ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕರಾವಳಿʼ ಚಿತ್ರದ ಮೂಲಕ 23 ವರ್ಷಗಳ ತಪಸ್ಸಿಗೆ ದಕ್ಕಿದ ಅಭೂತಪೂರ್ವ ಯಶಸ್ಸು; ʻಬರಡಾಗಿದ್ದ ಬದುಕಿಗೆ ಮಳೆ ಸುರಿದ ಅನುಭವʼ ಎಂದ ನಟ ಮಿತ್ರ

ʻಕರಾವಳಿʼ ಸಿನಿಮಾದ ಮಹಾಬಲ ಪಾತ್ರದ ಮೂಲಕ ನಟ ಮಿತ್ರ ತಮ್ಮ 23 ವರ್ಷಗಳ సిನಿ ಬದುಕಿನ ಅತ್ಯುನ್ನತ ಯಶಸ್ಸು ಕಂಡಿದ್ದಾರೆ. ಈ ಗೆಲುವಿನ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಜೊತೆಗೆ ಯಾವುದೇ ಸಣ್ಣ ಅಥವಾ ದೊಡ್ಡ ಪಾತ್ರವಾದರೂ ನಟಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಇಲಿದೆ ಮಿತ್ರ ಅವರ ಸಂದರ್ಶನ.

ʻಕರಾವಳಿʼ ಚಿತ್ರದ ಮೂಲಕ ‘ಮಹಾಬಲ’ನಾಗಿ ಮನೆಮನ ಗೆದ್ದ ನಟ ಮಿತ್ರ

-

Avinash GR
Avinash GR Sep 21, 2026 3:49 PM

* 'ಕರಾವಳಿ' ಸಿನಿಮಾದಿಂದ ನಿಮಗೆ ಯಾವ ರೀತಿಯ ಪ್ರತಿಕ್ರಿಯೆ ಲಭಿಸಿದೆ?

- ನನ್ನ 23 ವರ್ಷದ ಸುದೀರ್ಘ ಸಿನಿಮಾ ಪಯಣದಲ್ಲಿ ನಾನು ಎಂದೂ ಊಹಿಸಿಕೊಳ್ಳಲು ಸಾಧ್ಯವಾಗದಷ್ಟು ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ಕುಟುಂಬ ಸಮೇತ ಪ್ರೇಕ್ಷಕರು 'ಮಹಾಬಲ'ನ ಪಾತ್ರವನ್ನು ತಮ್ಮದಾಗಿಸಿಕೊಂಡ ರೀತಿ ನಿಜಕ್ಕೂ ವಿಸ್ಮಯಕರ ಹಾಗೂ ಅವಿಸ್ಮರಣೀಯ. ಒಬ್ಬ ನಟನಾಗಿ ನನ್ನ ಜೀವನದ ಅತ್ಯಂತ ದೊಡ್ಡ ಯಶಸ್ಸು ಇದು ಎಂದೇ ಭಾವಿಸುತ್ತೇನೆ.

  • ಈ ಗೆಲುವಿನಿಂದಾಗಿ ನಿಮಗೆ ಇನ್ಯಾವುದಾದರೂ ಹೊಸ ಅವಕಾಶಗಳು ಸಿಕ್ಕಿವೆಯೇ, ಪ್ರಸ್ತುತ ವಾತಾವರಣ ಹೇಗಿದೆ?

- ಪ್ರಸ್ತುತ ಸಿಕ್ಕಾಪಟ್ಟೆ ಪ್ರಶಂಸೆಗಳು ಹರಿದುಬರುತ್ತಿವೆ. ಒಣಗಿ ಬರಡಾಗಿದ್ದ ಭೂಮಿಗೆ ಮಳೆ ಬಿದ್ದಾಗ ಎಷ್ಟೊಂದು ಖುಷಿಯಾಗುತ್ತದೆಯೋ, ಅಷ್ಟೇ ಸಂತಸ ನನಗಾಗಿದೆ. ಆ ಆನಂದವನ್ನು ಈಗ ಅನುಭವಿಸುತ್ತಿದ್ದೇನೆ. ಕಳೆದ 15 ವರ್ಷಗಳಿಂದ ಸಂಪರ್ಕದಲ್ಲಿ ಇಲ್ಲದವರೆಲ್ಲರೂ ಕರೆ ಮಾಡಿ ಶುಭ ಹಾರೈಸುತ್ತಿದ್ದಾರೆ. ವಿಡಿಯೋ ಹಾಗೂ ಸಂದೇಶಗಳನ್ನು ಕಳುಹಿಸಿ ಅಭಿನಂದಿಸುತ್ತಿದ್ದಾರೆ. ಜನ ನನ್ನನ್ನು 'ಮಹಾಬಲ' ಎಂದೇ ಮರುನಾಮಕರಣ ಮಾಡಿದ್ದಾರೆ. ಈ ಹಿಂದೆ 'ಜಾಣೇಶ' ಆಗಿ 20 ವರ್ಷ ನನ್ನನ್ನು ನೆನಪಿಸಿಕೊಂಡಿದ್ದರು, 'ಲಾಯರ್ ಗುಣವಂತ' ಆಗಿ ಒಂದಿಷ್ಟು ವರ್ಷ ಕಾಪಾಡಿದರು, 'ಮಾತು ಬಾರದ ಕೋಗಿಲೆ'ಯಾಗಿ ಸ್ವೀಕರಿಸಿದ್ದರು. ಆದರೆ, ಅವೆಲ್ಲವನ್ನೂ ಮೀರಿದ ಪಾತ್ರವಿದು. ಮಿತ್ರ ಇಲ್ಲಿಯವರೆಗೆ ಏನೇ ಮಾಡಿದ್ದರೂ ಅದನ್ನೆಲ್ಲ ಮರೆತು, ಪ್ರೇಕ್ಷಕರು ಈಗ ನನ್ನನ್ನು ಮಹಾಬಲನ ರೀತಿಯಲ್ಲೇ ಸ್ವೀಕರಿಸಲು ಶುರು ಮಾಡಿದ್ದಾರೆ. ಈಗ ಬರುತ್ತಿರುವ ಈ ಎಲ್ಲಾ ಪ್ರಶಂಸೆಗಳು ಕೆಲಸವಾಗಿ ಪರಿವರ್ತನೆಯಾದರೆ, ನಟನಾಗಿ ನಾನು ಅತ್ಯದ್ಭುತವಾದ ಜೀವನ ನಡೆಸಬಹುದು.

  • ಈ ನಿಟ್ಟಿನಲ್ಲಿ ಹೊಸ ಅವಕಾಶಗಳು ಬರುತ್ತಿವೆಯೇ? ಸಿನಿಮಾಗಳ ವಿಷಯದಲ್ಲಿ ಏನೇನಾಗುತ್ತಿದೆ?

