ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತೆರೆಮೇಲೆ ಬರಲಿದೆ ಸೌರವ್‌ ಗಂಗೂಲಿ ಬಯೋಪಿಕ್: 'ದಾದಾ' ಪಾತ್ರದಲ್ಲಿ ರಾಜ್‌ಕುಮಾರ್ ರಾವ್, ಗಮನಸೆಳೆದ ಫಸ್ಟ್ ಲುಕ್!

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜನ್ಮದಿನದ ಅಂಗವಾಗಿ ಅವರ ಬಹುನಿರೀಕ್ಷಿತ ಬಯೋಪಿಕ್ 'ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ' ಚಿತ್ರದ ಅಧಿಕೃತ ಫಸ್ಟ್-ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ದಾದಾ ಸಿನಿಮಾ ಫಸ್ಟ್‌ಲುಕ್ ರಿಲೀಸ್; ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ರಾವ್

-

Avinash GR
Avinash GR Jul 8, 2026 2:25 PM

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೌರವ್ ಗಂಗೂಲಿ ಅವರ ಜೀವನಗಾಥೆ ಈಗ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ. ಜುಲೈ 8 ರಂದು ಸೌರವ್ ಗಂಗೂಲಿ ಅವರ ಜನ್ಮದಿನದ ಅಂಗವಾಗಿ ಅವರ ಬಹುನಿರೀಕ್ಷಿತ ಬಯೋಪಿಕ್ 'ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ' (Dada – The Sourav Ganguly Story) ಚಿತ್ರದ ಅಧಿಕೃತ ಫಸ್ಟ್-ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಜೊತೆಗೆ ಈ ಸಿನಿಮಾವು 2027ರ ಮೇ 14ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.

ಲಾರ್ಡ್ಸ್ ಮೈದಾನದ ಐತಿಹಾಸಿಕ ಕ್ಷಣ ಮರುಸೃಷ್ಟಿ

ಚಿತ್ರದ ಫಸ್ಟ್-ಲುಕ್ ಪೋಸ್ಟರ್ ಕ್ರಿಕೆಟ್ ಪ್ರೇಮಿಗಳಲ್ಲಿ ರೋಮಾಂಚನ ಸೃಷ್ಟಿಸಿದೆ. 2002ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್ ಪಂದ್ಯದ ಐತಿಹಾಸಿಕ ಗೆಲುವಿನ ನಂತರ, ಲಾರ್ಡ್ಸ್ ಕ್ರೀಡಾಂಗಣದ ಗ್ಯಾಲರಿಯಲ್ಲಿ ನಿಂತು ಗಂಗೂಲಿ ಅವರು ತಮ್ಮ ಟೀ-ಶರ್ಟ್ ಬಿಚ್ಚಿ ಗಾಳಿಯಲ್ಲಿ ಬೀಸಿ ಸಂಭ್ರಮಿಸಿದ್ದ ಅವಿಸ್ಮರಣೀಯ ಕ್ಷಣವನ್ನು ಈ ಪೋಸ್ಟರ್‌ನಲ್ಲಿ ಮರುಸೃಷ್ಟಿಸಲಾಗಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾದದ್ದಕ್ಕೆ ಸಾಕ್ಷಿಯಾಗಿದ್ದ ಈ ರಗಡ್ ಲುಕ್‌ನೊಂದಿಗೆ ದಾದಾಗೆ ಚಿತ್ರತಂಡ ಜನ್ಮದಿನದ ಶುಭಾಶಯ ಕೋರಿದೆ.

'ದಾದಾ' ಆಗಿ ರಾಜ್‌ಕುಮಾರ್ ರಾವ್

ಈ ಬಯೋಪಿಕ್‌ನಲ್ಲಿ ಸೌರವ್ ಗಂಗೂಲಿ ಅವರ ಪ್ರಮುಖ ಪಾತ್ರದಲ್ಲಿ ಬಾಲಿವುಡ್‌ನ ಪ್ರತಿಭಾವಂತ ನಟ ರಾಜ್‌ಕುಮಾರ್ ರಾವ್ ನಟಿಸುತ್ತಿದ್ದಾರೆ. ಈ ಪೋಸ್ಟರ್ ಅನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸೌರವ್ ಗಂಗೂಲಿ, "ನನಗೆ ಸಿಕ್ಕ ಇದುವರೆಗಿನ ಅತ್ಯುತ್ತಮ ಉಡುಗೊರೆ ಇದು! ರಾಜ್‌ಕುಮಾರ್ ರಾವ್, ನೀವು ಪರದೆಯ ಮೇಲೆ ನನ್ನ ಸಿಗ್ನೇಚರ್ ಕವರ್ ಡ್ರೈವ್ ಆಡುವುದನ್ನು ನೋಡಲು ನಾನು ಕಾಯುತ್ತಿದ್ದೇನೆ" ಎಂದು ಬರೆದುಕೊಂಡು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.

ʻಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆ ಮಾಡಬೇಡಿʼ: ವೈಭವ್‌ ಸೂರ್ಯವಂಶಿ ಬಗ್ಗೆ ಸೌರವ್‌ ಗಂಗೂಲಿ ಅಚ್ಚರಿ ಹೇಳಿಕೆ!

ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದ ಸಿನಿಮಾ

ಈ ಚಿತ್ರವು ಗಂಗೂಲಿ ಅವರ ಆರಂಭಿಕ ದಿನಗಳ ಹೋರಾಟದಿಂದ ಹಿಡಿದು, ಭಾರತೀಯ ಕ್ರಿಕೆಟ್‌ನ ದಿಕ್ಸೂಚಿಯನ್ನೇ ಬದಲಾಯಿಸಿದ ಅವರ ನಾಯಕತ್ವ, ಧೈರ್ಯ ಮತ್ತು ದೃಢವಿಶ್ವಾಸದ ಪ್ರಯಾಣದ ಮೇಲೆ ಬೆಳಕು ಚೆಲ್ಲಲಿದೆಯಂತೆ. ಈ ಸಿನಿಮಾಗೆ ವಿಕ್ರಮಾದಿತ್ಯ ಮೋಟ್ವಾನೆ ಅವರು ನಿರ್ದೇಶನ ಮಾಡಿದ್ದು, ಲವ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಲವ್ ರಂಜನ್ ಮತ್ತು ಅಂಕುರ್ ಗರ್ಗ್ ನಿರ್ಮಾಣ ಮಾಡಿದ್ದಾರೆ.

ಸೌರವ್‌ ಗಂಗೂಲಿ ಹಂಚಿಕೊಂಡ ಟ್ವೀಟ್‌



ನಟಿ ತಾನ್ಯಾ ಮಾಣಿಕ್ತಲ ಅವರು ಗಂಗೂಲಿ ಪತ್ನಿ ಡೋನಾ ಗಂಗೂಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಬಂಗಾಳಿ ಚಿತ್ರರಂಗದ ಖ್ಯಾತ ಕಲಾವಿದರಾದ ಅಪರಾಜಿತಾ ಅಧ್ಯಾ (ತಾಯಿ ನಿರುಪಾ ಗಂಗೂಲಿ ಪಾತ್ರ) ಮತ್ತು ಶಾಶ್ವತ ಚಟರ್ಜಿ (ತಂದೆ ಚಂಡಿ ಗಂಗೂಲಿ ಪಾತ್ರ) ಚಿತ್ರದ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ.

ಸೌರವ್‌ ಗಂಗೂಲಿ ಹೆಸರಿನಲ್ಲಿ ನಕಲಿ ಪೋಸ್ಟ್‌: ಪೊಲೀಸ್‌ ದೂರು ದಾಖಲಿಸಿದ ದಾದಾ!

ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ

ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಎಕ್ಸ್ (X) ಜಾಲತಾಣದಲ್ಲಿ ಚಿತ್ರದ ಕುರಿತು ದೊಡ್ಡ ಚರ್ಚೆ ಆರಂಭವಾಗಿದೆ. ಗಂಗೂಲಿ ಅವರ ಅಪ್ಪಟ ಅಭಿಮಾನಿಗಳು ಬಯೋಪಿಕ್ ನೋಡಲು ಕಾತರರಾಗಿದ್ದು, ರಾಜ್‌ಕುಮಾರ್ ರಾವ್ ಅವರ ಅದ್ಭುತ ನಟನೆಯಲ್ಲಿ ದಾದಾ ಅವರ ಗಾಡ್-ಲೆವೆಲ್ ಕವರ್ ಡ್ರೈವ್‌ಗಳನ್ನು ನೋಡಲು ಕಾಯುತ್ತಿದ್ದೇವೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಆದರೆ, ಮತ್ತೊಂದು ವರ್ಗದ ರಾಜ್‌ಕುಮಾರ್ ರಾವ್ ಅವರ ಲುಕ್ ಈ ಪಾತ್ರಕ್ಕೆ ಅಷ್ಟಾಗಿ ಸೂಕ್ತವಾಗಿಲ್ಲ ಮತ್ತು ಪೋಸ್ಟರ್ ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದಂತೆ ಕಾಣುತ್ತಿದೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.