ವಿಜಯ ದಶಮಿಯಂದು ‘ಮಿಸ್ ಮ್ಯಾಚ್’ ಚಿತ್ರದ ಮೊದಲ ಹಾಡು ‘ಚಲಿಸಿತು ಮೋಡ’ ರಿಲೀಸ್
Miss Match Movie: ‘ಮಿಸ್ ಮ್ಯಾಚ್’ ಚಿತ್ರದ ‘ಚಲಿಸಿತು ಮೋಡ’ ಹಾಡು ವಿಜಯದಶಮಿಯಂದು ಬಿಡುಗಡೆಯಾಗಿದ್ದು, ಯುವಮನಸುಗಳನ್ನು ಆಕರ್ಷಿಸುತ್ತಿದೆ. ಜೂಡಾ ಸ್ಯಾಂಡಿ ಸಂಗೀತ ಹಾಗೂ ಶ್ರೀಲಕ್ಷ್ಮಿ ಬೆಳ್ಮಣ್ಣು ಗಾಯನದಲ್ಲಿ ಮೂಡಿಬಂದಿರುವ ಈ ಹಾಡಿನೊಂದಿಗೆ ತೇಜಸ್ ಪಬ್ಲಿಕೇಷನ್ಸ್ ಸ್ವಂತ ಆಡಿಯೋ ಲೇಬಲ್ ಆರಂಭಿಸಿದೆ.
-
ವಿಜಯದಶಮಿಯ ಶುಭ ಸಂದರ್ಭದಲ್ಲಿ ‘ಮಿಸ್ ಮ್ಯಾಚ್’ ಸಿನಿಮಾದ ಮೊದಲ ಲಿರಿಕಲ್ ಹಾಡು ‘ಚಲಿಸಿತು ಮೋಡ’ ಬಿಡುಗಡೆಯಾಗಿದೆ. ಪ್ರೀತಿ ಮೊಳೆಯುವ ಮಧುರ ಕ್ಷಣಗಳನ್ನು ಅಷ್ಟೇ ಆಪ್ತವಾಗಿ ಕಟ್ಟಿಕೊಡುವ ಈ ಮೆಲೋಡಿ ಗೀತೆಯು ಇಂದಿನ ಯುವಪೀಳಿಗೆಯ ಗಮನ ಸೆಳೆಯುತ್ತಿದೆ.
ವಿಶೇಷವೆಂದರೆ, ಈ ಹಾಡಿನ ಮೂಲಕ ತೇಜಸ್ ಪಬ್ಲಿಕೇಷನ್ಸ್ ಸಂಸ್ಥೆಯು ತನ್ನದೇ ಆದ ಹೊಸ ಆಡಿಯೋ ಲೆಬೆಲ್ ಅನ್ನು ಆರಂಭಿಸಿದ್ದು, ಇದು ಸಂಸ್ಥೆಯ ಚೊಚ್ಚಲ ಆಲ್ಬಂ ಆಗಿ ಹೊರಹೊಮ್ಮಿದೆ. ಚಿತ್ರದ ಸಂಪೂರ್ಣ ಆಲ್ಬಂನ ಸಂಗೀತ ಹಕ್ಕುಗಳನ್ನು ಇದೇ ಸಂಸ್ಥೆ ಹೊಂದಿದೆ.
ಈ ಸುಮಧುರ ಗೀತೆಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಸಾಹಿತಿ ನಾಗಾರ್ಜುನ್ ಶರ್ಮ ಸಾಹಿತ್ಯ ಒದಗಿಸಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಗಾಯಕಿ ಶ್ರೀಲಕ್ಷ್ಮಿ ಬೆಳ್ಮಣ್ಣು ತಮ್ಮ ಕಂಠಸಿರಿಯಿಂದ ಹಾಡಿಗೆ ಜೀವ ತುಂಬಿದ್ದಾರೆ. ನಾಗಾರ್ಜುನ್ ಶರ್ಮ ಅವರು ಈ ಹಿಂದೆ ‘ಅವನೇ ಶ್ರೀಮನ್ನಾರಾಯಣ’ ಮತ್ತು ‘ಕವಲುದಾರಿ’ಯಂತಹ ಹಿಟ್ ಚಿತ್ರಗಳ ಹಾಡುಗಳಿಗೆ ಸಾಹಿತ್ಯ ಬರೆದು ಗುರುತಿಸಿಕೊಂಡಿದ್ದರೆ, ಶ್ರೀಲಕ್ಷ್ಮಿ ಬೆಳ್ಮಣ್ಣು ತಮ್ಮ ಶಾಸ್ತ್ರೀಯ ಮತ್ತು ಸಿನಿಮಾ ಗಾಯನದ ಮೂಲಕ ಜನಮನ ಗೆದ್ದಿದ್ದಾರೆ. ಈ ಇಬ್ಬರು ಪ್ರತಿಭಾವಂತರ ಜುಗಲ್ಬಂದಿಯಲ್ಲಿ ‘ಚಲಿಸಿತು ಮೋಡ’ ಗೀತೆ ಮೂಡಿಬಂದಿದೆ.
