಕಾಲದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಆ ಕಾಲಘಟ್ಟಕ್ಕೆ ತಕ್ಕಂತೆ ಸೆಟ್ ನಿರ್ಮಾಣ ಮಾಡಿ ಬಹುತೇಕ ಅದರಲ್ಲೇ ಚಿತ್ರೀಕರಣ ಮಾಡಲಾಗಿದೆ.
ರೀಷ್ಮಾ ನಾಣಯ್ಯಗೆ ಖಡಕ್ ರೋಲ್ ಸಿಕ್ಕಿದೆ. ಧ್ರುವ ಸರ್ಜಾ ಜೊತೆಗೆ ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದರೂ, ಡೈಲಾಗ್ಸ್ ಇಲ್ಲ. ಆದರೆ ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿಗೆ ಈ ಸಿನಿಮಾದಲ್ಲಿ ಬಹಳ ಮುಖ್ಯ ಪಾತ್ರಗಳು ಇರುವಂತಿದೆ. ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಗಮನಸೆಳೆಯುವಂತಿದೆ. ವಿಲೀಯಂ ಡೇವಿಡ್ ಅವರ ಛಾಯಾಗ್ರಹಣ ಕೂಡ ಹೈಲೈಟ್ ಆಗಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಪ್ರಿಲ್ 30ರಂದು ಈ ಸಿನಿಮಾ ತೆರೆಕಾಣಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿರುವುದಕ್ಕೆ ಟ್ರೇಲರ್‌ನಲ್ಲಿ ಸಾಕ್ಷಿ ಇದೆ.
ಕೆಡಿ ಸಿನಿಮಾದ ಟ್ರೇಲರ್ ಲಾಂಚ್ ಇವೆಂಟ್ ಲೈವ್
ಕೊನೆಯಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್
ಕೆಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಸುದೀಪ್ ಅವರ ಪಾತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ಹೈದರಾಬಾದ್‌ನಲ್ಲಿ ಶೂಟಿಂಗ್ ಮಾಡಿತ್ತು. ಇದೀಗ ರಿಲೀಸ್ ಆಗಿರುವ ಟ್ರೇಲರ್‌ನಲ್ಲೂ ಸುದೀಪ್ ಅವರನ್ನು ಟ್ರೇಲರ್‌ನ ಕೊನೆಯ ಶಾಟ್‌ನಲ್ಲಿ ತೋರಿಸಲಾಗಿದೆ. ಆದರೆ, ಮುಖವನ್ನು ತೋರಿಸಿಲ್ಲ. ಇನ್ನು, ನಟ ರವಿಶಂಕರ್ ಅವರು ಇಡೀ ಟ್ರೇಲರ್ ಅನ್ನು ನರೇಟ್ ಮಾಡಿದ್ದಾರೆ.