ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮೊಮ್ಮಗನ ವಿಶ್ವ ದಾಖಲೆ: ರೂಬಿಕ್ಸ್ ಕ್ಯೂಬ್‌ನಲ್ಲಿ ಶಿವತೇಜ ಮ್ಯಾಜಿಕ್!
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಮೊಮ್ಮಗ ಶಿವತೇಜ ವೈ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕೇವಲ 1 ಗಂಟೆ 27 ನಿಮಿಷಗಳಲ್ಲಿ 21 ಬಾರಿ ಮಿಶ್ರಣಗೊಂಡ 'ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್' ಬಿಡಿಸುವ ಮೂಲಕ ಇಂಡಿಯಾ, ಏಷ್ಯಾ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತ್ರಿವಳಿ ದಾಖಲೆ ಬರೆದಿದ್ದಾರೆ.
-
ಭಾರತೀಯ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಂದ ಸಕ್ರಿಯರಾಗಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಕುಟುಂಬಕ್ಕೆ ಈಗ ಮತ್ತೊಂದು ಹೆಮ್ಮೆಯ ಗರಿ ಲಭಿಸಿದೆ. ಅವರ 14 ವರ್ಷದ ಮೊಮ್ಮಗ ಶಿವತೇಜ ವೈ ಅವರು ಮಿಶ್ರಣಗೊಂಡ 'ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್' ಬಿಡಿಸುವಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆಯುವ ಮೂಲಕ ತ್ರಿವಳಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಈ ಅಪರೂಪದ ಸಾಧನೆಯನ್ನು ಸಂಭ್ರಮಿಸಿದ ರಾಕ್‌ಲೈನ್ ವೆಂಕಟೇಶ್ ಅವರ ಕುಟುಂಬ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಶಿವತೇಜ ತಂದೆ ಯತೀಶ್ ವೆಂಕಟೇಶ್ ಮಗನ ಸಾಧನೆಯ ಹಾದಿಯ ಬಗ್ಗೆ ಹೆಮ್ಮೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಮಕ್ಕಳಲ್ಲಿರುವ ಪ್ರತಿಭೆ ಏನು ಎಂಬುದನ್ನು ಪೋಷಕರು ಮೊದಲೇ ಗಮನಿಸಬೇಕು. ಅದರ ಆಧಾರದ ಮೇಲೆ ಅವರಿಗೆ ಬೇಕಾದ ಬೆಂಬಲ ನೀಡಬೇಕು. ಮಗನ ಈ ವಿಶೇಷ ರೂಬಿಕ್ಸ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ಅವನ ತಾಯಿ. ನಾನು ತಂದೆಯಾಗಿ ಅವನಿಗೆ ಬೇಕಾದ ಸೌಲಭ್ಯ ಮತ್ತು ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದೇನೆ" ಎಂದು ಹೇಳಿದ್ದಾರೆ ಯತೀಶ್.
DK Shivakumar: ಡಿ.ಕೆ.ಶಿವಕುಮಾರ್ ವಿರುದ್ಧ 2000 ಕೋಟಿ ಭ್ರಷ್ಟಾಚಾರ ಆರೋಪ; ಸಿಬಿಐಗೆ ಮುನಿರತ್ನ ದೂರು
"ನಮ್ಮ ಕುಟುಂಬದಲ್ಲಿ ರೂಬಿಕ್ಸ್ ಕ್ಯೂಬ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಇದೇ ಮೊದಲು. ಶಿವತೇಜ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ರೂಬಿಕ್ಸ್ ಕ್ಯೂಬ್ ಅಭ್ಯಾಸ ಮಾಡುತ್ತಿದ್ದಾನೆ. ಅದರ ಎಲ್ಲಾ ಕಠಿಣ ಹಂತಗಳನ್ನು ಯಶಸ್ವಿಯಾಗಿ ಮುಗಿಸಿ, ಈಗ ಈ ದಾಖಲೆ ಬರೆದಿದ್ದಾನೆ" ಎಂದು ಮಗನ ಶ್ರಮವನ್ನು ಪೋಷಕರು ಸ್ಮರಿಸಿದ್ದಾರೆ.
