ʻನವರಸ ನಾಯಕʼ ಜಗ್ಗೇಶ್ ಹೊಸ ಸಿನಿಮಾ ಅನೌನ್ಸ್; ʻಭರತʼ ಚಿತ್ರಕ್ಕೆ ಮಕ್ಕಳೇ ನಿರ್ದೇಶಕರು!
ನಟ ಜಗ್ಗೇಶ್ ಅವರ ‘ಭರತ’ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದ್ದು, ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ಅವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮಕ್ಕಳ ಕಥೆ ಕೇಳಿ ಬೆರಗಾದ ಜಗ್ಗೇಶ್, ಭಾವುಕರಾಗಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
-
ಕನ್ನಡ ಚಿತ್ರರಂಗದ ‘ನವರಸ ನಾಯಕ’ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಸಣ್ಣ ವಿರಾಮದ ಬಳಿಕ ಮತ್ತೆ ಬಣ್ಣದ ಲೋಕದಲ್ಲಿ ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾಗಲು ಸಜ್ಜಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಮುನ್ಸೂಚನೆ ನೀಡಿರುವ ಜಗ್ಗೇಶ್, ಇದೀಗ ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರ ‘ಭರತ’ವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಸಿನಿಮಾದ ಅತ್ಯಂತ ವಿಶೇಷ ಸಂಗತಿಯೆಂದರೆ, ಜಗ್ಗೇಶ್ ಅವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಂತಸದ ವಿಚಾರವನ್ನು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಭಾವುಕ ಬರಹದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮಕ್ಕಳನ್ನು ಬೇರೆಯವರ ಜೊತೆ ಹೋಲಿಸುವುದು
ತಮ್ಮ ಬಾಲ್ಯದ ಕಹಿ ನೆನಪುಗಳು ಮತ್ತು ಪೋಷಕರ ಮನೋಭಾವದ ಬಗ್ಗೆ ಬರೆದುಕೊಂಡಿರುವ ಜಗ್ಗೇಶ್, "ನಮ್ಮ ತಂದೆ ಹಾಗೂ ಬಂಧು-ಮಿತ್ರರು ಬಾಲ್ಯದಲ್ಲಿ ಮಾಡಿದ ಒಂದು ದೊಡ್ಡ ತಪ್ಪೆಂದರೆ, ಬೇರೆಯವರ ಮಕ್ಕಳನ್ನು ಹೊಗಳಿ ತಮ್ಮ ಮಕ್ಕಳನ್ನು ತೆಗಳುವುದು. ಇದರಿಂದ ನಾನು ಪ್ರತಿದಿನ ಒಬ್ಬನೇ ಕುಳಿತು ಅಳುತ್ತಿದ್ದೆ. ಬಹುತೇಕ ತಂದೆಯರು ತಮ್ಮಂತೆಯೇ ಮಕ್ಕಳೂ ಆಗಬೇಕು ಎಂಬ ಅತಿಯಾದ ಆತುರದಲ್ಲಿ ಈ ತಪ್ಪು ಮಾಡುತ್ತಾರೆ. ಆದರೆ, ಮಕ್ಕಳ ಮನೋವಿಜ್ಞಾನದ ದೃಷ್ಟಿಯಿಂದ ಇದು ಸರಿಯಲ್ಲ. ಇಂತಹ ವರ್ತನೆಯಿಂದ ಮಕ್ಕಳಲ್ಲಿ ಕೋಪ, ಹತಾಶೆ ಬೆಳೆದು, ಮನಸ್ಸಿನ ನೆಮ್ಮದಿಗಾಗಿ ಬೇಡದ ಸಹವಾಸಕ್ಕೆ ಬಿದ್ದು ದಾರಿ ತಪ್ಪುವ ಅಪಾಯವಿರುತ್ತದೆ. ನನ್ನ ಯೌವನದ ದಿನಗಳಲ್ಲೂ ಇದೇ ಕಾರಣಕ್ಕೆ ನಾನು ದಾರಿ ತಪ್ಪಿದ್ದೆ" ಎಂದು ತಮ್ಮ ಜೀವನದ ಹಳೆಯ ಪುಟಗಳನ್ನು ತೆರೆದಿಟ್ಟಿದ್ದಾರೆ.
