ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Brindavihari Review: ಬೃಂದಾವನದಲ್ಲಿ ಮನಸೆಳೆವ ಮಾಧವನ ಫ್ಯಾಮಿಲಿಯ ಕಣ್ಣಾಮುಚ್ಚಾಲೆ ಆಟ!

ನಟ ಗಣೇಶ್‌ ಅಭಿನಯದ ʻಬೃಂದಾವಿಹಾರಿʼ ಸಿನಿಮಾ ತೆರೆಕಂಡಿದೆ. ಈ ಹಿಂದೆ‌ ಗಣೇಶ್‌ ಜೊತೆ ʻಕೃಷ್ಣಂ ಪ್ರಣಯ ಸಖಿʼ ಸಿನಿಮಾ ಮಾಡಿ ಗೆದ್ದಿದ್ದ ನಿರ್ದೇಶಕ ಶ್ರೀನಿವಾಸ ರಾಜು ಈ ಬಾರಿ ʻಬೃಂದಾವಿಹಾರಿʼ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಹಿಂದಿನಂತೆಯೇ ಈಗಲೂ ಈ ಜೋಡಿ ಮೋಡಿ ಮಾಡಿದೆಯೇ? ಇಲ್ಲಿದೆ ಸಿನಿಮಾ ವಿಮರ್ಶೆ.

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ನಟನೆಯ ʻಬೃಂದಾವಿಹಾರಿʼ ಸಿನಿಮಾ ಹೇಗಿದೆ?

-

Avinash GR
Avinash GR Nov 20, 2026 5:07 PM

ಸಿನಿಮಾ: ಬೃಂದಾವಿಹಾರಿ

ತಾರಾಗಣ: ಗಣೇಶ್, ಮಾಳವಿಕಾ ಶರ್ಮಾ, ದೇವಿಕಾ ಭಟ್‌, ರಾಮ್‌ಕುಮಾರ್‌, ಶ್ವೇತಾ, ಲಕ್ಷ್ಮೀ, ಅಶೋಕ್‌, ಕುರಿ ಪ್ರತಾಪ್‌, ರಂಗಾಯಣ ರಘು, ರಾಜೇಶ್‌ ನಟರಂಗ, ಸಂಗೀತಾ, ಚಿತ್ಕಲಾ ಬಿರಾದರ್‌, ಮಂಜು ಪಾವಗಡ, ಸಾಧುಕೋಕಿಲ, ಗಿರಿ ಮಹೇಶ್‌, ಅವಿನಾಶ್‌, ಅಚ್ಯುತ್‌ ಕುಮಾರ್.‌

ನಿರ್ದೇಶನ: ಶ್ರೀನಿವಾಸರಾಜು

ನಿರ್ಮಾಣ: ಸಮೃದ್ಧಿ ವಿ. ಮಂಜುನಾಥ್‌

ಸಂಗೀತ: ಹೇಶಮ್ ಅಬ್ದುಲ್ ವಹಾಬ್

ಅವಧಿ: 2 ಗಂಟೆ 39 ನಿಮಿಷ

ರೇಟಿಂಗ್: 3/5

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಮತ್ತು ನಿರ್ದೇಶಕ ಶ್ರೀನಿವಾಸ ರಾಜು ಕಾಂಬಿನೇಷನ್‌ನಲ್ಲಿ ಈ ಹಿಂದೆ ʻಕೃಷ್ಣಂ ಪ್ರಣಯ ಸಖಿʼ ಸಿನಿಮಾ ರಿಲೀಸ್‌ ಆಗಿತ್ತು. ಈಗ ಈ ಜೋಡಿಯು ಮತ್ತೊಮ್ಮೆ ಒಂದಾಗಿದ್ದು, ʻಬೃಂದಾವಿಹಾರಿʼ ಸಿನಿಮಾವನ್ನು ನೀಡಿದೆ. ಈ ಹಿಂದಿನಂತೆಯೇ ಈಗಲೂ ಗಣೇಶ್‌ ಮತ್ತು ಶ್ರೀನಿವಾಸ ರಾಜು ಜೋಡಿ ಮೋಡಿ ಮಾಡಿದೆಯೇ? ʻಬೃಂದಾವಿಹಾರಿʼ ಸಿನಿಮಾ ಪ್ರೇಕ್ಷಕರನ್ನು ಮನರಂಜನೆಯಲ್ಲಿ ವಿಹರಿಸುವಂತೆ ಮಾಡುತ್ತದೆಯೇ? ಮುಂದೆ ಓದಿ.

ʻಬೃಂದಾವಿಹಾರಿʼ ಕಥೆ ಏನು?

