ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಂಗಳೂರಿಗೆ ಬಂದಿಳಿದ ʻಕಿಂಗ್ʼ ಖಾನ್: 'ಆನ್ ಇವ್ನಿಂಗ್ ವಿತ್ ಶಾರುಖ್ ಖಾನ್' ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರು ರೋಹನ್ ಕಾರ್ಪೊರೇಶನ್ ಹಮ್ಮಿಕೊಂಡಿರುವ 'ಆನ್ ಇವನಿಂಗ್ ವಿತ್ ಶಾರುಖ್ ಖಾನ್' ಕಾರ್ಯಕ್ರಮಕ್ಕಾಗಿ ಗುರುವಾರ ಸಂಜೆ ಮಂಗಳೂರಿಗೆ ಬಂದಿಳಿದಿದ್ದಾರೆ. ಶಾರುಖ್‌ ಮಂಗಳೂರಿಗೆ ಆಗಮಿಸುತ್ತಿರುವ ಸುಳಿವು ಸಿಗುತ್ತಿದ್ದಂತೆಯೇ, ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ವಿಮಾನ ನಿಲ್ದಾಣದ ಹೊರಗೆ ಅಭಿಮಾನಿಗಳ ದಂಡೇ ನೆರೆದಿತ್ತು.

ಮಂಗಳೂರಿಗೆ ಬಂದಿಳಿದ ಶಾರುಖ್‌; ಏರ್‌ಪೋರ್ಟ್ ಬಳಿ ಮುಗಿಬಿದ್ದ ಫ್ಯಾನ್ಸ್‌

-

Avinash GR
Avinash GR Jun 25, 2026 6:39 PM

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್ ಅವರು ಮಂಗಳೂರಿನಲ್ಲಿ ಆಯೋಜಿಸಲಾಗಿರುವ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗುರುವಾರ (ಜೂನ್ 25) ಸಂಜೆ ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದರು.

ಕಿಂಗ್ ಖಾನ್ ಮಂಗಳೂರಿಗೆ ಆಗಮಿಸುತ್ತಿರುವ ಸುಳಿವು ಸಿಗುತ್ತಿದ್ದಂತೆಯೇ, ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ವಿಮಾನ ನಿಲ್ದಾಣದ ಹೊರಗೆ ಅಭಿಮಾನಿಗಳ ದಂಡೇ ನೆರೆದಿತ್ತು. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಕಾರಿನತ್ತ ತೆರಳುವ ಮುನ್ನ ಶಾರುಖ್ ಖಾನ್ ಅವರು ತಮ್ಮ ಎಂದಿನ ಸಿಗ್ನೇಚರ್ ಶೈಲಿಯ ಮಗುಳ್ನಗೆಯೊಂದಿಗೆ ನೆರೆದಿದ್ದ ಜನಸಮೂಹದತ್ತ ಕೈಬೀಸಿದರು. ನಂತರ ವಿಶೇಷ ಕಾರಿನಲ್ಲಿ ಅಲ್ಲಿಂದ ಕಾರ್ಯಕ್ರಮದತ್ತ ತೆರಳಿದರು.

Aryan Khan: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ ಚಿತ್ರದ ಪ್ರಿವ್ಯೂ ಗ್ರ್ಯಾಂಡ್‌ ರಿಲೀಸ್!

ಅಡ್ಯಾರ್ ಗಾರ್ಡನ್‌ನಲ್ಲಿ 'ಆನ್ ಇವ್ನಿಂಗ್ ವಿತ್ ಶಾರುಖ್ ಖಾನ್'

ರೋಹನ್ ಕಾರ್ಪೊರೇಶನ್ ವತಿಯಿಂದ ಇಂದು (ಜೂನ್ 25) ಸಂಜೆ ಮಂಗಳೂರಿನ ಪ್ರಸಿದ್ಧ ಅಡ್ಯಾರ್ ಗಾರ್ಡನ್‌ನಲ್ಲಿ 'ಆನ್ ಇವ್ನಿಂಗ್ ವಿತ್ ಶಾರುಖ್ ಖಾನ್' (An Evening with Shah Rukh Khan) ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಶಾರುಖ್ ಅವರು ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮಕ್ಕಾಗಿ ಕರಾವಳಿಗೆ ಆಗಮಿಸಿದ್ದು, ಅವರು ತಮ್ಮ ಬಾಲ್ಯದ ಕೆಲವು ದಿನಗಳನ್ನು ಇಲ್ಲೇ ಕಳೆದಿರುವ ಬಗ್ಗೆ ಹಂಚಿಕೊಳ್ಳಲಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಹೈ-ಪ್ರೊಫೈಲ್ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಪ್ರಮುಖ ಉದ್ಯಮಿಗಳು, ಜನಪ್ರತಿನಿಧಿಗಳು ಹಾಗೂ ಆಹ್ವಾನಿತ ಅತಿಥಿಗಳು ಭಾಗವಹಿಸಿದ್ದಾರೆ.

