ʻರಜನಿಕಾಂತ್ ನೋವಿನ ಮಾತುಗಳು ನನ್ನ ಕಣ್ಣು ತೆರೆಸಿದವುʼ ಎಂದ ನಟ ಜಗ್ಗೇಶ್; ನವರಸ ನಾಯಕನ ಭಾವುಕ ಪೋಸ್ಟ್‌ನಲ್ಲಿ ಏನಿದೆ?
‘ಧರ್ಮನ್’ ಚಿತ್ರದ ಲಾಂಚ್ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ ಮಾತುಗಳನ್ನು ಕೇಳಿ ನವರಸ ನಾಯಕ, ರಾಜ್ಯಸಭಾ ಸಂಸದ ಜಗ್ಗೇಶ್ ಅವರು ಭಾವುಕರಾಗಿದ್ದಾರೆ. ತಮ್ಮ 18ನೇ ವಯಸ್ಸಿನ ಶೇಷಾದ್ರಿಪುರ ಕಾಲೇಜು ದಿನಗಳ ಕಷ್ಟದ ಹೋರಾಟ ಮತ್ತು ಹೆತ್ತವರ ಕನಸನ್ನು ಸ್ಮರಿಸಿರುವ ಜಗ್ಗೇಶ್, ರಜನಿಕಾಂತ್ ಅವರ ಮಾತುಗಳು ತಮ್ಮ ಕಣ್ಣು ತೆರೆಸಿದವು ಎಂದಿದ್ದಾರೆ.
-
ʻನವರಸ ನಾಯಕʼ, ರಾಜ್ಯಸಭಾ ಸಂಸದ ಜಗ್ಗೇಶ್ ಅವರು ಈಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಒಂದು ಹೇಳಿಕೆಗೆ ಮಾರುಹೋಗಿದ್ದಾರೆ. ತಲೈವಾ ನುಡಿದ ಆ ಮಾತುಗಳು ನನ್ನ ಕಣ್ಣು ತೆರೆಸಿದವು ಎಂದಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಜಗ್ಗೇಶ್, "ಅರ್ಥಮಾಡಿಕೊಂಡರೆ ಬದುಕು ಸುಂದರ" ಎಂದು ಹೇಳಿದ್ದಾರೆ. ಜಗ್ಗೇಶ್ ಅವರು ಹಂಚಿಕೊಂಡ ಪೋಸ್ಟ್ ಇಲ್ಲಿದೆ ನೋಡಿ.
ಇವು ನನ್ನ ಮನದ ಮಾತುಗಳಾಗಿತ್ತು
"ಈ ಚಿತ್ರ ತೆಗೆದಾಗ ನಾನು ಶೇಷಾದ್ರಿಪುರ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಪಿಸಿಎಂಬಿ ವಿದ್ಯಾರ್ಥಿ. ಆಗ ನನಗೆ 18ವರ್ಷ.. ನನ್ನ ಆ ವಯಸ್ಸಿನ ಮನಸ್ಸು. ನಾನು ಅದಾಗಬೇಕು, ಇದಾಗಬೇಕು, ನೋಡುವರೆಲ್ಲಾ, ಓ ಇವನು ಎನ್ನಬೇಕು, ಹಣ ಗಳಿಸಬೇಕು, 3 ಕಾಸಿಗೂ ಪ್ರಯೋಜವಿಲ್ಲ ಎಂದು ಹಂಗಿಸುವ ಜನಗಳ ಮುಂದೆ, ಮೀಸೆ ತಿರುವಿ ಹೆಮ್ಮರದಂತೆ ಬದುಕಬೇಕು, ಅಪ್ಪ ಅಮ್ಮನಿಗೆ ಎದೆ ಉಬ್ಬಿಸುವಂತ ಮಗನಾಗಬೇಕು, ನನ್ನ ಇಷ್ಟದ ಮಡದಿ, ಮಕ್ಕಳ ಪಡೆದು ಜೀವನ ಗೆಲ್ಲಬೇಕು.. ಇವು ನನ್ನ ಮನದ ಮಾತುಗಳಾಗಿತ್ತು" ಎಂದು ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.
