ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌Rajinikanth: ಆರೇ ದಿನಗಳಲ್ಲಿ 541 ಕೋಟಿ ಬಾಚಿದ ʻಜೈಲರ್‌ 2ʼ ಸಿನಿಮಾ; ʻಟಾಕ್ಸಿಕ್‌ʼ, ʻಪೆದ್ದಿʼ, ʻಜನ ನಾಯಗನ್ʼ‌ ದಾಖಲೆಗಳು ಉಡೀಸ್!‌

Jailer 2 Box Office Collection: ರಜನಿಕಾಂತ್‌ ನಟನೆಯ ʻಜೈಲರ್‌ 2ʼ ಸಿನಿಮಾವು ಬಿಡುಗಡೆಯಾದ ಕೇವಲ ಆರೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 541 ಕೋಟಿ ಗಳಿಸಿ ಇತಿಹಾಸ ನಿರ್ಮಿಸಿದೆ. ಇತ್ತೀಚಿನ ಬಿಗ್ ಬಜೆಟ್ ಚಿತ್ರಗಳಾದ ‘ಟಾಕ್ಸಿಕ್’ ಮತ್ತು ‘ಪೆದ್ದಿ’ ಚಿತ್ರಗಳ ಲೈಫ್‌ಟೈಮ್ ಗಳಿಕೆಯನ್ನು ಧೂಳೀಪಟ ಮಾಡಿರುವ ರಜನಿಕಾಂತ್‌, 75ರ ಪ್ರಾಯದಲ್ಲೂ ಭಾರತೀಯ ಚಿತ್ರರಂಗದ ಏಕೈಕ ಸೂಪರ್‌ಸ್ಟಾರ್ ತಾವೇ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ‘ಜೈಲರ್ 2’ ಅಬ್ಬರ; ʻಟಾಕ್ಸಿಕ್ʼ ದಾಖಲೆ ಧೂಳೀಪಟ!

-

Avinash GR
Avinash GR Oct 21, 2026 8:11 PM

ʻಸೂಪರ್‌ಸ್ಟಾರ್‌ʼ ರಜನಿಕಾಂತ್‌ ಅಭಿನಯದ ಆ್ಯಕ್ಷನ್ ಎಂಟರ್‌ಟೈನರ್ 'ಜೈಲರ್‌ 2' ಚಿತ್ರವು ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಅಕ್ಟೋಬರ್ 15ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಈ ಚಿತ್ರ, ಬಿಡುಗಡೆಯಾದ ಕೇವಲ ಆರೇ ದಿನಗಳಲ್ಲಿ ವಿಶ್ವಾದ್ಯಂತ 541 ಕೋಟಿ ರೂ. ಗಳಿಕೆ ಮಾಡುವ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ.

ಮೊದಲ ವಾರ ಮುಕ್ತಾಯಗೊಳ್ಳುವ ಮುನ್ನವೇ 500 ಕೋಟಿ ಗಡಿ ದಾಟಿರುವ ಈ ಸಿನಿಮಾ, ಭಾರತೀಯ ಚಿತ್ರರಂಗದ ಇತ್ತೀಚಿನ ಹಲವು ಬಿಗ್ ಬಜೆಟ್ ಚಿತ್ರಗಳ ಲೈಫ್‌ ಟೈಮ್‌ ಕಲೆಕ್ಷನ್‌ ದಾಖಲೆಗಳನ್ನು ಸುಲಭವಾಗಿ ಉಡೀಸ್ ಮಾಡಿದೆ.

ವಿದೇಶದಲ್ಲೂ ತಲೈವಾ ಹವಾ ಜೋರು

ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಜೈಲರ್ 2’, ಕೇವಲ ಆರು ದಿನಗಳಲ್ಲಿ ಬರೋಬ್ಬರಿ ₹337 ಕೋಟಿ ಕಲೆಕ್ಷನ್ ಮಾಡಿದೆ. ಇದರಲ್ಲಿ ಚಿತ್ರದ 6ನೇ ದಿನದ ಗಳಿಕೆಯೇ ಬರೋಬ್ಬರಿ 45.55 ಕೋಟಿ ಆಗಿದ್ದು, ಅಂದು ದೇಶಾದ್ಯಂತ ಒಟ್ಟು 15,529 ಪ್ರದರ್ಶನಗಳು ಕಂಡಿವೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ತಲೈವಾ ಜಾದೂ ಮುಂದುವರಿದಿದ್ದು, ಒಟ್ಟಾರೆ 204 ಕೋಟಿಗೂ ಅಧಿಕ ಗ್ರಾಸ್ ಗಳಿಕೆ ಸಂಗ್ರಹವಾಗಿದೆ. ಈ ಮೂಲಕ ವಿಶ್ವದಾದ್ಯಂತ ಒಟ್ಟು 541 ಕೋಟಿ ಮೊತ್ತವನ್ನು ಈ ಚಿತ್ರ ತನ್ನ ಖಾತೆಗೆ ಹಾಕಿಕೊಂಡಿದೆ.