- ಇಲ್ಲೊಂದು ಸ್ವಾರಸ್ಯಕರ ಸನ್ನಿವೇಶ ಸೃಷ್ಟಿಯಾಗಿದೆ. ಈಗಾಗಲೇ ನನಗೆ ಕಥೆ ಹೇಳಿದ್ದ ಕೆಲವರು, "ಸರ್, ನಾವು ನಿಮಗಾಗಿ ಬರೆದಿದ್ದ ಪಾತ್ರ ಈಗ ನಿಮ್ಮ ಮಟ್ಟಕ್ಕೆ ತುಂಬಾ ಚಿಕ್ಕದಾಯಿತು ಅನಿಸುತ್ತಿದೆ. ಸ್ಕ್ರೀನ್ ಮತ್ತು ಸ್ಟೇಜ್‌ನಲ್ಲಿ ನಿಮ್ಮ ಈ ಪರ್ಫಾರ್ಮೆನ್ಸ್ ನೋಡಿ ನಮಗೆ ಭಯವಾಗುತ್ತಿದೆ. ಈಗ ನಿಮಗಾಗಿ ಸಣ್ಣ ಪಾತ್ರ ಬರೆದುಕೊಂಡು ಹೇಗೆ ಬರಲಿ?" ಎಂದು ಹಿಂಜರಿಯುತ್ತಿದ್ದಾರೆ. ಅದಕ್ಕೆ ನಾನು, "ಅಯ್ಯಯ್ಯೋ ಹಾಗೆಲ್ಲ ಹೇಳಬೇಡಿ, ನನ್ನ ಹೊಟ್ಟೆಗೆ ಕಲ್ಲು ಹಾಕಬೇಡಿ. ಬನ್ನಿ, ನಾವು ಸೇರಿ ಏನಾದರೂ ಒಳ್ಳೆಯದನ್ನು ಮಾಡೋಣ" ಎಂದು ಹೇಳುತ್ತಿದ್ದೇನೆ. ಅಂದರೆ, ಈ ಯಶಸ್ಸು ಬರಹಗಾರರಲ್ಲಿ ಒಂದು ರೀತಿಯ ಭಯ ಹುಟ್ಟಿಸಿದೆ, "ಈ ಮನುಷ್ಯನಿಗೆ ಇನ್ನು ಮುಂದೆ ಏನು ಬರೆಯುವುದು?" ಎನ್ನುವುದೇ ಅವರ ಯೋಚನೆಯಾಗಿದೆ. ಆದರೆ ಹಾಗಾಗಬಾರದು. ಕಳೆದ ಎಂಟು ವರ್ಷಗಳಿಂದ ನಾನು ಏನೆಲ್ಲ ಕಷ್ಟಪಟ್ಟು ಬರೆಯುವುದಕ್ಕೆ ಕುಳಿತಿದ್ದೆನೋ ಆ ಸ್ಥಿತಿ ಮತ್ತೆ ಬರಬಾರದು.

ನಾನು ಎಲ್ಲ ರೀತಿಯ ಪಾತ್ರಗಳಿಗೂ ಸಿದ್ಧವಾಗಿದ್ದೇನೆ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತೇನೆ. ಉದಾಹರಣೆಗೆ, 'ಅಧ್ಯಕ್ಷ' ಸಿನಿಮಾದಲ್ಲಿ ಬರೀ ಮೂರು ನಿಮಿಷ ಬರುವ ಸಣ್ಣ ಪಾತ್ರ ಮಾಡಿದ್ದೆ. ಆದರೆ, ನನ್ನ ಕರಿಯರ್‌ನಲ್ಲೇ ಅತ್ಯಂತ ಹೆಚ್ಚು ಮೀಮ್ಸ್ ಹಾಗೂ ಟ್ರೋಲ್ ಆಗಿರುವ ಪಾತ್ರವೆಂದರೆ ಅದುವೇ 'ಗುಣವಂತ'. ಈಗ ಹೊಸ ಅವಕಾಶಗಳ ಬಗ್ಗೆ ಜನ ಮಾತನಾಡುತ್ತಿದ್ದಾರೆ, ಆದರೆ ಈಗಾಗಲೇ ಕಥೆ ಹೇಳಿದವರು "ಇವರಿಗೆ ಇನ್ನು ಮುಂದೆ ಏನು ಬರೆಯುವುದು?" ಎಂದು ಸ್ವಲ್ಪ ಹಿಂಜರಿಯುತ್ತಿದ್ದಾರೆ. ನಾನಂತೂ ಅತ್ಯಂತ ಕಾತುರದಿಂದ ಕಾಯುತ್ತಿದ್ದೇನೆ. ಯಾವ ಯಾವ ಪಾತ್ರಗಳು ನನ್ನನ್ನು ಕರೆಯುತ್ತಿವೆಯೋ, ಯಾವ ಸಿನಿಮಾಗಳು ನನಗಾಗಿ ಕಾಯುತ್ತಿವೆಯೋ, ಪಾತ್ರ ಸಣ್ಣದಿರಲಿ, ದೊಡ್ಡದಿರಲಿ ಎಲ್ಲದಕ್ಕೂ ಸಿದ್ಧವಾಗಿ ಕಾಯುತ್ತಿದ್ದೇನೆ.

