Shankarabharanna Review: ಹೆದರಿಸುವ ಬಸ್ನಲ್ಲಿ ನಗಿಸುವ ಶಂಕರ; ಹಾರರ್ ಹಾದಿಯಲ್ಲಿ ಪ್ರಯಾಣ ಸುಖಕರ!
Shankarabharana Kannada Movie Review: ಶೈನ್ ಶೆಟ್ಟಿ ನಟನೆಯ ʻಶಂಕರಾಭರಣʼ ಹಾರರ್, ಸಸ್ಪೆನ್ಸ್ ಮತ್ತು ತಿಳಿಹಾಸ್ಯದ ಹದವಾದ ಮಿಶ್ರಣದೊಂದಿಗೆ ಪ್ರೇಕ್ಷಕರನ್ನು ರಂಜಿಸುವ ವಿಭಿನ್ನ ಪ್ರಯತ್ನವಾಗಿದೆ. ಬಸ್ ಚಾಲಕ ಶಂಕರನಾಗಿ ಶೈನ್ ಶೆಟ್ಟಿ ಸಹಜ ಅಭಿನಯದ ಮೂಲಕ ಗಮನ ಸೆಳೆಯುತ್ತದೆ.
-
ಸಿನಿಮಾ: ಶಂಕರಾಭರಣ
ತಾರಾಗಣ: ಶೈನ್ ಶೆಟ್ಟಿ, ತನ್ವಿ ರಾವ್, ಸಂಪತ್ ರಾಜ್, ತನ್ವಿ ರಾಮ್, ದೀಪಕ್ ರೈ ಪಾಣಾಜೆ, ಅನಿಲ್ ಕುಮಾರ್, ಮೈಮ್ ರಾಮ್ದಾಸ್, ಕೃತಿ ಶೆಟ್ಟಿ
ನಿರ್ದೇಶನ: ಸುಮಂತ್ ಭಟ್
ಸಂಗೀತ: ಚರಣ್ ರಾಜ್
ಅವಧಿ: 2 ಗಂಟೆ 32 ನಿಮಿಷ
ರೇಟಿಂಗ್: 3/5
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರದ ಪ್ರಯೋಗಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅದೇ ಸಾಲಿಗೆ ಸೇರುವ ಹೊಸ ಪ್ರಯತ್ನ ‘ಶಂಕರಾಭರಣ’. ʻಬಿಗ್ ಬಾಸ್ʼ ಖ್ಯಾತಿಯ ಶೈನ್ ಶೆಟ್ಟಿ ನಾಯಕನಾಗಿ ನಟಿಸಿ, ನಿರ್ಮಾಣದಲ್ಲೂ ಕೈಜೋಡಿಸಿರುವ ಈ ಚಿತ್ರವು ಹಾರರ್, ಸಸ್ಪೆನ್ಸ್ ಮತ್ತು ಲೈಟ್ ಕಾಮಿಡಿಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ. ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಒಂದು ಹಳೆಯ ಬಸ್ ಕೂಡ ಪ್ರಮುಖ ಪಾತ್ರವಾಗಿ ಕಾಣಿಸಿಕೊಂಡಿರುವುದು ವಿಶೇಷ.
‘ಶಂಕರಾಭರಣ’ ಕಥೆ ಏನು?
ಶಂಕರನಿಗೆ (ಶೈನ್ ಶೆಟ್ಟಿ) ಬಾಲ್ಯದಿಂದಲೂ ಬಸ್ ಓಡಿಸುವುದೆಂದರೆ ಎಲ್ಲಿಲ್ಲದ ಪ್ರೀತಿ. ಶಾಲೆಯಲ್ಲಿ ಓದುವಾಗಲೇ ಅಪ್ಪನ ಓಡಿಸುತ್ತಿದ್ದ ಬಸ್ಸಿನ ಸ್ಟೇರಿಂಗ್ ಸೀಟ್ ಮೇಲೆ ಕುಳಿತು, ಬಸ್ ಚಲಾಯಿಸಿದ ಕಿಲಾಡಿ! ‘ನಾನು ಡ್ರೈವರ್ ಆಗಿ ಹುಟ್ಟಿಲ್ಲ, ಡ್ರೈವರ್ ಆಗಲು ಹುಟ್ಟಿದವನು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶಂಕರ, ದೊಡ್ಡವನಾದ ಮೇಲೆ ಬಸ್ ಚಾಲಕನಾಗುತ್ತಾನೆ. ಆದರೆ, ಮಾಲೀಕನೊಂದಿಗೆ ನಡೆಯುವ ಮನಸ್ತಾಪದಿಂದಾಗಿ ತಾನೇ ಸ್ವಂತ ಬಸ್ ಖರೀದಿಸುವ ನಿರ್ಧಾರಕ್ಕೆ ಬರುತ್ತಾನೆ. ತಾಯಿಯ ಆಭರಣಗಳನ್ನು ಅಡವಿಟ್ಟು, ಸಾಲ ಮಾಡಿ ಖರೀದಿಸಿದ ಬಸ್ಸಿಗೆ ‘ಶಂಕರಾಭರಣ’ ಎಂದು ನಾಮಕರಣ ಮಾಡುತ್ತಾನೆ.
