ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೋವಾ ರಸ್ತೆಯಲ್ಲಿ ಕಿಚ್ಚನ ಪಡೆ ಅಬ್ಬರ; ರೇಸಿಂಗ್ ಕಣದಲ್ಲಿ ಸುದೀಪ್ ʻಕಿಚ್ಚಾಸ್ ಕಿಂಗ್ಸ್ ಬೆಂಗಳೂರುʼ ಟೀಮ್

Indian Racing Festival (IRF) ಅಂಗವಾಗಿ ಫೆಬ್ರವರಿ 14 ಮತ್ತು 15ರಂದು ಗೋವಾದ ರಸ್ತೆಗಳಲ್ಲಿ ಅದ್ಧೂರಿ ಸ್ಟ್ರೀಟ್ ರೇಸಿಂಗ್ ನಡೆಯಲಿದೆ. ಈ ಬಗ್ಗೆ ಮಾತನಾಡಿರುವ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಮಾಲೀಕ ಕಿಚ್ಚ ಸುದೀಪ್, ಸ್ಟ್ರೀಟ್ ರೇಸಿಂಗ್ ಕೇವಲ ವೇಗವಲ್ಲ, ಅದು ಧೈರ್ಯ ಮತ್ತು ಸಮಯಪ್ರಜ್ಞೆಯ ಅಗ್ನಿಪರೀಕ್ಷೆ ಎಂದು ಬಣ್ಣಿಸಿದ್ದಾರೆ.

ಸ್ಟ್ರೀಟ್ ರೇಸಿಂಗ್ ಸವಾಲಿಗೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ಸಜ್ಜು!

-

Avinash GR
Avinash GR Feb 9, 2026 3:17 PM

ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ಗಾಗಿ (IRF) ಫೆಬ್ರವರಿ 14 ಮತ್ತು 15ರಂದು ಗೋವಾದ ರಸ್ತೆಗಳು ಹೈ–ಇಂಟೆನ್ಸಿಟಿ ರೇಸಿಂಗ್ ಕಣವಾಗಿ ಮಾರ್ಪಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ, ನಟ ಹಾಗೂ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಮಾಲೀಕರಾದ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. "ಸ್ಟ್ರೀಟ್ ರೇಸಿಂಗ್ ಎನ್ನುವುದು ಸಮಯಸ್ಪೂರ್ತಿ, ಧೈರ್ಯ ಮತ್ತು ಸಂಯಮದ ಪರಮ ಪರೀಕ್ಷೆಯಾಗಿದ್ದು, ಇವೇ ಮೌಲ್ಯಗಳು ಕಿಚ್ಚಾಸ್ ಕಿಂಗ್ಸ್ ಬೆಂಗಳೂರು (Kichcha’s Kings Bengaluru) ತಂಡವನ್ನು ನಿರ್ಧರಿಸುತ್ತವೆ" ಎಂದು ಸುದೀಪ್ ಅವರು ಹೇಳಿದ್ದಾರೆ.‌

ನಮ್ಮ ಧೈರ್ಯ ಮತ್ತು ಆಟಿಟ್ಯೂಡ್‌ಗೆ ನಡೆಯುವ ಅಗ್ನಿಪರೀಕ್ಷೆ

"ಪರ್ಮನೆಂಟ್ ಟ್ರ್ಯಾಕ್‌ನಲ್ಲಿ ಎಲ್ಲವೂ ನಮ್ಮ ಕಂಟ್ರೋಲ್‌ನಲ್ಲಿರುತ್ತದೆ. ಆದರೆ ಸ್ಟ್ರೀಟ್ ರೇಸಿಂಗ್ ಹಾಗಲ್ಲ; ಅದು ನಮ್ಮ ಮೈಂಡ್‌ಸೆಟ್ ಅನ್ನೇ ಬದಲಿಸಿಬಿಡುತ್ತದೆ. ಇಲ್ಲಿ ಪರ್ಫೆಕ್ಷನ್ಗಿಂತ ಮುಖ್ಯವಾಗಿ ಬೇಕಿರೋದು ಎಂತಹ ಸವಾಲನ್ನಾದರೂ ಎದುರಿಸುವ ಗಟ್ಟಿ ಮನಸ್ಸು. ಇದೊಂದು ಬರೀ ರೇಸ್ ಅಲ್ಲ; ನಮ್ಮ ಧೈರ್ಯ ಮತ್ತು ಆಟಿಟ್ಯೂಡ್‌ಗೆ ನಡೆಯುವ ಅಗ್ನಿಪರೀಕ್ಷೆ. ಇಡೀ ನಗರವೇ ನಮ್ಮ ಕಣ್ಣಮುಂದೆ ಜೀವಂತವಾದಾಗ, ರೇಸರ್ ಕೂಡ ಅಷ್ಟೇ ಜೋಶ್‌ನಿಂದ ಮುನ್ನುಗ್ಗಬೇಕಾಗುತ್ತದೆ" ಎಂದು ಸುದೀಪ್‌ ಹೇಳಿದ್ದಾರೆ.