  • ಸಾಮಾನ್ಯವಾಗಿ ಪ್ರೇಕ್ಷಕರಿಗೆ ಒಂದು ಪಾತ್ರ ಹಿಟ್ ಆದ ತಕ್ಷಣ, ಚಿತ್ರರಂಗದಲ್ಲಿ ಅದೇ ಮಾದರಿಯ ಪಾತ್ರಗಳೇ ಹುಡುಕಿಕೊಂಡು ಬರುತ್ತವೆ. ನಿಮ್ಮ ಅನುಭವ ಹೇಗಿದೆ?

- ಖಂಡಿತವಾಗಿಯೂ ಇಲ್ಲ. ನಾನೊಬ್ಬ ಕಲಾವಿದ. ನಾನು ಕೆಲಸ ಮಾಡಬೇಕು, ನನ್ನ ಹೊಟ್ಟೆ ತುಂಬಿಸಿಕೊಳ್ಳಬೇಕು. ಅದರ ಜೊತೆಗೆ ಬಹಳ ಪ್ರಜ್ಞಾವಂತನಾಗಿ, ಪಾಸಿಟಿವ್ ಆದ ರೀತಿಯಲ್ಲಿ ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡಬೇಕು. ಪ್ರೇಕ್ಷಕರು ಮತ್ತು ಕುಟುಂಬದವರು ನನ್ನನ್ನು ಇಷ್ಟಪಟ್ಟಿದ್ದಾರೆ. ಒಂದು ಕುಟುಂಬಕ್ಕೆ ಒಬ್ಬ ಕಲಾವಿದನ ಪಾತ್ರ ಇಷ್ಟವಾಗುವುದು ಬಹಳ ಕಷ್ಟ. ಅಂಥದ್ದರಲ್ಲಿ ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ಮುಜುಗರವಾಗದಂತೆ, ಅವರ ಮನಸ್ಸಿಗೆ ನೋವಾಗದಂತೆ ಮತ್ತು ಬೇಸರ ತರದಂತಹ ಪಾತ್ರಗಳನ್ನು ಮಾಡುತ್ತಾ ಸಾಗಬೇಕು ಎನ್ನುವುದಷ್ಟೇ ನನ್ನ ಮುಖ್ಯ ಉದ್ದೇಶ.

ʻಕರಾವಳಿʼ ನಂತರ ʻಮಹಾನ್‌ʼ ಚಿತ್ರದಲ್ಲಿ ಮಿಂಚಲು ರೆಡಿಯಾದ ನಟ ಮಿತ್ರ; ವಿಜಯ ರಾಘವೇಂದ್ರಗೆ ಜೋಡಿಯಾದ ರಾಧಿಕಾ ನಾರಾಯಣ್

  • ನಿಮ್ಮ ಮುಂದಿನ ಹುಡುಕಾಟವೇನು?

- ನನ್ನ ಹುಡುಕಾಟವಿರುವುದು ಅರ್ಥಪೂರ್ಣ ಪಾತ್ರಗಳು ಮತ್ತು ಕೈತುಂಬಾ ಕೆಲಸಕ್ಕಾಗಿ. ಕಾಮಿಡಿ ಇರಲಿ, ಸೀರಿಯಸ್ ಪಾತ್ರಗಳಾಗಿರಲಿ ಅಥವಾ ಪೌರಾಣಿಕ ಪಾತ್ರಗಳೇ ಆಗಿರಲಿ, ಯಾವುದೇ ಬಂದರೂ ಅದನ್ನು ಸ್ವೀಕರಿಸುವ ಶಕ್ತಿ ನನಗಿದೆ ಮತ್ತು ಅದಕ್ಕಾಗಿ ಕಾಯುತ್ತಿದ್ದೇನೆ. ಈ ಮಧ್ಯೆ 'ಕರಾವಳಿ' ಬಿಡುಗಡೆಯಾಗುತ್ತಿದ್ದಂತೆಯೇ ನಾನು ನಟಿಸಿದ್ದ ಕೆಲವು ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡಿದೆ. ಆ ಸಾಲಿನಲ್ಲಿ ಪಿ.ಸಿ ಶೇಖರ್‌ ನಿರ್ದೇಶನದ ಮಹಾನ್‌ ಚಿತ್ರದಲ್ಲಿ ನಟಿಸುತ್ತಿದ್ದೇನೆ, ತದನಂತರ 'ಲಕ್ಷ್ಮಿ ಪುತ್ರ' ನಟಿಸಿದ್ದೇನೆ. ಇವೆಲ್ಲವೂ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿರುವ, ಮಹಾಬಲನಷ್ಟೇ ತೂಕವಿರುವ ಪಾತ್ರಗಳು. ಮುಂದೆ ಬರಲಿರುವ ಒಳ್ಳೆಯ ಅವಕಾಶಗಳಿಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದೇನೆ. ಯಾವ ನಿರ್ದೇಶಕರು ನನ್ನನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ.