Actor Jaggesh: ಮೊಮ್ಮಗನ ಜೊತೆ ಸಂತೋಷದ ಕ್ಷಣ ಹಂಚಿಕೊಂಡ ಜಗ್ಗೇಶ್! ತಾತನನ್ನು ನೆನದು ಭಾವುಕ
ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ
ಮುಂದುವರಿದು ತಮ್ಮ ಜೀವನದ ತಿರುವು ಮತ್ತು ಮಕ್ಕಳನ್ನು ಬೆಳೆಸಿದ ರೀತಿಯನ್ನು ವಿವರಿಸಿರುವ ಅವರು, "ಅಂದು ನನ್ನ ಅಮ್ಮನ ವಾತ್ಸಲ್ಯ ನನ್ನನ್ನು ಆಧ್ಯಾತ್ಮಿಕತೆಯ ಹಾದಿಗೆ ಕರೆದೊಯ್ದಿತು. ತಪ್ಪು ಮಾಡಿದರೆ ದೇವರ ದಂಡನೆ ಖಚಿತ ಎಂಬ ಭಯ ನನ್ನನ್ನು ಎಚ್ಚರಿಸಿತು. ಕೊನೆಗೆ ಬಿಎಸ್ಸಿ ಪದವಿ ಮುಗಿಸಿ, ಚಿತ್ರರಂಗದಲ್ಲಿ ತೆವಳುತ್ತಾ, ಕುಂಟುತ್ತಾ ಮೆಲ್ಲನೆ ಹೆಜ್ಜೆಯೂರಿ ನಿಂತುಕೊಂಡೆ. ಆದರೆ, ನನ್ನ ಮಕ್ಕಳ ವಿಚಾರದಲ್ಲಿ ನಾನು ಅವರಿಗೆ ಯಾವುದೇ ನಿರ್ಬಂಧ ಹೇರಲಿಲ್ಲ. ಬಿದ್ದರೂ ನೀವೇ ಮೇಲೇಳಿ ಎಂದು ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಮತ್ತು ಸೆಲೆಬ್ರಿಟಿ ಜೀವನದ ಪ್ರಭಾವದಿಂದಲೂ ಅವರನ್ನು ದೂರವಿಟ್ಟೆ" ಎಂದು ಹೇಳಿದ್ದಾರೆ.
ಗೆಟ್ ರೆಡಿ... ನನಗೆ ಸಿನಿಮಾ ಮಾಡಿ
ಮಕ್ಕಳ ಪ್ರತಿಭೆಯನ್ನು ಕಂಡು ಬೆರಗಾದ ಕ್ಷಣವನ್ನು ಹಂಚಿಕೊಂಡಿರುವ ಜಗ್ಗೇಶ್, "ಇಂದು ನನ್ನಿಬ್ಬರು ಮಕ್ಕಳು ತಮ್ಮದೇ ಆದ ಸಣ್ಣಪುಟ್ಟ ಪ್ರಯತ್ನಗಳ ಮೂಲಕ, ನನಗೆ ತಿಳಿಯದಂತೆಯೇ ಚಿತ್ರರಂಗದ ಹಲವು ತಾಂತ್ರಿಕ ವಿಚಾರಗಳನ್ನು ಕಲಿತು ನನ್ನ ಮುಂದೆ ಬಂದು ನಿಂತಿದ್ದಾರೆ. ಅವರು ನನಗೆ ಚಿತ್ರಕಥೆ ಹೇಳಲು ಆರಂಭಿಸಿದಾಗ, 'ನನಗೆ ಎಲ್ಲವೂ ಗೊತ್ತು' ಎಂಬ ನನ್ನ ಭ್ರಮೆ ಕ್ಷಣಮಾತ್ರದಲ್ಲಿ ಮಾಯವಾಯಿತು. ತಂದೆ ಎಂಬುದನ್ನೂ ಮರೆತು ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಅವರ ಕಥೆ ಕೇಳಿ ನಿಜಕ್ಕೂ ಮೂಕವಿಸ್ಮಿತನಾದೆ. ತಕ್ಷಣವೇ ತುಂಬಾ ಧೈರ್ಯದಿಂದ ‘ಗೆಟ್ ರೆಡಿ... ನನಗೆ ಸಿನಿಮಾ ಮಾಡಿ’ ಎಂದು ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ನಿರೀಕ್ಷೆಯನ್ನು ಹುಟ್ಟುಹಾಕಿದ ʻಭರತʼ
‘ಭರತ’ ಚಿತ್ರದ ಮೊದಲ ಪತ್ರಿಕಾ ಪ್ರಕಟಣೆ ಈಗಾಗಲೇ ಹೊರಬಂದಿದ್ದು, ಮುಂಬರುವ ಜನವರಿ 15ರಿಂದ ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಲಿದೆ. "ಕನ್ನಡ ನನ್ನ ಉಸಿರು, ಕನ್ನಡಿಗರು ನನ್ನ ಬಂಧುಬಳಗ. ನಮ್ಮ ಮಕ್ಕಳ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಇರಲಿ" ಎಂದು ಜಗ್ಗೇಶ್ ಸಮಸ್ತ ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ತಂದೆಯ ಸಿನಿಮಾಗೆ ಮಕ್ಕಳೇ ನಿರ್ದೇಶನ ಮಾಡುತ್ತಿರುವುದು ಸ್ಯಾಂಡಲ್ವುಡ್ನಲ್ಲಿ ಭಾರೀ ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿದೆ.