ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಮನೆಯನ್ನು ಬಾಡಿಗೆ ನೀಡಿದ್ದೇವೆ, ಅದರಿಂದ ಬರುವ ದುಡ್ಡಿನ ಮೇಲೆ ಡಿಪೆಂಡ್‌ ಆಗಿದ್ದೇವೆʼ; ನಟ ದಿಗಂತ್‌ ಹೇಳಿದ ಕಹಿ ಸತ್ಯಗಳು!

ಸ್ಯಾಂಡಲ್‌ವುಡ್‌ನಲ್ಲಿ ಎರಡು ದಶಕಗಳ ಕಾಲ ಯಶಸ್ವಿ ನಟನಾಗಿ ಗುರುತಿಸಿಕೊಂಡಿರುವ ದಿಗಂತ್, ಚಿತ್ರರಂಗದ ಇಂದಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಮೌನ ಮುರಿದಿದ್ದಾರೆ. ಹೊಸ ಚಿತ್ರ 'ರುದ್ರ ಕಾಲ' ಮುಹೂರ್ತದ ವೇಳೆ ಮಾತನಾಡಿದ ಅವರು, ಒಪ್ಪಿಕೊಂಡಿದ್ದ ಸಿನಿಮಾಗಳು ಆರಂಭವಾಗದ ಕಾರಣ ನಂದಿ ಬೆಟ್ಟದ ಬಳಿ ಇರುವ ತಮ್ಮ ಮನೆಯ ಬಾಡಿಗೆ ಹಣದ ಮೇಲೆಯೇ ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ತೀರ್ಥಹಳ್ಳಿಗೆ ಹೋಗಿ ತೋಟ ನೋಡಿಕೊಳ್ಳಲು ನಿರ್ಧರಿಸಿದ್ರಾ ನಟ ದಿಗಂತ್?

-

Avinash GR
Avinash GR Apr 24, 2026 6:50 PM

ಸ್ಯಾಂಡಲ್‌ವುಡ್‌ನಲ್ಲಿ ನಟ ದಿಗಂತ್‌ ಅವರು ಕಳೆದ 2 ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಹಲವು ಹಿಟ್‌ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕಳೆದ ವರ್ಷ ಅವರ ʻಎಡಗೈಯೇ ಅಪಘಾತಕ್ಕೆ ಕಾರಣʼ ಸಿನಿಮಾ ತೆರೆಕಂಡಿತ್ತು. ಆನಂತರ ದಿಗಂತ್‌ ಏನು ಮಾಡುತ್ತಿದ್ದಾರೆ? ಯಾವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಸದ್ಯ ದಿಗಂತ್‌ ತೆಲುಗಿನಲ್ಲಿ ಒಂದು ಸಿನಿಮಾ ಮತ್ತು ಕನ್ನಡದಲ್ಲೊಂದು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಆದರೂ ಹೀಗೆ ದಿಢೀರ್‌ ಅಂತ ಸಿನಿಮಾಗಳು ಕಮ್ಮಿಯಾದಾಗ ಉಂಟಾಗುವ ಆರ್ಥಿಕ ಸಮಸ್ಯೆಗಳ ಬಗ್ಗೆ ದಿಗಂತ್‌ ಮಾತನಾಡಿದ್ದಾರೆ.

ಬಾಡಿಗೆ ದುಡ್ಡಿನ ಮೇಲೆ ಡಿಪೆಂಡ್‌ ಆಗಿದ್ದೇವೆ

ಈಚೆಗೆ ಅವರ ಹೊಸ ಸಿನಿಮಾ ರುದ್ರ ಕಾಲ ಸೆಟ್ಟೇರಿದೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದಿಗಂತ್‌, "ಮನೆಯನ್ನು ಬಾಡಿಗೆ ನೀಡಿದ್ದೇವೆ, ಅದರಿಂದ ಬರುವ ದುಡ್ಡಿನ ಮೇಲೆ ಡಿಪೆಂಡ್‌ ಆಗಿದ್ದೇವೆ" ಎಂಬ ಮಾತನ್ನು ಹೇಳಿದ್ದಾರೆ. ಅಷ್ಟಕ್ಕೂ ಅಂಥದ್ದೇನಾಯಿತು? ಅದನ್ನೂ ಅವರೇ ಹೇಳಿದ್ದಾರೆ. 6 ತಿಂಗಳ ಹಿಂದೆ ದಿಗಂತ್‌ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ, ಕಾದಿದ್ದೇ ಬಂತು, ಸಿನಿಮಾಗಳು ಸೆಟ್ಟೇರಿಲ್ಲ!

