ʻಬಿಗ್ ಬಾಸ್ ಕನ್ನಡ ಸೀಸನ್ 12ʼ ಶೋ ಫಿನಾಲೆ ತಲುಪಿದರೂ ತಪ್ಪುತ್ತಿಲ್ಲ ಸಂಕಷ್ಟ; ಸುದೀಪ್ ಹೇಳಿದ ಆ ಒಂದು ಮಾತಿನ ಬಗ್ಗೆ ಸಿಗಲಿದೆಯಾ ಸ್ಪಷ್ಟೀಕರಣ?
Bigg Boss Kannada 12 Finale: ಬಿಗ್ ಬಾಸ್ 12 ಫಿನಾಲೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಕಾರ್ಯಕ್ರಮಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ರಣಹದ್ದುಗಳ ಬಗ್ಗೆ ಮಾತನಾಡಿದ್ದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಅರಣ್ಯ ಇಲಾಖೆ ಈಗ ತಂಡಕ್ಕೆ ನೋಟಿಸ್ ನೀಡಿದೆ.
-
ಈ ಬಾರಿಯ ಕನ್ನಡ ಬಿಗ್ ಬಾಸ್ 12 ಶೋನಲ್ಲಿ ಎದುರಾಗಿರುವ ಸಂಕಷ್ಟಗಳು ಒಂದೊಂದಲ್ಲ. ಶೋ ಆರಂಭದಲ್ಲೇ ರೂಲ್ಸ್ ಬ್ರೇಕ್ ಕಾರಣಕ್ಕೆ ಒಂದು ದಿನ ಬಿಗ್ ಬಾಸ್ ಮನೆಗೆ ಬೀಗವನ್ನೇ ಹಾಕಲಾಗಿತ್ತು. ಇದೀಗ ಶೋ ಫಿನಾಲೆ ತಲುಪಿದೆ. ಆದರೂ ಸಂಕಷ್ಟಗಳು ಮಾತ್ರ ದೂರವಾಗುವಂತೆ ಕಾಣುತ್ತಿಲ್ಲ. ಕಳೆದ ಸಂಚಿಕೆಗಳಲ್ಲಿ ಸುದೀಪ್ ಹೇಳಿದ ಮಾತು ಈಗ ಬಿಗ್ ಬಾಸ್‌ಗೆ ಅರಣ್ಯ ಇಲಾಖೆಯಿಂದ ನೋಟಿಸ್ ಸಿಗುವಂತೆ ಮಾಡಿದೆ.
ಏನಿದು ಹೊಸ ಸಂಕಷ್ಟ?
'ಬಿಗ್ ಬಾಸ್' ಕನ್ನಡ ಸೀಸನ್ 12ರ ವಾರಾಂತ್ಯದ ಸಂಚಿಕೆಯೊಂದರಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ಸುದೀಪ್ ತಪ್ಪು ಮಾಹಿತಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ, ದೂರು ದಾಖಲಾಗಿತ್ತು. ''ರಣ ಹದ್ದು ಹೊಂಚು ಹಾಕಿ ಸಂಚು ಮಾಡಿ ಕರೆಕ್ಟ್ ಟೈಮಿಗೆ ಲಬಕ್ ಅಂತ ಹಿಡಿಯುವುದು" ಎಂದು ಸುದೀಪ್ ಹೇಳಿದ್ದರು. ಈ ಬಗ್ಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಅರಣ್ಯ ಇಲಾಖೆಗೆ ದೂರು ನೀಡಿತ್ತು. ಇದೀಗ ಈ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ 'ಬಿಗ್ ಬಾಸ್' ಟೀಮ್‌ಗೆ ಅರಣ್ಯ ಇಲಾಖೆಯಿಂದ ನೋಟೀಸ್ ಜಾರಿ ಆಗಿದೆ.
ದೂರಿನಲ್ಲಿ ಹೇಳಿದ್ದೇನು?
"ರಣಹದ್ದು ಸ್ವಭಾವದ ಕುರಿತು ಕಿಚ್ಚ ಸುದೀಪ್ ಅವರು ತಪ್ಪು ಮಾಹಿತಿ ನೀಡಿದ್ದಾರೆ. ರಣಹದ್ದುಗಳು ಸತ್ತ ಜೀವಿಗಳ ಶವ ತಿಂದು ಪರಿಸರ ಸ್ವಚ್ಛಗೊಳಿಸುತ್ತದೆ. ಆ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಪ್ರಮುಖ ಪಾತ್ರ ವಹಿಸುತ್ತವೆ. ಲಕ್ಷಾಂತರ ಜನ ನೋಡುವ ಕಾರ್ಯಕ್ರಮದಲ್ಲಿ ತಪ್ಪು ಮಾಹಿತಿಯಿಂದ ರಣಹದ್ದುಗಳ ಸಂರಕ್ಷಣೆಗೆ ಹಿನ್ನಡೆ ಆಗಲಿದೆ. ಈ ಬಗ್ಗೆ ಸುದೀಪ್ ಅವರು ಸ್ಪಷ್ಟೀಕರಣ ನೀಡಬೇಕು ಮತ್ತು ತಪ್ಪು ಗ್ರಹಿಕೆ ದೂರ ಮಾಡಲು ಕಾರ್ಯಕ್ರಮ ಆಯೋಜಕರಿಗೆ ಸೂಚನೆ ನೀಡಬೇಕು'' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಇದೀಗ ಫಿನಾಲೆ ಹೊತ್ತಿಗೆ ಆ ಬಗ್ಗೆ ನೋಟಿಸ್ ಜಾರಿ ಆಗಿದೆ.
ಬಿಗ್‌ಬಾಸ್‌ಗೆ ʻರಣ ಹದ್ದುʼ ಸಂಕಷ್ಟ; ನಟ ಕಿಚ್ಚ ಸುದೀಪ್ ವಿರುದ್ಧ ಅರಣ್ಯಾಧಿಕಾರಿಗೆ ದೂರು
ಜಾರಿಯಾದ ನೋಟಿಸ್‌ನಲ್ಲಿ ಏನಿದೆ?
"ಪರಿಸರ ಸಮತೋಲನ ಕಾಪಾಡುವ ರಣಹದ್ದುಗಳ ಬಗ್ಗೆ ಮುಂದಿನ ಪೀಳಿಗೆಗೆ ಸರಿಯಾದ ಮಾಹಿತಿ ಒದಗಿಸುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ, ರಣಹದ್ದು ಸ್ವಭಾವದ ಕುರಿತು ತಮ್ಮ ಮುಂದಿನ ಸಂಚಿಕೆಯಲ್ಲಿ ಸ್ಪಷ್ಟೀಕರಣ ನೀಡಬೇಕು" ಎಂದು ನೋಟೀಸ್‌ನಲ್ಲಿ ತಿಳಿಸಿದ್ದಾರೆ. ಸದ್ಯ ಈ ಕುರಿತು ಏನು ವಿವರಣೆ ಬಿಗ್ ಬಾಸ್ ಟೀಮ್‌ನಿಂದ ಬರಲಿದೆ ಎಂಬುದು ಗೊತ್ತಾಗಬೇಕಿದೆ.