ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೋಮಲ್‌ ಕುಮಾರ್‌ ನಟನೆಯ ‘ರೋಲೆಕ್ಸ್’ ಚಿತ್ರದ ಟೈಟಲ್‌ ಚೇಂಜ್‌; ಕೊನೇ ಕ್ಷಣದಲ್ಲಿ ಈ ಬದಲಾವಣೆ ಏಕೆ?

Rolex Movie: ಕೋಮಲ್‌ ಕುಮಾರ್‌ ನಟನೆಯ ‘ರೋಲೆಕ್ಸ್’ ಚಿತ್ರದ ಟೈಟಲ್‌ ಕೊನೇ ಕ್ಷಣದಲ್ಲಿ ಚೇಂಜ್‌ ಆಗಿದೆ. ಖ್ಯಾತ ವಾಚ್ ಕಂಪನಿಯ ಆಕ್ಷೇಪಣೆಯಿಂದಾಗಿ, ಬಿಡುಗಡೆ ತಡವಾಗುವುದನ್ನು ತಪ್ಪಿಸಲು ನಿರ್ಮಾಪಕರು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಕೋಮಲ್ ಹಾಗೂ ಸೋನಲ್ ಮೊಂಥೆರೋ ನಟನೆಯ ಈ ಚಿತ್ರವು ಸದ್ಯದಲ್ಲೇ ರಾಜ್ಯಾದ್ಯಂತ ತೆರೆಕಾಣಲಿದೆ.

ಕೊನೇ ಕ್ಷಣದಲ್ಲಿ ಕೋಮಲ್ ‌ನಟನೆಯ ʻರೋಲೆಕ್ಸ್‌ʼ ಚಿತ್ರದ ಟೈಟಲ್‌ ಚೇಂಜ್!

-

Avinash GR
Avinash GR Oct 4, 2026 8:40 PM

ನಟ ಕೋಮಲ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ, ಬಿಡುಗಡೆಗೆ ಸಜ್ಜಾಗಿರುವ ಚಿತ್ರ ‘ರೋಲೆಕ್ಸ್’ ಶೀರ್ಷಿಕೆಯಲ್ಲಿ ಕೊನೇ ಕ್ಷಣದಲ್ಲಿ ಮಹತ್ವದ ಬದಲಾವಣೆಯಾಗಿದೆ. ಚಿತ್ರಕ್ಕೆ ಕಾನೂನು ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ, ಚಿತ್ರತಂಡವು ಚಿತ್ರದ ಹೆಸರನ್ನು ‘ರೋಲೆಕ್ಸ್’ ಬದಲಿಗೆ ‘ರಿಲಾಕ್ಸ್’ ಎಂದು ಮರುನಾಮಕರಣ ಮಾಡಿದೆ.

ಟೈಟಲ್ ಬದಲಾವಣೆಗೆ ಅಸಲಿ ಕಾರಣವೇನು?

ಖ್ಯಾತ ವಾಚ್ ಹಾಗೂ ಬ್ರ್ಯಾಂಡಿಂಗ್ ಸಂಸ್ಥೆಯೊಂದು ‘ರೋಲೆಕ್ಸ್’ ಹೆಸರಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಸೌಂಡ್ ಆಗಲಿ ಬಳಸಬಾರದು ಎಂದು ಚಿತ್ರತಂಡಕ್ಕೆ ಅಧಿಕೃತ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಚಿತ್ರತಂಡ, "ನೋಟಿಸ್ ನೀಡಿರುವ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಅಂಶಗಳನ್ನು ನಾವು ಸಿನಿಮಾದಲ್ಲಿ ಬಳಸಿಕೊಂಡಿಲ್ಲ. ಆದರೆ, ಚಿತ್ರವು ಸದ್ಯದಲ್ಲೇ ತೆರೆಗೆ ಬರಲು ಸಿದ್ಧವಾಗಿದ್ದು, ಈ ಹಂತದಲ್ಲಿ ಶೀರ್ಷಿಕೆಗಾಗಿ ಕಾನೂನು ಹೋರಾಟ ನಡೆಸುತ್ತಾ ಕುಳಿತರೆ ಬಿಡುಗಡೆ ಮತ್ತಷ್ಟು ತಡವಾಗುತ್ತದೆ.

ನಮಗೆ ಟೈಟಲ್‌‌ಗಿಂತ ಚಿತ್ರದ ಕಂಟೆಂಟ್‌ ಮುಖ್ಯ. ಕಂಟೆಂಟ್ ಪ್ರೇಕ್ಷಕರಿಗೆ ಖಂಡಿತ ಮೆಚ್ಚುಗೆಯಾಗುವ ವಿಶ್ವಾಸವಿದೆ. ಹಾಗಾಗಿ ವಿವಾದಕ್ಕೆ ಆಸ್ಪದ ನೀಡದೆ ‘ರಿಲಾಕ್ಸ್’ ಎಂಬ ಹೆಸರಿನಲ್ಲೇ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ" ಎಂದು ನಿರ್ಮಾಪಕ ಅಂಬಟಿ ಮಧು ಮೋಹನ್ ಹಾಗೂ ನಿರ್ದೇಶಕ ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ.

ಅದ್ಧೂರಿ ತಾರಾಗಣ, ಗಮನ ಸೆಳೆದ ಟೀಸರ್

ಈ ಹಿಂದೆ 'ಬಿಲ್ ಗೇಟ್ಸ್' ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿವಾಸ್ ಮಂಡ್ಯ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕೋಮಲ್ ಕುಮಾರ್ ಅವರಿಗೆ ಜೋಡಿಯಾಗಿ ಸೋನಲ್‌ ಮೊಂಥೆರೋ ನಟಿಸಿದ್ದು, ವಿನೋದ್ ಪ್ರಭಾಕರ್ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ನವೀನ್ ಪಡೀಲ್, ಅರುಣಾ ಬಾಲರಾಜ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಚಿತ್ರದಲ್ಲಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟೀಸರ್‌ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

Komal Actor: ಅದ್ಧೂರಿಯಾಗಿ ನೆರವೇರಿತು ಕೋಮಲ್ ನಟನೆಯ ʼʼತೆನಾಲಿ ಡಿಎ LLBʼ ಮುಹೂರ್ತ

ಶ್ರೀಮಂತ ತಾಂತ್ರಿಕ ಬಳಗ

ಮಧು ಫಿಲಂ ಸರ್ಕ್ಯುಟ್ಸ್ ಲಾಂಛನದಲ್ಲಿ ಆಂಧ್ರ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಅಂಬಟಿ ಮಧು ಮೋಹನಕೃಷ್ಣ ಅವರು ಕನ್ನಡದಲ್ಲಿ ಮೊದಲ ಬಾರಿಗೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್, ರಾಜೇಶ್ ವರ್ಮ ಮತ್ತು ಕಿನ್ನಾಳ್ ರಾಜ್ ಸಾಹಿತ್ಯ ರಚಿಸಿದ್ದಾರೆ.

ರಾಕೇಶ್ ಸಿ. ತಿಲಕ್ ಛಾಯಾಗ್ರಹಣ ಹಾಗೂ ಅರವಿಂದ್ ರಾಜ್ ಅವರ ಸಂಕಲನವಿದೆ. ಯೋಗಾನಂದ್ ಸಾಹಸ ನಿರ್ದೇಶನ, ಕಲೈ ಹಾಗೂ ಮುರಳಿ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ರಾಜೇಶ್ ವರ್ಮ ಕ್ರಿಯೇಟಿವ್ ಹೆಡ್ ಆಗಿ ಮತ್ತು ಮುರಳಿಕೃಷ್ಣ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಟೈಟಲ್ ಬದಲಾವಣೆಯೊಂದಿಗೆ ಇನ್ನಷ್ಟು ಕುತೂಹಲ ಹೆಚ್ಚಿಸಿರುವ ‘ರಿಲಾಕ್ಸ್’ ಸದ್ಯದಲ್ಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.