ಬೃಂದಾವನ ಎಂಬ ಊರಿನಲ್ಲಿ ಮಾಧವ (ಗಣೇಶ್)‌ ಎಂಬ ಮುದ್ದಾದ ಹುಡುಗನಿದ್ದಾನೆ. ಆ ಊರಿನಲ್ಲಿ ಬ್ರಿಟಿಷರದ್ದೇ ಆಳ್ವಿಕೆ. ಆ ಊರಿನ ಮುಖ್ಯದ್ವಾರವನ್ನು ದಾಟಿ ಯಾರೂ ಹೊರಗೆ ಹೋಗುವಂತಿಲ್ಲ. ಹೋದರೂ, ಅದಕ್ಕೆ ನೂರೆಂಟು ರೂಲ್ಸ್!‌ ಹಾಗಾಗಿ, ಮಾಧವ ಆ ಊರಿನಿಂದ ಆಚೆಯೇ ಹೋಗಿಲ್ಲ. ಅವನಿಗಾಗಿಯೇ ಅಜ್ಜ-ಅಜ್ಜಿ ಇದ್ದಾರೆ. ಮೂವರು ಸ್ನೇಹಿತರು, ಆಗಾಗ ಬಂದುಹೋಗುವ ಸಂಬಂಧಿಕರು ಎಲ್ಲರೂ ಇದ್ದಾರೆ. ಜೊತೆಗೆ ಹುಡುಗಿಯೊಬ್ಬಳ ಪ್ರೀತಿಯೂ ಇದೆ‌, ಹಾಗೆಯೇ ವಿರಹವೂ ಕೂಡ! ಇಷ್ಟೆಲ್ಲಾ ಮಂದಿಯ ಪ್ರೀತಿ ಪಡೆದಿರುವ ಮಾಧವನ ಬಾಳಲ್ಲಿ ಮುಂದೇನಾಗುತ್ತದೆ ಎಂಬ ಕುತೂಹಲದಲ್ಲೇ ಇರುವ ಪ್ರೇಕ್ಷಕರಿಗೆ, "ಇದ್ಯಾವುದೋ ಸ್ವಾತಂತ್ರ್ಯಪೂರ್ವದ ಕಥೆ ಇರಬಹುದಲ್ಲಾ" ಎನಿಸುವ ಹೊತ್ತಿಗೆ ನಿರ್ದೇಶಕರು ಅಲ್ಲೊಂದು ದೊಡ್ಡ ಟ್ವಿಸ್ಟ್‌ ಕೊಟ್ಟಿದ್ದಾರೆ.

ಶ್ರೀನಿವಾಸ ರಾಜು ಮೇಕಿಂಗ್‌ ಹೇಗಿದೆ?

ಇಂಟರ್‌ವಲ್‌ ಹೊತ್ತಿಗೆ ಬರುವ ಆ ಟ್ವಿಸ್ಟ್‌, ಇಡೀ ಕಥೆಯನ್ನೇ ಉಲ್ಟಾಪಲ್ಟಾ ಮಾಡಿಬಿಡುತ್ತದೆ. ಅಲ್ಲಿಯವರೆಗೂ ನಿರ್ದೇಶಕ ಶ್ರೀನಿವಾಸ ರಾಜು ತಾವು ಅಂದುಕೊಂಡಿದ್ದನ್ನು ತೆರೆಮೇಲೆ ಸಮರ್ಥವಾಗಿ ತಂದಿದ್ದಾರೆ. ಈ ಹಿಂದಿನ ʻಕೃಷ್ಣಂ ಪ್ರಣಯ ಸಖಿʼ ಸಿನಿಮಾ ಗೆದ್ದಮೇಲೆ, ಅಂಥದ್ದೇ ಮತ್ತೊಂದಿಷ್ಟು ಸಕ್ಸಸ್‌ ಫಾರ್ಮುಲಾವನ್ನು ಫಾಲೋ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಶ್ರೀನಿವಾಸ ರಾಜು ವಿಭಿನ್ನ ಎನಿಸುವುದು ಕಥೆಯ ಆಯ್ಕೆಯ ಕಾರಣಕ್ಕೆ. ಸ್ವಾತಂತ್ರ್ಯಪೂರ್ವದ ಕಥೆಯ ಜೊತೆಗೆ ರಿಯಾಲಿಟಿ ಶೋವೊಂದರ ಕಾನ್ಸೆಪ್ಟ್‌ ಎಳೆಯನ್ನು ಬಳಸಿಕೊಂಡಿರುವ ರೀತಿ ಗಮನಸೆಳೆಯುತ್ತದೆ. ಇದರಲ್ಲಿ ಕೇವಲ ಪ್ರೇಮಕಥೆ ಅಲ್ಲ, ತ್ರಿಕೋನ ಪ್ರೇಮಕಥೆ ಇದೆ. ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ಸ್‌ ಹೆಚ್ಚು ಕನೆಕ್ಟ್‌ ಆಗುತ್ತದೆ. ಹಾಸ್ಯಕ್ಕೂ ಜಾಗವಿದೆ. ಹಾಗೆಯೇ ಭರ್ಜರಿ ಫೈಟ್ಸ್‌ ಕೂಡ ಇವೆ. ಸಂಬಂಧಗಳ ಮೌಲ್ಯ ಮತ್ತು ಭಾವನೆಗಳ ಮಹತ್ವವನ್ನು ಸಾರುವ ಪ್ರಯತ್ನ ಇಲ್ಲಿದೆ. ಆದರೆ ಕೆಲವೆಡೆ ಲಾಜಿಕ್‌ ಮಿಸ್‌ ಆಗಿದೆ.