ಆದರೆ, ಶಂಕರನ ಬಸ್ಸಿಗೆ ಸಿಗುವುದು ಮಾತ್ರ ಹತ್ತಾರು ವರ್ಷಗಳಿಂದ ವಾಹನ ಸಂಚಾರವೇ ಇಲ್ಲದ ‘ತೌಡುಗೋಳಿ’ ಎಂಬ ಭಯಾನಕ ರೂಟ್. ಆ ಊರಿನಲ್ಲಿ ದೆವ್ವದ ಕಾಟವಿದೆ ಎಂಬ ಭಯ ಒಂದೆಡೆಯಾದರೆ, ಪಿ.ಟಿ. ಸುಧಾಕರ್ (ಸಂಪತ್ ರಾಜ್) ಎಂಬ ಕ್ರೂರ ವಿಲನ್ ಅಟ್ಟಹಾಸ ಮತ್ತೊಂದೆಡೆ. ಅಷ್ಟಕ್ಕೂ ಆ ಊರಿನಲ್ಲಿ ನಿಜಕ್ಕೂ ದೆವ್ವ ಇದೆಯಾ? ಹೆಣ್ಣುಮಕ್ಕಳು ನಿಗೂಢವಾಗಿ ಕಾಣೆಯಾಗುತ್ತಿರುವುದರ ಹಿಂದಿನ ರಹಸ್ಯವೇನು? ಶಂಕರ ಈ ಎಲ್ಲಾ ಅಡೆತಡೆಗಳನ್ನು ದಾಟಿ ತನ್ನ ಬಸ್ ಪಯಣವನ್ನು ಯಶಸ್ವಿಯಾಗಿ ಪೂರೈಸುತ್ತಾನಾ ಎಂಬುದೇ ಚಿತ್ರದ ಜೀವಾಳ.
ಬಸ್ ಓಡಿಸುತ್ತಾ ರಾಜ್ಯ ಸುತ್ತುತ್ತಿರುವ ನಟ ಶೈನ್ ಶೆಟ್ಟಿ; ʻಶಂಕರಾಭರಣʼ ಸಿನಿಮಾಗೆ ಸಾಥ್ ನೀಡಿದ ರಾಜ್ ಬಿ. ಶೆಟ್ಟಿ
ಮೇಕಿಂಗ್ ಹೇಗಿದೆ?
ಚಿತ್ರದ ಮೊದಲಾರ್ಧವು ಅತ್ಯಂತ ವೇಗವಾಗಿ ಮತ್ತು ಲವಲವಿಕೆಯಿಂದ ಸಾಗುತ್ತದೆ. ಹಾರರ್, ಸಸ್ಪೆನ್ಸ್ ಜೊತೆಗೆ ಕಾಮಿಡಿ ದೃಶ್ಯಗಳು ಹದವಾಗಿ ಬೆರೆತಿದ್ದು, ಇಂಟರ್ವೆಲ್ ಬರುವುದೇ ತಿಳಿಯದಷ್ಟು ಎಂಗೇಜಿಂಗ್ ಆಗಿದೆ. ಮಧ್ಯಂತರದ ವೇಳೆಗೆ ಎದುರಾಗುವ ಟ್ವಿಸ್ಟ್ ದ್ವಿತೀಯಾರ್ಧದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಸುತ್ತದೆ. ಆದರೆ, ಸೆಕೆಂಡ್ ಹಾಫ್ನಲ್ಲಿ ಬಸ್ಸಿನ ವೇಗ ಕೊಂಚ ತಗ್ಗಿದಂತೆ ಭಾಸವಾಗುತ್ತದೆ. ಚರಣ್ ರಾಜ್ ಸಂಗೀತದಲ್ಲಿ ಸಿದ್ ಶ್ರೀರಾಮ್ ಹಾಡಿರುವ ‘ಸಖಿಯೇ’ ಗೀತೆ ಇಂಪಾಗಿದೆ. ಇಲ್ಲಿ ಬಜೆಟ್, ಅದ್ದೂರಿತನಕ್ಕಿಂತ ಕಂಟೆಂಟ್ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹಾಗಂತ, ಸಿನಿಮಾದ ಗುಣಮಟ್ಟಕ್ಕೇನೂ ಕುಂದು ಉಂಟಾಗಿಲ್ಲ. ಕಥೆಯಲ್ಲಿ ಒಂದಷ್ಟು ಕಡೆ ಲಾಜಿಕ್ ಮಿಸ್ ಆಗಿದೆ ಎಂಬ ಫೀಲ್ ಬರುತ್ತದೆ. ಅತ್ತವೂ ನಿರ್ದೇಶಕರು ಕೊಂಚ ಗಮನಹರಿಸಬಹುದಿತ್ತು.