ತೀರ್ಥಹಳ್ಳಿಗೆ ಹೋಗಿ ತೋಟದ ಕೆಲಸ ಮಾಡೋಣ ಅಂತಿದ್ದೆ

"ಸದ್ಯಕ್ಕೆ ಯಾಕೋ ಪರಿಸ್ಥಿತಿ ಸರಿ ಇಲ್ಲ, ನೋಡಿಕೊಂಡು ಮುಂದುವರೆಯೋಣ ಅಂತ ನಿರ್ಮಾಪಕರು ಹೇಳಿದರು. ಆಗ ಅನ್ನಿಸಿದ್ದು ಏನೆಂದರೆ, ನಿಜವಾಗಿಯೂ ನಾವು ಬೇರೇನಾದರೂ ಮಾಡಬೇಕಾ? ಹೊಸ ಕೆಲಸಗಳ ಕಡೆಗೆ ಗಮನ ಕೊಡಬೇಕಾ ಅಂತ! ನನಗೆ ಮೊದಲ ಬಾರಿಗೆ ಇಂತಹ ಆಲೋಚನೆ ತಲೆಗೆ ಬಂತು. ಇದು ಬರೀ ನನ್ನ ಸಮಸ್ಯೆಯಲ್ಲ. ನಮ್ಮ ಸುತ್ತಮುತ್ತಲಿನ ಸ್ನೇಹಿತರ ಜೊತೆಗೆ ಮಾತಾಡಿದೆ. ಹೆಚ್ಚೂಕಡಿಮೆ ಎಲ್ಲರದ್ದೂ ಇದೇ ಪರಿಸ್ಥಿತಿ. ಕೊನೆಗೆ ತೀರ್ಥಹಳ್ಳಿಗೆ ಹೋಗಿ ತೋಟದ ಕೆಲಸ ಮಾಡೋದ ಅಂತಲೂ ಯೋಚಿಸಿದ್ದೇನೆ. ಹೀಗಿರುವಾಗ ನನಗೆ ʻರುದ್ರ ಕಾಲʼ ಸಿನಿಮಾ ಸಿಕ್ತು. ಜೊತೆಗೆ ಇದು ಬೇಗನೇ ಶೂಟಿಂಗ್‌ ಕೂಡ ಆರಂಭವಾಗಿದೆ" ಎಂದು ದಿಗಂತ್‌ ಹೇಳಿದ್ದಾರೆ.

ಕ್ರೈಮ್ ಥ್ರಿಲ್ಲರ್ ʻರುದ್ರ ಕಾಲʼ ಚಿತ್ರದಲ್ಲಿ ದಿಗಂತ್ - ಹೆಬಾ ಪಟೇಲ್ ಜುಗಲ್‌ಬಂದಿ; ಚಿತ್ರತಂಡಕ್ಕೆ ಸಾಥ್‌ ನೀಡಿದ ಯೋಗರಾಜ್ ಭಟ್

ಇಂಥ ಒಂದು ಪರಿಸ್ಥಿತಿ ಬಂದಿರುವುದು ಈಗಲೇ!

