ʻಕಾವ್ಯ ನನ್ನನ್ನು ಅಪ್ಪಾಜಿ ಅಂತ ಕರೀತಾಳೆ, ನನ್ನ ಮಗಳ ಸ್ಥಾನ ತುಂಬಿದಳು, ನನಗೀಗ ಮೂವರು ಹೆಣ್ಣು ಮಕ್ಕಳುʼ; ʻಕೆಂಡಸಂಪಿಗೆʼ ನಟ ನಾಗರಾಜ್ ಕೋಟೆ
'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಕಾವ್ಯ ಶೈವಗೆ ತಂದೆಯಾಗಿ ನಟಿಸಿದ್ದವರು ನಾಗರಾಜ್ ಕೋಟೆ. ಹೆಣ್ಣು ಮಕ್ಕಳು ಇಲ್ಲದ ನನಗೆ ಕಾವ್ಯ ಮಗಳ ಸ್ಥಾನ ತುಂಬಿದ್ದಾಳೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ನಾಗರಾಜ್ ಕೋಟೆ. "ಸಂಬಂಧಗಳು ಗಟ್ಟಿಯಾಗಲು ಹೊಟ್ಟೆಯಲ್ಲಿ ಹುಟ್ಟಬೇಕಿಲ್ಲ, ಹೃದಯದಲ್ಲಿ ಪ್ರೀತಿ ಇದ್ದರೆ ಸಾಕು" ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಕಾವ್ಯ ಶೈವ, ಕಿರುತೆರೆ ಧಾರಾವಾಹಿಗಳ ಮೂಲಕ ಬಣ್ಣದ ಲೋಕಕ್ಕೆ ಬಂದವರು. ಕೆಂಡಸಂಪಿಗೆ ಧಾರಾವಾಹಿಯಲ್ಲಿ ಅವರು ನಿರ್ವಹಿಸಿದ ಸುಮನಾ ಪಾತ್ರ ತುಂಬಾ ಫೇಮಸ್ ಆಗಿತ್ತು. ಅಂದಹಾಗೆ, ಆ ಸೀರಿಯಲ್‌ನಲ್ಲಿ ಅವರು ಕಾವ್ಯಗೆ ತಂದೆ ಪಾತ್ರ ಮಾಡಿದವರು ನಾಗರಾಜ್ ಕೋಟೆ. ಧಾರಾವಾಹಿ ಮುಗಿದರೂ, ನಾಗರಾಜ್ ಮತ್ತು ಕಾವ್ಯ ನಡುವೆ ತಂದೆ - ಮಗಳ ಸಂಬಂಧ ಮಾತ್ರ ಹಾಗೇ ಕಂಟಿನ್ಯೂ ಆಗಿದೆ. ಈ ಬಗ್ಗೆ ನಾಗರಾಜ್ ಕೋಟೆ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ನಾಗರಾಜ್ ಕೋಟೆ ಅವರ ಪೋಸ್ಟ್‌ನಲ್ಲಿ ಏನಿದೆ?
"ಕೆಲವೊಮ್ಮೆ ಜತೆಗೆ ನಟಿಸಿದ ಕಲಾವಿದರು ಅದು ಚಲನಚಿತ್ರವೋ, ಧಾರಾವಾಹಿಯೋ, ನಾಟಕವೋ, ಮುಗಿದ ಮೇಲೆ ನಾವೆಲ್ಲೋ ಅವರೆಲ್ಲೋ ಎಂಬಂತೆ ಸುಮ್ಮನಿದ್ದುಬಿಡುತ್ತೇವೆ. ಆದರೆ ಕೆಲವು ಕಲಾವಿದರೊಂದಿಗಿನ ಸಂಬಂಧ ನಿಜ ಜೀವನದ ಬಂಧುಗಳಂತೆ ಆಗಿಬಿಡುತ್ತದೆ. ಅದಕ್ಕೆ ಕಾರಣ ನಾವು ನಟಿಸಿದ ಆ ಚಿತ್ರವೋ, ಧಾರಾವಾಹಿಯೋ, ನಾಟಕವೋ, ಕಾರ್ಯಕ್ರಮವೋ ಆಗಿರಲಿ ಬಂಧ ಸೇತುವೆಯಾಗಿ ಬಿಡುತ್ತದೆ. ಈ ವಿಚಾರವಾಗಿ ನನ್ನ ಜೀವನದಲ್ಲೂ ಹಲವಾರು ಕಲಾವಿದರು ಸೇರಿಕೊಂಡಿದ್ದಾರೆ. ಆದರೆ ಮಗಳಂಥ ಸ್ಥಾನವನ್ನು ತುಂಬಿದ್ದು ಮಾತ್ರ ಕೆಂಡಸಂಪಿಗೆ ಕಾವ್ಯ ಒಬ್ಬಳೇ" ಎಂದಿದ್ದಾರೆ ನಾಗರಾಜ್ ಕೋಟೆ.
