ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ragini IPS 2: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟಿ ರಾಗಿಣಿ ದ್ವಿವೇದಿ; ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಜಗ್ಗೇಶ್‌ ಮಕ್ಕಳು

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ 'ರಾಗಿಣಿ ಐಪಿಎಸ್ 2' ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ನವರಸ ನಾಯಕ ಜಗ್ಗೇಶ್ ಅವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಜಂಟಿಯಾಗಿ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಜನ್ಮದಿನದಂದೇ ಫ್ಯಾನ್ಸ್‌ಗೆ ಬಿಗ್ ಗಿಫ್ಟ್ ನೀಡಿದ ನಟಿ ರಾಗಿಣಿ ದ್ವಿವೇದಿ

-

Avinash GR
Avinash GR May 24, 2026 8:08 PM

ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟಿ ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬದ ಸಂಭ್ರಮದಂದೇ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯೊಂದು ಸಿಕ್ಕಿದೆ. 12 ವರ್ಷಗಳ ಹಿಂದೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ‘ರಾಗಿಣಿ ಐಪಿಎಸ್’ ಚಿತ್ರದ ಮುಂದುವರಿದ ಭಾಗವಾಗಿ ಈಗ ‘ರಾಗಿಣಿ ಐಪಿಎಸ್ 2’ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. ರಾಗಿಣಿಯ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಈ ಹೊಸ ಸಿನಿಮಾದ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಜಗ್ಗೇಶ್‌ ಮಕ್ಕಳ ಹೊಸ ಸಾಹಸ

ಈ ಚಿತ್ರದ ಮೂಲಕ ಖ್ಯಾತ ನಟ, ನವರಸ ನಾಯಕ ಜಗ್ಗೇಶ್ ಅವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಜಂಟಿಯಾಗಿ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾವನ್ನು ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ಮಾಪಕ ಕೆ.ಮಂಜು ಹಾಗೂ ರಾಗಿಣಿ ವೆಂಚರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಪೊಲೀಸ್ ಕಂಪ್ಲೇಂಟ್’ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್ - ರಾಗಿಣಿ ದ್ವಿವೇದಿ; ಟೀಸರ್‌ ರಿಲೀಸ್‌ ಮಾಡಿದ ನಟಿ ಪ್ರೇಮಾ

ಕಥೆ ಎಲ್ಲಿ ನಿಂತಿತ್ತೋ, ಅಲ್ಲಿಂದಲೇ ಆರಂಭ!

ಚಿತ್ರದ ಕುರಿತು ಮಾತನಾಡಿದ ಸಹೋದರರಾದ ಗುರುರಾಜ್ ಹಾಗೂ ಯತಿರಾಜ್, "ರಾಗಿಣಿ ಐಪಿಎಸ್ ಅತ್ಯಂತ ಜನಪ್ರಿಯ ಚಿತ್ರ. ರಾಗಿಣಿ ಅವರಂತಹ ಸ್ಟಾರ್ ನಟಿಯನ್ನು ನಿರ್ದೇಶಿಸುವುದು ಅಷ್ಟು ಸುಲಭವಲ್ಲ. ನಾವಿಬ್ಬರು 2019 ರಿಂದಲೇ ನಿರ್ದೇಶನಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ. ನಟನೆಗಿಂತ ನಿರ್ದೇಶನವೇ ಬೇರೆ. ಈ ಚಿತ್ರದ ವಿಶೇಷತೆಯೆಂದರೆ, ಮೊದಲ ಭಾಗದ ಕಥೆ ಎಲ್ಲಿಗೆ ಕೊನೆಯಾಗಿತ್ತೋ, ಅಲ್ಲಿಂದಲೇ ರಾಗಿಣಿ ಐಪಿಎಸ್ 2 ಸಿನಿಮಾದ ಕಥೆ ಮುಂದುವರಿಯುತ್ತದೆ" ಎಂದು ಮಾಹಿತಿ ನೀಡಿದರು.

ರಾಗಿಣಿ ಏನಂದ್ರು?

"ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ಮಾಧ್ಯಮದವರು ನೀಡುತ್ತಿರುವ ಸಹಕಾರ ಅಪಾರ. ಹಾಗಾಗಿ ನನ್ನ ಹುಟ್ಟುಹಬ್ಬದ ದಿನ ಮಾಧ್ಯಮದವರ ಸಮ್ಮುಖದಲ್ಲೇ ಈ ಹೊಸ ಚಿತ್ರದ ಘೋಷಣೆ ಮಾಡುತ್ತಿದ್ದೇವೆ. ಹಿರಿಯ ನಿರ್ಮಾಪಕ ಕೆ. ಮಂಜು ಹಾಗೂ ಜಗ್ಗೇಶ್ ಅವರ ಪುತ್ರರಾದ ಗುರುರಾಜ್-ಯತಿರಾಜ್ ಅವರ ಜೊತೆ ಕೆಲಸ ಮಾಡುತ್ತಿರುವುದು ನನಗೆ ಅತೀವ ಸಂತಸ ತಂದಿದೆ" ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.

Ragini Dwivedi: ಪ್ರಾಣ, ಪ್ರೀತಿ ಕೊಟ್ಟರೂ ಕನ್ನಡ ಚಿತ್ರರಂಗದಿಂದ ಸಪೋರ್ಟ್‌ ಸಿಗಲಿಲ್ಲ! ಕಣ್ಣೀರಿಟ್ಟ ರಾಗಿಣಿ ದ್ವಿವೇದಿ

ಜಗ್ಗೇಶ್ ಮಕ್ಕಳ ಸಪೋರ್ಟ್‌ಗೆ ನಿಂತ ಕೆ.ಮಂಜು

"ರಾಗಿಣಿ ಇತ್ತೀಚೆಗೆ ಫೋನ್ ಮಾಡಿ ಕಥೆ ಕೇಳಲು ಹೇಳಿದರು. ಆದರೆ ನಿರ್ದೇಶಕರು ಯಾರೆಂದು ಹೇಳಿರಲಿಲ್ಲ. ನನ್ನ ಆತ್ಮೀಯ ಸ್ನೇಹಿತ ಜಗ್ಗೇಶ್ ಅವರ ಮಕ್ಕಳಾದ ಗುರುರಾಜ್ ಮತ್ತು ಯತಿರಾಜ್ ಬಂದು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಕಂಟೆಂಟ್ ಅದ್ಭುತವಾಗಿದೆ. ರಾಗಿಣಿ ವೆಂಚರ್ಸ್ ಕೂಡ ನಿರ್ಮಾಣಕ್ಕೆ ಕೈಜೋಡಿಸಿದ್ದು, ಆದಷ್ಟು ಬೇಗ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ" ಎಂದು ಕೆ ಮಂಜು ಹೇಳಿದ್ದಾರೆ. ಸದ್ಯದಲ್ಲೇ ಚಿತ್ರದ ಇನ್ನುಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಸಂಪೂರ್ಣ ವಿವರಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆ.