Karnataka Bulldozers: ʻನನ್ನ ತಂಡದ ಬಗ್ಗೆ ಹೆಮ್ಮೆ ಇದೆ, ಲವ್ ಯೂ ಬಾಯ್ಸ್..ʼ; ಸಿಸಿಎಲ್ ಗೆಲುವಿನ ಖುಷಿ ಹಂಚಿಕೊಂಡ ʻಕಿಚ್ಚʼ ಸುದೀಪ್
ಕಿಚ್ಚ ಸುದೀಪ್ ಅವರು ಗೆಲುವಿನ ಸಂಭ್ರಮವನ್ನು ತಮ್ಮ ತಂಡ ಮತ್ತು ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡವು ಸಿಸಿಎಲ್ ಕಪ್ ಮುಡಿಗೇರಿಸಿಕೊಂಡಿದ್ದು, ಆಡಿದ ಐದೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿದೆ. ಈ ಐತಿಹಾಸಿಕ ಗೆಲುವಿಗೆ ಕಾರಣರಾದ ಆಟಗಾರರು, ತಂಡದ ಬೆನ್ನೆಲುಬಾಗಿ ನಿಂತ ಪತ್ನಿ ಪ್ರಿಯಾ ಅವರಿಗೆ ಸುದೀಪ್ ಭಾವುಕವಾಗಿ ಧನ್ಯವಾದ ಅರ್ಪಿಸಿದ್ದಾರೆ.
-
ನಟ ಕಿಚ್ಚ ಸುದೀಪ್ ಅವರು ನಟನೆ, ಬಿಗ್ ಬಾಸ್ ನಿರೂಪಣೆ ಜೊತೆಗೆ ಕ್ರಿಕೆಟ್‌ನಲ್ಲೂ ಆಸಕ್ತಿ ಹೊಂದಿದ್ದಾರೆ. ಪ್ರತಿ ವರ್ಷ ಅವರು ಸಿಸಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸುವುದು ಎಲ್ಲರಿಗೂ ಗೊತ್ತಿದೆ. ಈ ಬಾರಿಯೂ ಕೂಡ ಕಿಚ್ಚನ ಪಡೆ ಚಾಂಪಿಯನ್ ಆಗಿದೆ. ಇದೀಗ ಆ ಬಗ್ಗೆ ಕಿಚ್ಚ ಸುದೀಪ್ ಅವರು ಸಂಭ್ರಮ ಹಂಚಿಕೊಂಡಿದ್ದಾರೆ. "ನನ್ನ ತಂಡದ ಬಗ್ಗೆ ಹೆಮ್ಮೆ ಇದೆ, ಲವ್ ಯೂ ಬಾಯ್ಸ್.." ಎಂದು ಟ್ವೀಟ್ ಮಾಡಿದ್ದಾರೆ.
ಸುದೀಪ್ ಟ್ವೀಟ್‌ನಲ್ಲಿ ಏನಿದೆ?
"ಕಳೆದ ಭಾನುವಾರ ನಮ್ಮ ಆ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯವಾಯಿತು ಮತ್ತು ಸಿಸಿಎಲ್ ಕಪ್ ಮತ್ತೆ ನಮ್ಮ ಕರ್ನಾಟಕ ಬುಲ್ಡೋಜರ್ಸ್ ಪಾಲಾಯಿತು. ಬರೋಬ್ಬರಿ 12 ವರ್ಷಗಳ ಸುದೀರ್ಘ ಕಾಯುವಿಕೆಗೆ ಒಂದು ಅದ್ದೂರಿ ಮತ್ತು ಸ್ಟೈಲಿಶ್ ಗೆಲುವಿನ ಮೂಲಕ ತೆರೆಬಿತ್ತು. ಆಡಿದ ಐದಕ್ಕೆ ಐದು ಪಂದ್ಯಗಳಲ್ಲೂ ಗೆದ್ದು ಕರ್ನಾಟಕ ಬುಲ್ಡೋಜರ್ಸ್ ಅಜೇಯವಾಗಿ ಉಳಿಯಿತು. ಈ ಕಾಯುವಿಕೆಯನ್ನು ಅಂತ್ಯಗೊಳಿಸಲು ಇದಕ್ಕಿಂತ ಉತ್ತಮ ಮಾರ್ಗ ಇನ್ನೇನಿದೆ" ಎಂದಿದ್ದಾರೆ ಕಿಚ್ಚ ಸುದೀಪ್.
