‘ಬಾವ ಬಾವ’ ಹಾಡಿನಿಂದ ಸದ್ದು ಮಾಡಿದ ʻಸಿಟಿಲೈಟ್ಸ್ʼ; ವಿಜಯ್ ಕುಮಾರ್ ನಿರ್ದೇಶನದಲ್ಲಿ ವಿನಯ್ ರಾಜ್‌ಕುಮಾರ್‌ಗೆ ಹೊಸ ಲುಕ್!
ನಟ ಮತ್ತು ನಿರ್ದೇಶಕ ದುನಿಯಾ ವಿಜಯ್ ಸಾರಥ್ಯದ ‘ಸಿಟಿಲೈಟ್ಸ್’ ಚಿತ್ರದ ‘ಬಾವ ಬಾವ’ ಎಂಬ ರ್ಯಾಪ್ ಸಾಂಗ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರದ ಮೂಲಕ ವಿಜಯ್ ಪುತ್ರಿ ಮೋನಿಷಾ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
-
ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಮತ್ತು ನಿರ್ದೇಶಕ ದುನಿಯಾ ವಿಜಯ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಸಿಟಿಲೈಟ್ಸ್' (Citylights) ಚಿತ್ರದ ಪ್ರಚಾರ ಕಾರ್ಯ ಅಧಿಕೃತವಾಗಿ ಆರಂಭವಾಗಿದೆ. ಈಚೆಗೆ ನಡೆದ ಅದ್ಧೂರಿ ಸುದ್ದಿಗೋಷ್ಠಿಯಲ್ಲಿ ಚಿತ್ರದ ಮೊದಲ 'ಬಾವ ಬಾವ' ಎಂಬ ರ್ಯಾಪ್ ಸಾಂಗ್ ಅನ್ನು ಬಿಡುಗಡೆ ಮಾಡಲಾಯಿತು. ಈ ಹಾಡಿನ ಮೂಲಕ ದುನಿಯಾ ವಿಜಯ್ ಮತ್ತೊಮ್ಮೆ ಪ್ರೇಕ್ಷಕರಿಗೆ ಟ್ರೆಂಡಿ ಮತ್ತು ಮಾಸ್ ಕಿಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೆ ಮ್ಯಾಜಿಕ್ ಮಾಡಿದ ಚರಣ್ ರಾಜ್
ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, 'ಬಾವ ಬಾವ' ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚರಣ್ ರಾಜ್, "ದುನಿಯಾ ವಿಜಯ್ ಅವರಿಗೆ ಸಿನಿಮಾದ ಹಾಡುಗಳು ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಇರುತ್ತದೆ. ಅವರು ಸದಾ ಒಂದಷ್ಟು ಹೊಸ ಐಡಿಯಾಗಳೊಂದಿಗೆ ಬರುತ್ತಾರೆ, ಇದು ನನಗೆ ಕೆಲಸ ಮಾಡಲು ತುಂಬಾ ಸಹಕಾರಿಯಾಗುತ್ತದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ʻಸಿಟಿಲೈಟ್ಸ್ʼ ಚಿತ್ರದ ಹೀರೋ ವಿನಯ್ ರಾಜ್‌ಕುಮಾರ್ ಮಾತನಾಡಿ, "ಚರಣ್ ರಾಜ್ ಸರ್ ಹತ್ತಿರ ಕೇವಲ ಒಂದು ಒಳ್ಳೆಯ ಹಾಡು ಕೇಳಿದ್ದೆ, ಆದರೆ ಅವರು ಐದು ಅದ್ಭುತ ಹಾಡುಗಳನ್ನು ನೀಡಿದ್ದಾರೆ" ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಿನಿಮಾ ಮೂಲಕ ದುನಿಯಾ ವಿಜಯ್ ಪುತ್ರಿ ಮೋನಿಷಾ ವಿಜಯ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ವಿನಯ್ ಅವರಂತಹ ಸರಳ ವ್ಯಕ್ತಿತ್ವದ ನಟನ ಜೊತೆ ಕೆಲಸ ಮಾಡಿದ್ದು ಹೊಸ ಅನುಭವ ನೀಡಿದೆ ಎನ್ನುತ್ತಾರೆ ಅವರು.
ʻಸಿಟಿಲೈಟ್ಸ್ʼ ಎಂಬ 'ಜವಾಬ್ದಾರಿ... ದೀಪಗಳು'
ನಿರ್ದೇಶಕ ದುನಿಯಾ ವಿಜಯ್ ಮಾತನಾಡಿ, "ರ್ಯಾಪ್ ಹಾಡುಗಳು ಸಾಮಾನ್ಯವಾಗಿ ಬದುಕಿನ ಕಷ್ಟಗಳನ್ನು ಹೇಳಿಕೊಳ್ಳುವ ಮಾಧ್ಯಮ. 'ಸಿಟಿಲೈಟ್ಸ್' ಚಿತ್ರದಲ್ಲಿ ಬೆಂಗಳೂರಿಗೆ ಬರುವ ಹಳ್ಳಿಯ ಯುವಕರು ಎದುರಿಸುವ ನೋವು ಮತ್ತು ಜವಾಬ್ದಾರಿಯನ್ನು ತೋರಿಸಲು ಹೊರಟಿದ್ದೇವೆ. ಈ ಕಥೆಗೆ ವಿನಯ್ ರಾಜ್‌ಕುಮಾರ್ ಅವರೇ ಸೂಕ್ತ ಎಂದು ನಂಬಿದ್ದೆ" ಎಂದಿದ್ದಾರೆ.
Duniya vijay: ದುನಿಯಾ ವಿಜಯ್ - ರಚಿತರಾಮ್ ನಟನೆಯ ʻಲ್ಯಾಂಡ್ ಲಾರ್ಡ್ʼ ಟೀಸರ್ ಔಟ್; ರಿಲೀಸ್ ಡೇಟ್ ಅನೌನ್ಸ್
ʻಬಾವ ಬಾವʼ ಹಾಡನ್ನು ಅಂಕಿತ್ ಕುಮಾರ್ ಬಾವ ಅವರೇ ಬರೆದು ಹಾಡಿದ್ದಾರೆ. ತಮ್ಮ ಹಳೆಯ ಹಾಡುಗಳನ್ನು ನೋಡಿ ವಿಜಯ್ ಸರ್ ಅವರು ತಮಗೆ ಈ ದೊಡ್ಡ ಅವಕಾಶ ನೀಡಿದ್ದಕ್ಕೆ ಅವರು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು. ಶಿವಸೇನಾ ಅವರ ಛಾಯಾಗ್ರಹಣ, ಮಾಸ್ತಿ ಅವರ ಸಂಭಾಷಣೆ ಹಾಗೂ ದೀಪು ಎಸ್. ಕುಮಾರ್ ಅವರ ಸಂಕಲನವಿರುವ ಈ ಚಿತ್ರವನ್ನು 'ದುನಿಯಾ ಟಾಕೀಸ್' ಮತ್ತು 'ಯಂತ್ರೋದ್ದಾರಕ' ಬ್ಯಾನರ್ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಂ ಆರ್ಯ ನಿರ್ಮಾಣ ಮಾಡಿದ್ದಾರೆ. 'ಜವಾಬ್ದಾರಿ... ದೀಪಗಳು' ಎಂಬ ಅಡಿಬರಹ ಹೊಂದಿರುವ ಈ ಸಿನಿಮಾವನ್ನು ಆದಷ್ಟು ಬೇಗ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.