Aryan Khan: ಶಾರುಖ್ ಖಾನ್ ಸೊಸೆ ಇವರೇ; ಗೆಳತಿ ಲಾರಿಸ್ಸಾ ಬೊನ್ಸಿ ಜೊತೆ ಮತ್ತೆ ಕಾಣಿಸಿಕೊಂಡ ಆರ್ಯನ್ ಖಾನ್

ಮಂಗಳೂರಿನ ಜೊತೆ ಶಾರುಖ್ ಖಾನ್ ನಂಟು

ಶಾರುಖ್ ಅವರು ತಮ್ಮ ಬಾಲ್ಯದ ಮೊದಲ ಐದು ವರ್ಷಗಳನ್ನು ಮಂಗಳೂರಿನಲ್ಲೇ ಕಳೆದಿದ್ದರು ಎಂಬ ರೋಚಕ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಅವರ ತಾಯಿಯ ತಂದೆ (ಅಜ್ಜ) ಇಫ್ತಿಕರ್ ಅಹ್ಮದ್ ಅವರು ಆಕ್ಸ್‌ಫರ್ಡ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಬಂದು, ನವಮಂಗಳೂರು ಬಂದರಿನ ಪ್ರಥಮ ಮುಖ್ಯ ಎಂಜಿನಿಯರ್ ಹಾಗೂ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1964ರಲ್ಲಿ ಅಂದಿನ ಪ್ರಧಾನಿ ಲಾಲ್‌ಬಹಾದುರ್ ಶಾಸ್ತ್ರಿ ಅವರು ಬಂದರಿಗೆ ಶಿಲಾನ್ಯಾಸ ಮಾಡಿದಾಗ ಇಫ್ತಿಕರ್ ಅವರೇ ಮುಖ್ಯ ಎಂಜಿನಿಯರ್ ಆಗಿ ಬಂದರು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಶಾರುಖ್ ಖಾನ್ ಅವರು ಪಣಂಬೂರು ಬಂದರಿನ ಆವರಣದಲ್ಲಿದ್ದ ಬಂಗಲೆಯಲ್ಲಿ ಹಾಗೂ ಅದಕ್ಕೂ ಮುನ್ನ ಮಂಗಳೂರಿನ ಎಂಜಿ ರಸ್ತೆಯ ಪಿಡಬ್ಲ್ಯುಡಿ ಕ್ವಾಟ್ರಸ್‌ನಲ್ಲಿ ವಾಸವಿದ್ದರು. "ನಾನು ಮಂಗಳೂರಿನಲ್ಲಿ ಬೆಳೆದಿದ್ದೇನೆ, ನನ್ನ ಅಜ್ಜ ನವಮಂಗಳೂರು ಬಂದರಿನ ಮುಖ್ಯ ಎಂಜಿನಿಯರ್ ಆಗಿದ್ದರು" ಎಂದು ಶಾರುಖ್ 2010ರಲ್ಲಿ ಸ್ವತಃ ಟ್ವೀಟ್ ಮಾಡಿ ನೆನಪಿಸಿಕೊಂಡಿದ್ದರು. ವಿಶೇಷವೆಂದರೆ, ಮಂಗಳೂರಿನಲ್ಲಿದ್ದಾಗ ಅವರ ಕುಟುಂಬದವರು ನೆರೆಹೊರೆಯವರೊಂದಿಗೆ ಕನ್ನಡದಲ್ಲೇ ಮಾತನಾಡುತ್ತಿದ್ದರು. ಈ ಕಾರಣದಿಂದಾಗಿ ಬಾಲಕ ಶಾರುಖ್ ಕೂಡ ಅಂದು ಕನ್ನಡವನ್ನು ಅರ್ಥ ಮಾಡಿಕೊಳ್ಳುವುದನ್ನು ಮತ್ತು ಅಲ್ಪಸ್ವಲ್ಪ ಮಾತನಾಡುವುದನ್ನು ಕಲಿತಿದ್ದರು ಎನ್ನಲಾಗಿದೆ.