ಪತ್ನಿಯನ್ನು ಹೊಗಳಿದ ಕಿಚ್ಚ
"ತಮ್ಮ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ನಂಬಿಕೆ ಇಟ್ಟು, ಈ ಸೀಸನ್‌ಗಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆದ ನನ್ನ ತಂಡದ ಬಗ್ಗೆ ನನಗೆ ಹೆಮ್ಮೆಯಿದೆ. ಲವ್ ಯೂ ಬಾಯ್ಸ್. ಕಳೆದ ಹಲವು ವರ್ಷಗಳಿಂದ ತಂಡದ ಬೆನ್ನೆಲುಬಾಗಿ ನಿಂತು, ಪ್ರತಿ ಕ್ಷಣವೂ ನಮಗೆ ಚಿಯರ್ ಮಾಡುತ್ತಾ ಹುರಿದುಂಬಿಸುತ್ತಿರುವ ಪ್ರಿಯಾ ಸುದೀಪ್ ನಿನಗೆ ಧನ್ಯವಾದಗಳು. ಫೈನಲ್ಸ್‌ನಲ್ಲಿ ಅತ್ಯುತ್ತಮ ಮನರಂಜಕಿ ಆಗಿ ಹೊರಹೊಮ್ಮಿದ್ದಕ್ಕೆ ಅಭಿನಂದನೆಗಳು. ಡಗೌಟ್‌ನಲ್ಲಿ ನೀನು ತುಂಬಿದ ಆ ಎನರ್ಜಿಯೇ ಬೇರೆ! ತುಂಬಾ ಪ್ರೀತಿ ನಿನಗೆ" ಎಂದು ಕಿಚ್ಚ ಬರೆದುಕೊಂಡಿದ್ದಾರೆ.
ಮಗಳಿಗೂ ಕಿಚ್ಚನ ಮೆಚ್ಚುಗೆ
"ನಿನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ನಮ್ಮನ್ನು ಹುರಿದುಂಬಿಸಿದ್ದಕ್ಕೆ ಸಾನ್ವಿ ಸುದೀಪ್ ನಿನಗೂ ಥ್ಯಾಂಕ್ಸ್. ನಾವಿಬ್ಬರೂ ಸೇರಿ ಮಾಡಿದ ಡ್ಯಾನ್ಸ್ ನನಗೆ ತುಂಬಾ ಇಷ್ಟವಾಯಿತು. ನಿರ್ಣಾಯಕ ಸಮಯದಲ್ಲಿ ನಮ್ಮ ಬೆಂಬಲಕ್ಕೆ ನಿಂತು ಚಿಯರ್ ಮಾಡಿದ ಡಗೌಟ್‌ನಲ್ಲಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಉಪಸ್ಥಿತಿ ಮತ್ತು ಪ್ರೋತ್ಸಾಹ ತಂಡಕ್ಕೆ ಯಾವಾಗಲೂ ಸ್ಪೆಷಲ್" ಎಂದಿದ್ದಾರೆ ಸುದೀಪ್.
ಸುದೀಪ್ ಮಾಡಿದ ಟ್ವೀಟ್
Last Sunday is when the wait got over and the CCL cup finally came bk to @ccl_kb . A long wait of 12 years ended with victory and in style. 5 matches in all and #KB remained undisputed. Wat could be a better way to end the wait.🤗❤️
— Kichcha Sudeepa (@KicchaSudeep) February 8, 2026
Proud of my team who believed in themselves… pic.twitter.com/f1I0bRupUh
ಸಿಸಿಎಲ್ ನಮ್ಮ ಬದುಕಿನಲ್ಲಿ ಸಂತೋಷ ತಂದಿದೆ
"ನಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಅಶೋಕ್ ಖೇಣಿ ಅವರಿಗೆ ಧನ್ಯವಾದಗಳು. ನಿಮ್ಮ ಕಾಯುವಿಕೆಗೂ ಈಗ ಫಲ ಸಿಕ್ಕಿದೆ. ಸಿಸಿಎಲ್ ಮೂಲಕ ನಮ್ಮ ಬದುಕಿನಲ್ಲಿ ಸಂತೋಷ ತಂದಿದ್ದಲ್ಲದೆ, ವಿವಿಧ ಚಿತ್ರರಂಗಗಳನ್ನು ಒಂದೇ ಕಡೆ ಸೇರಿಸಿದ ವಿಷ್ಣು ಇಂಧೂರಿ ಅವರಿಗೆ ಧನ್ಯವಾದಗಳು. ಗೆದ್ದು ಆಗಲೇ ಒಂದು ವಾರ ಕಳೆದಿದೆ, ಆದರೂ ಮೈಮೇಲಿನ ಗಾಯಗಳು ಮತ್ತು ಆ ನೋವು, ನಾವು ಅಂದುಕೊಂಡಿದ್ದ ಗುರಿ ಸಾಧಿಸಲು ಮೈದಾನದಲ್ಲಿ ಹೋರಾಡಿದ ಪ್ರತಿಯೊಂದು ಕ್ಷಣವನ್ನೂ ಇನ್ನೂ ನೆನಪಿಸುತ್ತಲೇ ಇವೆ..." ಎಂದಿದ್ದಾರೆ ʻಕಿಚ್ಚʼ ಸುದೀಪ್.