ಡ್ರೈವರ್ ಆಗಿ ಮಿಂಚಿದ ಶೈನ್ ಶೆಟ್ಟಿ!
ಶಂಕರನ ಪಾತ್ರದಲ್ಲಿ ಶೈನ್ ಶೆಟ್ಟಿ ಜೀವ ತುಂಬಿದ್ದಾರೆ. ಅವರ ಅಭಿನಯದಲ್ಲಿ ಸಹಜತೆಯಿದ್ದು, ನಗಿಸುತ್ತಲೇ ಭಾವುಕರನ್ನಾಗಿಸುತ್ತಾರೆ. ಮಾತು ಬಾರದ ಮುಗ್ಧ ಹುಡುಗಿ ಶ್ರೀಕಲಾ ಪಾತ್ರದಲ್ಲಿ ತನ್ವಿ ರಾವ್ ಮುದ್ದಾಗಿ ಕಾಣಿಸಿಕೊಂಡಿದ್ದು, ದೆವ್ವವಾಗಿ ಕಾಣಿಸಿಕೊಳ್ಳುವ ಅವರ ಪಾತ್ರ ವಿಭಿನ್ನವಾಗಿದೆ. ಕೆಟ್ಟವರನ್ನು ಹೆದರಿಸುತ್ತಾ, ಒಳ್ಳೆಯವರ ಜೊತೆ ಸ್ನೇಹಿತೆಯಂತೆ ವರ್ತಿಸುವ ದೆವ್ವದ ಪರಿಕಲ್ಪನೆ ಇಷ್ಟವಾಗುತ್ತದೆ. ನಾಯಕಿ ತನ್ವಿ ರಾಮ್ ಅವರಿಗೆ ಸಿಕ್ಕಿರುವುದು ಕಡಿಮೆ ಅವಕಾಶವಾದರೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಿಲನ್ ಪಾತ್ರದಲ್ಲಿ ಸಂಪತ್ ರಾಜ್ ಖಡಕ್ ಆಗಿ ಕಾಣಿಸಿಕೊಂಡಿದ್ದರೆ, ಅಬ್ಬು ಅಂಕಲ್, ಯೋಕೋ, ದೀಪಕ್ ರೈ ಪಾಣಾಜೆ ಹಾಗೂ ಅನಿಲ್ ಕುಮಾರ್ ಅವರ ಕಾಮಿಡಿ ಟೈಮಿಂಗ್ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
‘ಶಂಕರಾಭರಣ’ ಚಿತ್ರದಲ್ಲಿ ರಕ್ತಪಾತವಾಗಲಿ, ಅತಿಯಾದ ಭಯ ಹುಟ್ಟಿಸುವ ದೃಶ್ಯಗಳಾಗಲಿ ಇಲ್ಲ. ಹಾರರ್ ಕಥಾಹಂದರವಿದ್ದರೂ ತಿಳಿಹಾಸ್ಯದ ಮೂಲಕ ಇಡೀ ಕುಟುಂಬ ಕೂತು ನೋಡುವಂತೆ ಸಿನಿಮಾವನ್ನು ರೂಪಿಸಲಾಗಿದೆ. ವಾರಾಂತ್ಯದಲ್ಲಿ ಯಾವುದೇ ನಿರೀಕ್ಷೆಗಳ ಭಾರವಿಲ್ಲದೆ ಒಂದು ಸಣ್ಣ ಬಸ್ ಪಯಣ ಮಾಡಿಬರಬಹುದು.