ನನಗೀಗ ಮೂವರು ಹೆಣ್ಣುಮಕ್ಕಳು
"ಧಾರಾವಾಹಿ ಮುಗಿದರೂ ಅಪ್ಪಾಜಿ ಎಂದೇ ಪ್ರೀತಿಯಿಂದ ಕರೆಯುತ್ತಾಳೆ. ಕರೆದರೆ ಮನೆಗೆ ಬರುತ್ತಾಳೆ. ಕುಶಲೋಪರಿ ಮಾತನಾಡಿ, ಹರಟೆ ಹೊಡೆದು, ನಕ್ಕು ಮನಸ್ಸು ಹಗುರಾಗಲು ಕಾರಣವಾಗುತ್ತಾಳೆ. ಅವಳ "ಬಿಗ್ ಬಾಸ್" ಯಶಸ್ಸಿನ ಬಗ್ಗೆ ನಾನು 2 ವರ್ಷಗಳ ಹಿಂದೆಯೇ ಭವಿಷ್ಯ ಹೇಳಿದ್ದೆ. ಅದು ನಿಜವೂ ಆಯಿತು. ಈ ಸರಳ ಮನಸ್ಸಿನ ಹುಡುಗಿ ಕಾವ್ಯಾಳಿಗೆ ದೇವರು ಸದಾ ಯಶಸ್ಸು, ಕೀರ್ತಿ, ಆರೋಗ್ಯ ನೀಡಿ ಕಾಪಾಡಲಿ ಎಂಬುದೇ ನನ್ನ ಸವಿನಯ ಪ್ರಾರ್ಥನೆ" ಎಂದಿದ್ದಾರೆ ನಾಗರಾಜ್ ಕೋಟೆ.
BBK 12: ʻಬಿಗ್ ಬಾಸ್ʼ ಮನೆಯ ಕ್ಯಾಪ್ಟನ್ ಆದ ಕಾವ್ಯ ಶೈವ; ಅದೊಂದು ವಿಚಾರದಲ್ಲಿ ಗಿಲ್ಲಿ ಸೀರಿಯಸ್ ಆಗಿಬಿಟ್ರಾ?
"ನನಗೆ ಇಬ್ಬರು ಗಂಡುಮಕ್ಕಳು, ಹೆಣ್ಣು ಮಕ್ಕಳು ಇರಲಿಲ್ಲ. ನಂತರ ಹೆಣ್ಣು ಮಕ್ಕಳಾಗಿ ಇಬ್ಬರು ಸೊಸೆಯಂದಿರು ಬಂದರು. ನಂತರ ಧಾರಾವಾಹಿಯ ಮೂಲಕ ಇವಳೊಬ್ಬಳು ಮುದ್ದಿನ ಮಗಳಾದಳು ನನಗೀಗ ಮೂವರು ಹೆಣ್ಣುಮಕ್ಕಳು. ನಾನೆಂಥ ಭಾಗ್ಯವಂತ" ಎಂದಿದ್ದಾರೆ ನಾಗರಾಜ್ ಕೋಟೆ.
ನಾಗರಾಜ್ ಕೋಟೆ ಅವರ ಪೋಸ್ಟ್
ಹೃದಯದಲ್ಲಿ ಪ್ರೀತಿ ಹುಟ್ಟಿದರೆ ಸಾಕು
"ಅದಕ್ಕೆ ಹೇಳುವುದು, ಸಂಬಂಧಗಳು ಗಟ್ಟಿಯಾಗಲು ಹೊಟ್ಟೆಯಲ್ಲೇ ಹುಟ್ಟಬೇಕಾಗಿಲ್ಲ. ಹೃದಯದಲ್ಲಿ ಪ್ರೀತಿ ಹುಟ್ಟಿದರೆ ಸಾಕು. ಅವರೆಲ್ಲರೂ ಒಂದೇ ಕುಟುಂಬದವರೇ.. ಒಂದೇ ಜಾತಿಯವರೇ ಏನಂತೀರಿ? ಸರ್ವೇಜನಾ ಸುಖಿನೋಭವಂತು" ಎಂದು ತಮ್ಮ ಬರಹವನ್ನು ಮುಗಿಸಿದ್ದಾರೆ ನಾಗರಾಜ್ ಕೋಟೆ.