  • ಇತರ ಭಾಷೆಗಳಿಂದ ಏನಾದರೂ ಅವಕಾಶಗಳು ಬರುತ್ತಿವೆಯೇ?

- ಇಲ್ಲ, ಇಲ್ಲಿಯವರೆಗೆ ಹೊರಭಾಷೆಗಳಿಂದ ಯಾವುದೇ ಕರೆ ಬಂದಿಲ್ಲ. ಆದರೆ ನಾನು ಕಾತುರದಿಂದ ಕಾಯುತ್ತಿದ್ದೇನೆ. ನನಗಾಗಿ ಭಾಷೆ ಎಂದೂ ತಡೆಯಾಗುವುದಿಲ್ಲ. ಏಕೆಂದರೆ ನನಗೆ ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಹಿಂದಿ ಹಾಗೂ ತುಳು ಸೇರಿದಂತೆ ಹಲವು ಭಾಷೆಗಳು ಬರುತ್ತವೆ. ಅವರು ನನ್ನನ್ನು ಬಳಸಿಕೊಳ್ಳುತ್ತಾರಾ ಎಂದು ಕಾಯುತ್ತಿದ್ದೇನೆ.

  • 'ಕರಾವಳಿ' ನಂತರ ನಿಮ್ಮ ಸ್ಟ್ಯಾಂಡರ್ಡ್ ಬದಲಾಗಿದೆಯೇ? "ಇನ್ನು ಮುಂದೆ ಬೇರೆ ಲೆವೆಲ್‌ನಲ್ಲೇ ಯೋಚಿಸಬೇಕು" ಎನಿಸುತ್ತಿದೆಯೇ?

- ನಾನು ಹಸಿವಿರುವ ಒಬ್ಬ ಕಲಾವಿದ. ಸಿಕ್ಕ ಯಾವುದೇ ಪಾತ್ರಕ್ಕೂ ನಾನು ನ್ಯಾಯ ಒದಗಿಸುತ್ತೇನೆ ಎಂಬ ನಂಬಿಕೆ ಈಗ ಜನರಿಗೆ ಬಂದಿದೆ. ಬರಹಗಾರರು, ನಿರ್ದೇಶಕರು ಮತ್ತು ನಿರ್ಮಾಪಕರು ನನ್ನನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಷ್ಟೇ. ಆದರೆ, ಈಗ ನಾನು ಪಾತ್ರಗಳನ್ನು ಆಯ್ಕೆ ಮಾಡುವಾಗ ತೂಕವಾಗಿ ಯೋಚಿಸಬೇಕಾಗಿದೆ. ನನ್ನನ್ನು ಇಷ್ಟಪಡುವ ಜನರಿಗೆ ನಿರಾಶೆ ಮಾಡಬಾರದು ಎನ್ನುವ ದೊಡ್ಡ ಜವಾಬ್ದಾರಿಯನ್ನು ಈ 'ಮಹಾಬಲ'ನ ಪಾತ್ರ ನನ್ನ ಹೆಗಲಿಗೆ ನೀಡಿದೆ.