ತೇಜಸ್ ಪಬ್ಲಿಕೇಷನ್ಸ್ನ ಈ ಹದಿನಾಲ್ಕು ವರ್ಷಗಳ ಪಯಣವು ಕವನ ಸಂಕಲನದಿಂದ ಆರಂಭವಾಗಿ ಇಂದು ಬೆಳ್ಳಿತೆರೆಯವರೆಗೆ ವಿಸ್ತರಿಸಿಕೊಂಡಿರುವುದು ವಿಶೇಷ. 2012ರಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ತೇಜಸ್ ವೆಂಕಟೇಶ್ ಅವರು ‘ಭಾವೋದ್ವೇಗಗಳ ಪ್ರತಿಬಿಂಬ’ ಎಂಬ ಕನ್ನಡ ಕವನ ಸಂಕಲನ ಪ್ರಕಟಿಸುವ ಮೂಲಕ ಈ ಸಂಸ್ಥೆಗೆ ನಾಂದಿ ಹಾಡಿದ್ದರು. ನಂತರ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಎಐ ತಂತ್ರಜ್ಞಾನ ವಲಯದಲ್ಲಿ ಕಾರ್ಯನಿರ್ವಹಿಸಿದ ಅವರು, ಇದೀಗ ‘ಮಿಸ್ ಮ್ಯಾಚ್’ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಜೊತೆಗೆ ತಮ್ಮದೇ ಸಂಗೀತ ಸಂಸ್ಥೆಯನ್ನು ಕಟ್ಟಿ, ಯುವ ಹಾಗೂ ಪ್ರತಿಭಾವಂತ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.
ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ
ತಮ್ಮ ಹೊಸ ಹೆಜ್ಜೆಯ ಕುರಿತು ಸಂತಸ ಹಂಚಿಕೊಂಡಿರುವ ನಿರ್ಮಾಪಕ ತೇಜಸ್ ವೆಂಕಟೇಶ್, "ಪ್ರತಿಯೊಂದು ಹೊಸ ಅಧ್ಯಾಯವೂ ಸವಾಲುಗಳೊಂದಿಗೆ ಆರಂಭವಾಗುತ್ತದೆ. ತಂತ್ರಜ್ಞಾನ ಕ್ಷೇತ್ರದಿಂದ ವಿರಾಮ ಪಡೆದು ಚಿತ್ರರಂಗಕ್ಕೆ ಕಾಲಿಟ್ಟಾಗ, ಜೂಡಾ ಸ್ಯಾಂಡಿ ನೀಡಿದ ಅದ್ಭುತ ಸಂಗೀತವೇ ಸ್ವಂತ ಮ್ಯೂಸಿಕ್ ಲೇಬಲ್ ಆರಂಭಿಸಲು ಪ್ರೇರಣೆ ನೀಡಿತು. ಮುಂದಿನ ದಿನಗಳಲ್ಲಿ ಹೊಸ ಗಾಯಕರು, ಗೀತರಚನೆಕಾರರು ಹಾಗೂ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮುಕ್ತ ವೇದಿಕೆಯಾಗಿ ಈ ಸಂಗೀತ ಸಂಸ್ಥೆಯನ್ನು ಬೆಳೆಸುವ ಉದ್ದೇಶ ಹೊಂದಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಯಕಿಯಾಗಿ ಅಶ್ವಿತಾ ಹೆಗ್ಡೆ ನಟನೆ
ಸಾಯಿ ಶ್ರೀನಿಧಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ಮಿಸ್ ಮ್ಯಾಚ್’ ಸಿನಿಮಾವು ಮಲೆನಾಡಿನ ಹಿನ್ನೆಲೆಯಲ್ಲಿ ಸಾಗುವ ಕೌಟುಂಬಿಕ ಮತ್ತು ರೊಮ್ಯಾಂಟಿಕ್ ಕಾಮಿಡಿ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ಕೌಶಿಕ್ ಗೌಡ ಮತ್ತು ಅಶ್ವಿತಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ತೇಜೇಶ್, ಅಮೃತಾ, ಅನಿರುದ್ಧ್ ಆಚಾರ್ಯ, ಹಿರಿಯ ಕಲಾವಿದರಾದ ನಾಗೇಂದ್ರ ಶಾ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ತೇಜಸ್ ಪಬ್ಲಿಕೇಷನ್ಸ್ ಹಾಗೂ ಸಟಾಯರ್ ಬ್ಯಾನರ್ ಅಡಿಯಲ್ಲಿ ತೇಜಸ್ ವೆಂಕಟೇಶ್ ಚಿತ್ರ ನಿರ್ಮಿಸಿದ್ದು, ಗಣೇಶ್ ಮಹಾಬಲ ಅವರ ಛಾಯಾಗ್ರಹಣ ಮತ್ತು ದೀಪಕ್ ಕುಲಾಲ್ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ಟೀಸರ್ ಅನ್ನು ವೀಕ್ಷಕರು ಅಧಿಕೃತ ಜಾಲತಾಣವಾದ www.missmatchthefilm.in ನಲ್ಲಿ ವೀಕ್ಷಿಸಬಹುದಾಗಿದೆ.