Dhanveerah: ದೊಡ್ಡವರು ಮಾತನಾಡೋದು ಕೇಳಿ ಖುಷಿ ಆಯ್ತು! ಸುದೀಪ್‌ ಬಗ್ಗೆ ಧನ್ವೀರ್ ಹೇಳಿದ್ದೇನು?

ಪ್ರತಿಕ್ಷಣವೂ ಎಲ್ಲರನ್ನೂ ಎಚ್ಚರದಲ್ಲಿರಿಸುತ್ತದೆ

"ಸ್ಟ್ರೀಟ್ ರೇಸಿಂಗ್ ಮೋಟಾರ್‌ಸ್ಪೋರ್ಟ್ ಅನ್ನು ಜನರಿಗೆ ಇನ್ನಷ್ಟು ಹತ್ತಿರ ತರುತ್ತದೆ. ಈ ಕ್ರೀಡೆಯನ್ನು ಮುಚ್ಚಿದ ಸರ್ಕ್ಯೂಟ್‌ಗಳಿಂದ ಹೊರತಂದು ನಗರದ ಹೃದಯಭಾಗಕ್ಕೆ ಕರೆದೊಯ್ಯುತ್ತದೆ. ಇದು ಭಾರೀ ಅಬ್ಬರದ, ತೀವ್ರದ ಸ್ಪರ್ಧೆಯಾಗಿರುತ್ತದೆ. ಇಲ್ಲಿ ಸಣ್ಣ ತಪ್ಪಿಗೂ ಜಾಗವಿಲ್ಲ. ಜನರ ಶಕ್ತಿಯೇ ತಂಡವನ್ನು ಸದಾ ಜಾಗೃತವಾಗಿಯೂ ಶಾರ್ಪ್ ಆಗಿಯೂ ಇಡುತ್ತದೆ. ಆ ಶಕ್ತಿ ಪ್ರತಿಕ್ಷಣವೂ ಎಲ್ಲರನ್ನೂ ಎಚ್ಚರದಲ್ಲಿರಿಸುತ್ತದೆ" ಎಂದು ಸುದೀಪ್ ಅವರು ಹೇಳಿದ್ದಾರೆ.

Ashwini Gowda: ಸುದೀಪ್‌ ಅವರು ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ! ಅಶ್ವಿನಿ ಗೌಡ

ಶಿಸ್ತಿನ ಮೇಲೆ ನಂಬಿಕೆ ಇಟ್ಟಿದ್ದೇವೆ

"ನಾವು ನಮ್ಮ ಚಾಲಕರ ಅಂತಃಪ್ರಜ್ಞೆ, ಅನುಭವ ಮತ್ತು ಶಿಸ್ತಿನ ಮೇಲೆ ನಂಬಿಕೆ ಇಟ್ಟಿದ್ದೇವೆ. ಅತಿಯಾದ ವೇಗಕ್ಕಿಂತ ಇಲ್ಲಿ ನಿಖರತೆ ಮತ್ತು ನಿಯಂತ್ರಣವೇ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಎಲ್ಲವೂ ಕಂಟ್ರೋಲ್ ಮತ್ತು ಕ್ಲಾರಿಟಿ ಮೇಲೆ ಅವಲಂಬಿತವಾಗಿದೆ. ಒಬ್ಬ ಯುವ ಯುರೋಪಿಯನ್ ರೇಸರ್ ಭಾರತವನ್ನು ತನ್ನ ಪ್ರತಿಭೆ ಸಾಬೀತುಪಡಿಸುವ ವೇದಿಕೆಯಾಗಿ ಆಯ್ಕೆ ಮಾಡುತ್ತಿರುವುದು, ಜಾಗತಿಕ ಮಟ್ಟದ ಪ್ರತಿಭೆಗಳಿಗೆ ನಮ್ಮ ರೇಸಿಂಗ್ ವ್ಯವಸ್ಥೆಯ ಮೇಲೆ ಇರುವ ವಿಶ್ವಾಸವನ್ನು ತೋರಿಸುತ್ತದೆ" ಎಂದು ಸುದೀಪ್ ತಿಳಿಸಿದ್ದಾರೆ.

