ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟಿ ಕೃಷಿ ತಾಪಂಡ ಫ್ಲಾಟ್‌ನಲ್ಲಿ ಗೆಳೆಯ ವೈಶಾಖ್ ಆತ್ಮಹತ್ಯೆ; ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ?

ಕನ್ನಡ ನಟಿ ಕೃಷಿ ತಾಪಂಡ ಅವರ ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್ ಬೆಡ್‌ರೂಮ್‌ನಲ್ಲಿ ಅವರ ಆಪ್ತ ಗೆಳೆಯ ವೈಶಾಖ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ಮೇಘನಾ ನೀಡಿದ ದೂರಿನನ್ವಯ ದಾಂಪತ್ಯದಲ್ಲಿ ವಿರಸವಿತ್ತು ಎನ್ನಲಾಗಿದ್ದು, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.

ಕೃಷಿ ತಾಪಂಡ ಗೆಳೆಯ ವೈಶಾಖ್ ಆತ್ಮಹತ್ಯೆ;‌ ಪತ್ನಿ ನೀಡಿದ ದೂರಿನಲ್ಲಿ ಏನಿದೆ?

-

Avinash GR
Avinash GR Jun 25, 2026 5:54 PM

ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಕೃಷಿ ತಾಪಂಡ ಅವರ ಆರ್‌ಆರ್ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಅವರ ಆಪ್ತ ಗೆಳೆಯ ವೈಶಾಖ್ (36) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೂನ್ 24ರ ಬುಧವಾರ ರಾತ್ರಿ ಫ್ಲಾಟ್‌ನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆ ನಡೆದ ತಕ್ಷಣ ನಟಿ ಕೃಷಿ ತಾಪಂಡ ಅವರೇ ಖುದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು, ವೈಶಾಖ್‌ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಡ್‌ರೂಮ್‌ನಲ್ಲಿ ಪತ್ತೆಯಾದ ಮೃತದೇಹ

ಮೃತ ವೈಶಾಖ್ ಅವರ ಪತ್ನಿ ಮೇಘನಾ ಅವರು ರಾಜರಾಜೇಶ್ವರಿ ನಗರ (ಆರ್ ಆರ್ ನಗರ) ಪೊಲೀಸ್ ಠಾಣೆಗೆ ನೀಡಿರುವ ದೂರಿನ ಅನ್ವಯ, "ಬುಧವಾರ ರಾತ್ರಿ 11.30ರ ಸುಮಾರಿಗೆ ಪೊಲೀಸರಿಂದ ನಮಗೆ ಮಾಹಿತಿ ಬಂದಿತು. ನಟಿ ಕೃಷಿ ತಾಪಂಡ ಅವರ ಫ್ಲಾಟ್ ನಂಬರ್ 403ರಲ್ಲಿ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ನಾವು ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ, ಕೃಷಿ ತಾಪಂಡ ಅವರ ಬೆಡ್‌ರೂಮ್‌ನ ಫ್ಯಾನ್‌ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ" ಎಂದು ಉಲ್ಲೇಖಿಸಿದ್ದಾರೆ.

ವೈಶಾಖ್ ದಾಂಪತ್ಯದಲ್ಲಿ ವಿರಸ

ಪತ್ನಿ ಮೇಘನಾ ನೀಡಿರುವ ದೂರಿನಲ್ಲಿ ವೈಶಾಖ್ ಅವರೊಂದಿಗಿನ ದಾಂಪತ್ಯ ಜೀವನದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. "ನನ್ನ ಹಾಗೂ ನನ್ನ ಪತಿಯ ಮಧ್ಯೆ ಸಾಕಷ್ಟು ವಿರಸವಿತ್ತು. ನಮ್ಮಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತಿತ್ತು. ಅವರು ಕೇವಲ ವಾಟ್ಸಾಪ್ ಮೆಸೇಜ್ ಮೂಲಕ ನಮ್ಮ 14 ವರ್ಷದ ಮಗನ ಬಗ್ಗೆ ಮಾತ್ರ ವಿಚಾರಿಸುತ್ತಿದ್ದರು, ಆದರೆ ನನ್ನ ಬಗ್ಗೆ ಎಂದಿಗೂ ಕೇಳುತ್ತಿರಲಿಲ್ಲ" ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ವೈಶಾಖ್ ತಂದೆಯವರೂ ಸಹ ಮಗನ ಸಾವು ಆತ್ಮಹತ್ಯೆ ಎಂದು ಲಿಖಿತ ದೂರು ನೀಡಿದ್ದು, ಸದ್ಯಕ್ಕೆ ಯಾರ ವಿರುದ್ಧವೂ ಯಾವುದೇ ಆರೋಪ ಮಾಡಿಲ್ಲ ಎಂದು ತಿಳಿದುಬಂದಿದೆ.

ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್‌ ಆತ್ಮಹತ್ಯೆ!

ಡೆತ್ ನೋಟ್ ಪತ್ತೆಯಾಗಿಲ್ಲ

ಪೊಲೀಸ್ ಮೂಲಗಳ ಪ್ರಕಾರ‌, ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಹೀಗಾಗಿ ವೈಶಾಖ್ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಆದರೆ ವೈಶಾಖ್ ಸಾವು ಸಾರ್ವಜನಿಕರಲ್ಲಿ ಹಾಗೂ ಚಿತ್ರರಂಗದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ನಟಿ ಕೃಷಿ ತಾಪಂಡ ಅವರ ಮನೆಯಲ್ಲೇ ವೈಶಾಖ್ ಏಕೆ ಆತ್ಮಹತ್ಯೆ ಮಾಡಿಕೊಂಡರು? ಇಬ್ಬರ ನಡುವೆ ಏನಾದರೂ ಸಮಸ್ಯೆಯಿತ್ತೇ? ಎಂಬ ಪ್ರಶ್ನೆಗಳಿಗೆ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ.

ಹಳೆಯ ವಿವಾದ ಏನು?

ಕಳೆದ ಕೆಲವು ತಿಂಗಳುಗಳ ಹಿಂದೆ ನಟಿ ಕೃಷಿ ತಾಪಂಡ ಹಾಗೂ ನಿರ್ಮಾಪಕ ಅರವಿಂದ್ ರೆಡ್ಡಿ ನಡುವೆ ಉಂಟಾಗಿದ್ದ ವಿವಾದದಲ್ಲಿ ಮೃತ ವೈಶಾಖ್ ಹೆಸರು ಜೋರಾಗಿ ಕೇಳಿಬಂದಿತ್ತು. ಅರವಿಂದ್ ರೆಡ್ಡಿಗೆ ಕರೆ ಮಾಡಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ವೈಶಾಖ್ ಅವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ವೈಶಾಖ್ ಹಾಗೂ ಕೃಷಿ ತಾಪಂಡ ಜೋಡಿಯಾಗಿ ತಮ್ಮಿಂದ ಹಣ ದೋಚಲು ಯತ್ನಿಸುತ್ತಿದ್ದಾರೆ ಎಂದು ಉದ್ಯಮಿ ಅರವಿಂದ್ ರೆಡ್ಡಿ ಈ ಹಿಂದೆ ದೂರು ಸಹ ದಾಖಲಿಸಿದ್ದರು. ಈ ಹಳೆಯ ವಿವಾದಗಳ ಹಿನ್ನೆಲೆಯಲ್ಲಿ ಈಗ ನಡೆದಿರುವ ಸಾವು ತೀವ್ರ ಕುತೂಹಲ ಕೆರಳಿಸಿದೆ.

Krishi Thapanda: ನನ್ನ ಪಾಡಿಗೆ ಬದುಕಲು ಬಿಡಿ, ನಟನೆ ಬಿಡುತ್ತಿರುವೆ; ಕಣ್ಣೀರಿಟ್ಟ ನಟಿ ಕೃಷಿ ತಾಪಂಡ

ಯುಡಿಆರ್ (UDR) ಕೇಸ್ ದಾಖಲು

ಸದ್ಯ ವೈಶಾಖ್ ಅವರ ಪತ್ನಿ ಮೇಘನಾ ನೀಡಿರುವ ದೂರಿನ ಮೇರೆಗೆ ಆರ್‌ಆರ್ ನಗರ ಪೊಲೀಸರು ಅಸ್ವಾಭಾವಿಕ ಸಾವು (UDR - Unnatural Death Report) ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈಶಾಖ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳಕ್ಕೆ ನಟಿ ಕೃಷಿ ತಾಪಂಡ ಆಗಮಿಸಿದ್ದರು. ಆದರೆ ವೈಶಾಖ್‌ ಕುಟುಂಬಸ್ಥರ ಆಕ್ರೋಶ ಕಂಡು ಅಲ್ಲಿಂದ ವಾಪಸ್‌ ತೆರಳಿದ್ದಾರೆ.