106ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಓಂ ಸಾಯಿಪ್ರಕಾಶ್; ʻಕಾಮನ್ ಮ್ಯಾನ್ʼ ಚಿತ್ರದಲ್ಲಿದೆ ಲಾಯರ್ ಸಿಎಂ ಆಗುವ ಕಥೆ!
ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನದ 106ನೇ ಚಿತ್ರ ‘ಕಾಮನ್ ಮ್ಯಾನ್’ ಮೋಷನ್ ಪೋಸ್ಟರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸುರಭಿ ಫಿಲಂಸ್ ಅಡಿಯಲ್ಲಿ ಎನ್. ನರಸಿಂಹಮೂರ್ತಿ ನಿರ್ಮಿಸಿರುವ ಈ ಚಿತ್ರದಲ್ಲಿ, ಒಬ್ಬ ಸಾಮಾನ್ಯ ವಕೀಲ ಯಾವುದೇ ಚುನಾವಣೆ ಎದುರಿಸದೇ ಅನಿರೀಕ್ಷಿತವಾಗಿ ರಾಜ್ಯದ ಮುಖ್ಯಮಂತ್ರಿಯಾದರೆ ಏನೆಲ್ಲಾ ಸುಧಾರಣೆ ತರಬಹುದು ಎಂಬ ಕುತೂಹಲಕಾರಿ ರಾಜಕೀಯ ಕಥಾಹಂದರವಿದೆ.
-
ಒಬ್ಬ ಸಾಮಾನ್ಯ ವಕೀಲ ಯಾವುದೇ ಚುನಾವಣೆ ಎದುರಿಸದೇ ಅನಿರೀಕ್ಷಿತವಾಗಿ ರಾಜ್ಯದ ಮುಖ್ಯಮಂತ್ರಿಯಾದರೆ ಏನೆಲ್ಲಾ ಸುಧಾರಣೆ ತರಬಹುದು? ಈ ಕುತೂಹಲಕಾರಿ ಕಥಾಹಂದರ ಹೊಂದಿರುವ ಚಿತ್ರವೇ ‘ಕಾಮನ್ ಮ್ಯಾನ್’. ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರವಾಗಿ ಮೂಡಿಬಂದಿರುವ ಈ ಸಿನಿಮಾದ ಮೋಶನ್ ಪೋಸ್ಟರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು.
ಎನ್. ನರಸಿಂಹಮೂರ್ತಿ ಅವರು ಸುರಭಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಕಥೆಯನ್ನೂ ಅವರೇ ಬರೆದಿದ್ದಾರೆ. ನಿರ್ಮಾಪಕರ ಹುಟ್ಟುಹಬ್ಬದ ಸಂದರ್ಭದಲ್ಲೇ ಈ ಮೋಷನ್ ಪೋಸ್ಟರ್ ಲಾಂಚ್ ಕಾರ್ಯಕ್ರಮ ಆಯೋಜನೆಗೊಂಡಿದ್ದು ವಿಶೇಷವಾಗಿತ್ತು.
ಚುನಾವಣೆ ಇಲ್ಲದೇ ಸಿಎಂ ಆಗುವ 'ಕಾಮನ್ ಮ್ಯಾನ್'!
ಈ ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಎನ್. ನರಸಿಂಹಮೂರ್ತಿ, "ನಾನು ಸಾಕಷ್ಟು ಸೋಷಿಯಲ್ ಸರ್ವೀಸ್ ಮಾಡುತ್ತಲೇ ರಂಗಭೂಮಿ ಹಾಗೂ ಬೀದಿ ನಾಟಕಗಳ ನಂಟು ಬೆಳೆಸಿಕೊಂಡವನು. ಇದು ನನ್ನ ನಿರ್ಮಾಣದ ಮೂರನೇ ಸಿನಿಮಾ. ಮೊದಲು ಈ ಚಿತ್ರಕ್ಕೆ 'ನಾನೇ ಸಿಎಂ' ಎಂಬ ಶೀರ್ಷಿಕೆ ಅಂದುಕೊಂಡಿದ್ದೆವು, ನಂತರ 'ಕಾಮನ್ ಮ್ಯಾನ್' ಎಂದು ಬದಲಾಯಿಸಿದೆವು. ಸಾಯಿಪ್ರಕಾಶ್ ಅವರ ಜೊತೆ ಸಿನಿಮಾ ಮಾಡುತ್ತಿದ್ದೇನೆ ಎಂದಾಗ ಅನೇಕರು ಅವರದ್ದು ಓಲ್ಡ್ ಸ್ಟೈಲ್ ಎಂದರು. ಆದರೆ ನಾನು ಅದನ್ನೇ ಚಾಲೆಂಜ್ ಆಗಿ ತಗೊಂಡೆ. ಅವರ ಅನುಭವ ಹಾಗೂ ಬುದ್ಧಿವಂತಿಕೆಗೆ ಸಾಟಿ ಇಲ್ಲ. ಒಬ್ಬ ಸಾಮಾನ್ಯ ಶಾಸಕನಾಗಬೇಕಾದರೂ ಚುನಾವಣೆ ನಡೆಯಬೇಕು. ಆದರೆ ಈ ಚಿತ್ರದ ನಾಯಕ ಯಾವುದೇ ಚುನಾವಣೆ ಇಲ್ಲದೆ, ಸರ್ಕಾರದ ಮೇಲೆ ಒತ್ತಡ ತಂದು ಹೇಗೆ ಸಿಎಂ ಆಗ್ತಾನೆ ಎಂಬುದೇ ಚಿತ್ರದ ಮುಖ್ಯ ಕಥಾಹಂದರ" ಎಂದು ವಿವರಿಸಿದರು.
ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್
ನಿರ್ದೇಶಕ ಓಂ ಸಾಯಿಪ್ರಕಾಶ್ ಮಾತನಾಡಿ, "ಇದು ನನ್ನ ನಿರ್ದೇಶನದ 106ನೇ ಚಿತ್ರ. ಒಬ್ಬ ಸಾಮಾನ್ಯ ಲಾಯರ್ ಅನಿರೀಕ್ಷಿತವಾಗಿ ರಾಜ್ಯದ ಸಿಎಂ ಆದಾಗ ಏನೆಲ್ಲಾ ಬದಲಾವಣೆ ತರಬಹುದು ಎಂಬುದನ್ನು ಕುತೂಹಲಕರವಾಗಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಹಿರಿಯ ನಟ ಅಶೋಕ್ ಅವರು ಇಲ್ಲಿ ರಾಜ್ಯಪಾಲರ ಪಾತ್ರ ನಿರ್ವಹಿಸಿದ್ದಾರೆ. ನಾಯಕ ಗೌರಿಶಂಕರ್ 'ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎನ್ನುವಂತೆ ಅದ್ಭುತವಾಗಿ ನಟಿಸಿದ್ದಾರೆ. ನಾಯಕಿ ಸೋನಾ ಲದ್ವಾ ಹಾಗೂ ಬಾಂಬೆ ಮೂಲದ ಮತ್ತೊಬ್ಬ ನಟಿ ಕೂಡ ಚಿತ್ರದಲ್ಲಿದ್ದಾರೆ. ಕ್ಯಾಮೆರಾಮನ್ ಕೃಷ್ಣ ಹಾಗೂ ಸಂಭಾಷಣೆಗಾರ ಶೈಲೇಶ್ ಸೇರಿದಂತೆ ಇಡೀ ತಂಡ ಉತ್ತಮವಾಗಿ ಕೆಲಸ ಮಾಡಿದೆ" ಎಂದರು.
ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್ ಎಂದ ಗೌರಿಶಂಕರ್
'ಕೆರೆಬೇಟೆ' ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ಗೌರಿಶಂಕರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. "ಇದು ನನ್ನ ಮೂರನೇ ಸಿನಿಮಾ. 'ಕೆರೆಬೇಟೆ' ನಂತರ ಒಂದು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದಾಗ ಬಯಸಿದ ಪಾತ್ರವೇ ಹುಡುಕಿಕೊಂಡು ಬಂತು. ಇಷ್ಟು ದೊಡ್ಡ ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ನಿರ್ಮಾಪಕರು ಕಥೆಗೆ ಏನು ಬೇಕೋ ಅದನ್ನೆಲ್ಲಾ ಒದಗಿಸಿಕೊಟ್ಟಿದ್ದಾರೆ. ಆಗಸ್ಟ್ ವೇಳೆಗೆ 'ಕಾಮನ್ ಮ್ಯಾನ್' ಪ್ರೇಕ್ಷಕರ ಮುಂದೆ ಬರಲಿದೆ" ಎಂದು ಮಾಹಿತಿ ಹಂಚಿಕೊಂಡರು.
Kannada New Movie: ‘ಮೃತ್ಯುದೇವತೆ’ ಸಿನಿಮಾ ಹಾಡು ರಿಲೀಸ್ ಮಾಡಿದ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್
ಕಾಮನ್ ಮ್ಯಾನ್ ಚಿತ್ರಕ್ಕೆ ವಿನಯ್ ಚಂದ್ರ ಅವರ ಸಂಗೀತ ನಿರ್ದೇಶನವಿದ್ದು, ಒಟ್ಟು 4 ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ವಿಶೇಷವೆಂದರೆ ಈ ಹಾಡುಗಳಿಗೆ ಚೈತ್ರಾ ಆಚಾರ್, ಕೈಲಾಶ್ ಖೇರ್ ಹಾಗೂ ಬಾಬಾ ಸೈಗಲ್ ಅವರಂತಹ ಖ್ಯಾತ ಗಾಯಕರು ದನಿಯಾಗಿದ್ದಾರೆ. ಜೆ.ಜಿ.ಕೃಷ್ಣ ಮತ್ತು ದೀಪಕ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಉಳಿದಂತೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್ ಹಾಗೂ ಪ್ರಕಾಶ್ ತುಮ್ಮಿನಾಡು ನಟಿಸಿದ್ದಾರೆ.