ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: ʼಕಾಂತಾರ ಚಾಪ್ಟರ್‌ 1' ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರ; ದೀಪಾವಳಿ ವೇಳೆ ಹೊಸ ಇತಿಹಾಸ

2025ರ ಅತೀ ಹೆಚ್ಚು ಗಳಿಸಿದ ಚಿತ್ರ ಎನ್ನುವ ಕಿರೀಟ ಕನ್ನಡದ ʼಕಾಂತಾರ ಚಾಪ್ಟರ್‌ 1' ಮುಡಿಗೇರಿದೆ. ರಿಷಬ್‌ ಶೆಟ್ಟಿ-ಹೊಂಬಾಳೆ ಫಿಲ್ಮ್ಸ್‌ ಕಾಂಬಿನೇಷನ್‌ನ ಈ ಚಿತ್ರ ದೀಪಾವಳಿ ವೇಳೆಗೆ ಜಾಗತಿಕವಾಗಿ 800 ಕೋಟಿ ರೂ. ಕ್ಲಬ್‌ ಸೇರುವ ಮೂಲಕ ಇತಿಹಾಸ ಬರೆದಿದೆ. ಬಾಲಿವುಡ್‌ನ ʼಛಾವಾʼ 807 ಕೋಟಿ ರೂ. ಗಳಿಸಿತ್ತು. ಕಾಂತಾರ ಚಾಪ್ಟರ್‌ 1' ಕಲೆಕ್ಷನ್‌ 809 ಕೋಟಿ ರೂ.ಗೆ ತಲುಪಿದೆ.

ʼಕಾಂತಾರ ಚಾಪ್ಟರ್‌ 1' ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರ

-

Ramesh B Ramesh B Oct 23, 2025 9:51 PM

ಬೆಂಗಳೂರು, ಆ. 23: 2025ರ ಅತೀ ಹೆಚ್ಚು ಗಳಿಸಿದ ಚಿತ್ರ ಎನ್ನುವ ಕಿರೀಟ ಬಾಲಿವುಡ್‌ನ ʼಛಾವಾʼ (Chhaava) ಚಿತ್ರದಿಂದ ಕನ್ನಡದ ʼಕಾಂತಾರ ಚಾಪ್ಟರ್‌ 1' (Kantara Chapter 1) ಮುಡಿಗೇರಿದೆ. ಆ ಮೂಲಕ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಸ್ಯಾಂಡಲ್‌ವುಡ್‌ ಮಿಂಚುತ್ತಿದೆ. ರಿಷಬ್‌ ಶೆಟ್ಟಿ (Rishab Shetty)-ಹೊಂಬಾಳೆ ಫಿಲ್ಮ್ಸ್‌ (Hombale Films) ಕಾಂಬಿನೇಷನ್‌ನ ಈ ಚಿತ್ರ ದೀಪಾವಳಿ ವೇಳೆಗೆ ಜಾಗತಿಕವಾಗಿ 800 ಕೋಟಿ ರೂ. ಕ್ಲಬ್‌ ಸೇರುವ ಮೂಲಕ ಇತಿಹಾಸ ಬರೆದಿದೆ. ವಿಕ್ಕಿ ಕೌಶಲ್‌-ರಶ್ಮಿಕಾ ಮಂದಣ್ಣ ಜೋಡಿಯ ʼಛಾವಾʼ 807 ಕೋಟಿ ರೂ. ಕಲೆಕ್ಷನ್‌ ಮಾಡುವ ಮೂಲಕ ಈ ವರ್ಷ ಅತೀ ಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡಿತ್ತು. ರಿಲೀಸ್‌ ಆದ 22ನೇ ದಿನಕ್ಕೆ ʼಕಾಂತಾರ ಚಾಪ್ಟರ್‌ 1' ಈ ದಾಖಲೆಯನ್ನು ಮೀರಿ ಮುನ್ನಡೆದಿದೆ. ಸದ್ಯ ಸ್ಯಾಂಡಲ್‌ವುಡ್‌ನ ಹೆಮ್ಮೆಯ ಚಿತ್ರದ ಮುಂದಿರುವುದು 1 ಸಾವಿರ ಕೋಟಿ ರೂ. ಮೈಲಿಗಲ್ಲು.

ಒಂದುವೇಳೆ ʼಕಾಂತಾರ ಚಾಪ್ಟರ್‌ 1' 1 ಸಾವಿರ ಕೋಟಿ ರೂ. ಕ್ಲಬ್‌ ಸೇರಿದರೆ 2025ರಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಚಿತ್ರ ಎನಿಸಿಕೊಳ್ಳಲಿದೆ. ಒಟ್ಟಾರೆಯಾಗಿ ಕನ್ನಡದ 1 ಸಾವಿರ ಕೋಟಿ ರೂ. ಕಲೆಕ್ಷನ್‌ ಮಾಡಿದ ಕನ್ನಡದ 2ನೇ ಸಿನಿಮಾವಾಗಲಿದೆ. ಈ ಹಿಂದೆ 2022ರಲ್ಲಿ ರಿಲೀಸ್‌ ಆದ ಹೊಂಬಾಳೆ ಫಿಲ್ಮ್ಸ್‌-ಯಶ್‌-ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ʼಕೆಜಿಎಫ್‌ 2' ಈ ಅಪರೂಪದ ಸಾಧನೆ ಮಾಡಿದೆ. ಸದ್ಯ ʼಕಾಂತಾರʼದ ಓಟ ಗಮನಿಸಿದರೆ ಅನಾಯಾಸವಾಗಿ 1 ಸಾವಿರ ಕೋಟಿ ರೂ. ಕ್ಲಬ್‌ ಸೇರಲಿದೆ ಎನ್ನುವ ಲೆಕ್ಕಾಚಾರವಿದೆ.

ಹೊಂಬಾಳೆ ಫಿಲ್ಮ್ಸ್‌ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Kantara Chapter 1 Collection: ಬಾಕ್ಸ್‌ ಆಫೀಸ್‌ನಲ್ಲಿ ಈಗ ʼಕಾಂತಾರʼದ್ದೇ ಹವಾ; ಇದುವರೆಗೆ ಗಳಿಸಿದ್ದೆಷ್ಟು?

ಅಕ್ಟೋಬರ್‌ 2ರಂದು ತೆರೆಗೆ ಬಂದ ʼಕಾಂತಾರ ಚಾಪ್ಟರ್‌ 1' ಸದ್ಯ 3ನೇ ವಾರಕ್ಕೆ ಕಾಲಿಟ್ಟಿದ್ದು, ಜಾಗತಿಕ ಕಲೆಕ್ಷನ್‌ ಒಟ್ಟು 809 ಕೋಟಿ ರೂ. ದಾಟಿದೆ. ಮೊದಲ 2 ವಾರಗಳಲ್ಲಿ ಈ ಚಿತ್ರ 717 ಕೋಟಿ ರೂ. ಗಳಿಸಿತ್ತು. 3ನೇ ವಾರದಲ್ಲಿ ಬರೋಬ್ಬರಿ 92 ಕೋಟಿ ರೂ. ಹರಿದು ಬಂದಿದ್ದು, ಒಟ್ಟು ಗಳಿಕೆ 809 ಕೋಟಿ ರೂ.ಗೆ ತಲುಪಿದೆ. ಇನ್ನು ಭಾರತದ ಕಲೆಕ್ಷನ್‌ 556.75 ಕೋಟಿ ರೂ. ಎಂದು ಮೂಲಗಳು ತಿಳಿಸಿವೆ. ವಿಶೇಷ ಎಂದರೆ ಲಕ್ಷ್ಮಣ್‌ ಉಟೇಕರ್‌ ನಿರ್ದೇಶನ ಐತಿಹಾಸಿಕ ಚಿತ್ರ ʼಛಾವಾʼ ಭಾರತದಲ್ಲಿ 602 ಕೋಟಿ ರೂ. ದೋಚಿಕೊಂಡಿದೆ. ಈ ದಾಖಲೆಯ ಸನಿಹಕ್ಕೆ ʼಕಾಂತಾರ ಚಾಪ್ಟರ್‌ 1' ಈಗಾಗಲೇ ಬಂದಿದ್ದು, ಕೆಲವೇ ದಿನಗಳಲ್ಲಿ ಇದನ್ನೂ ಹಿಂದಿಕ್ಕಲಿದೆ.

ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರಗಳು

ʼಕಾಂತಾರ ಚಾಪ್ಟರ್‌ 1, 'ಛಾವಾʼ ಹೊರತು ಪಡಿಸಿ ಜಾಗತಿಕವಾಗಿ ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರಗಳು ಯಾವ್ಯಾವು ಎಂದು ನೋಡುವುದಾದರೆ ಹಿಂದಿಯ ʼಸೈಯಾರಾʼ (576 ಕೋಟಿ ರೂ.), ತಮಿಳಿನ ʼಕೂಲಿʼ (500 ಕೋಟಿ ರೂ.), ಹಿಂದಿಯ ʼವಾರ್‌ 2' (365 ಕೋಟಿ ರೂ.), ಆನಿಮೇಷನ್‌ ಚಿತ್ರ ʼಮಹಾವತಾರ್‌ ನರಸಿಂಹʼ (365 ಕೋಟಿ ರೂ.) ನಂತರದ ಸ್ಥಾನದಲ್ಲಿದೆ.

ʼಕಾಂತಾರ ಚಾಪ್ಟರ್‌ 1ʼ ಸಿನಿಮಾದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್‌ ನಟಿಸಿದ್ದು, ಮುಖ್ಯ ಪಾತ್ರಗಳಲ್ಲಿ ಜಯರಾಮ್‌, ಗುಲ್ಶನ್‌ ದೇವಯ್ಯ, ರಾಕೇಶ್‌ ಪೂಜಾರಿ ಮತ್ತಿತರರು ಕಾಣಿಸಿಕೊಂಡಿದ್ದಾರೆ. ಚಿತ್ರದ ಇಂಗ್ಲಿಷ್‌ ವರ್ಷನ್‌ ಅಕ್ಟೋಬರ್‌ 31ರಂದು ರಿಲೀಸ್‌ ಆಗಲಿದೆ.