ಈ ಅಭಿಯಾನದ ಮುಂಚೂಣಿಯಲ್ಲಿ ಫ್ರೆಂಚ್ ರೇಸರ್ ಸಚೆಲ್ ರೊಟ್ಗೆ (Sachel Rotge) ಇದ್ದಾರೆ. ಅವರು ಯುರೋಪಿನ ಉದಯೋನ್ಮುಖ ಸಿಂಗಲ್-ಸೀಟರ್ ಪ್ರತಿಭೆಯಾಗಿದ್ದು, 2025ರ ಎಫ್4 ಇಂಡಿಯಾ ವೈಸ್ ಚಾಂಪಿಯನ್. RPPLನ ಎಫ್4 ಶೂಟೌಟ್ ಕಾರ್ಯಕ್ರಮದ ಮೂಲಕ ಪೂರ್ಣ ಪ್ರಮಾಣದ ವಿದ್ಯಾರ್ಥಿವೇತನವನ್ನು ಕೂಡ ಪಡೆದಿದ್ದಾರೆ. ಬೆಂಗಳೂರು ಹಾಗೂ ಭಾರತದ ಭರವಸೆಯ ಆಶಾಕಿರಣವಾಗಿ ರುಹಾನ್ ಆಳ್ವಾ (Ruhaan Alva) ಮುಂದಿದ್ದಾರೆ. ಅವರು ಇಂಡಿಯನ್ ರೇಸಿಂಗ್ ಲೀಗ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನ ರೇಸ್ ವಿಜೇತ ಹಾಗೂ 2024ರ ಎಫ್4 ಇಂಡಿಯಾ ವೈಸ್ ಚಾಂಪಿಯನ್. ಈಗಾಗಲೇ ಬ್ರಿಟನ್‌ನ ರೇಸ್‌ಗಳಲ್ಲಿ ಪೋಡಿಯಂ ಫಿನಿಶ್ ಸಾಧಿಸುವ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ.

"ರುಹಾನ್ ಭವಿಷ್ಯದ ಪ್ರತೀಕ – ಯುವ, ನಿರ್ಭಯಿ ಮತ್ತು ಜಾಗತಿಕ ದೃಷ್ಟಿಕೋನ ಹೊಂದಿರುವವನು. ಬೆಂಗಳೂರು ಜನರು ಅವನ ಪ್ರಯಾಣವನ್ನು ನೋಡಿ ಹೆಮ್ಮೆ ಪಡಬೇಕು" ಎಂದು ಸುದೀಪ್ ಹೇಳಿದ್ದಾರೆ. ಇನ್ನು ತಂಡಕ್ಕೆ ಇನ್ನಷ್ಟು ಬಲ ತುಂಬುತ್ತಿರುವವರು ಕೈಲ್ ಕುಮಾರನ್. ಅವರು ಮಧ್ಯಪ್ರಾಚ್ಯದಾದ್ಯಂತ ಕಾರ್ಟಿಂಗ್‌ನಲ್ಲಿ ವೈಸ್ ವರ್ಲ್ಡ್ ಚಾಂಪಿಯನ್ ಆಗಿದ್ದು, ಅಂತರಾಷ್ಟ್ರೀಯ ಮಟ್ಟದ ತೀವ್ರ ಪೈಪೋಟಿಗಳ ಮೂಲಕ ತಮ್ಮ ರೇಸಿಂಗ್ ಕೌಶಲವನ್ನು ರೂಪಿಸಿಕೊಂಡಿದ್ದಾರೆ. "ಕೈಲ್‌ನ ವಿಶ್ವಮಟ್ಟದ ಅನುಭವವು ಪಕ್ವತೆ ಮತ್ತು ಶಾಂತತೆಯನ್ನು ತರುತ್ತದೆ; ಇವು ಸ್ಟ್ರೀಟ್ ರೇಸಿಂಗ್‌ಗೆ ಅತ್ಯಗತ್ಯವಾದ ಗುಣಗಳು" ಎಂದಿದ್ದಾರೆ ಸುದೀಪ್.