* ʻಅಧ್ಯಕ್ಷ' ಚಿತ್ರದ ಸಣ್ಣ ಪಾತ್ರ ದೊಡ್ಡ ಇಂಪ್ಯಾಕ್ಟ್ ನೀಡಿತ್ತು. 'ಮಹಾಬಲ' ಇಡೀ ಸಿನಿಮಾ ಕಾಡುವ ಪಾತ್ರ. ಮುಂದಿನ ಪಾತ್ರಗಳ ಆಯ್ಕೆಯಲ್ಲಿ ನಿಮ್ಮ ಮಾನದಂಡವೇನು? ಸ್ಕ್ರೀನ್ ಟೈಮ್ ಪ್ರಾಮುಖ್ಯವೇ ಅಥವಾ ಪಾತ್ರದ ತೂಕವೇ?

-ನಾನು ಅತ್ಯಂತ ಸರಳವಾಗಿ ಹೇಳುತ್ತೇನೆ. ಮೊದಲನೆಯದಾಗಿ ನನಗೋಸ್ಕರ ಬರೆಯುವವರು ಇರಬೇಕು. ಅಂದರೆ, ಮಿತ್ರನಿಗೆ ಈ ಪಾತ್ರ ಕೊಟ್ಟರೆ, ಅದು ಎಷ್ಟೇ ಸಣ್ಣದಾಗಿದ್ದರೂ ಆತ ನ್ಯಾಯ ಒದಗಿಸಬಲ್ಲ, ಇಂಪ್ಯಾಕ್ಟ್ ಸೃಷ್ಟಿಸಬಲ್ಲ ಎಂಬ ನಂಬಿಕೆ ಅವರ ಮನಸ್ಸಿಗೆ ಬಂದು ಬರೆದರೆ, ಅದು ಒಂದೇ ದಿನದ ಶೂಟಿಂಗ್ ಇರಲಿ, 10 ದಿನಗಳಿರಲಿ ಅಥವಾ ಇಡೀ ಸಿನಿಮಾದ ಶೂಟಿಂಗ್ ಇರಲಿ, ಐ ಡೋಂಟ್ ಮೈಂಡ್. ನನ್ನ ಬಾಡಿ ಲ್ಯಾಂಗ್ವೇಜ್ ಅಥವಾ ಪರ್ಸನಾಲಿಟಿಗೆ ಸೂಟ್ ಆಗುವಂತಹ ಯಾವುದೇ ಪಾತ್ರವಿದ್ದರೂ, ಅದು ಸಣ್ಣ ಪ್ರೊಡಕ್ಷನ್ ಇರಲಿ ಅಥವಾ ದೊಡ್ಡ ಪ್ರೊಡಕ್ಷನ್ ಇರಲಿ, ಮಾಡಲು ನಾನು ಸಿದ್ಧ.

ಇಷ್ಟೇಕೆ, ಅದು ಶಾರ್ಟ್ ಫಿಲ್ಮ್ ಆಗಿದ್ದರೂ ನಟಿಸಲು ಸಿದ್ಧನಿದ್ದೇನೆ. ಶಾರ್ಟ್ ಫಿಲ್ಮ್‌ಗಳನ್ನು ಮಾಡುವುದರಿಂದ ನಮಗೆ ನಟನಾಗಿ ಬಹಳ ಸಹಾಯವಾಗುತ್ತದೆ. ಭಾಷೆ, ಗಡಿ, ಪ್ರೊಡಕ್ಷನ್ ಎಷ್ಟೇ ಸೀಮಿತವಾಗಿದ್ದರೂ, ಅವೆಲ್ಲವನ್ನೂ ಮೀರಿ ಒಬ್ಬ ನಿಷ್ಠಾವಂತ ಕಲಾವಿದನಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕು ಎನ್ನುವುದೇ ನನ್ನ ಆಸೆ. ಅದು ಖಂಡಿತ ಈಡೇರುತ್ತದೆ ಎಂಬ ಭರವಸೆ ನನಗಿದೆ.

-ಪ್ರಮೋದ್‌ ಮೋಹನ್‌ ಹೆಗಡೆ