ಕಲ್ಪನೆಗಳು ಗಾಳಿಯಲ್ಲಿ ಕರಗಿದ ಮೋಡಗಳು
"ಈ ಮನದ ಮಾತು ನನ್ನೊಬ್ಬನದ್ದೇ ಅಲ್ಲ. ಇಡೀ ಜಗದ ಮನುಕುಲದ ಯುವ ಮನಸುಗಳದ್ದು ಎಂದು ಈಗ ಅರ್ಥವಾಯಿತು. ಅವರವರ ಯೋಗ ಶ್ರಮದಂತೆ ಎಲ್ಲರ ಆಸೆಗಳು ಫಲಿಸುವುದು, ಶ್ರಮ ಹಾಗೂ ಶುದ್ಧವಾಗಿ ಗುರಿಯಿಟ್ಟು ಜೀವನ ಗೆದ್ದಾಗ. ಬರೀ ಕಲ್ಪನೆಯಲ್ಲೇ ಇದ್ದು, ಶ್ರಮ ಪಡದೆ ಗುರಿಯಡೆಗೆ ಸಾಗದೆ ಇದ್ದಾಗ ಎಲ್ಲಾ ಕಲ್ಪನೆಗಳು ಗಾಳಿಯಲ್ಲಿ ಕರಗಿದ ಮೋಡಗಳು, ಜೀವನ ಚದುರಿದ ಚಿತ್ರಗಳು" ಎಂದು ನಟ ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.
ಕಣ್ಣು ತೆರೆಸಿದ ತಲೈವಾ ಮಾತುಗಳು
"ಬದುಕಲ್ಲಿ ಇಷ್ಟೆಲ್ಲಾ ಸಾಧಿಸಿ, ಜೀವನ ಗೆದ್ದು, ಸಾಧಿಸಿದ್ದೆಲ್ಲಾ ಮೆಲುಕು ಹಾಕಿದಾಗ ನನಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ʻನಮ್ಮನ್ನು ಎಲ್ಲರೂ ಇಷ್ಟಪಡುತ್ತಾರೆ ಎಂಬುದು ಶುದ್ಧ ಸುಳ್ಳು ಹಾಗು ನಮ್ಮನ್ನು ಇಷ್ಟಪಟ್ಟವರು ನಾವು ಮಾಡಿದ್ದೆಲ್ಲಾ ಇಷ್ಟಪಡುತ್ತಾರೆ ಎಂಬುದು ಮೂರ್ಖತನʼ ಎಂಬ ಇತ್ತೀಚಿನ ನೋವಿನ ಹೇಳಿಕೆಗಳು ನನ್ನ ಕಣ್ಣುತೆರೆಸಿತು. ಅರ್ಥಮಾಡಿಕೊಂಡರೆ ಬದುಕು ಸುಂದರ" ಎಂದು ನಟ ಜಗ್ಗೇಶ್ ಅವರು ಹೇಳಿದ್ದಾರೆ.
ಜಗ್ಗೇಶ್ ಅವರ ಪೋಸ್ಟ್
ಅಂದಹಾಗೆ, ಈಚೆಗೆ ನಟ ರಜನಿಕಾಂತ್ ಅವರ ಹೊಸ ಸಿನಿಮಾ ʻಧರ್ಮನ್ʼ ಸೆಟ್ಟೇರಿತ್ತು. ಆ ಸಂದರ್ಭದಲ್ಲಿ ರಜನಿಕಾಂತ್ ಅವರು ಈ ಮಾತುಗಳನ್ನು ಹೇಳಿದ್ದಾರೆ. ತಾವು ಮಾತನಾಡಿದರೂ ಕಷ್ಟ, ಮಾತನಾಡದೇ ಇದ್ದರೂ ಕಷ್ಟ ಎಂಬ ಸ್ಥಿತಿಯಲ್ಲಿ ಇದ್ದೇನೆ ಎಂದು ಸಹ ರಜನಿಕಾಂತ್ ಅವರು ಹೇಳಿದ್ದಾರೆ.