ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘Mr. ಜಾಕ್’ ಆಗಿ ತೆರೆಮೇಲೆ ಮೋಡಿ ಮಾಡಲು ಬಂದ ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್‌!

ನಟ ಗುರುನಂದನ್‌ ಅವರು ‘Mr. ಜಾಕ್’ ಚಿತ್ರದ ಮೂಲಕ ಮರಳಿದ್ದು, ಗೆಳೆಯರೊಡನೆ ‘ಮಂಡಿಮನೆ ಟಾಕೀಸ್’ ಸ್ಥಾಪಿಸಿ ಸ್ವತಃ ನಿರ್ಮಾಪಕರಾಗಿದ್ದಾರೆ. ಸುಮಂತ್ ಗೌಡ ನಿರ್ದೇಶನದ ಈ ಕೌಟುಂಬಿಕ ಹಾಸ್ಯ ಕಥೆಯಲ್ಲಿ ವೈವಾಹಿಕ ಬದುಕಿನ ಏರಿಳಿತ, ವಿಚ್ಛೇದನದ ಗಂಭೀರ ವಿಷಯ ಹಾಸ್ಯದ ಮೂಲಕ ಹೇಳಲಾಗಿದೆಯಂತೆ. ನಾಯಕಿಯಾಗಿ ತಪಸ್ವಿನಿ ಪೂಣಚ್ಛ ನಟಿಸಿದ್ದಾರೆ.

‘Mr. ಜಾಕ್’ ಚಿತ್ರದ ಮೂಲಕ ನಿರ್ಮಾಪಕರಾದ ನಟ ಗುರುನಂದನ್‌

-

Avinash GR
Avinash GR Sep 2, 2026 5:00 PM

‘ಫಸ್ಟ್ ರ‍್ಯಾಂಕ್ ರಾಜು’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟ ಗುರುನಂದನ್ ಈಗ ‘Mr. ಜಾಕ್’ ಎಂಬ ಹೊಸ ಚಿತ್ರದೊಂದಿಗೆ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಸುಮಂತ್ ಗೌಡ ನಿರ್ದೇಶನದ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ನಟ ಗುರುನಂದನ್ ತಮ್ಮ ಸ್ನೇಹಿತರೊಂದಿಗೆ ಕೈಜೋಡಿಸಿ 'ಮಂಡಿಮನೆ ಟಾಕೀಸ್' ಲಾಂಛನದಡಿ ಸ್ವತಃ ನಿರ್ಮಾಪಕರಾಗಿಯೂ ಹೊಸ ಹೆಜ್ಜೆ ಇಟ್ಟಿದ್ದಾರೆ.

ಈ ಸಿನಿಮಾವನ್ನು ಗುರುನಂದನ್‌ ನಿರ್ಮಾಣ ಮಾಡಿದ್ದೇಕೆ?

ತಾವೇ ಸಿನಿಮಾ ನಿರ್ಮಾಣಕ್ಕೆ ಮುಂದಾದ ಕಾರಣವನ್ನು ಹಂಚಿಕೊಂಡ ನಟ-ನಿರ್ಮಾಪಕ ಗುರುನಂದನ್, "ನಿರ್ದೇಶಕರು ಕಥೆ ಹೇಳಿದಾಗ ನನಗೆ ತಕ್ಷಣವೇ ಇಷ್ಟವಾಯಿತು. ಈ ಕಥೆಯನ್ನು ಮೂರ್ನಾಲ್ಕು ಜನ ನಿರ್ಮಾಪಕರಿಗೂ ಹೇಳಲಾಗಿತ್ತು. ಆದರೆ, ಅವರು ಒಪ್ಪಿಗೆ ನೀಡಿ ಚಿತ್ರೀಕರಣ ಆರಂಭವಾಗುವುದು ತಡವಾಗಬಹುದು ಎನಿಸಿತು. ಆ ಕಾರಣಕ್ಕಾಗಿಯೇ ನಾನೇ ನನ್ನ ಗೆಳೆಯರೊಂದಿಗೆ ಸೇರಿ ಮಂಡಿಮನೆ ಟಾಕೀಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಲು ಮುಂದಾದೆ" ಎಂದು ಹೇಳಿದ್ದಾರೆ.