ಮಲಯಾಳಂನ ಹೇಶಮ್ ಅಬ್ದುಲ್ ವಹಾಬ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ‌ʻರಾಮ ರಾಮ..ʼ ಸಾಂಗ್‌ ಅತ್ಯುತ್ತಮವಾಗಿ ಮೂಡಿಬಂದಿದೆ. ಉಳಿದಂತೆ ಬೇರಾವ ಹಾಡುಗಳು ಅಷ್ಟೊಂದು ಕಿಕ್‌ ನೀಡುವುದಿಲ್ಲ. ಹಿನ್ನೆಲೆ ಸಂಗೀತ ಚೆನ್ನಾಗಿದೆ. ಛಾಯಾಗ್ರಹಣ ಮತ್ತು ಕಲಾ ನಿರ್ದೇಶನ ಚಿತ್ರದ ಪ್ಲಸ್‌ ಪಾಯಿಂಟ್‌. ನಿರ್ಮಾಪಕರು ಬಹಳ ಅದ್ದೂರಿಯಾಗಿಯೇ ಖರ್ಚು ಮಾಡಿರುವುದು ಪ್ರತಿ ದೃಶ್ಯದಲ್ಲೂ ಕಾಣಿಸುತ್ತದೆ. ಒಂದು ಸಣ್ಣ ಪಾತ್ರಕ್ಕೂ ಹಿರಿಯ ಹಾಗೂ ಅನುಭವಿ ಕಲಾವಿದರನ್ನೇ ಆಯ್ಕೆ ಮಾಡಿರುವುದು ವಿಶೇಷ. ಹಾಗಾಗಿ ಸಿನಿಮಾದ ತುಂಬೆಲ್ಲಾ ಸಾಕಷ್ಟು ಪರಿಚಿತ ಕಲಾವಿದರು ಕಾಣಸಿಗುತ್ತಾರೆ.

ದಸರಾ ಹಬ್ಬಕ್ಕೆ ಗಣೇಶ್ ನಟನೆಯ ‘ಬೃಂದಾವಿಹಾರಿ’‌ ಸಿನಿಮಾ ಉಡುಗೊರೆ ; ವಿಶ್ವಾದ್ಯಂತ 1,300ಕ್ಕೂ ಹೆಚ್ಚು ಪರದೆಗಳಲ್ಲಿ ರಿಲೀಸ್!

ಕಲಾವಿದರ ನಟನೆ ಹೇಗಿದೆ?

ನಟ ಗಣೇಶ್‌ ಅವರು ಇಡೀ ಸಿನಿಮಾದ ಹೈಲೈಟ್‌ ಎನ್ನಬಹುದು. ಚಿತ್ರದೊಳಗೆ ಸಾಕಷ್ಟು ಕಲಾವಿದರಿದ್ದರೂ, ಇಡೀ ಕಥೆ ಅವರ ಸುತ್ತವೇ ಸುತ್ತುತ್ತದೆ. ಇಡೀ ಚಿತ್ರದ ಕೇಂದ್ರಬಿಂದುವಾಗಿ ಅವರು ಮಿಂಚಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಎಮೋಷನಲ್‌ ಸೀನ್‌ನಲ್ಲಿ ಅತ್ಯುತ್ತಮ ನಟನೆ ನೀಡಿದ್ದಾರೆ. ಅಭಿಮಾನಿಗಳ ಕಣ್ಣಂಚನ್ನು ಒದ್ದೆ ಮಾಡುವ ಶಕ್ತಿ ಆ ಸೀನ್‌ಗೆ ಇದೆ. ನಾಯಕಿಯರಾಗಿ ಮಾಳವಿಕಾ ಶರ್ಮಾ ಮತ್ತು ದೇವಿಕಾ ಭಟ್‌ ನಟನೆ ಇಷ್ಟವಾಗುತ್ತದೆ. ಇಬ್ಬರಿಗೂ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಸಿಕ್ಕ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡಿದ್ದಾರೆ. ಕುರಿ ಪ್ರತಾಪ್‌, ಜಗ್ಗಪ್ಪ, ಮಂಜು ಪಾವಗಡ ಆಗಾಗ ನಗಿಸುತ್ತಾರೆ. ಬಹಳ ದಿನಗಳ ನಂತರ ನಟ ರಾಮ್‌ಕುಮಾರ್‌ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಸಾಧುಕೋಕಿಲ ಇರುವ ಕಾಮಿಡಿ ದೃಶ್ಯಗಳಲ್ಲಿನ ಸಂಭಾಷಣೆ ತುಸು ಬೇಸರ ಮೂಡಿಸುತ್ತವೆ.

ಒಟ್ಟಾರೆ, ವಿಭಿನ್ನ ಕಥೆ ಇಷ್ಟಪಡುವವರು, ಅದರಲ್ಲೂ ಗಣೇಶ್‌ ಅವರ ಎಮೋಷನಲ್‌ ನಟನೆಯನ್ನು ಆಹ್ಲಾದಿಸುವವರು ಈ ಸಿನಿಮಾವನ್ನು ಆರಾಮಾಗಿ ನೋಡಬಹುದು.