ಉತ್ತರ ಭಾರತದಲ್ಲಿ ಜೈಲರ್‌ಗೆ ಕಿರಿಕ್!‌

ಭಾಷಾವಾರು ಗಳಿಕೆಯನ್ನು ಗಮನಿಸಿದರೆ, ಎಂದಿನಂತೆ ತಮಿಳು ಆವೃತ್ತಿಯು ಸಿಂಹಪಾಲು ಪಡೆದುಕೊಂಡಿದೆ. ಆರನೇ ದಿನದಂದು ತಮಿಳು ಆವೃತ್ತಿಯ 7,828 ಪ್ರದರ್ಶನಗಳಿಂದ 31.20 ಕೋಟಿ ರೂ. ಹರಿದುಬಂದಿದ್ದರೆ, ತೆಲುಗು ಮಾರುಕಟ್ಟೆಯಲ್ಲಿ 2,293 ಪ್ರದರ್ಶನಗಳಿಂದ 8.75 ಕೋಟಿ ರೂ. ಜಮೆಯಾಗಿದೆ.

Jailer 2 Update: ಜೈಲರ್ 2 ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಜನಿಕಾಂತ್! ಕಮಲ್‌ ಜೊತೆಗಿನ ಮೂವಿ ಬಗ್ಗೆ ಹೇಳಿದ್ದನು?

ಆದರೆ, ಒಟಿಟಿ ಬಿಡುಗಡೆ ಅವಧಿಯ ನಿಯಮಾವಳಿ ವಿವಾದದಿಂದಾಗಿ ಉತ್ತರ ಭಾರತದ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಾದ ಪಿವಿಆರ್-ಐನಾಕ್ಸ್ ಪರದೆಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿಲ್ಲ. ಈ ಹಿನ್ನಡೆಯ ನಡುವೆಯೂ ಹಿಂದಿ ಆವೃತ್ತಿಯು 5,230 ಶೋಗಳಿಂದ 5 ಕೋಟಿ ಗಳಿಸಿದೆ. ಇನ್ನು ಕರ್ನಾಟಕದಲ್ಲಿ ಸೀಮಿತವಾಗಿ ತೆರೆಕಂಡಿದ್ದ ಕನ್ನಡ ವರ್ಷನ್‌ 178 ಪ್ರದರ್ಶನಗಳಿಂದ 60 ಲಕ್ಷ ಬಾಚಿಕೊಂಡಿದೆ.

ವಿಶೇಷವೆಂದರೆ, ಮೊದಲ ವಾರದ ಹಂತದಲ್ಲೇ ಭಾರತೀಯ ಚಿತ್ರರಂಗದ ಇತ್ತೀಚಿನ ಬೃಹತ್ ಸಿನಿಮಾಗಳ ದಾಖಲೆಗಳನ್ನು 'ಜೈಲರ್ 2' ಹಿಂದಿಕ್ಕಿದೆ. ʻದಳಪತಿʼ ವಿಜಯ್‌ ಅವರ ʻಜನ ನಾಯಗನ್‌ʼ ಸಿನಿಮಾದ (234.05 ಕೋಟಿ ರೂ.), ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರದ (244.64 ಕೋಟಿ) ಹಾಗೂ ಯಶ್ ನಟನೆಯ 'ಟಾಕ್ಸಿಕ್' (250.13 ಕೋಟಿ) ಸಿನಿಮಾಗಳ ಭಾರತದಲ್ಲಿನ ಲೈಫ್‌ಟೈಮ್ ಕಲೆಕ್ಷನ್ ಅನ್ನು ಕೇವಲ ಆರು ದಿನಗಳಲ್ಲೇ ಧೂಳೀಪಟ ಮಾಡಿ, ʻಜೈಲರ್‌ 2ʼ ಮುನ್ನುಗ್ಗುತ್ತಿದೆ.

ಈ ಚಿತ್ರದ ಬಜೆಟ್‌ ಎಷ್ಟು?

ಅಂದಾಜು 350 ಕೋಟಿ ರೂ. ಬಜೆಟ್‌ನಲ್ಲಿ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡಿದಿದ್ದಾರೆ. 2023ರ ಮೆಗಾ ಬ್ಲಾಕ್‌ಬಸ್ಟರ್ 'ಜೈಲರ್' ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ರಮ್ಯಾ ಕೃಷ್ಣನ್, ಶಿವರಾಜ್‌ಕುಮಾರ್‌, ಎಸ್.ಜೆ. ಸೂರ್ಯ, ಮೋಹನ್‌ಲಾಲ್, ವಿದ್ಯಾ ಬಾಲನ್, ಸೂರಜ್ ವೆಂಜಾರಮೂಡು ಹಾಗೂ ಮಿಥುನ್ ಚಕ್ರವರ್ತಿ ಮುಂತಾದ ಘಟಾನುಘಟಿ ತಾರೆಯರ ದಂಡೇ ಇದೆ.

ಅನಿರುದ್ಧ್ ರವಿಚಂದರ್ ಅವರ ಸಂಗೀತ, ವಿಜಯ್ ಕಾರ್ತಿಕ್ ಕಣ್ಣನ್ ಅವರ ಛಾಯಾಗ್ರಹಣ ಹಾಗೂ ಆರ್. ನಿರ್ಮಲ್ ಅವರ ಸಂಕಲನ ಚಿತ್ರದ ತಾಂತ್ರಿಕ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ವಾರಾಂತ್ಯದ ಹೊತ್ತಿಗೆ ಈ ಗಳಿಕೆ ಇನ್ನಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.