ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂದು ಸೀರಿಯಲ್‌ನಲ್ಲಿ ‌ʻಸ್ಟಾರ್‌ʼ ಆಗಿದ್ದ ದಿಲೀಪ್‌ ರಾಜ್‌ಗೆ ʻಬಾಯ್‌ಫ್ರೆಂಡ್‌ʼ ಸಿನಿಮಾದಲ್ಲಿ ಚಾನ್ಸ್‌ ಸಿಕ್ಕಿದ್ದೇಗೆ? ದರ್ಶನ್‌‌, ಪ್ರೇಮ್‌ಗೂ ಹೋಗಿತ್ತು ಈ ಚಿತ್ರದ ಆಫರ್!‌

ಕನ್ನಡದ ಪ್ರತಿಭಾವಂತ ನಟ ದಿಲೀಪ್ ರಾಜ್ ಅವರ ನಿಧನ ಸ್ಯಾಂಡಲ್‌ವುಡ್‌ನಲ್ಲಿ ಮೌನ ಆವರಿಸುವಂತೆ ಮಾಡಿದೆ. 'ಬಾಯ್‌ಫ್ರೆಂಡ್' ಚಿತ್ರದ ಮೂಲಕ ಹೀರೋ ಆಗಿ ಪದಾರ್ಪಣೆ ಮಾಡಿದ್ದ ಅವರ ಸಿನಿಮಾ ಪಯಣದ ಹಿಂದೆ ರೋಚಕ ಕಥೆಯಿದೆ. ದರ್ಶನ್ ಮತ್ತು ಪ್ರೇಮ್ ಅವರಂತಹ ಘಟಾನುಘಟಿ ನಟರಿಗೆ ಹೋಗಬೇಕಿದ್ದ ಸಿನಿಮಾ ಆಫರ್, ಅಂದು ದಿಲೀಪ್ ಪಾಲಾಗಿದ್ದರ ಬಗ್ಗೆ ಸಂಗೀತ ನಿರ್ದೇಶಕ ಕೆ.ಎಂ. ಇಂದ್ರ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ದರ್ಶನ್, ಪ್ರೇಮ್‌ಗೆ ಹೋಗಿದ್ದ ಸಿನಿಮಾ ಆಫರ್ ದಿಲೀಪ್ ರಾಜ್‌ ಪಾಲಾಗಿದ್ದೇಗೆ?

-

Avinash GR
Avinash GR May 13, 2026 3:07 PM

ಸ್ಯಾಂಡಲ್‌ವುಡ್‌ ನಟ ದಿಲೀಪ್‌ ರಾಜ್‌ ಅವರ ಅಕಾಲಿಕ ಸಾವು ದಿಗ್ಭ್ರಮೆಯನ್ನು ಉಂಟು ಮಾಡಿದೆ. 47ರ ಹರೆದ ದಿಲೀಪ್‌ ಅವರದ್ದು ಇನ್ನೂ ಬಾಳಿ ಬದುಕ ಬೇಕಿದ್ದ ಜೀವ. 2000ರ ಸಮಯದಲ್ಲಿ ಕಿರುತೆರೆಗೆ ಕಾಲಿಟ್ಟದ ದಿಲೀಪ್‌ ರಾಜ್, ಹಿರಿತೆರೆಯಲ್ಲೂ ಮಿಂಚಿದವರು. ಆದರೆ ಅವರ ಪ್ರತಿಭೆಗೆ ತಕ್ಕಂತಹ ಅವಕಾಶಗಳು ಸಿಗಲಿಲ್ಲ ಎಂಬುದು ವಿಪರ್ಯಾಸ. ಅಂದಹಾಗೆ, ದಿಲೀಪ್‌ ರಾಜ್‌ ಹೀರೋ ಆಗಿದ್ದ ʻಬಾಯ್‌ಫ್ರೆಂಡ್‌ʼ ಸಿನಿಮಾದ ಮೂಲಕ.

2005ರಲ್ಲಿ ತೆರೆಗೆ ಬಂದ ಈ ಸಿನಿಮಾದ ಹಾಡುಗಳು ಆ ಕಾಲಕ್ಕೆ ದೊಡ್ಡ ಹಿಟ್‌ ಆಗಿದ್ದವು. ಈ ಚಿತ್ರಕ್ಕೆ ಸಂಗೀತ ನೀಡಿದವರು ಕೆ. ಎಂ. ಇಂದ್ರ. ಇದೀಗ ದಿಲೀಪ್‌ ರಾಜ್‌ ನಿಧನರಾದ ಹಿನ್ನೆಲೆಯಲ್ಲಿ ಕೆ. ಎಂ. ಇಂದ್ರ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ, ಇಲ್ಲಿದೆ ಓದಿ.

ದಿಲೀಪ್‌ ನಿರ್ಗಮನದಿಂದ ಒಂದು ಮೌನ ಆವರಿಸಿದೆ

"ಚಂದಿರ... ಚಂದಿರ... ನಿದ್ದೆ ಯಾಕೋ ಬರ್ತಿಲ್ಲ... ಈ ಹಾಡಿನ ಮೂಲಕ ಕನ್ನಡಿಗರ ಮನಗೆದ್ದ ಸುಂದರ ನಟ ದಿಲೀಪ್ ರಾಜ್ ಈಗ ನೆನಪು ಮಾತ್ರ. ಈ ಕ್ಷಣ ಅವರ ನಿರ್ಗಮನದಿಂದ ಒಂದು ಶೂನ್ಯ ಮತ್ತು ಮೌನ ಆವರಿಸಿದೆ. 2003-04ರ ಅವಧಿಯಲ್ಲಿ ನಾನು 'ಬಾಯ್ ಫ್ರೆಂಡ್' ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದೆ. ನನ್ನ ಆತ್ಮೀಯ ಗೆಳೆಯ ರಾಮ್ ಜನಾರ್ದನ್ ಅವರ ಚೊಚ್ಚಲ ನಿರ್ದೇಶನದ ಈ ಕನಸಿಗೆ ನಾನು ಸಾಹಿತ್ಯ, ಸಂಭಾಷಣೆ ಮತ್ತು ಸಂಗೀತದ ಮೂಲಕ ಜೊತೆಯಾಗಿದ್ದೆ. ವಿಜಯನಗರದ ಮಾರುತಿ ಮಂದಿರದ ಎದುರಿಗಿದ್ದ ನಮ್ಮ ಸಿನಿಮಾ ಆಫೀಸಿನಲ್ಲಿ ಸದಾ ಸ್ಕ್ರಿಪ್ಟ್ ಚರ್ಚೆಗಳು ನಡೆಯುತ್ತಿದ್ದವು. ಅಂದು ನನ್ನ ಒಡನಾಡಿಯಾಗಿದ್ದ ಹುಡುಗ ವಿ. ಆನಂದ್ ಇಂದು ನಿರ್ದೇಶಕ ವಿಜಯಾನಂದ್ ಆಗಿ ಗುರುತಿಸಿಕೊಂಡಿದ್ದಾರೆ"

ʻನಮ್ಮ ತಂಡದಲ್ಲಿ ದಿಲೀಪ್‌ ರಾಜ್‌ಗೇ ಮೊದಲು ಪಾಪ್ಯುಲಾರಿಟಿ ಸಿಕ್ಕಿದ್ದುʼ; ಹಳೆಯ ದಿನಗಳನ್ನು ನೆನೆದ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌

ದರ್ಶನ್ ಅವರನ್ನೂ ಸಂಪರ್ಕಿಸಿದ್ದೆವು

"ಆಗ ಈ ಟಿವಿಯಲ್ಲಿ ಹಂಸಲೇಖ ಅವರ 'ಪ್ರೀತಿಗಾಗಿ" ಮೆಗಾ ಧಾರಾವಾಹಿ ಎಲ್ಲರ ಗಮನ ಸೆಳೆದಿತ್ತು. ಅದರಲ್ಲಿ ನಟಿಸುತ್ತಿದ್ದ ಇಬ್ಬರು ನಟರು ನನಗೆ ಬಹಳ ಇಷ್ಟವಾಗಿದ್ದರು; ಒಬ್ಬರು ಶ್ರೀನಗರ ಕಿಟ್ಟಿ ಮತ್ತು ಇನ್ನೊಬ್ಬರು ದಿಲೀಪ್ ರಾಜ್. ನಮ್ಮ ಚಿತ್ರದ ನಾಯಕನ ಆಯ್ಕೆಗಾಗಿ ನಾವು ನವೀನ್ ಕೃಷ್ಣ, ಶ್ರೀನಗರ ಕಿಟ್ಟಿ, ಪ್ರೇಮ್ ಹಾಗೂ ದರ್ಶನ್ ಅವರನ್ನೂ ಸಂಪರ್ಕಿಸಿದ್ದೆವು. ಆದರೆ, ಆಗ ಅವರು ಯಾವುದೋ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಆ ಸಮಯದಲ್ಲಿ ದಿಲೀಪ್ ರಾಜ್ ನಮ್ಮ ಚಿತ್ರದ ಕಚೇರಿಗೆ ಸ್ಕ್ರಿಪ್ಟ್ ಬರೆಯುವ ಸಮಯದಲ್ಲಿ ಅತಿಥಿಯಾಗಿ ಬರಲು ಶುರುಮಾಡಿದರು"

'ಬಾಯ್ ಫ್ರೆಂಡ್' ಚಿತ್ರದ ಮೂಲಕ ಬೆಳ್ಳಿಪರದೆಗೆ ಎಂಟ್ರಿ

"ದಿಲೀಪ್ ಅವರಲ್ಲಿದ್ದ ಒಬ್ಬ ಸೂಕ್ಷ್ಮ ನಟ ನಮಗೆ ಕಾಣಿಸತೊಡಗಿದ. ಮೊದಲು ಯಾವುದಾದರೂ ಒಂದು ಪಾತ್ರ ನೀಡೋಣ ಅಂದುಕೊಂಡಿದ್ದ ನಾವು, ಅವರ ಚಾತುರ್ಯ ಮತ್ತು ಆತ್ಮೀಯತೆಯನ್ನು ಕಂಡು ಅವರನ್ನೇ ಹೀರೋ ಮಾಡಿದರೆ ಹೇಗೆ ಎಂದು ಯೋಚಿಸಿದೆವು. ಕಿರಣ್ ಕುಮಾರ್ ಅವರ ಮೂಲಕ ಪರಿಚಯವಾದ ದಿಲೀಪ್ ಅವರನ್ನು ಹೀರೋ ಆಗಿ ಇಂಟ್ರೊಡ್ಯೂಸ್ ಮಾಡಬೇಕೆಂದು ನಾನು ನಿರ್ದೇಶಕರಲ್ಲಿ ಪಟ್ಟು ಹಿಡಿದೆ. ಅಲ್ಲಿಗೆ ದಿಲೀಪ್ ರಾಜ್ 'ಬಾಯ್ ಫ್ರೆಂಡ್' ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿಪರದೆಗೆ ನಾಯಕನಾಗಿ ಪಾದಾರ್ಪಣೆ ಮಾಡಿದರು"‌

ಹಾರ್ಟ್‌ ಚೆಕಪ್‌ ಮಾಡಿಸಿಕೊಳ್ಳೋಕೂ ಮುಂಚೆಯೇ ಇಹಲೋಕ ತ್ಯಜಿಸಿದ ದಿಲೀಪ್‌ ರಾಜ್;‌ ʻಬಾಯ್‌ಫ್ರೆಂಡ್‌ʼ ಬದುಕಲ್ಲಿ ವಿಧಿಯ ಅಟ್ಟಹಾಸ

