Gulshan Devaiah: 'ಕಾಂತಾರ ಚಾಪ್ಟರ್ 1' ಯಶಸ್ಸಿನ ಬೆನ್ನಲ್ಲೇ ಐಎಂಡಿಬಿ ಲಿಸ್ಟ್‌ನಲ್ಲಿ ಟಾಪ್ ಸ್ಟಾರ್‌ಗಳನ್ನೂ ಹಿಂದಿಕ್ಕಿದ ನಟ ಗುಲ್ಶನ್ ದೇವಯ್ಯ
'ಕಾಂತಾರ ಚಾಪ್ಟರ್ 1' ಚಿತ್ರದಲ್ಲಿನ ನಟ ಗುಲ್ಶನ್ ದೇವಯ್ಯ ಅವರ ಕುಲಶೇಖರ ಪಾತ್ರಕ್ಕೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ಐಎಂಡಿಬಿ ಶ್ರೇಯಾಂಕದಲ್ಲಿ (ಇಂಟರ್‌ನೆಟ್ ಮೂವಿ ಡೇಟಾಬೇಸ್) ಖ್ಯಾತ ನಟರನ್ನೇ ಗುಲ್ಶನ್ ದೇವಯ್ಯ ಹಿಂದಿಕ್ಕಿದ್ದು, ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

Gulshan Devaiah -

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಈಗಾಗಲೇ ಸಿನಿಮಾ ಹಿಟ್ ಆಗಿದ್ದು ಗಲ್ಲಾ ಪೆಟ್ಟಿಗೆಯಲ್ಲಿ ಇತಿಹಾಸ ಬರೆಯುತ್ತ, ದಾಖಲೆಯನ್ನು ತಿದ್ದುತ್ತ ಸಾಗುತ್ತಿದೆ. ಕೊಡಗು ಮೂಲದ ಬಾಲಿವುಡ್ ನಟ ಗುಲ್ಶನ್ ದೇವಯ್ಯ (Gulshan Devaiah) ಚಿತ್ರದಲ್ಲಿನ ವಿಲನ್ ಪಾತ್ರ ಕುಲಶೇಖರನಾಗಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ಐಎಂಡಿಬಿ ಶ್ರೇಯಾಂಕದಲ್ಲಿ (ಇಂಟರ್‌ನೆಟ್ ಮೂವಿ ಡೇಟಾಬೇಸ್) ಖ್ಯಾತ ನಟರನ್ನೇ ಗುಲ್ಶನ್ ದೇವಯ್ಯ ಹಿಂದಿಕ್ಕಿದ್ದು, ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರವು ಜಾಗತಿಕವಾಗಿ 650 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದ್ದು, ಹಲವು ಕಲಾವಿದರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ. ಸಂದರ್ಶನವೊಂದರಲ್ಲಿ ಭಾಗಿಯಾದ ಗುಲ್ಶನ್ ದೇವಯ್ಯ, ʼಕಾಂತರʼ ಚಿತ್ರದಲ್ಲಿ ನಟಿಸಿದ ಬಳಿಕ ತಮ್ಮ ಜನಪ್ರಿಯತೆ ದಿಢೀರ್ ಹೆಚ್ಚಳವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಐಎಂಡಿಬಿ (IMDb) ಇಂಟರ್‌ನೆಟ್ ಮೂವಿ ಡೇಟಾಬೇಸ್) ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಅವರ ಶ್ರೇಯಾಂಕವು 213ನೇ ಸ್ಥಾನದಿಂದ 22ನೇ ಸ್ಥಾನಕ್ಕೆ ಜಿಗಿದಿದೆ.
ಇದನ್ನು ಓದಿ:Kantara: Chapter 1: 11 ದಿನದಲ್ಲಿ 655 ಕೋಟಿ ಗಳಿಸಿದ ಕಾಂತಾರ ಚಾಪ್ಟರ್ 1; ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು?
"ಈ ಯಶಸ್ಸು ಅದ್ಭುತವಾಗಿದ್ದು ಮೃಣಾಲ್ ಠಾಕೂರ್ ಮತ್ತು ತೃಪ್ತಿ ದಿಮ್ರಿ ಅವರಂತಹ ದೊಡ್ಡ ದೊಡ್ಡ ಸ್ಟಾರ್‌ಗಳಗಿಂತ ನಾನು ಮೇಲಿದ್ದೇನೆ. ಇದು ಹೇಗೆ ಸಾಧ್ಯ?" ಎಂದು ಸಂದರ್ಶನದಲ್ಲಿ ತಮಾಷೆ ಮಾಡಿದ್ದಾರೆ. ಈ ಸಿನಿಮಾದ ಯಶಸ್ಸು ತಮ್ಮ ವೃತ್ತಿಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ʼʼನನ್ನ ಕೆಲಸದ ಪ್ರೊಫೈಲ್ ಮತ್ತು ಸಂಭಾವನೆ ಖಂಡಿತವಾಗಿಯೂ ಮುಂದಕ್ಕೆ ಸುಧಾರಿಸುತ್ತದೆʼʼ ಎಂದು ಅವರೇ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಗುಲ್ಶನ್ ಹಿಂದಿ ಸಿನಿಮಾಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ʼಕಾಂತಾರ ಚಾಪ್ಟರ್ 1' ಅವರ ಮೊದಲ ಕನ್ನಡ ಸಿನಿಮಾ. ಸದ್ಯ ʼಕಾಂತಾರ ಚಾಪ್ಟರ್ 1ʼ ಎಲ್ಲ ಭಾಷೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.