ಮೊಮ್ಮಗನ ಸಾಧನೆಗೆ ರಾಕ್‌ಲೈನ್ ಖುಷಿ
"ನಾವು ಸದಾ ಸಿನಿಮಾಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿರುತ್ತೇವೆ. ಸಿನಿಮಾ ಕಾರ್ಯಕ್ರಮಗಳಲ್ಲೇ ಕಾಣಿಸಿಕೊಳ್ಳುವುದು ಹೆಚ್ಚು. ಆದರೆ ಈ ಬಾರಿ ಸಿನಿಮಾ ಹೊರತುಪಡಿಸಿ, ನನ್ನ ಮೊಮ್ಮಗ ಶಿವತೇಜನ ಸಾಧನೆ ಬಗ್ಗೆ ಹೇಳಲು ನಮಗೆ ಹೆಮ್ಮೆಯ ಸಂಗತಿ. ಇಂದಿನ ಮಕ್ಕಳು ಹೆಚ್ಚಾಗಿ ಟಿವಿ, ಮೊಬೈಲ್‌ಗಳಲ್ಲಿ ಕಾಲ ಕಳೆಯುವುದನ್ನು ನೋಡುತ್ತೇವೆ. ಅದು ನಮಗೆ ಅಷ್ಟಾಗಿ ಇಷ್ಟವಾಗದ ವಿಷಯ. ಆದರೆ ಅದರ ನಡುವೆಯೂ ನಮ್ಮ ಮುಂದಿನ ಪೀಳಿಗೆ ಇಂತಹ ವಿಭಿನ್ನ ಸಾಧನೆ ಮಾಡಿರುವುದು ಖುಷಿ ತಂದಿದೆ. ಈ ಸಾಧನೆ ನಮ್ಮ ಕುಟುಂಬಕ್ಕೆ ಒಂದು ಕಿರೀಟವಿದ್ದಂತೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ರಾಕ್‌ಲೈನ್ ವೆಂಕಟೇಶ್.
ರೂಬಿಕ್ಸ್ ಕ್ಯೂಬ್ ಕ್ಷೇತ್ರದಲ್ಲಿ ಶಿವತೇಜ ದಾಖಲೆ
ಅತಿ ಹೆಚ್ಚು ಬಾರಿ ಮಿಶ್ರಣಗೊಂಡ ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್‌ಗಳನ್ನು (Megaminx Rubik’s Cubes) ಬಿಡಿಸುವ ಮೂಲಕ ಶಿವತೇಜ ದಾಖಲೆ ನಿರ್ಮಿಸಿದ್ದಾರೆ. ಶಿವತೇಜಗೆ ಈಗ 14 ವರ್ಷ 9 ತಿಂಗಳು. 1 ಗಂಟೆ, 27 ನಿಮಿಷ, 12 ಸೆಕೆಂಡ್ ಮತ್ತು 30 ಮಿಲಿಸೆಕೆಂಡ್‌ಗಳಲ್ಲಿ ಒಟ್ಟು 21 ಬಾರಿ ಮೆಗಾಮಿಂಕ್ಸ್ ಕ್ಯೂಬ್‌ಗಳನ್ನು ಬಿಡಿಸಿ ಈ ಸಾಧನೆ ಮಾಡಿದ್ದಾರೆ ಶಿವತೇಜ. ಈ ಮೂಲಕ ಶಾಸಕ ಮುನಿರತ್ನ ಅವರ ಮೊಮ್ಮಗನೂ ಆಗಿರುವ ಶಿವತೇಜ, ತಮ್ಮ ಈ ವಿಶಿಷ್ಟ ಕೌಶಲ್ಯದ ಮೂಲಕ ರಾಜ್ಯ ಮತ್ತು ದೇಶದ ಗಮನ ಸೆಳೆದಿದ್ದಾರೆ. ಇದು ರಾಕ್‌ಲೈನ್ ಮತ್ತು ಮುನಿರತ್ನ ಕುಟುಂಬಗಳಿಗೆ ಖುಷಿಯನ್ನ ತಂದಿದೆ.