"ಕಿಚ್ಚಾಸ್ ಕಿಂಗ್ಸ್ ತಂಡದ ಶಕ್ತಿಯನ್ನು ಹೆಚ್ಚಿಸಲು ಬ್ರಿಟಿಷ್ ರೇಸರ್ ಜೆಮ್ ಹೆಪ್ವರ್ತ್ (Jem Hepworth) ಸೇರ್ಪಡೆಯಾಗಿದ್ದಾರೆ. ರಾಫಾ ರೇಸಿಂಗ್ ತಂಡದ ಚಾಲಕಿಯಾಗಿರುವ ಜೆಮ್, ಪ್ರತಿಷ್ಠಿತ ಮೆಕ್ಲಾರೆನ್ ಟ್ರೋಫಿಯಲ್ಲಿ (McLaren Trophy) ಪೋಡಿಯಂ ಫಿನಿಶ್ ಮಾಡಿದ ಖ್ಯಾತಿ ಹೊಂದಿದ್ದಾರೆ. ವಿಶ್ವದ ಕಠಿಣ ರೇಸಿಂಗ್ ಟ್ರ್ಯಾಕ್‌ಗಳಲ್ಲಿ ಅವರು ಗಳಿಸಿರುವ ಅನುಭವವು ನಮ್ಮ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಮತ್ತು ಪ್ರತಿಯೊಬ್ಬರಲ್ಲೂ ಉತ್ತಮ ಪ್ರದರ್ಶನ ನೀಡುವ ಛಲ ತುಂಬಲಿದೆ" ಎಂದು ಸುದೀಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಟ್ರೀಟ್ ರೇಸ್ ಸವಾಲು

ಸ್ಟ್ರೀಟ್ ಸರ್ಕ್ಯೂಟ್‌ಗಳ ಸವಾಲಿನ ಬಗ್ಗೆ ಮಾತನಾಡಿರುವ ಸುದೀಪ್, "ಇಲ್ಲಿನ ಟ್ರ್ಯಾಕ್‌ಗಳು ಚಾಲಕರಿಗೆ ಭಾವನಾತ್ಮಕವಾಗಿಯೂ ಸವಾಲು ಹಾಕುತ್ತವೆ. ಒಂದು ಸಣ್ಣ ತಪ್ಪು ಮಾಡಿದರೂ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಚಾಲಕರು ಟ್ರ್ಯಾಕ್ ಮಿತಿಗಳನ್ನು ಗೌರವಿಸಬೇಕು, ಆದರೆ ಅದಕ್ಕೆ ಹೆದರಬಾರದು. ಈ ಎಚ್ಚರಿಕೆ ಮತ್ತು ವೇಗದ ನಡುವಿನ ಸಮತೋಲನದಲ್ಲೇ (Balance) ನಿಜವಾದ ಗೆಲುವು ಅಡಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಸ್ಪಿರಿಟ್

ಗೋವಾ ರೇಸ್‌ಗೆ ಸಜ್ಜಾಗಿರುವ ತಂಡದ ಬಗ್ಗೆ ಸುದೀಪ್ ಮಾತು ಮುಂದುವರಿಸುತ್ತಾ, "ಬೆಂಗಳೂರು ಎಂದರೆ ಛಲ, ಹೊಸತನ ಮತ್ತು ಮಹತ್ವಾಕಾಂಕ್ಷೆಯ ಸಂಕೇತ. ನಮ್ಮ ತಂಡವು ಇದೇ 'ಬೆಂಗಳೂರು ಸ್ಪಿರಿಟ್' ಅನ್ನು ಟ್ರ್ಯಾಕ್ ಮೇಲೆ ತರುತ್ತಿದೆ. ನಗರದ ಈ ಚೈತನ್ಯದೊಂದಿಗೆ ನಾವು ರೇಸ್‌ಗೆ ಇಳಿಯುತ್ತಿದ್ದೇವೆ" ಎಂದಿದ್ದಾರೆ.