"ನಾನು ಕಳೆದ ವರ್ಷವು ಬ್ಯುಸಿ ಇದ್ದೆ. ಅದರ ಹಿಂದಿನ ವರ್ಷದವರೆಗೂ ಕೈತುಂಬಾ ಆಫರ್‌ಗಳಿದ್ದವು. ಆಗೆಲ್ಲಾ ವರ್ಷಕ್ಕೆ 3-4 ಚಿತ್ರಗಳು ಬಿಡುಗಡೆ ಆಗಿವೆ. ಅವುಗಳ ಫಲಿತಾಂಶ ಏನು ಎಂಬುದು ಬೇರೆ ವಿಚಾರ. ನಾನಂತೂ ಸಿಕ್ಕಾಪಟ್ಟೆ ಬ್ಯುಸಿ ಇದ್ದೆ. ಇಷ್ಟು ವರ್ಷಗಳಲ್ಲಿ ಈಗಲೇ ಇಂಥ ಒಂದು ಪರಿಸ್ಥಿತಿ ಬಂದಿರುವುದು. ನಂದಿ ಬೆಟ್ಟದ ಬಳಿ ಗೇಟೆಡ್‍ ಕಮ್ಯುನಿಟಿಯಲ್ಲಿ ನನ್ನದೊಂದು ಮನೆ ಇದೆ. ಆ ಮನೆಯನ್ನು ನಾವೀಗ ಬಾಡಿಗೆಗೆ ಕೊಟ್ಟಿದ್ದೇವೆ. ಅದರಿಂದ ತಿಂಗಳಿಗೆ ಇಷ್ಟು ಅಂತ ಬಾಡಿಗೆ ಬರುತ್ತಿದೆ. ಆ ದುಡ್ಡಿನ ಮೇಲೆ ನಾವೀಗ ಡಿಪೆಂಡ್‍ ಆಗಿದ್ದೇವೆ ಎಂದರೆ, ನಮ್ಮ ಪರಿಸ್ಥಿತಿ ಹೇಗಿರಬೇಡ ಯೋಚಿಸಿ" ಎಂದು ಉತ್ತರಿಸುತ್ತಾರೆ ದಿಗಂತ್.‌ ‌

Rudra Kala Movie: ʻದೂಧ್ ಪೇಡಾʼ ದಿಗಂತ್ ಹೊಸ ಸಿನಿಮಾಗೆ ʻಸ್ಟಾರ್‌ʼ ನಟಿ ಸಮಂತಾ ಸಾಥ್

ವೆಬ್‌ ಸರಣಿಯಲ್ಲಿ ನಟಿಸುವ ಪ್ಲ್ಯಾನ್

"ವೆಬ್‍ ಸೀರೀಸ್‍ಗಳಲ್ಲಿ ನಟಿಸುವುದಕ್ಕೆ ರೆಡಿ ಇದ್ದೇನೆ. ಇತ್ತಿಚೆಗೆ ತೆಲುಗಿನಲ್ಲಿ ಸಮಂತಾ ಜೊತೆ ಒಂದು ಸಿನಿಮಾದಲ್ಲಿ ನಟಿಸಿದೆ. ಈ ವೇಳೆ ವೆಬ್‍ ಸೀರೀಸ್‍ನಲ್ಲಿ ಏನಾದರೂ ಅವಕಾಶಗಳಿದ್ದರೆ ನನಗೆ ತಿಳಿಸಿ ಅಂತಲೂ ಹೇಳಿ ಬಂದಿದ್ದೇನೆ. ನನಗಂತೂ ಮುಂಬೈಗೆ ಹೋಗಲು ಇಷ್ಟವಿಲ್ಲ. ಮುಂದೆ ಅನಿವಾರ್ಯ ಪರಿಸ್ಥಿತಿ ಎದುರಾದರೆ ನೋಡೋಣ. ತೆಲುಗಿನಲ್ಲಿ ಒಂದು ಸಿನಿಮಾಗೆ ನಟ-ನಟಿ ಫೈನಲ್‌ ಆಗುತ್ತಿದ್ದಂತೆಯೇ ಅಲ್ಲಿ ವ್ಯಾಪಾರ ಆರಂಭವಾಗುತ್ತದೆ. ಆದರೆ, ಕನ್ನಡದಲ್ಲಿ ಅಂಥದ್ದೊಂದು ಸಿಸ್ಟಂ ಇಲ್ಲ. ಇಲ್ಲಿ ದುಡ್ಡು ಹೂಡಿಕೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಟಿವಿ ಹಕ್ಕುಗಳನ್ನು ಕೂಡ ಇಲ್ಲಿ ಯಾರೂ ಖರೀದಿ ಮಾಡುತ್ತಿಲ್ಲ" ಎಂದು ಹೇಳುತ್ತಾರೆ ದಿಗಂತ್.‌