'ಚಂದಿರ ಚಂದಿರ' ಹಾಡು ಸೂಪರ್ ಹಿಟ್ ಆಗಿತ್ತು

"ನಾನು ಬರೆದ ಒಂದೊಂದು ಡೈಲಾಗ್ ಅನ್ನು ಅವರು ಅನುಭವಿಸಿ ಹೇಳುತ್ತಿದ್ದ ರೀತಿ ಕಂಡಾಗ, ಈತ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನಟನಾಗಿ ನಿಲ್ಲುತ್ತಾರೆ ಎನ್ನುವ ಖಾತರಿ ನನಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನವೇ 'ಚಂದಿರ ಚಂದಿರ' ಹಾಡು ಸೂಪರ್ ಹಿಟ್ ಆಗಿತ್ತು. ದಿಲೀಪ್ ರಾಜ್ ಕಟೌಟ್ ಮಾಡಿಸಿದ್ದರು ನಿರ್ಮಾಪಕರು ಪವಿತ್ರ ಜಯರಾಮ್ ರವರು, ಶಶಿಧರ. ಆದರೆ, ಒಬ್ಬ ಪರಿಪೂರ್ಣ ನಟನಾಗಿದ್ದರೂ ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಬೆಳ್ಳಿಪರದೆ ಮೇಲೆ ಸಿಗಲಿಲ್ಲ ಎನ್ನುವುದು ವಿಷಾದದ ಸಂಗತಿ. 'ಮಿಲನ' ಮತ್ತು 'ಅಂಬಿ ನಿಂಗೆ ವಯಸ್ಸಾಯ್ತು' ಚಿತ್ರಗಳಲ್ಲಿ ಅವರು ತಮ್ಮ ನಟನಾ ಶಕ್ತಿ ತೋರಿದ್ದರು"

ಕೆ ಎಂ ಇಂದ್ರ ಅವರ ಪೋಸ್ಟ್‌



ಕನ್ನಡ ಚಿತ್ರರಂಗ ಅದ್ಭುತ ಪ್ರತಿಭೆಯನ್ನು ಕಳೆದುಕೊಂಡಿದೆ

"ಬಹಳ ದಿನ ಸಿನಿಮಾಗಳಿಗಾಗಿ ಕಾದ ಅವರು, ಜೀವನದ ಭದ್ರತೆಗಾಗಿ ಮತ್ತೆ ಕಿರುತೆರೆಯತ್ತ ವಾಲಿದರು. ಹೀರೋ ಆದ ಮೇಲೆ ಮತ್ತೆ ಸೀರಿಯಲ್ ಮಾಡುವುದು ಬೇಡ ಎಂದು ಅವರು ಪಟ್ಟ ಶ್ರಮ ಮತ್ತು ಅಂದು ನಾವು ನಡೆಸುತ್ತಿದ್ದ ಚರ್ಚೆಗಳು ಇಂದಿಗೂ ಹಸಿರಾಗಿವೆ. ನಾನು ಅವರನ್ನು ಯಾವಾಗಲೂ 'ಬಾಯ್ ಫ್ರೆಂಡ್' ಎಂದೇ ಕರೆಯುತ್ತಿದ್ದೆ. ಇಂದು ಮುಂಜಾನೆ ಚಂದಿರ ನಿರ್ಗಮಿಸಿದ್ದಾನೆ... ಕನ್ನಡ ಚಿತ್ರರಂಗ ಒಬ್ಬ ಸುಸಂಸ್ಕೃತ ಮತ್ತು ಅದ್ಭುತ ಪ್ರತಿಭೆಯನ್ನು ಕಳೆದುಕೊಂಡಿದೆ"