Raju James Bond Movie: ಮತ್ತೊಮ್ಮೆ ರಾಜು ಅವತಾರದಲ್ಲಿ ಗುರುನಂದನ್‌; 'ರಾಜು ಜೇಮ್ಸ್ ಬಾಂಡ್' ಚಿತ್ರದ ಟ್ರೈಲರ್‌ ಔಟ್‌

"ಚಿತ್ರದಲ್ಲಿ ನನ್ನ ಪಾತ್ರದ ಹೆಸರು ‘ಮಿಸ್ಟರ್ ಜಾಕ್’ ಅಲಿಯಾಸ್ ಜಾನಕಿರಾಮ. ಇದೊಂದು ಶುದ್ಧ ಹಾಸ್ಯಮಯ ಕೌಟುಂಬಿಕ ಮನೋರಂಜನೆಯ ಕಥೆ. ಮದುವೆಯಾದ ಬಳಿಕ ಕೆಲವರ ಜೀವನ ಸುಖಮಯವಾಗಿದ್ದರೆ, ಮತ್ತೆ ಕೆಲವರ ಬದುಕು ಹೊಂದಾಣಿಕೆಯಿಲ್ಲದೆ ವಿಚ್ಛೇದನದ ಹೊಸ್ತಿಲು ತಲುಪುತ್ತದೆ. ಇದೇ ಎಳೆಯನ್ನಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಸದ್ಯ ಟೀಸರ್ ಮೂಲಕ ಪ್ರಚಾರ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಬರಲಿರುವ ಟ್ರೇಲರ್‌ನಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದೇವೆ" ಎಂದು ಗುರುನಂದನ್ ತಿಳಿಸಿದರು.

ಕ್ಟೋಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ

ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ಸುಮಂತ್ ಗೌಡ, "ನಮ್ಮ ದಿನನಿತ್ಯದ ಸುತ್ತಮುತ್ತಲಿನ ಸಮಾಜದಲ್ಲೇ ನಡೆಯುವ ಘಟನೆಗಳನ್ನಿಟ್ಟುಕೊಂಡು ಈ ಕಥೆ ಸಿದ್ಧಪಡಿಸಲಾಗಿದೆ. ಹಾಸ್ಯವೇ ಪ್ರಧಾನವಾಗಿದ್ದರೂ, ಪ್ರೇಕ್ಷಕರನ್ನು ತಟ್ಟುವ ಗಟ್ಟಿ ಎಮೋಷನ್‌ಗಳು ಚಿತ್ರದಲ್ಲಿವೆ. ಪ್ರೇಕ್ಷಕರು ನಿರೀಕ್ಷಿಸುವ ಎಲ್ಲಾ ರೀತಿಯ ಮನರಂಜನೆಯ ಅಂಶಗಳೂ ಚಿತ್ರದಲ್ಲಿದ್ದು, ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿವೆ. ಅಕ್ಟೋಬರ್ ತಿಂಗಳಲ್ಲಿ ಸಿನಿಮಾವನ್ನು ರಾಜ್ಯಾದ್ಯಂತ ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಶೀಘ್ರದಲ್ಲೇ ಹಾಡುಗಳು ಹಾಗೂ ಟ್ರೈಲರ್ ಸಹ ಪ್ರೇಕ್ಷಕರ ಮುಂದೆ ಬರಲಿವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟೀಚರ್‌ ಪಾತ್ರದಲ್ಲಿ ತಪಸ್ವಿನಿ ಪೂಣಚ್ಛ

ಈ ಚಿತ್ರದಲ್ಲಿ ನಾಯಕಿಯಾಗಿ ತಪಸ್ವಿನಿ ಪೂಣಚ್ಛ 'ನಂದಿನಿ' ಎಂಬ ಮುಗ್ಧ ಶಿಕ್ಷಕಿಯ ಪಾತ್ರದಲ್ಲಿ ನಟಿಸಿದ್ದು, ಗುರುನಂದನ್‌ಗೆ ಸಾಥ್ ನೀಡಿದ್ದಾರೆ. ಉಳಿದಂತೆ ಮಿತ್ರ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್, ಧರ್ಮಣ್ಣ, ಸುಶ್ಮಿತ ಜಗ್ಗಪ್ಪ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಸಂತೋಷ್, ಮಹೇಶ್ ಹಾಗೂ ಸುಜಿತ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದು, ಶಿವಸೇನ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ ಮತ್ತು ವಿಜಯ್ ರಾಜ್ ಸಂಕಲನ ಜವಾಬ್ದಾರಿ ನಿಭಾಯಿಸಿದ್ದಾರೆ. ಸದ್ಯ ಟೀಸರ್‌ನಿಂದಲೇ ಗಮನ ಸೆಳೆದಿರುವ ‘ಮಿಸ್ಟರ್ ಜಾಕ್’, ಅಕ್ಟೋಬರ್‌ನಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದ್ದಾನೆ.